ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ಮತ್ತೂ ಹೆಚ್ಚುತ್ತಿದೆ ಸೋಂಕು

ಗುಬ್ಬಿ, ತಿಪಟೂರು, ಚಿಕ್ಕನಾಯಕನಹಳ್ಳಿಯಲ್ಲಿ ತಲಾ ಒಂದು ಪ್ರಕರಣ
Last Updated 19 ಜೂನ್ 2020, 15:05 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ಮೂವರಿಗೆ ಕೊರೊನಾ ಸೋಂಕು ತಗುಲಿರುವುದು ಶುಕ್ರವಾರ ದೃಢಪಟ್ಟಿದೆ. ಮೂವರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಿದ್ದು, ಸೋಂಕಿತರ ಸಂಖ್ಯೆ 46ಕ್ಕೆ ಏರಿಕೆಯಾಗಿದೆ.

ಗುಬ್ಬಿ, ಚಿಕ್ಕನಾಯಕನಹಳ್ಳಿ, ತಿಪಟೂರು ತಾಲ್ಲೂಕಿನಲ್ಲಿ ತಲಾ ಒಂದೊಂದು ಪ್ರಕರಣ ಪತ್ತೆಯಾಗಿದೆ. ಚಿಕ್ಕನಾಯಕನಹಳ್ಳಿ, ತಿಪಟೂರಿನ ಪ್ರಕರಣಗಳಲ್ಲಿ ರೋಗಿಗಳು ದೂರದ ಸ್ಥಳಗಳಿಗೆ ಸಂಚಾರ ಮಾಡಿಲ್ಲ. ಆದರೂ ರೋಗಕ್ಕೆ ತುತ್ತಾಗಿದ್ದಾರೆ. ಇದು ಜನರನ್ನು ಆತಂಕಕ್ಕೆ ದೂಡಿದೆ. ಇವರಿಗೆ ಸೋಂಕು ತಗುಲಿದ್ದಾದರೂ ಹೇಗೆ ಎನ್ನುವ ಸವಾಲು ಅಧಿಕಾರಿಗಳಿಗೆ ಎದುರಾಗಿದೆ.

ಮಾರ್ಗ ಬಂದ್: ಗುಬ್ಬಿ ತಾಲ್ಲೂಕಿನ ಕಿಟ್ಟದಕುಪ್ಪೆ ಗ್ರಾಮದಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ 55 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ. ಗ್ರಾಮವನ್ನು ಸೀಲ್‌ಡೌನ್ ಮಾಡಲಾಗಿದೆ. ಇವರು ಕಳೆದ ವಾರ ಹೃದಯ ಸಂಬಂಧಿ ರೋಗಕ್ಕೆ ಮಾತ್ರೆಗಳನ್ನು ತರಲು ಬೆಂಗಳೂರಿನ ಆಸ್ಪತ್ರೆಯೊಂದಕ್ಕೆ ಹೋಗಿ ಬಂದಿದ್ದರು. ಗುಬ್ಬಿ ತಾಲ್ಲೂಕಿನ ಚೇಳೂರಿನಲ್ಲಿ ಗುರುವಾರ ಜೆಸಿಬಿ ಆಪರೇಟರ್‌ಗೆ ಸೋಂಕು ತಗುಲಿತ್ತು. ಮರು ದಿನವೇ ಮತ್ತೊಂದು ಪ್ರಕರಣ ವರದಿಯಾಗುವ ಮೂಲಕ ತಾಲ್ಲೂಕಿನ ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಇವರ ಪ್ರಾಥಮಿಕ ಸಂಪರ್ಕದಲ್ಲಿ ಇದ್ದ 35 ಜನರನ್ನು ಐಸೊಲೇಷನ್‌ನಲ್ಲಿ ಇರಿಸಲಾಗಿದೆ.

ಸೋಂಕು ದೃಢವಾದ ನಂತರ ರೋಗಿಯ ಸಂಬಂಧಿಕರು, ಸ್ನೇಹಿತರು ಅಧಿಕಾರಿಗಳಿಗೆ ಕರೆಮಾಡಿ ರೋಗಿಯ ಸಂಚಾರದ ಬಗ್ಗೆ ಮಾಹಿತಿ ನೀಡುತ್ತಿದ್ದರು. ಹೊದಲೂರು ಮಾರ್ಗವಾಗಿ ಬೆಲವತ್ತ, ಕಡಬ, ಕಲ್ಲೂರಿಗೆ ತೆರಳುವ ಮಾರ್ಗವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.

ಸ್ಥಳಕ್ಕೆ ತಹಶೀಲ್ದಾರ್ ಡಾ.ಪ್ರದೀಪ್ ಕುಮಾರ್ ಹಿರೇಮಠ್, ಟಿಎಚ್‌ಒ ಬಿಂದುಮಾಧವ, ಸಿಪಿಐ ರಾಮಕೃಷ್ಣಯ್ಯ, ಪಿಎಸ್ಐ ಜ್ಞಾನಮೂರ್ತಿ ಭೇಟಿ ನೀಡಿದರು.

ಗಾರೆ ಕೆಲಸದ ಮಹಿಳೆಗೆ ಸೋಂಕು: ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಗಾರೆಕೆಲಸ ಮಾಡುವ 38 ವರ್ಷದ ಮಹಿಳೆಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಇದು ತಾಲ್ಲೂಕಿನಲ್ಲಿ ಕಂಡುಬಂದ ಮೊದಲ ಪ್ರಕರಣ.

ಜೂನ್ 16ರಂದು ಜ್ವರದ ಕಾರಣ ಅವರು ಚಿ.ನಾ.ಹಳ್ಳಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ್ದರು. ಇವರು ಬೇರೆ ಕಡೆಗಳಿಗೆ ಸಂಚರಿಸಿಯೂ ಇಲ್ಲ. ಬೆಂಗಳೂರಿನ ಸಂಬಂಧಿಯೊಬ್ಬರು ಇವರ ಮನೆಗೆ ವಾರಕ್ಕೆ ಒಂದೆರೆಡು ಬಾರಿ ಬಂದು ಹೋಗಿದ್ದಾರೆ. ಮಹಿಳೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ 15 ಜನರನ್ನು ಐಸೊಲೇಷನ್‌ನಲ್ಲಿ ಇರಿಸಲಾಗಿದೆ. ಚಿ.ನಾ.ಹಳ್ಳಿ ನಗರದ ಒಂದು ಪ್ರದೇಶವನ್ನು ಕಂಟೈನ್ಮೆಂಟ್ ವಲಯ ಎಂದು ಘೋಷಿಸಲಾಗಿದೆ.

ಬಡಾವಣೆ ಸ್ವಚ್ಛ: ತಿಪಟೂರಿನ ಸದಾಶಿವಪ್ಪ ನಗರದ 42 ವರ್ಷದ ವ್ಯಕ್ತಿಗೆ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಬಡಾವಣೆಯನ್ನು ನಗರಸಭೆ ಸಿಬ್ಬಂದಿ ಸ್ವಚ್ಛಗೊಳಿಸಿದರು. ಬಡಾವಣೆಯನ್ನು ಪೂರ್ಣ ಪ್ರಮಾಣದಲ್ಲಿ ಸ್ಯಾನಿಟೈಸ್ ಮಾಡಲಾಗುತ್ತಿದೆ. ಈಗಾಗಲೇ ಗಾಂಧಿನಗರದ ಚಾಮುಂಡೇಶ್ವರಿ ಬಡಾವಣೆ ಸೀಲ್‌ಡೌನ್ ಆಗಿದೆ. ಈಗ ಸದಾಶಿವಪ್ಪ ಬಡಾವಣೆಯೂ ಸೀಲ್‌ಡೌನ್ ಆಗುವ ಮೂಲಕ ಕೊಬ್ಬರಿ ನಾಡಿನ ಜನರಲ್ಲಿ ಆತಂಕ ಹೆಚ್ಚಿಸಿದೆ.

ಇವರು ಸಹ ಎಲ್ಲೆಗೂ ಪ್ರಯಾಣಿಸಿಲ್ಲ. ಪ್ರಾಥಮಿಕ ಸಂಪರ್ಕದಲ್ಲಿದ್ದ 8 ಜನರನ್ನು ಐಸೊಲೇಷನ್‌ನಲ್ಲಿ ಇಡಲಾಗಿದೆ. ಸದಾಶಿವಪ್ಪ ನಗರದಲ್ಲಿ ಆರೋಗ್ಯ ಇಲಾಖೆ, ಪೊಲೀಸರು, ನಗರಸಭೆ ಸಿಬ್ಬಂದಿಯ ತಂಡ ಬೀಡು ಬಿಟ್ಟಿದೆ. ತಾಲ್ಲೂಕಿನ ನೊಣವಿನಕೆರೆ ಹೋಬಳಿಯ ನೆಲ್ಲಿಕೆರೆ ಗ್ರಾಮಕ್ಕೆ ಬೆಂಗಳೂರಿನಿಂದ ಬಂದ ವ್ಯಕ್ತಿಗೂ ಸೋಂಕು ತಗುಲಿದೆ ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT