ಶನಿವಾರ, ಮೇ 28, 2022
31 °C
ಶಂಕರ ವೀರಭದ್ರೇಶ್ವರ ಸೌಹಾರ್ದ ಸಹಕಾರ ಸಂಘದ ವಾರ್ಷಿಕ ಸಭೆ

ಆರ್ಥಿಕ ಸ್ವಾವಲಂಬನೆಗೆ ಸಹಕಾರ ಸಂಘ ಅಗತ್ಯ: ಡಾ.ಅಭಿನವ ಮಲ್ಲಿಕಾರ್ಜುನ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿಪಟೂರು: ‘ಮಾನವನ ಸರ್ವಾಂಗೀಣ ಬೆಳವಣಿಗೆ ಹಾಗೂ ಆರ್ಥಿಕ ಸುಭದ್ರತೆಗೆ ಸಹಕಾರ ಸಂಘಗಳು ಹೆಚ್ಚು ಸಹಕಾರಿಯಾಗಿವೆ’ ಎಂದು ಕುಪ್ಪೂರು-ತಮ್ಮಡಿಹಳ್ಳಿ ವಿರಕ್ತಮಠದ ಡಾ.ಅಭಿನವ ಮಲ್ಲಿಕಾರ್ಜುನ ದೇಶೀಕೇಂದ್ರ ಸ್ವಾಮೀಜಿ ತಿಳಿಸಿದರು.

ನಗರದ ದೊಡ್ಡಯನಪಾಳ್ಯದಲ್ಲಿ ಮಂಗಳವಾರ ಶಂಕರ ವೀರಭದ್ರೇಶ್ವರ ಸೌಹಾರ್ದ ಪತ್ತಿನ ಸಹಕಾರ ಸಂಘದ 2020-21ನೇ ಸಾಲಿನ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಮನುಷ್ಯ ಸಂಘ ಜೀವಿ ಹಾಗೂ ಸಮಾಜ ಜೀವಿ. ಸೌಹಾರ್ದದಿಂದ ಕೂಡಿದ ಸಂಬಂಧಗಳೇ ಆತನಿಗೆ ಜೀವನಾಡಿಯಾಗಿವೆ. ಪರಸ್ಪರರು ನಂಬಿಕೆ, ವಿಶ್ವಾಸಗಳಿಂದ ವ್ಯವಹಾರ ಮಾಡುವ ಮನೋಭಾವನೆಯನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು. ತಮ್ಮ ಆರ್ಥಿಕ ಸಮಸ್ಯೆ ನಿವಾರಿಸಿಕೊಳ್ಳುವ ಜೊತೆಗೆ ಸಂಘದ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಎಷ್ಟೇ ವ್ಯವಹಾರ ಮಾಡುತ್ತಿದ್ದರೂ ಮಾನವೀಯ ಮೌಲ್ಯಗಳನ್ನು ಮಾತ್ರ ಮರೆಯಬಾರದು. ಅದೇ ರೀತಿ ಸಹಕಾರ ಸಂಘಗಳು ಕೂಡ ಸಮಾಜಮುಖಿ ಚಿಂತನೆ ಅಳವಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಮುಂದಾಗಬೇಕು. ಸದಸ್ಯರು ಸಂಘದ ಎಲ್ಲಾ ವ್ಯವಹಾರವನ್ನು ಮುಚ್ಚುಮರೆಯಿಲ್ಲದೇ ಮುಕ್ತವಾಗಿ ತಿಳಿದುಕೊಂಡು ಸಂಘದ ಬೆಳವಣಿಗೆಗೆ ಶ್ರಮಿಸಬೇಕು ಎಂದು ಹೇಳಿದರು.

‘ಸಹಕಾರಿ ರತ್ನ’ ಪ್ರಶಸ್ತಿ ಪುರಸ್ಕೃತ ಎಸ್. ಸೋಮಶೇಖರ್ ಮಾತನಾಡಿ, ಜಾಗತೀಕರಣದಿಂದ ಇಡೀ ಜಗತ್ತೇ ಆರ್ಥಿಕವಾಗಿ ತತ್ತರಿಸಿ ಹೋಗಿದ್ದರೂ ಭಾರತ ಮಾತ್ರ ಉಳಿತಾಯ ಯೋಜನೆಗಳನ್ನು ಜಾರಿ ಮಾಡಿಕೊಂಡು ಆರ್ಥಿಕ ಸದೃಢತೆಯನ್ನು ಕಾಪಾಡಿಕೊಂಡಿದೆ ಎಂದರು.

ಪಾಶ್ಚಿಮಾತ್ಯ ದೇಶಗಳಲ್ಲಿ ಉಳಿತಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡದೆ ಇರುವುದರಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ದೇಶದ ಜನರು ಸಂಘ, ಸಂಸ್ಥೆಗಳು ಮತ್ತು ಬ್ಯಾಂಕ್‌ಗಳಲ್ಲಿ ಉಳಿತಾಯ ಮಾಡಿರುವ ಹಣವನ್ನು ಆಪತ್ಕಾಲದಲ್ಲಿ ನೇರವಾಗಿ ಬಳಕೆ ಮಾಡಿಕೊಳ್ಳುತ್ತಾ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತಿದ್ದಾರೆ. ಇದರಿಂದ ಯಾವುದೇ ರೀತಿಯ ಕಷ್ಟ ಬಂದರೂ ಸಹಕಾರ ಸಂಘಗಳಲ್ಲಿರುವ ಉಳಿತಾಯದ ಹಣವನ್ನು ಸದ್ಬಳಕೆ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಾರೆ ಎಂದು ಹೇಳಿದರು.

ಜಿ.ಪಂ. ಮಾಜಿ ಸದಸ್ಯ ತ್ರಿಯಾಂಬಕ ಮಾತನಾಡಿ, ಹಣಕಾಸಿನ ವ್ಯವಹಾರ ನಡೆಸುವ ಯಾವುದೇ ಸಂಸ್ಥೆಗಳ ಒಳಗೆ ರಾಜಕೀಯ, ಸ್ವಾರ್ಥ ಲಾಲಸೆ ಬೆರೆಸಬಾರದು. ಪಾರದರ್ಶಕತೆಯಿಂದ ಕೂಡಿದ ಲೆಕ್ಕಪತ್ರಗಳು ಸದಸ್ಯರ ಮನಸ್ಸಿನಲ್ಲಿ ಸಂಘದ ಬಗ್ಗೆ ಗೌರವ ಹೆಚ್ಚಿಸುವ ರೀತಿಯಲ್ಲಿ ಇರಬೇಕು. ಸಾಲ ಪಡೆದವರು ಕಾಲಕಾಲಕ್ಕೆ ಸರಿಯಾಗಿ ಮರುಪಾವತಿ ಮಾಡುವ ಮನಃಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಂಕರ ವೀರಭದ್ರೇಶ್ವರ ಸೌಹಾರ್ದ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್. ದಕ್ಷಿಣಮೂರ್ತಿ ಮಾತನಾಡಿ, ಈ ಸಹಕಾರ ಸಂಘದ ಸಂಪೂರ್ಣ ಬೆಳವಣಿಗೆಗೆ ಸದಸ್ಯರ ಸಹಕಾರ ಬಹುಮುಖ್ಯ ಎಂದು ತಿಳಿಸಿದರು.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪಾರಿತೋಷಕ
ನೀಡಲಾಯಿತು.

ಸೃಜನಶೀಲ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಎಸ್. ಜಯಣ್ಣ, ಕುಮಾರ ಆಸ್ಪತ್ರೆಯ ವೈದ್ಯ ಡಾ.ಶ್ರೀಧರ್, ಬೆಂಗಳೂರಿನ ನೊಳಂಬ ಸಂಘದ ಅಧ್ಯಕ್ಷ ಎಸ್.ಆರ್. ಪಾಟೀಲ್, ತುಮುಲ್ ನಿವೃತ್ತ ಉಪ ವ್ಯವಸ್ಥಾಪಕ ಎಚ್.ಎಸ್. ಸಿದ್ಧರಾಮಯ್ಯ, ಸಂಘದ ಉಪಾಧ್ಯಕ್ಷ ಎಚ್.ಆರ್. ಲಕ್ಷ್ಮಿನಾರಾಯಣ, ನಿರ್ದೇಶಕರಾದ ಎಸ್. ಗಂಗಾಧರಯ್ಯ, ಎಂ.ಬಿ. ಬಸವರಾಜು, ಎಚ್.ಬಿ. ಪ್ರಶಾಂತ್, ಕುಮಾರ್, ಬಿ.ಟಿ. ನಂದನ, ಎಸ್.ಎಸ್. ಚೇತನ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು