ಮಂಗಳವಾರ, ಜನವರಿ 31, 2023
19 °C

ತುಮಕೂರಿನಲ್ಲೂ ಸಂಚಲನ ಮೂಡಿಸಿದ ರಾಹುಲ್ ಗಾಂಧಿ 'ಭಾರತ್ ಜೋಡೊ ಯಾತ್ರೆ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಆರಭವಾಗಿರುವ ‘ಭಾರತ್ ಜೋಡೊ’ ಯಾತ್ರೆ ಜಿಲ್ಲೆಯಲ್ಲೂ ಸಂಚಲನ ಮೂಡಿಸಿತು.

ಶನಿವಾರ ಬೆಳಿಗ್ಗೆ 6.30 ಗಂಟೆಗೆ ತುರುವೇಕೆರೆ ತಾಲ್ಲೂಕು ಮಾಯಸಂದ್ರ ಸಮೀಪದ ಟಿ.ಬಿ ಕ್ರಾಸ್‌ಗೆ ಬಂದ ಪಾದಯಾತ್ರೆಗೆ ಅದ್ದೂರಿ ಸ್ವಾಗತ ದೊರೆಯಿತು. ಪಕ್ಷದ ರಾಹುಲ್ ಕಂಡು ಕುಣಿದು, ಕುಪ್ಪಳಿಸಿದ ಕಾರ್ಯಕರ್ತರು ಹರ್ಷೋದ್ಗಾರಗಳ ಮೂಲಕ ಬರಮಾಡಿಕೊಂಡರು.

108 ಪೂರ್ಣಕುಂಭ ಹೊತ್ತ ಮಹಿಳೆಯರು ಯಾತ್ರೆಗೆ ಸ್ವಾಗತ ಕೋರಿದರು. ನಾದಸ್ವರ, ಹಲವಾರು ಕಲಾ ತಂಡಗಳು ಸಾಥ್ ನೀಡಿದವು. ರಾಹುಲ್‌ ಜತೆಯಲ್ಲಿ ಶಾಸಕ ಡಾ.ಜಿ.ಪರಮೇಶ್ವರ ಹಾಗೂ ಜಿಲ್ಲೆಯ ನಾಯಕರು ಹೆಜ್ಜೆ ಹಾಕಿದರು. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಧ್ಯದಲ್ಲಿ ಯಾತ್ರೆ ಸೇರಿಕೊಂಡರು. ಅರಳೀಕೆರೆಪಾಳ್ಯದಲ್ಲಿ ಪಾದಯಾತ್ರಿಗಳು ವಿಶ್ರಾಂತಿ ಪಡೆದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಲ್ಲಿ ಯಾತ್ರೆಗೆ ಜತೆಯಾದರು.

ದಲಿತ ಸಂಘರ್ಷ ಸಮಿತಿ ಮುಖಂಡ ಕುಂದೂರು ಮುರುಳಿ ಅವರು, ರಾಹುಲ್ ಅವರಿಗೆ ಬುದ್ಧನ ಪ್ರತಿಮೆ ಉಡುಗೊರೆಯಾಗಿ ನೀಡಿದರು.

ಯಾತ್ರೆ ಸಾಗಿದ ಮಾರ್ಗದ ಹಳ್ಳಿಗಳ ಜನರು ಬಂದು ಕೆಲ ಸಮಯ ಹೆಜ್ಜೆ ಹಾಕಿದರು. ಕೆಲವರು ಗ್ರಾಮಕ್ಕೆ ಸ್ವಾಗತಿಸಿ, ಬೀಳ್ಕೊಟ್ಟರು. ಅಲ್ಲಲ್ಲಿ ಕಲಾ ತಂಡಗಳು ರಂಜಿಸಿದವು. ರಸ್ತೆಯುದ್ದಕ್ಕೂ ಕಾಂಗ್ರೆಸ್ ನಾಯಕರ ಫ್ಲೆಕ್ಸ್, ಬ್ಯಾನರ್‌ ರಾರಾಜಿಸಿದವು. ಮಾರ್ಗ ಮಧ್ಯೆ ನೀರು, ಹಣ್ಣು ಕೊಟ್ಟು ಉಪಚರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ರಾಹುಲ್ ಮತ್ತು  ರಾಜ್ಯದ ನಾಯಕರ ಭಾವಚಿತ್ರವಿರುವ ಟೀ ಷರ್ಟ್ ಧರಿಸಿದ್ದ ಕಾರ್ಯಕರ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಅರಳೀಕೆರೆಪಾಳ್ಯದಲ್ಲಿ ವಿಶ್ರಾಂತಿ ಪಡೆದ ನಂತರ ಮಧ್ಯಾಹ್ನ ತುರುವೇಕೆರೆಯಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಿದರು. ನಂತರ ಹರಿದಾಸನಹಳ್ಳಿ ಮೂಲಕ ತೆರಳಿ ಬಾಣಸಂದ್ರದಲ್ಲಿ ಕೊನೆಗೊಂಡಿತ್ತು. ಭಾನುವಾರ ಬೆಳಿಗ್ಗೆ ತಿಪಟೂರು ತಾಲ್ಲೂಕು ಕೆ.ಬಿ.ಕ್ರಾಸ್‌ನಿಂದ ಯಾತ್ರೆ ಆರಂಭವಾಗಲಿದೆ.

ಯಾತ್ರೆಯಲ್ಲಿ ಜೆಡಿಎಸ್‌ನ ಉಚ್ಚಾಟಿತ ಶಾಸಕ ಶ್ರೀನಿವಾಸ್
ಜೆಡಿಎಸ್‌ನಿಂದ ಉಚ್ಚಾಟಿತರಾಗಿರುವ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ‘ಭಾರತ್ ಜೋಡೊ’ ಯಾತ್ರೆಯಲ್ಲಿ ಶನಿವಾರ ಭಾಗವಹಿಸಿದ್ದರು.

ತುರುವೇಕೆರೆ ತಾಲ್ಲೂಕಿನ ಮಾಯಸಂದ್ರ ಸಮೀಪದ ಟಿ.ಬಿ ಕ್ರಾಸ್‌ನಲ್ಲಿ ಯಾತ್ರೆ ಆರಂಭವಾಗುತ್ತಿದ್ದಂತೆ ರಾಹುಲ್ ಗಾಂಧಿ ಜತೆ ಹೆಜ್ಜೆ ಹಾಕಿದರು. ಸಾಕಷ್ಟು ದೂರ ಯಾತ್ರೆಯಲ್ಲಿ ಸಾಗಿ ಬಂದರು.

ಜೆಡಿಎಸ್‌ನಿಂದ ಉಚ್ಚಾಟಿಸಿದ ನಂತರ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತು ಕೇಳಿ ಬಂದಿದ್ದವು. ಪಕ್ಷಕ್ಕೆ ಬಂದರೆ ಟಿಕೆಟ್ ನೀಡುವುದಾಗಿ ಮುಖಂಡ ಸಿದ್ದರಾಮಯ್ಯ ಮುಕ್ತ ಆಹ್ವಾನ ನೀಡಿದ್ದರು. ಆದರೆ ಈವರೆಗೆ ಪಕ್ಷ ಸೇರುವ ಬಗ್ಗೆ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಆದರೆ ರಾಹುಲ್ ಗಾಂಧಿ ಜತೆ ಪಾದಯಾತ್ರೆಯಲ್ಲಿ ಭಾಗವಹಿಸಿರುವುದು ಮಹತ್ವ ಪಡೆದುಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು