ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | ಕೊಬ್ಬರಿ: ಮತ್ತೆ ನೋಂದಣಿಗೆ ಅವಕಾಶ

ಎರಡು ವಾರದ ಹಿಂದೆ ಮಾಡಿದ್ದ ನೋಂದಣಿ ರದ್ದು
Published 20 ಫೆಬ್ರುವರಿ 2024, 15:20 IST
Last Updated 20 ಫೆಬ್ರುವರಿ 2024, 15:20 IST
ಅಕ್ಷರ ಗಾತ್ರ

ತುಮಕೂರು: ನಾಫೆಡ್ ಮೂಲಕ ಬೆಂಬಲ ಬೆಲೆಯಲ್ಲಿ ಉಂಡೆ ಕೊಬ್ಬರಿ ಖರೀದಿಸಲು ರೈತರ ಹೆಸರು ನೋಂದಣಿ ಮಾಡಿಕೊಂಡಿದ್ದ ಪ್ರಕ್ರಿಯೆ ರದ್ದುಪಡಿಸಿದ್ದು, ಹೊಸದಾಗಿ ನೋಂದಣಿ ಮಾಡಿಸಿ, ಖರೀದಿಸಲು ರಾಜ್ಯ ಸರ್ಕಾರ ಆದೇಶಿಸಿದೆ.

ರೈತರ ಹೆಸರು ನೋಂದಣಿ ಸಮಯದಲ್ಲಿ ಅಕ್ರಮ ನಡೆದ ಆರೋಪ ಕೇಳಿ ಬಂದಿತ್ತು. ವರ್ತಕರು, ದಲ್ಲಾಳಿಗಳು, ರವಾನೆದಾರರು ರೈತರ ಹೆಸರಿನಲ್ಲಿ ನೋಂದಣಿ ಮಾಡಿಸಿದ್ದರು. ಈ ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ತನಿಖೆ ನಡೆದ ಸಹಕಾರ ಇಲಾಖೆಯು ಕೆಲವು ನೌಕರರನ್ನು ಅಮಾನತು ಮಾಡಿತ್ತು. ಹಲವು ರೈತರಿಗೆ ನೋಂದಣಿ ಮಾಡಿಸಲು ಅವಕಾಶವೇ ಸಿಕ್ಕಿರಲಿಲ್ಲ. ಈಗ ಮತ್ತೆ ಹೊಸದಾಗಿ ನೋಂದಣಿ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ.

ತುಮಕೂರು, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯನ್ನು (ಎಪಿಎಂಸಿ) ಖರೀದಿ ಸಂಸ್ಥೆಯನ್ನಾಗಿ ನೇಮಿಸಲಾಗಿದೆ. ಹಾಸನ, ಮಂಡ್ಯ, ಚಿಕ್ಕಮಗಳೂರು, ಚಿತ್ರದುರ್ಗ, ದಕ್ಷಿಣ ಕನ್ನಡ, ರಾಮನಗರ ಜಿಲ್ಲೆಗಳಿಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ಮೂಲಕ ಖರೀದಿಸಲು ಆದೇಶಿಸಲಾಗಿದೆ.

ಪ್ರತಿ ಎಕರೆಗೆ 6 ಕ್ವಿಂಟಲ್, ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಲ್ ಕೊಬ್ಬರಿ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ. ಈ ಬಾರಿ ಯಾವುದೇ ಲೋಪದೋಷಗಳು ಉಂಟಾಗದಂತೆ ಎಚ್ಚರ ವಹಿಸಲು ಸೂಚಿಸಲಾಗಿದೆ.

ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕುಸಿದ ಹಿನ್ನೆಲೆಯಲ್ಲಿ ಬೆಂಬಲ ಬೆಲೆಯಲ್ಲಿ ಕೇಂದ್ರ ಸರ್ಕಾರ ಖರೀದಿಸುವಂತೆ ರೈತರು ಸತತವಾಗಿ ಒತ್ತಡ ಹಾಕಿದ್ದರು. ಹಲವು ದಿನಗಳ ಹೋರಾಟದ ಫಲವಾಗಿ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ (ನಾಫೆಡ್) ಮೂಲಕ 6.25 ಲಕ್ಷ ಕ್ವಿಂಟಲ್ ಖರೀದಿಸಲು ಮುಂದಾಗಿತ್ತು. ಜನವರಿಯಿಂದ ಮೂರು ಬಾರಿ ರೈತರ ಹೆಸರು ನೋಂದಣಿ ಪ್ರಕ್ರಿಯೆ ಮುಂದೂಡಲಾಗಿತ್ತು. ಕೊನೆಗೂ ಫೆ. 5ರಿಂದ ನೋಂದಣಿ ಆರಂಭಿಸಿದ್ದು, ನಾಲ್ಕು ದಿನಗಳಲ್ಲಿ ನೋಂದಣಿ ಸ್ಥಗಿತಗೊಳಿಸಲಾಗಿತ್ತು. ಈ ಸಮಯದಲ್ಲಿ ಸರ್ವರ್ ಸಮಸ್ಯೆ ತೀವ್ರವಾಗಿ ಕಾಡಿತ್ತು. ಕೊನೆಗೆ ನೋಂದಣಿ ಮಾಡಿಸಲು ಸಾಧ್ಯವಾಗದೆ ರೈತರು ಪ್ರತಿಭಟನೆ ನಡೆಸಿದ್ದರು.

ನೋಂದಣಿ ಮತ್ತಷ್ಟು ತಡ ತುಮಕೂರು ಜಿಲ್ಲೆಗೆ ಎಪಿಎಂಸಿಯನ್ನು ಖರೀದಿ ಸಂಸ್ಥೆಯನ್ನಾಗಿ ನೇಮಿಸಿದ್ದು ಅವರ ಬಳಿ ಕಂಪ್ಯೂಟರ್ ಸಿಬ್ಬಂದಿ ಕೊರತೆ ಇದೆ. ಅಗತ್ಯ ಮೂಲ ಸೌಕರ್ಯಗಳು ಇಲ್ಲವಾಗಿದ್ದು ನೋಂದಣಿ ಪ್ರಕ್ರಿಯೆ ಮತ್ತಷ್ಟು ತಡವಾಗಲಿದೆ. ತೆಂಗು ಬೆಳೆಯುವ ಪ್ರದೇಶ ಹಾಗೂ ಕೊಬ್ಬರಿ ಉತ್ಪಾದನೆಗೆ ಅನುಗುಣವಾಗಿ ಜಿಲ್ಲಾವಾರು ಎಷ್ಟು ಕ್ವಿಂಟಲ್ ಖರೀದಿಸಬೇಕು ಎಂಬುದನ್ನು ನಿಗದಿಪಡಿಸುವ ಪ್ರಕ್ರಿಯೆಯೂ ಆರಂಭವಾಗಿದ್ದು ಈ ಸಂಬಂಧ ಮತ್ತೊಂದು ಆದೇಶ ಹೊರ ಬೀಳಲಿದೆ. ಈ ಎಲ್ಲಾ ಪ್ರಕ್ರಿಯೆ ಮುಗಿದ ನಂತರ ನೋಂದಣಿ ಆರಂಭವಾಗಲಿದೆ ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT