ಶುಕ್ರವಾರ, ಏಪ್ರಿಲ್ 3, 2020
19 °C
ಕೋವಿಡ್–19 ಭೀತಿ; ಜಿಲ್ಲೆಯಾದ್ಯಂತ ಮುಂಜಾಗ್ರತಾ ಕ್ರಮಕ್ಕೆ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ; ಆದೇಶ ಉಲ್ಲಂಘಿಸಿದರೆ ಕ್ರಮ

ಚಿತ್ರಮಂದಿರಗಳು, ಜಿಮ್‌ಗಳು ಬಂದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ‘ಕೋವಿಡ್–19’ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಒಂದು ವಾರಗಳ ಕಾಲ ಚಿತ್ರಮಂದಿರಗಳು, ಜಿಮ್‌ಗಳು ಸೇರಿದಂತೆ ಹಲವು ಚಟುವಟಿಕೆಗಳ ಮೇಲೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ. ಒಂದು ವೇಳೆ ಈ ಆದೇಶ ಉಲ್ಲಂಘಿಸಿದರೆ ಕಾನೂನು ರೀತಿ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಎಚ್ಚರಿಸಿದ್ದಾರೆ.

ಧಾರ್ಮಿಕ ಕಾರ್ಯಕ್ರಮಗಳಿಗೆ ಹಾಗೂ ಜಾತ್ರೆಗಳಿಗೆ ಸಾಧ್ಯವಾದಷ್ಟು ಕಡಿಮೆ ಸಂಖ್ಯೆಯ ಜನರು ಭಾಗವಹಿಸಬೇಕು ಎಂದು ಕೋರಿದ್ದಾರೆ.

ಫೆ.21ರ ನಂತರ ವಿದೇಶದಿಂದ ಬಂದು ಸೋಂಕಿನ ಕಾರಣದಿಂದ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಬಂದವರ ಬಗ್ಗೆ ಖಾಸಗಿ ವೈದ್ಯರು, ಆಸ್ಪತ್ರೆಗಳು ತಕ್ಷಣ ಜಿಲ್ಲಾ ವೈದ್ಯಾಧಿಕಾರಿ ಅವರಿಗೆ ಮೊಬೈಲ್ ಅಥವಾ ಸಹಾಯವಾಣಿ ಮೂಲಕ ಮಾಹಿತಿ ನೀಡಬೇಕು ಎಂದು ಸೂಚಿಸಿದ್ದಾರೆ.

ಸಿದ್ಧಗಂಗಾ ಆಸ್ಪತ್ರೆಯಲ್ಲಿ ವಿಶೇಷ ಕೊಠಡಿ

ನಗರದ ಸಿದ್ಧಗಂಗಾ ಆಸ್ಪತ್ರೆಯಲ್ಲಿಯೂ ಕೋವಿಡ್ ಸೋಂಕಿತರ ಚಿಕಿತ್ಸೆಗೆ ವಿಶೇಷ ಕೊಠಡಿ ತೆರೆಯಲಾಗಿದೆ. ಇಲ್ಲಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದ್ರಿಕಾ ಶನಿವಾರ ಭೇಟಿ ನೀಡಿದರು.

ಸಿದ್ಧಗಂಗಾ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ.ಎಸ್.ಪರಮೇಶ್ ಮಾತನಾಡಿ, ‘ಆಸ್ಪತ್ರೆಯಲ್ಲಿ ಎಲ್ಲ ಸೌಕರ್ಯವುಳ್ಳ ಪ್ರತ್ಯೇಕ ಕೊಠಡಿ ರೂಪಿಸಲಾಗಿದೆ.  ಆಸ್ಪತ್ರೆಯಲ್ಲಿ 24 ಗಂಟೆ ಕಾರ್ಯನಿರ್ವಹಿಸುವ ಸಹಾಯವಾಣಿ ತೆರೆಯಲಾಗಿದೆ’ ಎಂದರು.

ಆಸ್ಪತ್ರೆ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಸಂಜೀವ್ ಕುಮಾರ್, ವೈರಸ್ ಕುರಿತು ಅರಿವು ಮೂಡಿಸುವುದು ಕೇವಲ ಸರ್ಕಾರದ ಕೆಲಸವಲ್ಲ. ಖಾಸಗಿ ಆಸ್ಪತ್ರೆಗಳೂ ಕೂಡ ಈ ಬಗ್ಗೆ ಜಾಗೃತಿ ಮೂಡಿಸುವುದು ಅವಶ್ಯ. ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗೆ ಈಗಾಗಲೇ ಕೊರೊನಾ ಕುರಿತು ತರಬೇತಿ ನೀಡಲಾಗಿದೆ. ಆಸ್ಪತ್ರೆಯ ಮೂರನೇ ಮಹಡಿಯಲ್ಲಿ 10 ಹಾಸಿಗೆಯುಳ್ಳ ಪ್ರತ್ಯೇಕ ಕೊಠಡಿಯನ್ನು ಚಿಕಿತ್ಸೆಗಾಗಿ ಮೀಸಲಿಡಲಾಗಿದೆ’ ಎಂದರು.

ಅನುಮತಿ ಪಡೆಯದೆ ಸಭೆ ನಡೆಸುವಂತಿಲ್ಲ: ತುಮಕೂರು ನಗರ ವ್ಯಾಪ್ತಿಯಲ್ಲಿ ಕಾಲರ, ಕರುಳುಬೇನೆ ಹಾಗೂ ಕೊರೊನಾ ಹರಡದಂತೆ ಮಹಾನಗರ ಪಾಲಿಕೆಯು ಕ್ರಮಗಳನ್ನು ಕೈಗೊಂಡಿದೆ. ಪಾಲಿಕೆಯಿಂದ ಅನುಮತಿ ಪಡೆಯದೆ ಬೇಸಿಗೆ ಶಿಬಿರಗಳು, ಸಾರ್ವಜನಿಕ ಸಭೆ, ಸಮಾರಂಭಗಳು ಹಾಗೂ ಇತರೆ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ. ಪಿ.ಜಿಗಳು, ಸ್ಪರ್ಧಾತ್ಮಕ ಪರೀಕ್ಷೆಗಳ ತರಗತಿಗಳು, ಹೋಟೆಲ್‌ಗಳ ಪಾರ್ಟಿ ಹಾಲ್‌ನಲ್ಲಿ ಸಮಾರಂಭಗಳನ್ನು ನಡೆಸಬಾರದು ಎಂದು ಪಾಲಿಕೆ ಆಯುಕ್ತ ಟಿ.ಭೂಬಾಲನ್ ಆದೇಶಿಸಿದ್ದಾರೆ.

ಹೋಟೆಲ್‌ಗಳು, ಮದ್ಯದ ಅಂಗಡಿಗಳು, ಸರ್ಕಾರಿ/ಖಾಸಗಿ ಕಚೇರಿಗಳು ಹಾಗೂ ಜನಸಂದಣಿ ಇರುವ ಪ್ರದೇಶಗಳಲ್ಲಿ ಆಲ್ಕೊಹಾಲ್ ಅಂಶ ಹೊಂದಿರುವ ಹ್ಯಾಂಡ್‌ವಾಷ್ ಹಾಗೂ ಹ್ಯಾಂಡ್ ಸ್ಯಾನಿಟೈಸರ್‌ಗಳನ್ನು ಕಡ್ಡಾಯವಾಗಿ ಬಳಸಬೇಕು. ಸರ್ಕಾರಿ ಹಾಗೂ ಸರ್ಕಾರೇತರ ವಿದ್ಯಾರ್ಥಿ ನಿಲಯಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದಿದ್ದಾರೆ.

ಯಾವ ಯಾವ ಚಟುವಟಿಕೆಗಳು ಬಂದ್

ಚಿತ್ರಮಂದಿರಗಳು, ನಾಟಕಗಳು, ರಂಗಮಂದಿರಗಳು, ಪಬ್‌ಗಳು, ನೈಟ್‌ಕ್ಲಬ್‌ಗಳು, ವಸ್ತುಪ್ರದರ್ಶನ, ಸಂಗೀತ ಹಬ್ಬಗಳು, ಮ್ಯಾರಥಾನ್, ಹೆಚ್ಚು ಜನರು ಸೇರುವ ಕ್ರೀಡಾಕೂಟಗಳಾದ ಕ್ರಿಕೆಟ್, ಫುಟ್‌ಬಾಲ್, ಬ್ಯಾಸ್ಕೆಟ್ ಬಾಲ್, ಹಾಕಿ ಹಾಗೂ ಹೆಚ್ಚು ಜನರು ಸೇರುವ ಕಾರ್ಯಕ್ರಮಗಳಿಗೆ ನಿಷೇಧ. ಈಜುಕೊಳಗಳು, ಜಿಮ್‌ಗಳ ಚಟುವಟಿಕೆ ಬಂದ್‌. 

ನಗರದಲ್ಲಿ ಮಾಂಸದ ಖಾದ್ಯ ಬಂದ್: ತುಮಕೂರು ನಗರದಲ್ಲಿ ಬೀದಿ ಬದಿಯಲ್ಲಿ ಕತ್ತರಿಸಿದ ಹಣ್ಣುಗಳ ಮಾರಾಟ, ಮಾಂಸದ ಖಾದ್ಯಗಳು ಮಾರಾಟ ಹಾಗೂ ಸಾರ್ವಜನಿಕವಾಗಿ ಆಹಾರಗಳನ್ನು ತಯಾರಿಸಿ ಮಾರಾಟ ಮಾಡುವುದನ್ನು ಪಾಲಿಕೆ ನಿಷೇಧಿಸಿದೆ.

ನಿರಂತರ ಮಾಹಿತಿಗೆ ಸಹಾಯವಾಣಿ

ಸಿದ್ಧಗಂಗಾ ಆಸ್ಪತ್ರೆಯಲ್ಲಿ ಸಹಾಯವಾಣಿ ತೆರೆಯಲಾಗಿದೆ. ಸಾರ್ವಜನಿಕರು ಕೊರೊನಾ ವೈರಸ್ ಕುರಿತು ಯಾವುದೇ ಗೊಂದಲ, ಮಾಹಿತಿ ಹಾಗೂ ಚಿಕಿತ್ಸೆಗಾಗಿ ಆಸ್ಪತ್ರೆಯ ದೂರವಾಣಿ ಸಂಖ್ಯೆ 0816-6602222,9148997918 ಸಂಪರ್ಕಿಸಬಹುದು.

ಜಿಲ್ಲೆಗೆ ವಿದೇಶಗಳಿಂದ ಬರುವವರ ಬಗ್ಗೆ ಮಾಹಿತಿ ತಿಳಿದರೆ ಸಾರ್ವಜನಿಕರು ಕೂಡಲೇ ಸಹಾಯವಾಣಿ ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ 0816-2278387/ 2251414ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಆರ್.ಚಂದ್ರಿಕಾ ಕೋರಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)