ಬುಧವಾರ, ಡಿಸೆಂಬರ್ 8, 2021
18 °C
ಆಮೆಗತಿಯಲ್ಲಿ ಸಾಗಿದ ಕಾಮಗಾರಿ: ಶೇ 15-20ರಷ್ಟು ಹೊಳು ತೆಗೆಯುವ ಕಾರ್ಯ ಮಾತ್ರ ಪೂರ್ಣ: ₹26 ಕೋಟಿ ವೆಚ್ಚಕ್ಕೆ ಟೆಂಡರ್

ಈಚನೂರು ಕೆರೆ ಹೂಳೆತ್ತುವ ಕಾರ್ಯಕ್ಕೆ ವಿಘ್ನ

ಎಚ್.ಬಿ.ಸುಪ್ರತೀಕ್ Updated:

ಅಕ್ಷರ ಗಾತ್ರ : | |

Prajavani

ತಿಪಟೂರು ನಗರ ನಿವಾಸಿಗಳ ಜೀವನಾಡಿಯಾಗಿರುವ ತಾಲ್ಲೂಕಿನ ಈಚನೂರು ಕೆರೆಯ ಹೂಳು ತೆಗೆದು, ಕ್ಲೇ ಮ್ಯಾಟ್ ಹಾಕುವ ಕಾರ್ಯಕ್ಕೆ ಪ್ರಾರಂಭದಲ್ಲಿಯೇ ವಿಘ್ನ ಎದುರಾಗಿವೆ.

ಈಚನೂರು ಕೆರೆಗೆ ಹೇಮಾವತಿ ನೀರನ್ನು ಬಿಡಲಾಗುತ್ತಿದೆ. ಕೆರೆ ಸುಮಾರು 300 ಎಕರೆ ವಿಸ್ತೀರ್ಣ ಹೊಂದಿದ್ದು, ಹೂಳು ತೆಗೆಯುವ ಕಾಮಗಾರಿಗೆ ₹26 ಕೋಟಿ ವೆಚ್ಚಕ್ಕೆ ಟೆಂಡರ್ ಕರೆಯಲಾಗಿತ್ತು. 12 ಅಡಿ ಹೂಳು ತೆಗೆಯಲು ಟೆಂಡರ್‌ನಲ್ಲಿ ಉಲ್ಲೇಖಿಸಲಾಗಿದೆ. ಐದು ತಿಂಗಳಿನಿಂದ ಹೂಳು ತೆಗೆಯುವ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ ಈವರೆಗೆ ಶೇ 15-20ರಷ್ಟು ಕಾಮಗಾರಿ ಮಾತ್ರ ಪೂರ್ಣಗೊಂಡಿದ್ದು, ಹೂಳು ತೆಗೆಯುವ ಕಾರ್ಯ ಆಮೆಗತಿಯಲ್ಲಿ
ಸಾಗಿದೆ.

ಈಚನೂರು ಕೆರೆಯ ಹೂಳು ತೆಗೆಯುವುದರಿಂದ 72 ಎಂಸಿಎಫ್‍ಟಿ ನೀರು ಸಂಗ್ರಹ ಸಾಮರ್ಥ್ಯ ಹೊಂದಲಿದೆ. ಇದರಿಂದಾಗಿ ವರ್ಷವಿಡಿ ನೀರಿನ ಸರಬರಾಜಿಗೂ ಅನುಕೂಲವಾಗಲಿದೆ. ಅಲ್ಲದೇ ಹೇಮಾವತಿ ನಾಲೆ ದುರಸ್ತಿ ಆಗಿರುವುದರಿಂದ 12 ಅಡಿ ಆಳಕ್ಕೆ ಕೆರೆಯ ಹೂಳನ್ನು ತೆಗೆದರೆ ಪಂಪ್ ಸಹಾಯವಿಲ್ಲದೇ ನಾಲೆಯಿಂದಲೇ ನೇರವಾಗಿ ಕೆರೆಗೆ ನೀರು ಹರಿಯುತ್ತದೆ.

ಕೆರೆಗೆ ಮ್ಯಾಟ್ ಹಾಕುವುದರಿಂದ ಅಂತರ್ಜಲಕ್ಕೆ ತೊಂದರೆ ಆಗುತ್ತದೆ ಎಂಬ ಆತಂಕದಿಂದ ಪ್ರಾರಂಭದಲ್ಲಿ ಈ ಕಾಮಗಾರಿಗೆ ಜನರು ವಿರೋಧಿಸಿದ್ದರು. ನಂತರದಲ್ಲಿ ಕ್ಲೇ ಮ್ಯಾಟ್ ಬಗ್ಗೆ ಮಾಹಿತಿ ನೀಡಿದ ನಂತರ ಭೂಮಿಪೂಜೆ ನೆರವೇರಿಸಿ, ಶೀಘ್ರ ಹೇಮಾವತಿ ನಾಲೆಯ ನೀಡು ಬಿಡುವ ಒಳಗಾಗಿ ಕಾಮಗಾರಿ ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿತ್ತು.

ಹೂಳು ತೆಗೆಯಲು ಪ್ರಾರಂಭಿಸಿದಾಗ ಸ್ಥಳೀಯರಿಗೆ ಉಚಿತವಾಗಿ ಮಣ್ಣನ್ನು ನೀಡಲು ಸೂಚಿಸಲಾಗಿತ್ತು. ಆದರೆ ಕಾಮಗಾರಿ ಸ್ಥಳದಿಂದ ಕೇವಲ 5 ಕಿ.ಮೀ. ದೂರಕ್ಕೆ ಮಾತ್ರವೇ ಮಣ್ಣನ್ನು ಉಚಿತವಾಗಿ ನೀಡಲಾಗುವುದು ಉಳಿದಂತೆ ಹಣ ಪಾವತಿಸುವಂತೆ ಗುತ್ತಿಗೆದಾರರು ಹೇಳಿದ್ದರಿಂದ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು.

300 ಎಕರೆ ವಿಸ್ತೀರ್ಣದ ಕೆರೆಯ ಹೂಳು ತೆಗೆಯುವಾಗ ಸಾವಿರಾರು ಲೋಡ್ ಮಣ್ಣು ದೊರೆಯುತ್ತದೆ. ಇದೀಗ ಈ ಹೂಳನ್ನು ಎಲ್ಲಿಗೆ ಸರಬರಾಜು ಮಾಡುವುದು ಎಂಬ ಗೊಂದಲ ಉಂಟಾಗಿದೆ. ಅಲ್ಲದೇ ಕೆರೆಯ ಒಂದು ಭಾಗಕ್ಕೆ ತಡೆಗೋಡೆ ನಿರ್ಮಾಣ ಮಾಡಿಕೊಂಡು ಕಾಮಗಾರಿ ನಡೆಸಲಾಗುತ್ತಿದೆ. ಮಳೆಯಿಂದಾಗಿ ತಾತ್ಕಾಲಿಕವಾಗಿ ಹಾಕಿದ್ದ ತಡೆಗೋಡೆಯೂ ಒಡೆದು ಹೋಗಿ ಕೆರೆಯ ಎಲ್ಲ ಭಾಗಕ್ಕೂ ನೀರು ಆವರಿಸಿದೆ. ನಾಲೆಯಲ್ಲಿ ನೀರು ಹರಿಯುತ್ತಿರುವುದರಿಂದ ಹಾಗೂ ನಗರಕ್ಕೆ ನೀರಿನ ಅಗತ್ಯತೆ ಹೆಚ್ಚಿರುವುದರಿಂದ ಹೇಮಾವತಿ ನೀರನ್ನು ಪೂರ್ಣ ಕೆರೆಗೆ ಬಿಟ್ಟುಕೊಳ್ಳಲು ಮುಂದಾಗಿದ್ದಾರೆ.

ಕಾಮಗಾರಿ ನಡೆದಿರುವ ಕಡೆಗಳಲ್ಲಿಯೂ ನೀರು ನಿಂತು ಹೂಳು ತುಂಬಿಕೊಳ್ಳುತ್ತದೆ. ಅಲ್ಲದೇ ಕಾಮಗಾರಿ ಪೂರ್ಣಗೊಳಿಸದೇ ಗುತ್ತಿಗೆದಾರ ಹಣ ಮಂಜೂರಾತಿಗೆ ಅಧಿಕಾರಿಗಳಿಗೆ ಒತ್ತಡ ಹೇರಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ಮಳೆ ಬಂದು ಅಡ್ಡಗೋಡೆಯೂ ಕುಸಿದಿರುವ ಕಾರಣಕ್ಕೆ ಕೆರೆಯ ಪೂರ್ಣ ಪ್ರಮಾಣಕ್ಕೆ ನೀರು ಹರಿಯುವ ಸಾಧ್ಯತೆ ಹೆಚ್ಚಾಗಿದೆ. ಹೂಳು ತೆಗೆಯಲು ನೀರು ಖಾಲಿಯಾಗಬೇಕು. ಅದಕ್ಕಾಗಿ ಮುಂದಿನ ವರ್ಷದ ಬೇಸಿಗೆವರೆಗೂ ಕಾಯುವುದು ಅನಿವಾರ್ಯವಾಗಿದೆ. ಈ ಮಧ್ಯೆ ಕಾಮಗಾರಿ ಹಣವನ್ನು ಮಂಜೂರು ಮಾಡಿದರೆ ಮುಂದಿನ ಬೇಸಿಗೆಯಲ್ಲಿ ಕಾಮಗಾರಿ ಮಾಡುವ ಸಾಧ್ಯತೆ ಕಡಿಮೆ. ಹಾಗಾಗಿ ಟೆಂಡರ್ ಹಣವನ್ನು ಗುತ್ತಿಗೆದಾರನಿಗೆ ಬಿಡುಗಡೆಗೊಳಿಸಿದಂತೆ ಸ್ಥಳೀಯರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಸ್ಥಳ ಪರಿಶೀಲನೆ ಮಾಡಿರುವ ಇಲಾಖೆ ಅಧಿಕಾರಿಗಳು ಹಣ ಮಂಜೂರಾತಿಗೆ ಒಪ್ಪಿಗೆ ಸೂಚಿಸಿಲ್ಲ.

ಆಮೆಗತಿಯ ಕಾಮಗಾರಿಯಿಂದಾಗಿ ತ್ವರಿತವಾಗಿ ಅಭಿವೃದ್ಧಿ ಕಾಣಬೇಕಿದ್ದ ಈಚನೂರು ಕೆರೆ ಕಾಮಗಾರಿ ಕುಂಠಿತವಾಗಿದೆ. ಇದೀಗ ಮಳೆಯಿಂದ, ನಾಲೆಯ ನೀರು ಹೆಚ್ಚಿನ
ಪ್ರಮಾಣದಲ್ಲಿ ತುಂಬಿದ್ದು, ಕಾಮಗಾರಿ ಸ್ಥಗಿತಗೊಂಡಿದೆ.

ಕ್ಲೇ ಮ್ಯಾಟ್: ಕ್ಲೇ ಮ್ಯಾಟ್ ಎಂದರೆ ಮಣ್ಣಿನ ಪದರ ಹಾಳಾಗಿ ಮರಳು ಮಿಶ್ರಿತವಾದ ಸ್ಥಳ ದೊರೆತಾಗ ನೀರು ಅನಗತ್ಯವಾಗಿ ಪೋಲಾಗುವುದನ್ನು ತಡೆಯುವ ಸಲುವಾಗಿ ಆ ಸ್ಥಳಕ್ಕೆ ಮಾತ್ರ ಜೇಡಿ ಮಣ್ಣನ್ನು ಹಾಕಲಾಗುತ್ತದೆ. ಇದರಿಂದ ಯಾವುದೇ ರೀತಿಯಲ್ಲಿ ಅಂತರ್ಜಲಕ್ಕೆ ತೊಂದರೆ ಆಗುವುದಿಲ್ಲ ಎಂದು ಎಂಜಿನಿಯರ್‌ ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು