ಶುಕ್ರವಾರ, ಸೆಪ್ಟೆಂಬರ್ 17, 2021
30 °C

ಮಕ್ಕಳ ದಾಖಲಾತಿ ಕುಸಿತ; ಹೆಚ್ಚಿದ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಜಿಲ್ಲೆಯಲ್ಲಿ ಒಂದನೇ ತರಗತಿಗೆ ಮಕ್ಕಳ ದಾಖಲಾತಿ ಪ್ರಮಾಣ ಸಾಕಷ್ಟು ಸಂಖ್ಯೆಯಲ್ಲಿ ಕಡಿಮೆಯಾಗಿದೆ. ಇದು ಶಿಕ್ಷಣ ಕ್ಷೇತ್ರದ ಮೇಲೆ ಆಗುತ್ತಿರುವ ಕೋವಿಡ್‌ ಪರಿಣಾಮಗಳು, ಬದಲಾವಣೆ, ಎದುರಿಸುತ್ತಿರುವ ಸಮಸ್ಯೆಗಳು, ಸವಾಲುಗಳ ಬಗ್ಗೆ ಗಂಭೀರ ಚರ್ಚೆಗಳನ್ನು ಹುಟ್ಟು ಹಾಕಿದೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 8 ಸಾವಿರಕ್ಕೂ ಹೆಚ್ಚು ಮಕ್ಕಳು ಒಂದನೇ ತರಗತಿಗೆ ಪ್ರವೇಶ ಪಡೆದಿಲ್ಲ ಎಂದು ಹೇಳಲಾಗುತ್ತಿದೆ. ಮಕ್ಕಳನ್ನು ದಾಖಲು ಮಾಡುವುದರಿಂದ ಪೋಷಕರು ಹಿಂದೆ ಸರಿದಿದ್ದಾರೆಯೇ? ಎಂಬ ಆತಂಕ ಕಾಡುತ್ತಿದೆ. ಹಿಂದಿನ ವರ್ಷದ ದಾಖಲಾತಿ ಅಂಕಿ ಸಂಖ್ಯೆಗಳನ್ನು ಗಮನಿಸಿದರೆ ವರ್ಷದಿಂದ ವರ್ಷಕ್ಕೆ ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚುತ್ತಲೇ ಸಾಗಿದ್ದರೆ, ಈ ಬಾರಿ ಕುಸಿತ ಕಂಡಿದೆ. ಹಾಗಾದರೆ 8ರಿಂದ 10 ಸಾವಿರ ಮಕ್ಕಳು ಏನಾದರು? ಇಷ್ಟು ದೊಡ್ಡ ಸಂಖ್ಯೆಯ ಮಕ್ಕಳು ಅಕ್ಷರ ಕಲಿಕೆಯಿಂದ ವಂಚಿತರಾಗುತ್ತಿದ್ದಾರೆಯೆ? ಬೇರೇನು ಕಾರಣಗಳಿವೆ ಎಂಬ ಬಗ್ಗೆ ಗಂಭೀರ ಚಿಂತನೆಗಳು ನಡೆಯಬೇಕಿದೆ.

ಎರಡೂ ಶೈಕ್ಷಣಿಕ ಜಿಲ್ಲೆಗಳಲ್ಲಿ 2020–21ನೇ ಸಾಲಿನಲ್ಲಿ 34,272 (ತುಮಕೂರು ಜಿಲ್ಲೆ 20,720, ಮಧುಗಿರಿ ಜಿಲ್ಲೆ 13,552) ಮಕ್ಕಳು ಪ್ರವೇಶ ಪಡೆದುಕೊಂಡಿದ್ದರೆ, 2021–22ನೇ ವರ್ಷಕ್ಕೆ 25,921 (ತುಮಕೂರು 16,162, ಮಧುಗಿರಿ 9,759) ಮಕ್ಕಳು ದಾಖಲಾಗಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಸುಮಾರು 8 ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ದಾಖಲಾತಿ ಕಡಿಮೆಯಾದಂತಾಗಿದೆ. ಜನಸಂಖ್ಯೆ ಹೆಚ್ಚಳದಿಂದಾಗಿ ಪ್ರವೇಶಾತಿ ಪ್ರಮಾಣವೂ ಪ್ರತಿ ಶೈಕ್ಷಣಿಕ ವರ್ಷದಲ್ಲೂ ಏರುತ್ತಲೇ ಇರುತಿತ್ತು. ಆದರೆ ಈ ಸಲ ಅದು ಕುಸಿದಿರುವುದು ಕಂಡುಬರುತ್ತಿದೆ.

ಸರ್ಕಾರಿ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ದಾಖಲಾತಿ ಪ್ರಮಾಣ ಕಡಿಮೆಯಾಗುತ್ತಲೇ ಸಾಗಿದ್ದರೆ, ಖಾಸಗಿ ಶಾಲೆಗಳಲ್ಲಿ ಈ ಸಂಖ್ಯೆ ಹೆಚ್ಚಳವಾಗುತಿತ್ತು. ಯಾವುದಾದರೊಂದು ಶಾಲೆಯಲ್ಲಿ ಮಗು ಕಲಿಯುತಿತ್ತು. ಆದರೆ ಈ ಸಲ ಸರ್ಕಾರಿ, ಖಾಸಗಿ ಶಾಲೆಯ ಎರಡೂ ಕಡೆ ಪ್ರವೇಶ ಕಡಿಮೆಯಾಗಿದೆ. 2020–21ನೇ ಸಾಲಿನಲ್ಲಿ ಎರಡೂ ಶೈಕ್ಷಣಿಕ ಜಿಲ್ಲೆಗಳಲ್ಲಿ ಖಾಸಗಿ ಶಾಲೆಗಳಿಗೆ 13,924 ಮಕ್ಕಳು ದಾಖಲಾಗಿದ್ದರೆ, ಈ ವರ್ಷ 6,326 ಮಕ್ಕಳು ಪ್ರವೇಶ ಪಡೆದಿದ್ದಾರೆ. ಈ ಎರಡೂ ವರ್ಷಗಳಲ್ಲಿ ಸರ್ಕಾರಿ ಶಾಲೆಗಳಿಗೆ ಪಡೆದಿರುವ ಪ್ರವೇಶ ಗಮನಿಸಿದರೆ ಏರಿಕೆ ಕಂಡಿಲ್ಲ. ಅಲ್ಲೂ ಪ್ರತಿ ಸಲಕ್ಕಿಂತ ಪ್ರವೇಶ ಪ್ರಮಾಣ ಕಡಿಮೆಯಾಗಿದೆ. ಹಾಗಾದರೆ ಸಾವಿರಾರು ಸಂಖ್ಯೆಯ ಮಕ್ಕಳು ಶಿಕ್ಷಣದಿಂದ ದೂರ ಉಳಿದಿದ್ದಾರೆಯೆ? ಪ್ರವೇಶ ಪಡೆಯದಿರಲು ಬೇರೇನಾದರೂ ಕಾರಣಗಳಿವೆಯೆ? ಇದಕ್ಕೆ ಶಿಕ್ಷಣ ಕ್ಷೇತ್ರ, ತಜ್ಞರು, ಸರ್ಕಾರ ಯಾವ
ರೀತಿ ಸ್ಪಂದಿಸಬೇಕು ಎಂದು ಚಿಂತಿಸಬೇಕಿದೆ.

ಪ್ರಮುಖವಾಗಿ ಎಲ್ಲರೂ ಬೊಟ್ಟು ಮಾಡಿ ತೋರಿಸುವುದು ಕೋವಿಡ್‌ನತ್ತ. ಸಾಂಕ್ರಾಮಿಕ ರೋಗದಿಂದ ಆರ್ಥಿಕ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದೆ. ಉದ್ಯೋಗ ನಷ್ಟ, ದುಡಿಮೆ ಇಲ್ಲದಿರುವುದು, ವ್ಯವಹಾರ ಮುನ್ನಡೆಸುವುದು ಕಷ್ಟಕರವಾಗಿರುವುದು ಸೇರಿದಂತೆ ಎಲ್ಲಾ ರೀತಿಯಲ್ಲೂ ಹೊಡೆತ ಬಿದ್ದಿದೆ. ಖಾಸಗಿ ಶಾಲೆಗಳಿಗೆ ಡೊನೇಷನ್, ದುಬಾರಿ ಶುಲ್ಕ ಕೊಟ್ಟು ಸೇರಿಸುವುದು ಕಷ್ಟಕರವಾದರೆ ಸರ್ಕಾರಿ ಶಾಲೆಗಳಿಗಾದರೂ ಮಕ್ಕಳನ್ನು ಸೇರಿಸುವ ಅವಕಾಶಗಳಿದ್ದವು. ಆದರೆ ಅಲ್ಲೂ ಪ್ರವೇಶ ಹೆಚ್ಚಳವಾಗಿಲ್ಲ. ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ ಈ ವರ್ಷವೂ ಬಹುತೇಕ ಹಿಂದಿನ ವರ್ಷದಷ್ಟೇ ಸಂಖ್ಯೆಯಲ್ಲಿ ದಾಖಲಾಗಿದ್ದರೆ, ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ದಾಖಲಾತಿ ಕುಸಿದಿದೆ.

ಸಾವಿರಾರು ಸಂಖ್ಯೆಯಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾದರೆ ಬಾಲ ಕಾರ್ಮಿಕರಾಗಬಹುದು, ಇಲ್ಲವೆ ಇತರೆ ಸಣ್ಣಪುಟ್ಟ ದುಡಿಮೆಯಲ್ಲಿ ತೊಡಗಿಸಿಕೊಳ್ಳಬಹುದು. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಯಲ್ಲಿ ನಿರತರಾಗಿ ಅನಕ್ಷಸ್ಥರಾಗಿಯೇ ಉಳಿಯಬಹುದು. ದಾರಿ ತಪ್ಪಿದರೆ ಸಮಾಜಘಾತುಕರಾಗಿಯೂ ಬದಲಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಮುಂದೆ ಸಮಾಜಕ್ಕೆ ದೊಡ್ಡ ಹೊರೆ ಹಾಗೂ ಸವಾಲು ಎದುರಾಗಬಹುದು ಎಂಬ ಆತಂಕವನ್ನು ಶಿಕ್ಷಣ ತಜ್ಞರು ವ್ಯಕ್ತಪಡಿಸುತ್ತಾರೆ.

ಕೋವಿಡ್ ಸಂಕಷ್ಟಕ್ಕೆ ಸಿಲುಕಿದ ಕೆಳಮಧ್ಯಮ, ಬಡ ವರ್ಗದ ಜನರು, ಕೂಲಿ ಕಾರ್ಮಿಕರು, ದಿನದ ದುಡಿಮೆ ನಂಬಿದವರು ಜೀವನ ನಡೆಸುವುದೇ ಕಷ್ಟಕರವಾಗಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಿದರೆ ಆ ಹೊರೆಯನ್ನೂ ಹೊರಬೇಕಾಗುತ್ತದೆ. ಅದರ ಬದಲು ನಮ್ಮ ಜತೆಯಲ್ಲೇ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರೆ ಸಹಕಾರಿಯಾಗುತ್ತದೆ. ಮುಂದಿನ ದಿನಗಳಲ್ಲಿ ದುಡಿಮೆಯಲ್ಲಿ ತೊಡಗಿಸಿಕೊಳ್ಳಲು ನೆರವಾಗುತ್ತದೆ ಎಂಬ ಭಾವನೆ ಹಲವು ಪೋಷಕರಲ್ಲಿ ಮೂಡಿದಂತೆ ಕಾಣುತ್ತದೆ ಎಂದು ಶಾಲೆಯೊಂದರ ಮುಖ್ಯ ಶಿಕ್ಷಕರು ಹೇಳುತ್ತಾರೆ.

 

ಹಣವಿಲ್ಲದೆ ಸೇರಿಸುತ್ತಿಲ್ಲ

ನಮ್ಮ ಬಳಿ ಹಣ ಇಲ್ಲ. ಮುಂದಿನ ವರ್ಷ ಸೇರಿಸುತ್ತೇವೆ. ಸ್ವಲ್ಪ ದಿನ ನೋಡಿಕೊಂಡು ಶುಲ್ಕ ಕಟ್ಟೋಣ ಎನ್ನುತ್ತಿದ್ದಾರೆ. ಎಷ್ಟು ಹಣವಿದೆ ಅಷ್ಟನ್ನೇ ಕಟ್ಟಿ. ಉಳಿದದ್ದು ನಂತರ ಪಾವತಿಸಿ ಎಂದು ಹೇಳಿದರೂ ಶಾಲೆಗೆ ದಾಖಲಿಸಲು ಮುಂದೆ ಬರುತ್ತಿಲ್ಲ ಎಂದು ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ (ರೂಪ್ಸಾ) ಅಧ್ಯಕ್ಷ ಆಲನೂರು ಎಸ್‌.ಲೇಪಾಕ್ಷ್ ಹೇಳುತ್ತಾರೆ.

ಕೋವಿಡ್‌ಗೆ ಜನರು ಸಾಕಷ್ಟು ಭಯಪಟ್ಟಿದ್ದಾರೆ. ಮೂರನೇ ಅಲೆಯ
ಆತಂಕ ಕಾಡುತ್ತಿದೆ. ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣದಿಂದ
ಸಂಪೂರ್ಣ ವಂಚಿತರಾಗುತ್ತಿದ್ದಾರೆ. ಮೊಬೈಲ್, ಇಂಟರ್‌ನೆಟ್
ಸೌಲಭ್ಯ ಇಲ್ಲವಾಗಿದ್ದು, ಆನ್‌ಲೈನ್ ಕಲಿಕೆಯೂ ನೆರವಾಗುತ್ತಿಲ್ಲ. ಇದು
ಶಿಕ್ಷಣ ಕ್ಷೇತ್ರದ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು
ತಿಳಿಸಿದರು.

ಮುಂದೆ ಹೆಚ್ಚಳವಾಗಲಿದೆ

 

ಒಂದನೇ ತರಗತಿಯಷ್ಟೇ ಅಲ್ಲ, ಎಲ್ಲಾ ತರಗತಿಗಳಿಗೂ ನೋಂದಣಿಯಾಗಿದ್ದರೂ ಕಂಪ್ಯೂಟರ್‌ನಲ್ಲಿ ಇನ್ನೂ ದಾಖಲಾಗಿಲ್ಲ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಳವಾಗಲಿದೆ ಎಂದು ಡಿಡಿಪಿಐ ಸಿ.ನಂಜಯ್ಯ ಸ್ಪಷ್ಟಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.