ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಂಸ ಖರೀದಿಯಿಂದಲೂ ದೂರ

ವರ್ಷದೊಡಕಿನ ಸಂಭ್ರಮವಿಲ್ಲ; ಕುರಿ, ಮೇಕೆಗಳ ಮಾಂಸದ ಬೆಲೆ ಹೆಚ್ಚಳ
Last Updated 26 ಮಾರ್ಚ್ 2020, 12:10 IST
ಅಕ್ಷರ ಗಾತ್ರ

ತುಮಕೂರು: ಯುಗಾದಿ ಹಬ್ಬದ ಮರು ದಿನದ ವರ್ಷದೊಡಕಿನ ಸಂಭ್ರಮ ನಗರದಲ್ಲಿ ಕಂಡುಬರಲಿಲ್ಲ. ಕುರಿ, ಮೇಕೆ ಮಾಂಸ ಮಾರಾಟಕ್ಕೆ ಮಹಾನಗರ ಪಾಲಿಕೆಯು ಯಾವುದೇ ನಿರ್ಬಂಧ ವಿಧಿಸಿರಲಿಲ್ಲ. ಆದರೆ ಬಹುತೇಕ ಮಾಂಸ ಮಾರಾಟ ಅಂಗಡಿಗಳ ಮುಂದೆ ಜನದಟ್ಟಣೆ ಇರಲಿಲ್ಲ.

ಕುರಿ ಮತ್ತು ಮೇಕೆ ಮಾಂಸದ ಬೆಲೆ ಸಹ ಹೆಚ್ಚಿತ್ತು. ಸಾಮಾನ್ಯ ದಿನಗಳಲ್ಲಿ ಕೆ.ಜಿ.ಗೆ ₹ 500ರಿಂದ 600 ಇರುತ್ತದೆ. ವರ್ಷದೊಡಕಿನ ದಿನ ₹ 700ರಿಂದ ₹ 800ರ ವರೆಗೂ ವ್ಯಾಪಾರ ನಡೆಯಿತು. ಗಾತ್ರದ ಆಧಾರದಲ್ಲಿ ತಲೆ, ಕಾಲು ಮಾಂಸದ ಬೆಲೆ ನಿರ್ಧಾರವಾಗುತ್ತಿತ್ತು.

ಬಿ.ಜಿ.ಪಾಳ್ಯ ಸರ್ಕಲ್‌ ಬಳಿಯ ಆರೇಳು ಮಾಂಸದ ಅಂಗಡಿಗಳ ಎದುರು ಬೆರೆಳೆಣಿಕೆಯಷ್ಟು ಜನರು ಇದ್ದರು. ಹನುಮಂತನಗರದ ಮಟನ್ ಸ್ಟಾಲ್‌ಗಳ ಬಳಿ ಸಹ ಜನಸಂದಣಿ ಕಂಡುಬರಲಿಲ್ಲ.

ಮಾಂಸದ ವ್ಯಾಪಾರದ ಮೇಲೆ ಕೊರೊನಾ ಕರಿನೆರಳು ಗಂಭೀರವಾಗಿಯೇ ಇದೆ ಎನ್ನುವುದು ವ್ಯಾಪಾರಿಗಳ ಮಾತಿನಲ್ಲಿ ಧ್ವನಿಸಿತ್ತು. ನೆಂಟರು, ಬಂಧು ಬಳಗವನ್ನು ಕರೆದು ಹೆಚ್ಚು ಜನರಿಗೆ ಊಟ ಹಾಕಲು ಅವಕಾಶ ಇಲ್ಲದ ಕಾರಣ ಜನರು ಸಹ ತಮ್ಮ ಮನೆಗಳಿಗೆ ಎಷ್ಟು ಬೇಕೋ ಅಷ್ಟು ಮಾತ್ರ ಖರೀದಿಸಿದರು.

‘ಪ್ರತಿ ವರ್ಷದೊಡಕಿನ ಸಮಯದಲ್ಲಿ 30ರಿಂದ 35 ಕುರಿ, ಮೇಕೆಗಳನ್ನು ಕುಯ್ಯುತ್ತಿದ್ದೆವು. ಈ ಬಾರಿ ಸುಮಾರು 15 ಮರಿಗಳನ್ನು ಕುಯ್ಯಬಹುದು ಎನ್ನುವ ಅಂದಾಜಿದೆ. ಬೆಳಿಗ್ಗೆಯಿಂದಲೇ ಜನರು ಹೆಚ್ಚಬೇಕಿತ್ತು. ಆದರೆ ಕಡಿಮೆ ಸಂಖ್ಯೆಯಲ್ಲಿ ಖರೀದಿಗೆ ಬರುತ್ತಿದ್ದಾರೆ’ ಎಂದರು ಹನುಮಂತ ನಗರದಲ್ಲಿ ಮಾಂಸದ ಅಂಗಡಿ ನಡೆಸುತ್ತಿರುವ ಅಯಾಸ್. ಮತ್ತೊಂದು ಮಾಂಸದ ಅಂಗಡಿ ಮಾಲೀಕ ಕೃಷ್ಣಪ್ಪ ಅವರ ಮಾತು ಸಹ ಇದೇ ಆಗಿತ್ತು.

ತಮ್ಮ ಅಂಗಡಿಗೆ ಬರುತ್ತಿದ್ದ ಬೆರೆಳೆಣಿಕೆಯ ಗ್ರಾಹಕರಿಗೆ ‘ಅಂತರ ಕಾಯ್ದುಕೊಳ್ಳಿ’ ಎಂದು ಅಯಾಸ್ ಪದೇ ಪದೇ ಮನವಿ ಮಾಡುತ್ತಿದ್ದರು. ಅಂತರ ಕಾಯ್ದುಕೊಳ್ಳುವ ಸಲುವಾಗಿ ಸುಣ್ಣದ ವೃತ್ತದಲ್ಲಿ ನಿಲ್ಲಿ ಎಂದು ಬರೆದಿದ್ದರು.

‘ಮನೆಯಲ್ಲಿ ನಮ್ಮ ಕುಟುಂಬದವರಷ್ಟೇ ಈ ಬಾರಿ ಹಬ್ಬ ಮಾಡುತ್ತಿದ್ದೇವೆ. ಬಂಧು ಬಳಗದವರನ್ನೂ ಕರೆಯುತ್ತಿಲ್ಲ. ಮಾಂಸ ಎಲ್ಲಿಯೂ ಸುಲಭವಾಗಿ ಸಿಗುತ್ತಿಲ್ಲ. ಮರಿ ಖರೀದಿಸಿ ಮನೆಯಲ್ಲಿ ಕುಯ್ಯುವುದಕ್ಕೆ ಸಂತೆಗಳೂ ನಡೆಯುತ್ತಿಲ್ಲ. ಮಾಮೂಲಿ ದಿನಗಳಿಗೆ ಹೋಲಿಸಿದರೆ ಬೆಲೆ ಸ್ವಲ್ಪ ಜಾಸ್ತಿ ಆಗಿದೆ. ಆದರೆ ಇಂತಹ ಸಮಯದಲ್ಲಿ ಮಟನ್ ಸಿಗುತ್ತಿರುವುದೇ ದೊಡ್ಡದಲ್ಲವೇ’ ಎಂದು ಹನುಮಂತನಗರದ ಸಿದ್ಧರಾಜು ಹೇಳಿದರು.

ನಗರದಲ್ಲಿ ವಾಸಿಸುತ್ತಿದ್ದ ಬಹಳಷ್ಟು ಹಳ್ಳಿ ಜನರು ಸ್ವಗ್ರಾಮಗಳಿಗೆ ಮರಳಿರುವುದು ಸಹ ವ್ಯಾಪಾರ ಕಡಿಮೆಯಾಗಲು ಕಾರಣ ಎನ್ನಲಾಗುತ್ತಿದೆ. ಆಗಾಗ್ಗೆ ಬರುತ್ತಿದ್ದ ಪೊಲೀಸರು ಮಾಂಸ ಖರೀದಿಗೆ ನೂಕು ನುಗ್ಗಲು ಇಲ್ಲದಿರುವುದನ್ನು ನೋಡಿ ವಾಪಸ್ ತೆರಳುತ್ತಿದ್ದರು.

ಊಟಕ್ಕೂ ಜನರಿಲ್ಲ: ಪರಿಚಿತರು, ಬಂಧು ಬಳಗವನ್ನು ಮಾಂಸದೂಟಕ್ಕೆ ಕರೆಯುವುದು ರೂಢಿ. ಆದರೆ ಈ ಬಾರಿ ಊಟಕ್ಕೆ ಕರೆಯುವವರು ಹಾಗೂ ಊಟಕ್ಕೆ ಹೋಗುವವರ ಸಂಖ್ಯೆಯೂ ಕಡಿಮೆ ಇತ್ತು.

***

ಸಗಟು ಖರೀದಿ ಇಲ್ಲ

‘ಕೆಲವರು ನಮ್ಮ ಬಳಿ ಪ್ರತಿ ವರ್ಷ 300 ಕೆ.ಜಿ, 400 ಕೆ.ಜಿ ಮಾಂಸ ಖರೀದಿಸುತ್ತಿದ್ದರು. ಅವರು ಕಾಯಂ ಗಿರಾಕಿಗಳು. ಆದರೆ ಈ ಬಾರಿ ಇಂತಹ ಗ್ರಾಹಕರು ಪೂರ್ಣ ಖರೀದಿ ಬಂದ್ ಮಾಡಿದ್ದಾರೆ. 70 ಕುರಿಗಳನ್ನು ಕತ್ತರಿಸುತ್ತಿದ್ದೆವು. ಈಗ 20ಕ್ಕೆ ಬಂದಿದ್ದೇವೆ. ವ್ಯಾಪಾರ ಕಡಿಮೆ ಇದೆ. ನೀವೇ ನೋಡ್ತಿದ್ದೀರಲ್ಲ’ ಎಂದು ಬರುತ್ತಿದ್ದ ಗ್ರಾಹಕರತ್ತ ಬೆರಳು ತೋರಿದರು ಬಿ.ಜಿ.ಪಾಳ್ಯ ಸರ್ಕಲ್ ಬಳಿಯ ಎಚ್‌.ಅಲಿ ಮಟನ್ ಸ್ಟಾಲ್ ಮಾಲೀಕ ಶಂಷೇರ್.

ದೊಡ್ಡ ಪ್ರಮಾಣದಲ್ಲಿ ಖರೀದಿಸುವವರು ಒಂದು ಕಡೆಯಾದರೆ, ಕೆ.ಜಿ ಲೆಕ್ಕದಲ್ಲೂ ನಮ್ಮಲ್ಲಿ ಹೆಚ್ಚು ಜನರು ಖರೀದಿಸುತ್ತಿದ್ದರು. ಆದರೆ ಈ ಬಾರಿ ತೀರಾ ಕಡಿಮೆ ಇದೆ ಎಂದು ಬೇಸರದಿಂದ ನುಡಿದರು.

***

ಮೇಕೆ ವ್ಯಾಪಾರ ಬಂದ್

ಮಾಂಸಾಹಾರ ಪ್ರಮುಖವಾಗಿರುವ ಹಬ್ಬಗಳು ಬಂದಾಗ ನಗರದ ಎಪಿಎಂಸಿ ಮಾರುಕಟ್ಟೆ ಆವರಣ, ಮಂಡಿಪೇಟೆಯಿಂದ ಗುಬ್ಬಿ ಕಡೆ ಸಾಗುವ ರಸ್ತೆಯಲ್ಲಿ ಕುರಿ, ಮೇಕೆ ಸಂತೆ ಭರ್ಜರಿಯಾಗಿ ನಡೆಯುತ್ತದೆ. ಜಿಲ್ಲೆಯ ವಿವಿಧ ಭಾಗಗಳಿಂದ ರೈತರು, ಕುರಿಗಾಹಿಗಳು ಕುರಿ, ಮೇಕೆಗಳನ್ನು ತಂದು ಮಾರಾಟ ಮಾಡುತ್ತಾರೆ.

ಹಬ್ಬಕ್ಕೆ ಇನ್ನೂ ಮೂರ್ನಾಲ್ಕು ದಿನಗಳು ಇದೆ ಎನ್ನುವಾಗಲೇ ಈ ಸಂತೆ ಭರಾಟೆಯಿಂದ ನಡೆಯುತ್ತದೆ. ನೆಲಮಂಗಲ, ದಾಬಸ್‌ಪೇಟೆಯಿಂದ ಖರೀದಿಗೆ ಬರುತ್ತಿದ್ದರು. ಆದರೆ ಈ ಬಾರಿ ಕುರಿ, ಮೇಕೆ ವ್ಯಾಪಾರದ ಸದ್ದೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT