ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ನಿಯಂತ್ರಿಸದಿದ್ದರೆ ಕ್ರಮ: ಸಚಿವ ಜೆ.ಸಿ.ಮಾಧುಸ್ವಾಮಿ

ಕೋವಿಡ್ ನಿಯಂತ್ರಣ ಪ್ರಗತಿ ಪರಿಶೀಲನಾ ಸಭೆಯಲ್ಲಿ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ
Last Updated 11 ಮೇ 2021, 4:26 IST
ಅಕ್ಷರ ಗಾತ್ರ

ಗುಬ್ಬಿ: ತಾಲ್ಲೂಕಿನಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣಗಳನ್ನು ತಾಲ್ಲೂಕು ಮಟ್ಟದ ಅಧಿಕಾರಿಗಳು ಜವಾಬ್ದಾರಿ ಹಾಗೂ ಪರಿಶ್ರಮದಿಂದ ನಿಯಂತ್ರಣಕ್ಕೆ ತರಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕೋವಿಡ್– 19 ನಿಯಂತ್ರಣ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ತಾಲ್ಲೂಕು ಆಸ್ಪತ್ರೆಯಲ್ಲಿ 60 ರೋಗಿಗಳಿಗೆ ಆಮ್ಲಜನಕ ಸಹಿತ ಚಿಕಿತ್ಸೆ ನೀಡಲು ಅನುಕೂಲವಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ತಾಲ್ಲೂಕು ಆಸ್ಪತ್ರೆ ವೈದ್ಯರು ರೋಗಿಗಳನ್ನು ಜಿಲ್ಲಾಸ್ಪತ್ರೆಗೆ ಅಥವಾ ಬೇರೆ ತಾಲ್ಲೂಕಿಗೆ ಕಳುಹಿಸಕೂಡದು ಎಂದು ಎಚ್ಚರಿಕೆ ನೀಡಿದರು.

ತಾಲ್ಲೂಕು ಆಸ್ಪತ್ರೆಗೆ ಅಗತ್ಯವಿರುವಷ್ಟು ಆಮ್ಲಜನಕ ಸರಬರಾಜಾಗುತ್ತಿರುವುದರಿಂದ ಇಲ್ಲಿ ಆರೈಕೆ ಮಾಡಲು ಯಾವುದೇ ತೊಂದರೆ ಇಲ್ಲ. ಇದನ್ನು ಸರಿಯಾಗಿ ವೈದ್ಯರು ಮೇಲ್ವಿಚಾರಣೆ ಮಾಡುತ್ತಾ, ಅಗತ್ಯ ಇರುವ ರೋಗಿಗಳಿಗೆ ಆಮ್ಲಜನಕ ನೀಡಿ ಪೋಲಾಗದಂತೆ ನೋಡಿಕೊಳ್ಳಿ ಎಂದು ಹೇಳಿದರು.

ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ಪಂಚಾಯತ್ ರಾಜ್ ಇಲಾಖೆಯವರು ಕೊರೊನಾ ಸೋಂಕಿತರ ಸರಿಯಾದ ಅಂಕಿ ಅಂಶಗಳನ್ನು ಇಟ್ಟುಕೊಂಡು ಮಾಹಿತಿ ಒದಗಿಸಬೇಕು. ಪಿಡಿಒಗಳು ಕಡ್ಡಾಯವಾಗಿ ಕೊರೊನಾ ಸೋಂಕಿತರ ಹಾಗೂ ಅವರ ಸಂಪರ್ಕದಲ್ಲಿರುವವರ ಗಂಟಲುದ್ರವ ಪಡೆದು ಪರೀಕ್ಷೆಗೆ ಕಳುಹಿಸಬೇಕು ಎಂದರು.

ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ, ಅಧಿಕಾರಿಗಳಿಗೆ ಕೊರೊನಾಕ್ಕೆ ಸಂಬಂಧಪಟ್ಟ ಎಲ್ಲ ಮಾಹಿತಿಯನ್ನು ಸರಿಯಾಗಿ ಪಾಲಿಸುವಂತೆ ಸೂಚನೆ ನೀಡಿದ್ದರೂ ಯಾವೊಬ್ಬ ಅಧಿಕಾರಿಯೂ ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಪಿಡಿಒಗಳು ಬೇಜವಾಬ್ದಾರಿಯಿಂದ ಕಾರ್ಯನಿರ್ವಹಿಸುವುದು ಕಂಡುಬಂದರೆ ತಕ್ಷಣ ಅಂತಹವರನ್ನು ಕರ್ತವ್ಯದಿಂದ ವಜಾಗೊಳಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚಿಸಿದರು.

ಜಿಲ್ಲಾಧಿಕಾರಿ, ತಾಲ್ಲೂಕಿಗೆ ಕೊರೊನಾ ಉಸ್ತುವಾರಿ ನೋಡಿಕೊಳ್ಳಲು ಒಬ್ಬ ವಿಶೇಷ ಅಧಿಕಾರಿಯನ್ನು ನೇಮಿಸಿ ಅವರಿಗೆ ಸಂಪೂರ್ಣ ಅಧಿಕಾರವನ್ನು ನೀಡುವುದು ಸೂಕ್ತ ಎಂಬ ಸಲಹೆ ನೀಡಿದರು. ತಕ್ಷಣವೇ ಈ ಕುರಿತು ಕಾರ್ಯಪ್ರವೃತ್ತರಾಗುವಂತೆ ಸೂಚನೆ ನೀಡಲಾಯಿತು.

ಸಂಸದ ಜಿ.ಎಸ್. ಬಸವರಾಜು, ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ, ಡಿವೈಎಸ್ಪಿ ಕುಮಾರಪ್ಪ, ತಹಶೀಲ್ದಾರ್ ಡಾ.ಪ್ರದೀಪ್ ಕುಮಾರ್ ಹಿರೇಮಠ್, ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT