ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು: ತೆಂಗಿಗೆ ಕೆಂಪುಮೂತಿ ಹುಳು ಬಾಧೆ

Published : 24 ಆಗಸ್ಟ್ 2024, 2:11 IST
Last Updated : 24 ಆಗಸ್ಟ್ 2024, 2:11 IST
ಫಾಲೋ ಮಾಡಿ
Comments

ತುಮಕೂರು: ತೆಂಗು ಬೆಳೆಯಲ್ಲಿ ಕೆಂಪು ಮೂತಿ ಹುಳು ಬಾಧೆ ಹೆಚ್ಚಾಗಿದ್ದು, ಹತೋಟಿಗೆ ಸೂಕ್ತ ಕ್ರಮಕೈಗೊಳ್ಳುವಂತೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಬಿ.ಸಿ.ಶಾರದಮ್ಮ ಸಲಹೆ ಮಾಡಿದ್ದಾರೆ.

‘ಕೆಂಪುಮೂತಿ ಕೀಟವು ಮರದ ಕಾಂಡದೊಳಗೆ ಸೇರಿ ಮೃದು ಭಾಗಗಳನ್ನು ಕೊರೆಯುತ್ತದೆ. ಪ್ರಾರಂಭದಲ್ಲಿ ಸಣ್ಣ ರಂಧ್ರಗಳು ಕಾಣಿಸಿಕೊಳ್ಳುತ್ತವೆ. ಕೀಟ ಬಾಧೆ ತೀವ್ರವಾದಾಗ ಸುಳಿ ಗರಿಗಳು ಒಣಗಿ, ಹಾನಿಗೊಳಗಾದ ಭಾಗಗಳ ಹತ್ತಿರ ಎಲೆಯ ತೊಟ್ಟು (ಎಡಮಟ್ಟೆ) ಸೀಳುತ್ತವೆ. ಮರದ ಕಾಂಡಕ್ಕೆ ಕಿವಿ ಇಟ್ಟು ಆಲಿಸಿದಾಗ, ಹುಳುಗಳು ತಿನ್ನುತ್ತಿರುವ ಶಬ್ದ ಕೇಳಿಸಿಕೊಳ್ಳಬಹುದು. 5ರಿಂದ 20 ವರ್ಷ ವಯಸ್ಸಿನ ಮರಗಳು ಇದರ ಹಾವಳಿಗೆ ತುತ್ತಾಗುತ್ತವೆ’ ಎಂದು ತಿಳಿಸಿದ್ದಾರೆ.

‘ಕಾಂಡದಿಂದ 1 ಮೀಟರ್‌ ಉದ್ದ ಬಿಟ್ಟು ಉಳಿದ ಗರಿ ಕತ್ತರಿಸಬೇಕು. ತೋಟದ ಸ್ವಚ್ಛತೆ ಕಾಪಾಡಬೇಕು. ಬಾಧೆಗೆ ಒಳಗಾದ ಮರಗಳನ್ನು ಕತ್ತರಿಸಿ, ಸುಟ್ಟು ಹಾಕಬೇಕು. ಕೆಂಪುಮೂತಿ ಹುಳು ಆಕರ್ಷಿಸಲು ಎಕರೆಗೆ 1ರಂತೆ ಮೋಹಕ ಬಲೆ ಅಳವಡಿಸಬೇಕು. ತೋಟದಿಂದ ದೂರದಲ್ಲಿರುವ ಮೈದಾನದಲ್ಲಿ ಮೋಹಕ ಬಲೆ ಕಟ್ಟಿದರೆ ಹುಳುಗಳನ್ನು ಹತೋಟಿಯಲ್ಲಿ ಇಡಬಹುದು. ಮೋಹಕ ಬಲೆ ಖರೀದಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ’ ಎಂದು ಹೇಳಿದ್ದಾರೆ.

ಪ್ರತಿ ಲೀಟರ್‌ ನೀರಿಗೆ 5 ಮಿಲಿ ಲೀಟರ್‌ನಂತೆ ಸ್ಪೈನೋಸ್ಯಾಡ್-2.5 ಎಸ್.ಸಿ, ಪ್ರತಿ ಲೀಟರ್‌ ನೀರಿಗೆ 1 ಮಿಲಿ ಲೀಟರ್‌ನಂತೆ ಇಮಿಡಾಕ್ಲೋರೊಫಿಡ್ 30.5 ಎಸ್.ಎಲ್‌ ಬಾಧಿತ ಮರದ ಕಾಂಡದ ಎತ್ತರದಲ್ಲಿರುವ ರಂಧ್ರದಿಂದ ಸುರಿದು, ಕಾಂಡದಲ್ಲಿ ಸೇರಿಸುವುದರಿಂದ ಕೀಟ ಬಾಧೆ ನಿಯಂತ್ರಣಕ್ಕೆ ತರಬಹುದು ಎಂದು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT