ಬುಧವಾರ, ಜುಲೈ 6, 2022
22 °C
ಸಿದ್ಧಗಂಗಾ ಮಠಕ್ಕೆ ಮಾರ್ಚ್ 31ರಂದು ಭೇಟಿ: ಕಾಂಗ್ರೆಸ್‌ ಸಭೆ, ಸಮಾರಂಭ ಇಲ್ಲ

ಸಿದ್ಧಗಂಗಾ ಮಠಕ್ಕೆ ನಾಳೆ ರಾಹುಲ್ ಗಾಂಧಿ ಭೇಟಿ: ಸ್ವಾಗತಕ್ಕೆ ಕಾಂಗ್ರೆಸ್ ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಸಿದ್ಧಗಂಗಾ ಮಠಕ್ಕೆ ಮಾರ್ಚ್ 31ರಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಭೇಟಿ ನೀಡಲಿದ್ದು, ಸ್ವಾಗತಕ್ಕೆ ಜಿಲ್ಲೆಯ ಕಾಂಗ್ರೆಸ್ ನಾಯಕರು ಸಜ್ಜಾಗಿದ್ದಾರೆ.

ಸಿದ್ಧಗಂಗಾ ಮಠದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಜಯಂತಿ ಕಾರ್ಯಕ್ರಮ ಏ. 1ರಂದು ನಡೆಯಲಿದ್ದು, ಅದಕ್ಕೂ ಮೊದಲೇ ಮಾರ್ಚ್ 31ರಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಠಕ್ಕೆ ಭೇಟಿ ನೀಡಲಿದ್ದಾರೆ. ಮಠದಲ್ಲಿ ಸ್ವಾಮೀಜಿ ಆಶೀರ್ವಾದ ಪಡೆಯುವುದನ್ನು ಹೊರತುಪಡಿಸಿದರೆ ಬೇರೆ ಯಾವುದೇ ಸಭೆ, ಸಮಾರಂಭ ಇರುವುದಿಲ್ಲ. ಕಾರ್ಯಕರ್ತರ ಸಭೆಯೂ ಇರುವುದಿಲ್ಲ. ಮಠದ ಭೇಟಿ ನಂತರ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ ಎಂದು ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.

ಬೆಂಗಳೂರಿನಿಂದ ರಸ್ತೆ ಮೂಲಕ ಮಠಕ್ಕೆ ಬರಲಿದ್ದಾರೆ. ಅಲ್ಲಲ್ಲಿ ಕಾರ್ಯಕರ್ತರು ಸ್ವಾಗತಿಸಲಿದ್ದಾರೆ. ಕಾಂಗ್ರೆಸ್ ಜಿಲ್ಲಾ ಘಟಕದ ವತಿಯಿಂದ ಸ್ವಾಗತಿಸಿ, ಮಠಕ್ಕೆ ಕರೆದುಕೊಂಡು ಹೋಗಲಾಗುತ್ತದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದರು.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಹಿಂದೆ ಸ್ವಾಮೀಜಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈಗ ರಾಹುಲ್ ಗಾಂಧಿ ಬರುತ್ತಿದ್ದಾರೆ. ಸ್ವಾಮೀಜಿ ಮೇಲಿನ ಗೌರವದಿಂದ ಆಗಮಿಸುತ್ತಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶಗಳಿಲ್ಲ. ಭೇಟಿಗೆ ಯಾವುದೇ ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲ. ಮಠದ ಭಕ್ತರಾಗಿ ಬರುತ್ತಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.

ಸದಸ್ಯತ್ವದಲ್ಲಿ ಜಿಲ್ಲೆ ಮೊದಲು: ಕಾಂಗ್ರೆಸ್ ಸದಸ್ಯತ್ವ ಅಭಿಮಾನ ಮುಂದುವರಿಸಿದ್ದು, ಜಿಲ್ಲೆಯಲ್ಲಿ 2.74 ಲಕ್ಷ ಸದಸ್ಯರನ್ನು ನೋಂದಾಯಿಸುವ ಮೂಲಕ ರಾಜ್ಯದಲ್ಲೇ ಜಿಲ್ಲೆ ಮೊದಲ ಸ್ಥಾನದಲ್ಲಿ ಇದೆ. ಮುಂದಿನ ದಿನಗಳಲ್ಲಿ 5 ಲಕ್ಷ ಸದಸ್ಯತ್ವ ನೋಂದಣಿ ಗುರಿ ಹಾಕಿಕೊಳ್ಳಲಾಗಿದೆ. ಮುಂದಿನ ವಿಧಾನಸಭೆ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲೇ ಎದುರಿಸುತ್ತೇವೆ. ನಮ್ಮಲ್ಲಿ ಯಾವುದೇ ಬಣಗಳಿಲ್ಲ ಎಂದು ಹೇಳಿದರು.

ತನಿಖೆಗೆ ಆಗ್ರಹ: ‘ಕಾಮಗಾರಿ ಗುತ್ತಿಗೆ ನೀಡುವಲ್ಲಿ ಶೇ 40ರಷ್ಟು ಕಮಿಷನ್ ಪಡೆಯಲಾಗುತ್ತಿದೆ’ ಎಂದು ನೋಂದಾಯಿತ ರಾಜ್ಯ ಗುತ್ತಿಗೆದಾರರ ಸಂಘವೇ ಪ್ರಧಾನಿಗೆ ಪತ್ರ ಬರೆದು ದೂರು ಸಲ್ಲಿಸಿದೆ. ಪ್ರಧಾನಿ ಕಚೇರಿಗೆ ಯಾರಾದರೂ ಪತ್ರ ಬರೆದರೆ ತಕ್ಷಣ ಅದಕ್ಕೆ ಪ್ರಧಾನಿ ಪ್ರತಿಕ್ರಿಯಿಸುತ್ತಾರೆ, ಟ್ವೀಟ್ ಮಾಡುತ್ತಾರೆ. ಆದರೆ ಅಧಿಕೃತ ಸಂಘ ಪತ್ರ ಬರೆದಿದ್ದರೂ ಸ್ಪಂದಿಸಿಲ್ಲ. ಭ್ರಷ್ಟಾಚಾರ ನಡೆಯುತ್ತಿಲ್ಲ ಎನ್ನುವುದಾದರೆ ತನಿಖೆಗೆ ಆದೇಶಿಸಬೇಕಿತ್ತು. ಮೌನ ವಹಿಸಿರುವುದನ್ನು ನೋಡಿದರೆ ಭ್ರಷ್ಟಾಚಾರಕ್ಕೆ ಬೆಂಬಲ ಕೊಟ್ಟಂತೆ ಕಾಣುತ್ತದೆ ಎಂದು ಆರೋಪಿಸಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ, ‘ಸಿದ್ದರಾಮಯ್ಯ ಅವರು ಸ್ವಾಮೀಜಿಗಳನ್ನು ಅವಮಾನಿಸಿಲ್ಲ. ಕಾವಿ ಬಟ್ಟೆ ಹಾಕಿದವರು ಎರಡನೇ ದೇವರೆಂದು ಭಾವಿಸಿದ್ದೇವೆ. ಅವರ ಬಗ್ಗೆ ಅಪಾರ ಗೌರವ ಇದೆ. ನಾವು ಗಾಂಧೀಜಿಯ ಹಿಂದೂವಾದಿಗಳು. ಬಿಜೆಪಿಯವರು ಗೋಡ್ಸೆ ಹಿಂದೂವಾದಿಗಳು’ ಎಂದು ಟೀಕಿಸಿದರು.

ಸಿದ್ದರಾಮಯ್ಯ ಇಲ್ಲದೆ ಕಾಂಗ್ರೆಸ್ ಇಲ್ಲ. ಅವರು ಕಾಂಗ್ರೆಸ್‌ಗೆ ಅನಿವಾರ್ಯ. ಪಕ್ಷದ ಪ್ರಮುಖ ನಾಯಕರಲ್ಲಿ ಅವರೂ ಒಬ್ಬರು ಎಂದು ಹೇಳಿದರು.

ಕಾಂಗ್ರೆಸ್ ಮುಖಂಡರಾದ ಟಿ.ಬಿ.ಜಯಚಂದ್ರ, ಷಫಿ ಅಹ್ಮದ್, ರಫಿಕ್ ಅಹ್ಮದ್, ಆರ್.ರಾಮಕೃಷ್ಣ, ವೆಂಕಟೇಶ್ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು