ಶುಕ್ರವಾರ, ಸೆಪ್ಟೆಂಬರ್ 24, 2021
26 °C

ಸ್ಥಳೀಯ ಸಂಸ್ಥೆ; ಏಕಾಂಗಿ ಸ್ಪರ್ಧೆ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ‘ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸಲಿದೆ’ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿ ಸಾಧ್ಯವಾದರೆ ಮಾಡಿಕೊಳ್ಳಿ. ಇಲ್ಲದಿದ್ದರೆ ಸ್ವತಂತ್ರವಾಗಿ ಸ್ಪರ್ಧಿಸಿ ಎಂದು ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ. ನಾವು ತುರುವೇಕೆರೆಯಲ್ಲಿ ಕಾರ್ಯಕರ್ತರ ಸಭೆ ನಡೆಸಿದೆವು. ಆಗ ಅಲ್ಲಿ ಸ್ವತಂತ್ರ ಸ್ಪರ್ಧೆಗೆ ಸ್ಥಳೀಯ ಮುಖಂಡರು ಒತ್ತಾಯಿಸಿದರು. ಆದ್ದರಿಂದ ಜೆಡಿಎಸ್ ಜೊತೆ ಮೈತ್ರಿಯನ್ನು ಮಾಡಿಕೊಳ್ಳುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

‘ತಿಪಟೂರು, ಕುಣಿಗಲ್, ಪಾವಗಡ, ತುರುವೇಕೆರೆ ಸ್ಥಳೀಯ ಸಂಸ್ಥೆಗಳು ಮತ್ತು ತುಮಕೂರು ಮಹಾನಗರ ಪಾಲಿಕೆಯ ವಾರ್ಡ್‌ ನಂಬರ್ 22 ಸೇರಿದಂತೆ ಜಿಲ್ಲೆಯಲ್ಲಿ 92 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಇದರಲ್ಲಿ ಕಾಂಗ್ರೆಸ್ ಪಕ್ಷವು ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಹಾನಗರ ಪಾಲಿಕೆಯ ವಾರ್ಡ್‌ 22ಕ್ಕೆ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು. ಈಗಾಗಲೇ ಆಕಾಂಕ್ಷಿಗಳಿಂದ ಅರ್ಜಿಯನ್ನು ಸ್ವೀಕರಿಸಲಾಗುತ್ತಿದೆ. 10ರಿಂದ 12 ಮಂದಿ ಆಕಾಂಕ್ಷಿಗಳಿದ್ದು ಅರ್ಜಿ ಸಲ್ಲಿಸಿದ ನಂತರ ಪಕ್ಷದ ಆಂತರಿಕ ಸಮಿತಿಯು ಗೆಲ್ಲುವ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದೆ ಎಂದರು.

ಗುರುವಾರ ತಿಪಟೂರು, ಶನಿವಾರ ಪಾವಗಡದಲ್ಲಿ ಮುಖಂಡರ ಸಭೆ ಕರೆಯಲಾಗಿದೆ. ಕುಣಿಗಲ್‌ನಲ್ಲಿಯೂ ಸಭೆ ನಡೆಸುತ್ತೇವೆ. ಪಕ್ಷದ ಜಿಲ್ಲಾ ಮತ್ತು ಸ್ಥಳೀಯ ಮುಖಂಡರು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕಾಗಿದೆ. ಮುಖಂಡರು ಮತ್ತು ಕಾರ್ಯಕರ್ತರು ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್, ಮುಖಂಡರಾದ ಸುಜಾತ, ಅಬ್ತಾಪ್, ವಿಜಯ ಕುಮಾರ್, ಪುಟ್ಟರಾಜು ಗೋಷ್ಠಿಯಲ್ಲಿ ಇದ್ದರು.

ದೇವೇಗೌಡರ ಪರ ಸುರೇಶ್ ಗೌಡ ಕೆಲಸ

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರೇ ಎಸ್‌.ಪಿ.ಮುದ್ದಹನುಮೇಗೌಡ ಅವರಿಗೆ ಟಿಕೆಟ್ ತಪ್ಪಿಸಿದರು. ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಮತಹಾಕಿದ್ದಾರೆ. ದೇವೇಗೌಡ ಅವರು ಸೋಲುತ್ತಾರೆ ಎಂದು ಸುರೇಶ್ ಗೌಡ ಅವರು ಬೆಂಗಳೂರಿನಲ್ಲಿ ಹೇಳಿದ್ದಾರೆ. ಆದರೆ ದೇವೇಗೌಡರ ಪರ ಸುರೇಶ್ ಗೌಡರೇ ಕೆಲಸ ಮಾಡಿದ್ದಾರೆ ಎಂದು ರಾಮಕೃಷ್ಣ ತಿಳಿಸಿದರು. 

ದೇವೇಗೌಡರು ಒಕ್ಕಲಿಗ ಸಮಾಜದ ಅಗ್ರ ನಾಯಕರು. ಬಿಜೆಪಿಯ ಮಾಜಿ ಶಾಸಕ ಬಿ.ಸುರೇಶ್ ಗೌಡ ಅವರೂ ಒಕ್ಕಲಿಗ ಸಮಾಜದವರು. ತಮ್ಮ ಸಮಾಜದ ನಾಯಕ ದೇವೇಗೌಡರನ್ನು ಸುರೇಶ್ ಗೌಡ ಅವರು ಚುನಾವಣೆಯಲ್ಲಿ ಬೆಂಬಲಿಸಿದ್ದಾರೆ. ಜಿ.ಎಸ್.ಬಸವರಾಜು ಅವರ ಪರವಾಗಿ ಸುಮ್ಮನೆ ಮೇಲ್ನೋಟಕ್ಕೆ ಪ್ರಚಾರ ನಡೆಸಿದ್ದಾರೆ ಎಂದರು.

ಸುರೇಶ್ ಗೌಡ ಅವರು ದೇವೇಗೌಡ ಅವರಿಗೆ ಮತಹಾಕಿಸಿರುವ ಕಾರಣ ತುಮಕೂರು ಗ್ರಾಮಾಂತರದಲ್ಲಿ ದೇವೇಗೌಡರಿಗೆ ಹೆಚ್ಚು ಮತಗಳು ಬರುತ್ತವೆ ಎಂದು ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.