ಮಂಗಳವಾರ, ಅಕ್ಟೋಬರ್ 20, 2020
25 °C

ಶಿರಾ ಉಪಚುನಾವಣೆ: ಜಯಚಂದ್ರ ಆದಾಯ ₹17.09 ಲಕ್ಷ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

TB Jayachandra

ಶಿರಾ: ಉಪಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಅವರು ಚುನಾವಣಾ ಆಯೋಗಕ್ಕೆ ನೀಡಿರುವ ಅಸ್ತಿ ವಿವರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೆ ಆದಾಯದಲ್ಲಿ ₹ 17.09 ಲಕ್ಷ ಏರಿಕೆಯಾಗಿದೆ.

ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎಸ್‌ಸಿ ಪದವಿ ಪಡೆದು, ವಿದ್ಯೋದಯ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದಾರೆ. ಮೂರು ಜನ ಪುತ್ರರಿದ್ದು, ಸ್ವಂತ ವ್ಯವಹಾರದಲ್ಲಿ ತೊಡಗಿದ್ದಾರೆ. ಇವರ ಹಾಗೂ ಪತ್ನಿಯ ಆಸ್ತಿ ವಿವರ ಸಲ್ಲಿಸಿದ್ದಾರೆ.

ಆದಾಯ: 2017-18ನೇ ಸಾಲಿನ ಚುನಾವಣೆಯಲ್ಲಿ ₹ 50.92 ಲಕ್ಷ ಹಾಗೂ ಪತ್ನಿ ₹ 12.90 ಲಕ್ಷ ರೂಪಾಯಿ ಆದಾಯ ಘೋಷಿಸಿಕೊಂಡಿದ್ದರು. 2019-20ರಲ್ಲಿ ₹ 68.01 ಲಕ್ಷ ಆದಾಯ ಘೋಷಿಸಿಕೊಂಡಿದ್ದಾರೆ. ಪತ್ನಿ ನಿರ್ಮಲ ಅವರ ಆದಾಯ ₹ 11.69 ಲಕ್ಷವಿದ್ದು, ₹ 1.21 ಲಕ್ಷ ಇಳಿಕೆಯಾಗಿದೆ.

ಜಯಚಂದ್ರ ಅವರು ₹ 13.10 ಕೋಟಿ ಮೌಲ್ಯದ ಚರ ಮತ್ತು ಸ್ಥಿರಾಸ್ತಿ ಹೊಂದಿದ್ದು, ವಿವಿಧ ಬ್ಯಾಂಕ್ ಮತ್ತು ಖಾಸಗಿ ವ್ಯಕ್ತಿಗಳಿಂದ ₹ 1.47 ಕೋಟಿ ಸಾಲ ಮಾಡಿದ್ದಾರೆ. ಇವರ ಪತ್ನಿ ಜಿ.ಎಚ್.ನಿರ್ಮಲ ಅವರು ₹ 7.40 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ ಮತ್ತು ಸ್ಥಿರಾಸ್ತಿ ಹೊಂದಿದ್ದು, ₹ 15 ಲಕ್ಷ ಸಾಲವಿದೆ.

ಟಿ.ಬಿ.ಜಯಚಂದ್ರ ಅವರು ₹ 1.68 ಲಕ್ಷ ನಗದು ಹೊಂದಿದ್ದಾರೆ. ಬೆಂಗಳೂರಿನ ಅಫೆಕ್ಸ್ ಬ್ಯಾಂಕ್‌ನಲ್ಲಿ ₹ 11, 266, ಶಿರಾ ಕೆನರಾ ಬ್ಯಾಂಕ್‌ನಲ್ಲಿ ₹ 13,000 ಬೆಂಗಳೂರಿನ ಬ್ಯಾಂಕ್ ಆಫ್ ಬರೋಡದಲ್ಲಿ ₹ 4.43, ಐಡಿಬಿಐ ಬ್ಯಾಂಕ್‌ನಲ್ಲಿ ₹ 57.34 ಲಕ್ಷ ಹಣ ಹೊಂದಿದ್ದಾರೆ.

ಇವರ ಪತ್ನಿ ಜಿ.ಎಚ್. ನಿರ್ಮಲಾ ಅವರು ₹ 1.94 ಲಕ್ಷ ರೂಪಾಯಿ ನಗದು, ಬ್ಯಾಂಕ್ ಆಫ್ ಬರೋಡದಲ್ಲಿ ₹ 3.27 ಲಕ್ಷ ಹೊಂದಿದ್ದಾರೆ.

ಬೆಂಗಳೂರಿನ ಆರ್.ಟಿ. ನಗರದಲ್ಲಿ ₹ 8.50 ಕೋಟಿ ಮೌಲ್ಯದ ವಾಣಿಜ್ಯ ಕಟ್ಟಡ, ಬೆಂಗಳೂರಿನ ಎಚ್‌ಐಜಿಎಲ್ ಲೇಔಟ್‌ನಲ್ಲಿ ₹ 4.60 ಕೋಟಿ ಮೌಲ್ಯದ ಮನೆ ಹೊಂದಿದ್ದಾರೆ. ನಿರ್ಮಲ ಹೆಸರಿನಲ್ಲಿ ಶಿರಾ ತಾಲ್ಲೂಕಿನ ಬಾಲೇನಹಳ್ಳಿ ಗೇಟ್‌ನಲ್ಲಿ ₹ 42 ಲಕ್ಷ ವೆಚ್ಚದ ತೋಟದ ಮನೆ ಹಾಗೂ ₹ 35 ಲಕ್ಷ ಮೌಲ್ಯದ ಜಮೀನು, ಪೀಣ್ಯ ಇಂಡಸ್ಟ್ರಿಯಲ್ ಪ್ರದೇಶದಲ್ಲಿ ₹ 6.25 ಕೋಟಿ ವೆಚ್ಚದ ವಾಣಿಜ್ಯ ಕಟ್ಟಡವನ್ನು ಹೊಂದಿದ್ದಾರೆ.

ಜಯಚಂದ್ರ ಅವರು 100 ಗ್ರಾಂ ಚಿನ್ನವನ್ನು ಹೊಂದಿದ್ದರೆ ಅವರ ಪತ್ನಿ ನಿರ್ಮಲ ಅವರು 610 ಗ್ರಾಂ ಚಿನ್ನ ಹಾಗೂ 2.5 ಕೆ.ಜಿ ಬೆಳ್ಳಿ ಹೊಂದಿದ್ದಾರೆ.

ಜಯಚಂದ್ರ ಬಳಿ ₹ 39.35 ಲಕ್ಷ ಮೌಲ್ಯದ ಟಯೊಟಾ ಫಾರ್ಚುನರ್ ಕಾರು ಹಾಗೂ ₹ 5 ಲಕ್ಷ ಮೌಲ್ಯದ ಸೆಕೆಂಡ್ ಹ್ಯಾಂಡ್ ಟಾಟಾ ಕಾರು ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು