ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆನೆಭರಿತ ರಾಗಿ ಹುಲ್ಲಿಗೆ ಹಾನಿ

ಹುಳಿಯಾರು: ಹುಲ್ಲು ಒಕ್ಕಲಿಗೆ ಅಕಾಲಿಕ ಮಳೆ ತಂದ ಸಂಕಷ್ಟ
Last Updated 8 ಜನವರಿ 2021, 6:40 IST
ಅಕ್ಷರ ಗಾತ್ರ

ಹುಳಿಯಾರು: ಹೋಬಳಿ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಬಿದ್ದ ಅಕಾಲಿಕ ಮಳೆಯಿಂದಾಗಿ ಹುಲ್ಲು ಒಕ್ಕಲಿಗೆ ಸಂಕಷ್ಟ ಎದುರಾಗಿದ್ದು, ಬಹುತೇಕ ರೈತರ ತೆನೆಭರಿತ ರಾಗಿ ಹುಲ್ಲಿಗೆ ಹಾನಿಯಾಗಿದೆ.

ಕಳೆದ ಹಿಂಗಾರು ಹಂಗಾಮಿನಲ್ಲಿ ಉತ್ತಮ ಹದ ಮಳೆಯಾದ ಪರಿಣಾಮ ರಾಗಿ, ನವಣೆ, ಸಾಮೆ ಸೇರಿದಂತೆ ಇತರ ಧಾನ್ಯಗಳು ಹುಲುಸಾಗಿ ಬೆಳೆದಿದ್ದವು. ನವಣೆ, ಸಾಮೆ ಬೆಳೆಗಳನ್ನು ರಸ್ತೆ ಸೇರಿದಂತೆ ಅಲ್ಲಿ ಇಲ್ಲಿ ಒಕ್ಕಲನ್ನು ಮಾಡಿ ಈಗಾಗಲೇ ಬಹುತೇಕ ರೈತರು ಕಾಳು ಬೇರ್ಪಡಿಸಿಕೊಂಡಿದ್ದರು. ಇನ್ನೂ ರಾಗಿ ಉತ್ತಮ ಫಸಲು ಬಂದ ರಸ್ತೆಗಳಲ್ಲಿ ಒಕ್ಕಲು ಅಸಾಧ್ಯವಾದ ಕಾರಣ ನಾಲ್ಕೈದು ಮಂದಿ ರೈತರು ಗುಂಪು ಮಾಡಿಕೊಂಡು ಕಣ ಮಾಡಿ ಅಲ್ಲಿ ಒಕ್ಕಲು ಮಾಡಲು ಮುಂದಾಗಿದ್ದರು. ಇನ್ನೂ ಕೆಲ ರೈತರು ಒಕ್ಕಲು ಮಾಡಲು ಕಣದಲ್ಲಿ ಹರಡಿದ್ದರು.

ಜನವರಿ ತಿಂಗಳಲ್ಲಿ ಹೋಬಳಿಯಾದ್ಯಂತ ಬುಧವಾರ ರಾತ್ರಿ ಬಿದ್ದ ಮಳೆಗೆ ರೈತರ ರಾಗಿ ಹುಲ್ಲು ನೆನೆದು ಸಂಕಷ್ಟ
ಎದುರಾಗಿದೆ. ತಿಂಗಳ ಹಿಂದೆಯೇ ಬೆಳೆ ಬಂದಿದ್ದರಿಂದ ಶೇ 10ರಷ್ಟು ರೈತರು ಮಾತ್ರ ಕಟಾವು ಯಂತ್ರಗಳ ಮೊರೆ ಹೋಗಿ ಒಕ್ಕಲು ಕೆಲಸವಿಲ್ಲದೆ ರಾಗಿ ಮನೆಗೆ ತಂದು ಹಾಕಿಕೊಂಡಿದ್ದಾರೆ. ಆದರೆ ಕಟಾವು ಯಂತ್ರದಿಂದ ಹುಲ್ಲು ಹಾಗೂ ಕಾಳು ಭೂಮಿ ಪಾಲಾಗುವುದನ್ನು ಅರಿತು ಕೊಯ್ಲು ಮಾಡಿದ್ದರು.

ಕೆಲವರು ಹೊಲಗಳಲ್ಲಿ ಬಣವೆ ಹಾಕಿದರೆ ಕೆಲವರು ಕಣ ಮಾಡಿ ಅಲ್ಲಿಯೇ ಬಣವೆ ಮಾಡಿದ್ದಾರೆ. ಬುಧವಾರ ರಾತ್ರಿ ಬಿದ್ದ ಅಕಾಲಿಕ ಮಳೆಯಿಂದ ರೈತರು ಒಕ್ಕಲಿಗೆ ಮಾಡಿದ್ದ ಕಣಗಳು ಹಾಳಾಗಿವೆ. ಮಳೆಯ ಮುನ್ಸೂಚನೆ ಮೊದಲೇ ಅರಿತಿದ್ದರೆ ಬಣವೆಗೆ ಮುಚ್ಚಳಿಕೆ ಮಾಡಿಕೊಳ್ಳುತ್ತಿದ್ದೆವು. ಆದರೆ ಯಾವ ವರ್ಷವೂ ಬಾರದ ಮಳೆ ಈ ಬಾರಿ ಬಂದ ಪರಿಣಾಮ ತೆನೆಭರಿತ ಹುಲ್ಲಿಗೆ ಹಾನಿಯಾಗಿದೆ ಎಂದು ಕೆಲ ರೈತರು ಅಳಲು ತೋಡಿಕೊಂಡರು.

ಹೋಬಳಿ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ಮೋಡ ಮುಸುಕಿದ ವಾತಾವರಣವಿದ್ದು, ರಾತ್ರಿ 7 ಗಂಟೆ ವೇಳೆ ಸೋನೆ ಮಳೆ ಆರಂಭವಾಯಿತು. ನಂತರ ಬಿರುಸಿನ ಮಳೆ ಆರಂಭವಾಗಿ ರಾತ್ರಿ ಪೂರ್ತಿ ಮಳೆ ಸಿಂಚನವಾಯಿತು. ಹೋಬಳಿ ವ್ಯಾಪ್ತಿಯ ಬೋರನಕಣಿವೆ ಸುತ್ತಮುತ್ತ ಉತ್ತಮ ಹದ ಮಳೆಯಾಗಿದ್ದು, ಮಳೆ ಮಾಪನ ಕೇಂದ್ರದಲ್ಲಿ 24.4 ಮಿ.ಮೀ ಮಳೆ ದಾಖಲಾಗಿದೆ. ಹುಳಿಯಾರು ಮಳೆ ಮಾಪನ ಕೇಂದ್ರದಲ್ಲಿ 17.5 ಮಿ.ಮೀ ಮಳೆ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT