ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಕ್ಷಣ ಕ್ಷೇತ್ರ ಕಲುಷಿತಗೊಳಿಸಿದ ಕಾಂಗ್ರೆಸ್: ಆರೋಪ

Published 26 ಮೇ 2024, 3:31 IST
Last Updated 26 ಮೇ 2024, 3:31 IST
ಅಕ್ಷರ ಗಾತ್ರ

ತುಮಕೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಶಿಕ್ಷಣ ಕ್ಷೇತ್ರವನ್ನು ಕಲುಷಿತಗೊಳಿಸಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.

ನಗರದಲ್ಲಿ ಶನಿವಾರ ರಾತ್ರಿ ವಿಧಾನ ಪರಿಷತ್ ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ– ಜೆಡಿಎಸ್ ಮೈತ್ರಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಪರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಹಿಂದೆ ಜಾರಿಗೆ ತಂದಿದ್ದ ಹೊಸ ಶಿಕ್ಷಣ ನೀತಿ (ಎನ್‌ಇಪಿ) ರದ್ದುಪಡಿಸಿ ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ಜಾರಿಗೆ ತರಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರುವ ಬದಲಿಗೆ ಹಾಳು ಮಾಡುವ ಪ್ರಯತ್ನದಲ್ಲಿ ಸಾಗಿದೆ. ಈ ಕ್ಷೇತ್ರದ ಬಗ್ಗೆ ಗಂಧ, ಗಾಳಿಯೂ ಗೊತ್ತಿಲ್ಲದ ಶಿಕ್ಷಣ ಸಚಿವರನ್ನೇ ಬದಲಾಯಿಸಿ ಎಂದು ಶಿಕ್ಷಕರು ಕೇಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲಿನ ಭಯ ಆರಂಭವಾಗಿದೆ. ಪಕ್ಷದ ಅಧಿಕೃತ ಅಭ್ಯರ್ಥಿಯಿಂದ ಬಿಜೆಪಿ ಅಭ್ಯರ್ಥಿ ಸೋಲಿಸಲು ಸಾಧ್ಯವಿಲ್ಲ ಎಂಬ ವಿಚಾರ ಮನಗಂಡು ನಾರಾಯಣಸ್ವಾಮಿ ಹೆಸರಿನ ನಾಲ್ವರನ್ನು ಸ್ಪರ್ಧೆಗೆ ಇಳಿಸಲಾಗಿದೆ. ಕುತಂತ್ರ ನಡೆಸಿ ಚುನಾವಣೆ ಗೆಲ್ಲಲು ಮುಂದಾಗಿದೆ. ಹಣ, ಅಧಿಕಾರದ ಬಲದಿಂದ ಚುನಾವಣೆ ಗೆಲ್ಲುತ್ತೇವೆ ಎಂಬ ವಿಶ್ವಾಸದಲ್ಲಿ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಮುಖಂಡ ಸಿ.ಟಿ.ರವಿ, ‘ಕಾಂಗ್ರೆಸ್ ಸರ್ಕಾರ, ಶಿಕ್ಷಣ ಕ್ಷೇತ್ರವನ್ನು ಹಳ್ಳ ಹಿಡಿಸಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕೃಪಾಂಕ ನೀಡಿ ಮಕ್ಕಳನ್ನು ಪಾಸು ಮಾಡುವ ಪರಿಸ್ಥಿತಿಯನ್ನು ತಂದಿಟ್ಟಿದೆ. ವಿದ್ಯಾರ್ಥಿ ನಕಲು ಮಾಡಿದರೆ, ಶಿಕ್ಷಕರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ. ಬಿಜೆಪಿ ಜಾರಿಗೆ ತಂದಿದೆ ಎಂಬ ಒಂದೇ ಕಾರಣಕ್ಕೆ ನೂತನ ಶಿಕ್ಷಣ ನೀತಿಯನ್ನು ಜಾರಿ ಮಾಡದೆ ಗೊಂದಲ ಸೃಷ್ಟಿಸಲಾಗಿದೆ’ ಎಂದು ಆರೋಪಿಸಿದರು.

ಶಿಕ್ಷಕರ ಜತೆ ಆಟ, ಮಕ್ಕಳ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದೆ. ಸರ್ಕಾರದ ಪ್ರಾಯೋಜಿತ ಜೀತದಾಳುಗಳನ್ನಾಗಿ ಅತಿಥಿ ಶಿಕ್ಷಕರನ್ನು ನಡೆಸಿಕೊಳ್ಳಲಾಗುತ್ತಿದೆ. 7ನೇ ವೇತನ ಆಯೋಗದ ಬಗ್ಗೆ ಏನೂ ಮಾತನಾಡುತ್ತಿಲ್ಲ. ಎನ್‌ಪಿಎಸ್ ಜಾರಿಗೆ ತರುವುದಾಗಿ ಹೇಳಿದರು. ‘ನುಡಿದಂತೆ ನಡೆದಿದ್ದೇವೆ’ ಎಂದು ಹೇಳುವವರು ಏಕೆ ಜಾರಿಗೆ ತರಲಿಲ್ಲ ಎಂದು ಪ್ರಶ್ನಿಸಿದರು.

ಇಂತಹ ಸರ್ಕಾರ ತೊಲಗಬೇಕಾದರೆ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಬೇಕು. ಲೋಕಸಭೆ, ಪರಿಷತ್ ಚುನಾವಣೆ ಫಲಿತಾಂಶದ ನಂತರ ಈ ಸರ್ಕಾರವನ್ನೇ ಬದಲಿಸಲಾಗುವುದು’ ಎಂದು ಹೇಳಿದರು.

ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ, ‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷಕ್ಕೆ ಕಾಲಿಟ್ಟಿದ್ದರೂ ಶಿಕ್ಷಕರ ಕಡೆಗೆ ತಿರುಗಿಯೂ ನೋಡುತ್ತಿಲ್ಲ. ಹೊಸ ಪಿಂಚಣಿ ಯೋಜನೆ ರದ್ದುಪಡಿಸಿ, ಹಳೆ ಪಿಂಚಣಿ ಯೋಜನೆ ಜಾರಿಗೆ ತರುತ್ತೇವೆಂದು ಹೇಳಿದರೂ ಜಾರಿ ಮಾಡಿಲ್ಲ. ಆದರೆ ಹಣ, ತೋಳು ಬಲದಿಂದ ಪರಿಷತ್ ಚುನಾವಣೆ ಗೆಲ್ಲಲು ಮುಂದಾಗಿದೆ’ ಎಂದು ಆರೋಪಿಸಿದರು.

ಶಾಸಕರಾದ ಬೈರತಿ ಬಸವರಾಜು, ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್‌ಗೌಡ, ಕೆ.ಎ.ತಿಪ್ಪೇಸ್ವಾಮಿ, ಚಿದಾನಂದ ಎಂ.ಗೌಡ, ನವೀನ್, ಮುಖಂಡರಾದ ಆರ್.ಸಿ.ಆಂಜನಪ್ಪ, ಎಚ್.ಎಸ್.ರವಿಶಂಕರ್, ಡಾ.ಎಂ.ಆರ್.ಹುಲಿನಾಯ್ಕರ್, ಎಚ್.ನಿಂಗಪ್ಪ, ಎಂ.ಡಿ.ಲಕ್ಷ್ಮೀನಾರಾಯಣ, ಎಸ್‌.ಡಿ.ದಿಲೀಪ್‌ಕುಮಾರ್‌, ಶಿವಶಂಕರ್, ಬಿ.ಎಸ್‌.ನಾಗರಾಜ್, ಉಗ್ರೇಶ್, ಎಂ.ಅಂಬಿಕಾ, ವೈ.ಎಚ್.ಹುಚ್ಚಯ್ಯ ಮೊದಲಾದವರು ಉಪಸ್ಥಿತರಿದ್ದರು.

ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಶಿಕ್ಷಕರು
ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಶಿಕ್ಷಕರು

‘ಗೌಡರ ಕುಟುಂಬಕ್ಕೆ ಮಸಿ ಬಳಿಯುವ ಕೆಲಸ’

ತುಮಕೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದಿನ ಬೆಳಗಾದರೆ ಪ್ರಜ್ವಲ್ ರೇವಣ್ಣ ವಿಚಾರ ಪ್ರಸ್ತಾಪಿಸಿ ಎಚ್.ಡಿ.ದೇವೇಗೌಡರ ಕುಟುಂಬಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಕೋರ್ ಸಮಿತಿ ಅಧ್ಯಕ್ಷ ಜಿ.ಟಿ.ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದರು. ಸಿಐಡಿ ಅಧಿಕಾರಿಗಳು ತನಿಖೆ ನಡೆಸಿ ವರದಿ ನೀಡುವುದಕ್ಕೂ ಮೊದಲೇ ಎಲ್ಲವನ್ನೂ ಈ ಇಬ್ಬರೂ ನಾಯಕರು ಹೇಳುತ್ತಿದ್ದಾರೆ. ಇಂತಹ ಕೆಟ್ಟ ಸರ್ಕಾರ ಹೆಚ್ಚು ದಿನಗಳ ಕಾಲ ಇರಬಾರದು. ಬೇಗ ತೊಲಗಬೇಕು. ಮೈತ್ರಿ ಅಭ್ಯರ್ಥಿ ಗೆಲ್ಲಿಸುವ ಮೂಲಕ ಕಾಂಗ್ರೆಸ್ ಸರ್ಕಾರ ತೆಗೆಯಬೇಕಿದೆ ಎಂದು ಹೇಳಿದರು. ಗ್ಯಾರಂಟಿ ಹೆಸರಿನಲ್ಲಿ ಎಲ್ಲವನ್ನೂ ಹಾಳು ಮಾಡಿದ್ದಾರೆ. ಉಚಿತ ವಿದ್ಯುತ್ ಕೊಟ್ಟು ಮತ್ತೊಂದು ಕಡೆ ದರ ಹೆಚ್ಚಿಸಿದ್ದಾರೆ. ಮಹಿಳೆಯರಿಗೆ ಉಚಿತವಾಗಿ ಪ್ರಯಾಣ ಕಲ್ಪಿಸಿ ವಿದ್ಯಾರ್ಥಿಗಳ ಸಂಚಾರಕ್ಕೆ ಬಸ್ ಸೌಲಭ್ಯ ಇಲ್ಲದಂತೆ ಮಾಡಿದ್ದಾರೆ. ನೋಂದಣಿ ಶುಲ್ಕವನ್ನು ದುಪ್ಪಟ್ಟು ಏರಿಸಿದ್ದಾರೆ. ಇದು ಒಂದು ರೀತಿಯಲ್ಲಿ ಸುಲಿಗೆ ಮಾಡುವ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT