ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಅಕ್ಕಿ ಗಿರಣಿಗೆ ಕಾರ್ಮಿಕರ ಸಮಸ್ಯೆ

ಚಟುವಟಿಕೆ ಆರಂಭಿಸುವಂತೆ ಜಿಲ್ಲಾಡಳಿತ ನಿರ್ದೇಶನ; ಹೊರ ರಾಜ್ಯಗಳ ಕಾರ್ಮಿಕರಿಂದ ಮಾತ್ರ ಕೆಲಸ
Last Updated 3 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ತುಮಕೂರು: ಅಕ್ಕಿ ಗಿರಣಿಗಳು ಚಟುವಟಿಕೆ ಆರಂಭಿಸುವಂತೆ ಜಿಲ್ಲಾಡಳಿತ ಸೂಚಿಸಿದೆ. ಜನರ ನಿತ್ಯದ ಅಗತ್ಯಗಳಲ್ಲಿ ಪ್ರಮುಖವಾಗಿರುವ ಅಕ್ಕಿ‌ ಪೂರೈಕೆಗೆ ಯಾವುದೇ ಅಡಚಣೆಗಳು ಆಗಬಾರದು. ಸಮರ್ಪಕವಾಗಿ ಅಕ್ಕಿ ದೊರೆಯಬೇಕು ಎಂದು ನಿರ್ದೇಶನ ನೀಡಿದೆ.

ಆದರೆ ಅಕ್ಕಿ ಗಿರಣಿಗಳು ಕೊರೊನಾ ಪರಿಣಾಮ ತೀವ್ರವಾಗಿ ಕಾರ್ಮಿಕರ ಕೊರತೆ ಎದುರಿಸುತ್ತಿವೆ. ಒಂದು ಕಡೆ ಅಕ್ಕಿಗೆ ಬೇಡಿಕೆ ಹೆಚ್ಚುತ್ತಿದೆ. ಆದರೆ ಕಾರ್ಮಿಕರ ಕೊರತೆಯಿಂದ ಆ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗದ ಸ್ಥಿತಿಯೂ ಎದುರಾಗಿದೆ. ಭತ್ತದ ಸಂಗ್ರಹ ಇದ್ದರೂ ಅಕ್ಕಿಯಾಗಿ ಪರಿವರ್ತಿಸಲು ಪರದಾಡಬೇಕಿದೆ.

ನಗರದಲ್ಲಿ ಏಳೆಂಟು ವರ್ಷಗಳ ಹಿಂದೆ 100ರಿಂದ 120 ಅಕ್ಕಿ ಗಿರಣಿಗಳು ಇದ್ದವು. ಆದರೆ ಹಲವು ಮುಗ್ಗಟ್ಟುಗಳಿಗೆ ಸಿಲುಕಿ ಕೆಲವು ಮುಚ್ಚಿವೆ. ಗುಬ್ಬಿ ಗೇಟ್, ಅಂತರಸನಹಳ್ಳಿ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಸದ್ಯ 70 ಗಿರಣಿಗಳು ಕಾರ್ಯ ನಿರ್ವಹಿಸುತ್ತಿವೆ.

ಮಧುಗಿರಿ, ಶಿರಾ, ತುಮಕೂರು ಗ್ರಾಮಾಂತರ, ಗುಬ್ಬಿ, ದಾಬಸ್‌ಪೇಟೆ ಭಾಗದಿಂದ ಹೆಚ್ಚಿನ ಕಾರ್ಮಿಕರು ಇಲ್ಲಿಗೆ ದುಡಿಯಲು ಬರುತ್ತಿದ್ದರು. ಹಲವು ಗಿರಣಿಗಳಲ್ಲಿ ಪಶ್ಚಿಮ ಬಂಗಾಳ, ಬಿಹಾರ ಸೇರಿದಂತೆ ಹೊರ ರಾಜ್ಯದ ಕಾರ್ಮಿಕರು ಸಹ ಇದ್ದಾರೆ. ಕೊರೊನಾ ಪರಿಣಾಮ ಯಾವುದೇ ವಾಹನಗಳ ಸಂಚಾರವಿಲ್ಲ. ಈ ಕಾರಣದಿಂದ ಅಕ್ಕಿಗಿರಣಿ ನಡೆಸಲು ಅವಕಾಶ ನೀಡಿದ್ದರೂ ಕಾರ್ಮಿಕರ ಕೊರತೆ ಪ್ರಮುಖ ಸವಾಲಾಗಿದೆ.

ಸದ್ಯ ಹೊರ ರಾಜ್ಯಗಳ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಿಲ್ಲ. ಈ ಕಾರ್ಮಿಕರಿಗೆ ಮಾಲೀಕರು ಆಶ್ರಯ ನೀಡಿ ಅವರನ್ನು ದುಡಿಮೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಮಾಲರು, ಆಪರೇಟರ್‌ಗಳು ಹೀಗೆ ವಿವಿಧ ವಲಯಗಳಲ್ಲಿ ಕೆಲಸ ಮಾಡಲು ಒಂದು ಗಿರಣಿಗೆ ಕನಿಷ್ಠ 50ಕ್ಕೂ ಹೆಚ್ಚು ಕಾರ್ಮಿಕರ ಅಗತ್ಯವಿದೆ. ಗಿರಣಿ ದೊಡ್ಡದಿದ್ದರೆ ಸಂಖ್ಯೆಯೂ ಹೆಚ್ಚುತ್ತದೆ. ಈಗ ಗಿರಣಿಗಳಿಗೆ ಅಗತ್ಯ ಪ್ರಮಾಣದ ಕಾರ್ಮಿಕರು ದೊರೆಯುತ್ತಿಲ್ಲ. ಕಾರ್ಮಿಕರ ಕೊರತೆಯಿಂದಾಗಿ ಬಹಳಷ್ಟು ಗಿರಣಿಗಳು ಕಾರ್ಯಾರಂಭ ಮಾಡಿಲ್ಲ.

ಭತ್ತ ಕೊರತೆ ಇಲ್ಲ: ಬಳ್ಳಾರಿ, ಗಂಗಾವತಿ– ಹೀಗೆ ಭತ್ತದ ಖಣಜ ಎನ್ನುವ ಪ್ರದೇಶಗಳಲ್ಲಿ ಭತ್ತ ಕಟಾವಿಗೆ ಬಂದಿದೆ. ಅಲ್ಲಿಂದ ಭತ್ತ ಗಿರಣಿಗಳಿಗೆ ಸರಬರಾಜು ಆಗುತ್ತಿದೆ. ರೈಸ್‌ಮಿಲ್‌ಗಳಲ್ಲೂ ಸಾಕಷ್ಟು ಪ್ರಮಾಣದಲ್ಲಿ ಭತ್ತದ ದಾಸ್ತಾನು ಇದೆ. ಇಂತಹಸಮಯದಲ್ಲಿ ಕಾರ್ಮಿಕರು ಮತ್ತು ಯಂತ್ರಗಳ ಕೊರತೆ ಬಾಧಿಸುತ್ತಿದೆ.

ಮಧ್ಯವರ್ತಿಗಳ ನಿಯಂತ್ರಣ ಅಗತ್ಯ

‘ಅಕ್ಕಿ ಗಿರಣಿ ವಲಯದಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಿದೆ. ಈ ಹಿಂದೆ ಮಿಲ್‌ಗಳು ಹೆಚ್ಚಿದ್ದವು. ಆದರೆ ನಡೆಸಲು ಸಾಧ್ಯವಾಗದೆ ಹಂತ ಹಂತವಾಗಿ ಮಾಲೀಕರು ಮುಚ್ಚುತ್ತಿದ್ದಾರೆ. ಮೊದಲು ಮಧ್ಯವರ್ತಿಗಳ ನಿಯಂತ್ರಣವಾಗಬೇಕು. ಇದರಿಂದ ರೈತರಿಗೂ ಸೂಕ್ತ ಬೆಲೆ ದೊರೆಯುತ್ತದೆ’ ಎನ್ನುತ್ತಾರೆ ಜಿಲ್ಲಾ ಅಕ್ಕಿ ಗಿರಣಿ ಕಾರ್ಮಿಕ ಸಂಘದ ಅಧ್ಯಕ್ಷ ಕುಪ್ಪೂರು ಶ್ರೀಧರ್ ನಾಯ್ಕ್.

ಅಸಂಘಟಿತ ವಲಯದ ಈ ಕಾರ್ಮಿಕರು ದಿನದ 24 ಗಂಟೆಯೂ ದುಡಿಯುತ್ತಾರೆ. ಕಾರ್ಮಿಕರ ಆರೋಗ್ಯ ಪರೀಕ್ಷೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸುವರು.

ಆರಂಭವಾಗದ ಚಟುವಟಿಕೆ

ಗ್ರಾಮೀಣ ಭಾಗದಿಂದ ನಮ್ಮ ಗಿರಣಿಗೆ 10ಕ್ಕೂ ಹೆಚ್ಚು ಕಾರ್ಮಿಕರು ಬರುತ್ತಿದ್ದರು. ಆದರೆ ಲಾಕ್‌ಡೌನ್ ಪರಿಣಾಮದಿಂದ ಯಾರೂ ಬರಲು ಸಾಧ್ಯವಾಗುತ್ತಿಲ್ಲ. ಗಿರಣಿ ಬಾಗಿಲು ತೆಗೆದಿದ್ದೇವೆ. ಆದರೆ ಕಾರ್ಮಿಕರು ಇಲ್ಲದ ಕಾರಣಕ್ಕೆ ಚಟುವಟಿಕೆ ಆರಂಭವಾಗಿಲ್ಲ ಎಂದು ಶ್ರೀರಾಮ ಅಕ್ಕಿ ಗಿರಣಿಯ ರಾಘವೇಂದ್ರ ತಿಳಿಸಿದರು.

ಕಚ್ಚಾ ವಸ್ತು ಪೂರೈಕೆ ಇಲ್ಲ

‘ನಮ್ಮಲ್ಲಿ 20 ಮಂದಿ ಬಿಹಾರದ ಕಾರ್ಮಿಕರು ಇದ್ದಾರೆ. ಗ್ರಾಮೀಣ ಭಾಗದ ಕಾರ್ಮಿಕರು ಬರುತ್ತಲೇ ಇಲ್ಲ. ಬನ್ನಿ ಸೌಲಭ್ಯ ಕೊಡುತ್ತೇವೆ ಅಂದರೂ ಹೆದರುತ್ತಿದ್ದಾರೆ’ ಎಂದು ಹೇಳಿದರು ರತ್ನಾಂಬ ಟ್ರೇಡರ್ಸ್ ಮಾಲೀಕರಾದ ರಾಜಶೇಖರ್.

ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಕಚ್ಚಾ ವಸ್ತುಗಳು ಸಹ ಪೂರೈಕೆ ಆಗುತ್ತಿಲ್ಲ. ಈಗ ಇರುವ ಭತ್ತದಲ್ಲಿ ಮೂರ್ನಾಲ್ಕು ದಿನ ಗಿರಣಿ ನಡೆಸಬಹುದು. ಗಿರಣಿ ಮಾಲೀಕರ ಮೇಲೆ ಲಾಕ್‌ಡೌನ್ ಪರಿಣಾಮಗಳು ಹೆಚ್ಚಿನದಾಗಿಯೇ ಬೀರಿವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT