ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | 'ಸಚಿವರು, ಶಾಸಕರ ರಾಜೀನಾಮೆಗೆ ಆಗ್ರಹ'

‘ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್’ಗೆ ಮಣ್ಣು ಮುಚ್ಚಿ ಪ್ರತಿಭಟನಕಾರರ ಆಕ್ರೋಶ
Published 16 ಮೇ 2024, 15:32 IST
Last Updated 16 ಮೇ 2024, 15:32 IST
ಅಕ್ಷರ ಗಾತ್ರ

ತುಮಕೂರು: ಮಾಗಡಿ ತಾಲ್ಲೂಕಿಗೆ ನೀರು ಹರಿಸುವ ‘ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್’ ನಿರ್ಮಾಣ ಮಾಡಲು ಅವಕಾಶ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ, ಸಚಿವ ಕೆ.ಎನ್.ರಾಜಣ್ಣ, ಜಿಲ್ಲೆಯ ಕಾಂಗ್ರೆಸ್ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಗುಬ್ಬಿ ತಾಲ್ಲೂಕಿನ ಡಿ.ರಾಂಪುರ ಸಮೀಪದ ಸುಂಕಾಪುರ ಗ್ರಾಮದ ಬಳಿ ಗುರುವಾರ ನಿರ್ಮಾಣ ಹಂತದ ನಾಲೆ ಬಳಿ ‘ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್’ ವಿರೋಧಿಸಿ ಸಭೆ ಹಮ್ಮಿಕೊಳ್ಳಲಾಗಿತ್ತು. ಬಿಜೆಪಿ, ಜೆಡಿಎಸ್ ಶಾಸಕರು, ಮಾಜಿ ಶಾಸಕರು, ಜನಪ್ರತಿನಿಧಿಗಳು, ವಿವಿಧ ಮಠಗಳ ಸ್ವಾಮೀಜಿಗಳು, ರೈತರು ಒಟ್ಟಾಗಿ ಕೊಳವೆ ಮಾರ್ಗದ ಮೂಲಕ ಮಾಗಡಿಗೆ ನೀರು ತೆಗೆದುಕೊಂಡು ಹೋಗುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ನಾಲೆಗೆ ಮಣ್ಣು ಮುಚ್ಚಿ ಆಕ್ರೋಶ ಹೊರ ಹಾಕಿದರು.

ಸಭೆಯಲ್ಲಿ ಮಾತನಾಡಿದ ಶಾಸಕ ಬಿ.ಸುರೇಶ್‌ಗೌಡ, ‘ಜಿಲ್ಲೆಯ ಹಿತಾಸಕ್ತಿ, ರೈತರ ಬಗ್ಗೆ ಸ್ವಲ್ಪವಾದರೂ ಕಾಳಜಿ ಇದ್ದರೆ ಜಿಲ್ಲೆಯ ಸಚಿವರು, ಕಾಂಗ್ರೆಸ್ ಶಾಸಕರು ಸಾಮೂಹಿಕವಾಗಿ ರಾಜೀನಾಮೆ ನೀಡಿ, ಹೋರಾಟಕ್ಕೆ ಬರಬೇಕು. ಯೋಜನೆಗೆ ವಿರೋಧ ವ್ಯಕ್ತಪಡಿಸಿ ಸಚಿವ ಪರಮೇಶ್ವರ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಆದರೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಹೆದರಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ತಕ್ಷಣ ಕೆಲಸ ನಿಲ್ಲಿಸದಿದ್ದರೆ ಸಚಿವರ ಮನೆ ಎದುರು ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಯೋಜನೆಗೆ ಒಪ್ಪಿಗೆ ನೀಡಲಾಯಿತು. ನಂತರ ಬಿ.ಎಸ್.ಯಡಿಯೂರಪ್ಪ ಸರ್ಕಾರ ಬಂದ ನಂತರ ಸ್ಥಗಿತಗೊಳಿಸಲಾಯಿತು. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ನಾಲೆ ನಿರ್ಮಾಣ ಮಾಡಲಾಗುತ್ತಿದೆ. ಕುಣಿಗಲ್ ಶಾಸಕ ಎಚ್.ಡಿ.ರಂಗನಾಥ್ ರಕ್ಷಣೆ ಮಾಡಲು, ಡಿ.ಕೆ.ಸುರೇಶ್ ಅವರಿಗೆ ಮತ್ತೆ ಅಧಿಕಾರ ಕೊಡಿಸುವ ರಾಜಕೀಯ ಕಾರಣಕ್ಕಾಗಿ ಯೋಜನೆ ಜಾರಿ ಮಾಡಲಾಗಿದೆ. ಜಿಲ್ಲೆಯ ಜನರಿಗೆ ವಿಷ ಕೊಟ್ಟು, ನೀರು ತೆಗೆದುಕೊಂಡು ಹೋಗಲು ಅವಕಾಶ ನೀಡುವುದಿಲ್ಲ. ರಕ್ತಪಾತವಾದರೂ ನೀರು ಬಿಡುವುದಿಲ್ಲ ಎಂದು ಗುಡುಗಿದರು.

ಶಾಸಕ ಎಂ.ಟಿ.ಕೃಷ್ಣಪ್ಪ, ‘ಮಾಗಡಿಗೆ ನೀರು ತೆಗೆದುಕೊಂಡು ಹೋಗಲು ಬಿಡುವುದಿಲ್ಲ. ಈ ಹೋರಾಟದಲ್ಲಿ ಜೈಲಿಗೆ ಹೋಗಲು ಸಿದ್ಧ’ ಎಂದು ಘೋಷಿಸಿದರು. ಹೋರಾಟದಲ್ಲಿ ಭಾಗವಹಿಸದ ಕಾಂಗ್ರೆಸ್ ಶಾಸಕರನ್ನು ತರಾಟೆಗೆ ತೆಗೆದುಕೊಂಡರು. ‘ಕಳ್ಳಂಬೆಳ್ಳದ ಕಳ್ಳ (ಟಿ.ಬಿ.ಜಯಚಂದ್ರ), ಕಾಸಣ್ಣ, ಗುಳ್ಳೇನರಿಗೂ (ಶಾಸಕ ಎಸ್.ಆರ್‌.ಶ್ರೀನಿವಾಸ್) ಆಹ್ವಾನ ನೀಡಲಾಗಿತ್ತು. ಆದರೆ ಇತ್ತ ಕಡೆಗೆ ಬಂದಿಲ್ಲ’ ಎಂದು ಕುಟುಕಿದರು.

ಜಿಲ್ಲೆಯಿಂದ ಹೇಮಾವತಿ ನೀರು ಕಿತ್ತುಕೊಳ್ಳುವ ಬದಲು ಕಾಂಗ್ರೆಸ್ ನಾಯಕರಿಗೆ ತಾಕತ್ತಿದ್ದರೆ ಮೇಕೆದಾಟು ಯೋಜನೆ ಆರಂಭಿಸಲಿ. ಮೇಕೆದಾಟು ಯೋಜನೆ ಮುಂದಿಟ್ಟುಕೊಂಡು ನಪುಂಸಕರ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ‘ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್’ ನಿರ್ಮಾಣವಾದರೆ ಜಿಲ್ಲೆಗೆ ಮರಣ ಶಾಸನ ಬರೆದಂತೆ. ರೈತರಿಗೆ ಪಂಗನಾಮ ಹಾಕಿ ನೀರು ತೆಗೆದುಕೊಂಡು ಹೋಗಲಾಗುತ್ತಿದೆ. ಯೋಜನೆ ನಿಲ್ಲಿಸಲು ಕೆಡಿಪಿ ಸಭೆಯಲ್ಲಿ ಕೈಗೊಂಡ ನಿರ್ಣಯಕ್ಕೆ ಬೆಲೆ ಇಲ್ಲವಾಗಿದೆ. ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಬೇಕು’ ಎಂದು ಹೇಳಿದರು.

ಮಾಜಿ ಶಾಸಕ ಮಸಾಲೆ ಜಯರಾಂ, ‘ಹಲವು ಭಾಗ್ಯ ಕೊಟ್ಟಂತೆ ಉಚಿತವಾಗಿ ವಿಷದ ಬಾಟಲಿಯನ್ನೂ ಕರುಣಿಸಲಿ’ ಎಂದು ತರಾಟೆಗೆ ತೆಗೆದುಕೊಂಡರು.

ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಬೆಟ್ಟದಹಳ್ಳಿಯ ಚಂದ್ರಶೇಖರ ಸ್ವಾಮೀಜಿ, ಗೋಡೆಕೆರೆ ಮಠದ ಮೃತ್ಯುಂಜಯ ದೇಶಿಕೇಂದ್ರ ಸ್ವಾಮೀಜಿ, ತಮ್ಮಡಿಹಳ್ಳಿ ಮಠದ ಸಿದ್ಧಲಿಂಗ ದೇಶಿಕೇಂದ್ರ ಸ್ವಾಮೀಜಿ, ಸರಪಳಿ ಮಠದ ಜ್ಞಾನಾನಂದಪುರಿ ಸ್ವಾಮೀಜಿ, ನೀಲಕಂಠಾಚಾರ್ಯ ಸ್ವಾಮೀಜಿ, ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ವಿದ್ಯಾಶಂಕರ ದೇಶೀಕೇಂದ್ರ ಸ್ವಾಮೀಜಿ, ಮಾಜಿ ಶಾಸಕರಾದ ಎಚ್.ನಿಂಗಪ್ಪ, ಪಿ.ಆರ್.ಸುಧಾಕರಲಾಲ್, ಎಂ.ಡಿ.ಲಕ್ಷ್ಮೀನಾರಾಯಣ, ವಿವಿಧ ಪಕ್ಷಗಳ ಮುಖಂಡರಾದ ಆರ್.ಸಿ.ಆಂಜನಪ್ಪ, ಕೆ.ಟಿ.ಶಾಂತಕುಮಾರ್, ಎಸ್.ಡಿ.ದಿಲೀಪ್ ಕುಮಾರ್, ಬಿ.ಎಸ್.ನಾಗರಾಜ್, ಲೋಕೇಶ್ವರ್, ಎಚ್.ಬಿ.ಅನಿಲ್ ಕುಮಾರ್, ವೆಂಕಟೇಗೌಡ, ಡಾ.ಪರಮೇಶ್, ಬ್ಯಾಟರಂಗೇಗೌಡ ಮೊದಲಾದವರು ಭಾಗವಹಿಸಿದ್ದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಜನರು ನಾಲೆಗೆ ಮಣ್ಣು ಹಾಕಿದರು
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಜನರು ನಾಲೆಗೆ ಮಣ್ಣು ಹಾಕಿದರು
ತುಮಕೂರು ನಗರದಲ್ಲಿ ಡಿ.ಕೆ.ಶಿವಕುಮಾರ್ ಅಣಕು ಶವಯಾತ್ರೆ ನಡೆಯಿತು
ತುಮಕೂರು ನಗರದಲ್ಲಿ ಡಿ.ಕೆ.ಶಿವಕುಮಾರ್ ಅಣಕು ಶವಯಾತ್ರೆ ನಡೆಯಿತು

ವಿಷ ಕುಡಿಯಬೇಕು: ಶಿವಣ್ಣ

‘ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್’ ನಿರ್ಮಿಸಿ ನೀರು ತೆಗೆದುಕೊಂಡು ಹೋದರೆ ನಮಗೆ ವಿಷ ಬೆರೆಸಿಕೊಂಡು ಕುಡಿಯಲು ನೀರು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಹೋರಾಟದ ನೇತೃತ್ವ ವಹಿಸಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಆತಂಕ ವ್ಯಕ್ತಪಡಿಸಿದರು. ಯೋಜನೆಗೆ ಒಪ್ಪಿಗೆ ಪಡೆದಿಲ್ಲ. ಭೂ ಸ್ವಾಧೀನ ಮಾಡಿಕೊಂಡಿಲ್ಲ. ಕಾಮಗಾರಿಗೆ ಪೂಜೆಯನ್ನೂ ನೆರವೇರಿಸದೆ ಕದ್ದುಮುಚ್ಚಿ ಯೋಜನೆಗೆ ಚಾಲನೆ ನೀಡಲಾಗಿದೆ. ಕುಡಿಯಲು ನೀರು ತೆಗೆದುಕೊಂಡು ಹೋಗಲು ನಮ್ಮ ಅಭ್ಯಂತರವಿಲ್ಲ. ನಾಲೆ ಮೂಲಕವೇ ಹರಿಸಬಹುದಿತ್ತು. ಅದು ಬಿಟ್ಟು ಪೈಪ್‌ಲೈನ್ ಅಳವಡಿಸಿ ನೀರು ಹರಿಸುವ ಅಗತ್ಯವಿಲ್ಲ. ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.

ಅಣಕು ಶವಯಾತ್ರೆ ಹೇಮಾವತಿ ‘ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್’ ಯೋಜನೆಯನ್ನು ವಿರೋಧಿಸಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಣಕು ಶವಯಾತ್ರೆ ಮಾಡಲಾಯಿತು. ನಗರದ ಬಿಜಿಎಸ್ ವೃತ್ತದಲ್ಲಿ ಕನ್ನಡ ಸೇನೆಯ ಮುಖಂಡ ಧನಿಯಕುಮಾರ್ ನೇತೃತ್ವದಲ್ಲಿ ಕಾರ್ಯಕರ್ತರು ಶವಯಾತ್ರೆ ನಡೆಸಿದರು. ನಂತರ ಅಣಕು ಶವವನ್ನು ಪ್ರತಿಭಟನೆ ನಡೆಯುತ್ತಿದ್ದ ಸುಂಕಾಪುರಕ್ಕೆ ತಂದು ಮೆರವಣಿಗೆ ಮಾಡಿ ನಾಲೆಯಲ್ಲಿ ಹಾಕಿ ಮಚ್ಚಲಾಯಿತು. ಡಿ.ಕೆ.ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT