ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಗಟ್ಟೆ 3 ಕಿ.ಮೀ ದೂರ!: ಮತದಾನ ಬಹಿಷ್ಕಾರದ ಎಚ್ಚರಿಕೆ

ಮತಗಟ್ಟೆ ಬದಲಾವಣೆಗೆ ಒತ್ತಾಯ
Published 1 ಏಪ್ರಿಲ್ 2024, 6:31 IST
Last Updated 1 ಏಪ್ರಿಲ್ 2024, 6:31 IST
ಅಕ್ಷರ ಗಾತ್ರ

ತುಮಕೂರು: ಮಹಾನಗರ ಪಾಲಿಕೆಯ 1ನೇ ವಾರ್ಡ್‌ ವ್ಯಾಪ್ತಿಯ ಶರಾಪ್‌ ನಾಗಣ್ಣನ ಪಾಳ್ಯ (ಎಸ್‌.ಎನ್‌.ಪಾಳ್ಯ) ಮತದಾರರು 3 ಕಿಲೋ ಮೀಟರ್‌ ದೂರ ನಡೆದು ಮತದಾನ ಮಾಡುತ್ತಿದ್ದಾರೆ.

ಎಸ್‌.ಎನ್‌.ಪಾಳ್ಯದ ನಿವಾಸಿಗಳು ಪಂಚನಾಥರಾಯರ ಪಾಳ್ಯದ ಮತಗಟ್ಟೆಗೆ ಬಂದು ಮತದಾನ ಮಾಡಬೇಕಿದೆ. ಇಲ್ಲಿಗೆ ಬರಲು ಯಾವುದೇ ಬಸ್‌ ವ್ಯವಸ್ಥೆ ಇಲ್ಲ. ಆಟೊಗೆ ದುಬಾರಿ ಹಣಕೊಟ್ಟು ಮತ ಕೇಂದ್ರಕ್ಕೆ ಬರಬೇಕಿದೆ. ಕೆಲವರು ನಡೆದುಕೊಂಡು ಬಂದು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಇನ್ನೂ ಕೆಲವರು ಮತದಾನ ಮಾಡಲು ಮತಗಟ್ಟೆಗೆ ಬರುತ್ತಿಲ್ಲ. ಹಲವು ವರ್ಷಗಳಿಂದ ಈ ಸಮಸ್ಯೆ ಇದ್ದರೂ ಅಧಿಕಾರಿಗಳು ಮಾತ್ರ ಇತ್ತ ಗಮನ ಹರಿಸಿಲ್ಲ.

ಎಸ್‌.ಎನ್‌.ಪಾಳ್ಯದಿಂದ 200 ಮೀಟರ್‌ ದೂರದಲ್ಲಿರುವ ಹೊನ್ನೇನಹಳ್ಳಿಯಲ್ಲಿ ಮತಗಟ್ಟೆ ಇದೆ. ಅಲ್ಲಿಯೇ ಮತದಾನ ಮಾಡಲು ಅನುವು ಮಾಡಿಕೊಟ್ಟರೆ 3 ಕಿಲೋ ಮೀಟರ್‌ ನಡೆಯುವುದು ತಪ್ಪುತ್ತದೆ. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಜನರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ. ಹಾಗಾಗಿ ಇಲ್ಲಿನ ಮತದಾರರು ಈ ಬಾರಿ ಮತದಾನದಿಂದ ದೂರ ಉಳಿಯುವ ನಿರ್ಧಾರ ಕೈಗೊಂಡಿದ್ದಾರೆ.

ಭಜಂತ್ರಿ ಪಾಳ್ಯ, ಎಸ್‌.ಎನ್‌.ಪಾಳ್ಯದಲ್ಲಿ ಒಟ್ಟು 1,050 ಮತಗಳಿವೆ. ಇದರಲ್ಲಿ ಮುಸ್ಲಿಂ ಸಮುದಾಯದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಇದರಿಂದ ಜನಪ್ರತಿನಿಧಿಗಳು ಸಹ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯ ಸಮಯದಲ್ಲೂ ಈ ವಿಷಯವನ್ನು ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ. ಇದರಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಇಲ್ಲಿನ ನಿವಾಸಿಗಳ ದೂರಿದರು.

ಅಧಿಕಾರಿಗಳು ಮತ ಪ್ರಮಾಣ ಹೆಚ್ಚಳಕ್ಕೆ ನಾನಾ ಕಸರತ್ತು ನಡೆಸುತ್ತಿದ್ದಾರೆ. ಇಂತಹ ಕಡೆಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡರೆ ಹೆಚ್ಚಿನ ಜನರು ಮತದಾನದ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ. ಅಧಿಕಾರಿಗಳು ಇದನ್ನು ಬಿಟ್ಟು ಜಾಥಾ, ಅರಿವು ಕಾರ್ಯಕ್ರಮದಲ್ಲಿ ಮಗ್ನರಾಗಿದ್ದಾರೆ. ನಗರ ಬಿಟ್ಟು, ಸ್ವಲ್ಪ ಆಚೆ ಬಂದು ಜನರ ಸಂಕಷ್ಟ ಅರಿಯುವ ಕೆಲಸ ತುರ್ತಾಗಿ ಮಾಡಬೇಕಿದೆ. ಅಗತ್ಯ ಇರುವ ಕಡೆಗಳಲ್ಲಿ ಮತಗಟ್ಟೆ ಆರಂಭಿಸಿ ಜನರಿಗೆ ತಮ್ಮ ಹಕ್ಕು ಚಲಾವಣೆಗೆ ಅವಕಾಶ ಕಲ್ಪಿಸಬೇಕಾಗಿದೆ.

‘ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಜನರಿಗೆ ಹತ್ತಿರದಲ್ಲಿಯೇ ಮತದಾನ ಮಾಡಲು ಅವಕಾಶ ಕಲ್ಪಿಸಬೇಕು. ಇಲ್ಲದಿದ್ದರೆ ವಾಹನಗಳ ವ್ಯವಸ್ಥೆಯಾದರೂ ಮಾಡಬೇಕು’ ಎಂದು ಎಸ್‌.ಎನ್‌.ಪಾಳ್ಯದ ಮೋಹನ್‌ ಒತ್ತಾಯಿಸಿದರು.

ಮತದಾನ ಮಾಡದಿರಲು ನಿರ್ಧಾರ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡದಿರಲು ಎಲ್ಲರು ನಿರ್ಧಾರ ಕೈಗೊಂಡಿದ್ದೇವೆ. ಎಸ್‌.ಎನ್‌.ಪಾಳ್ಯ ಅಥವಾ ಹೊನ್ನೇನಹಳ್ಳಿಯಲ್ಲಿ ಮತದಾನ ಮಾಡಲು ಅವಕಾಶ ನೀಡಬೇಕು. ಇಲ್ಲದಿದ್ದರೆ ಮತದಾನ ಮಾಡುವುದಿಲ್ಲ. ಅಮ್ಜದ್‌ಖಾನ್‌ ಎಸ್‌.ಎನ್‌.ಪಾಳ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT