ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುರಳೀಧರ ಹಾಲಪ್ಪಗೆ ಟಿಕೆಟ್ ನೀಡುವಂತೆ ಕಾಂಗ್ರೆಸ್‌ ಮುಖಂಡರ ಒತ್ತಾಯ

Published 18 ಜನವರಿ 2024, 7:01 IST
Last Updated 18 ಜನವರಿ 2024, 7:01 IST
ಅಕ್ಷರ ಗಾತ್ರ

ತುಮಕೂರು: ಕೆಪಿಸಿಸಿ ವಕ್ತಾರರಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಮುರಳೀಧರ ಹಾಲಪ್ಪ ಅವರಿಗೆ ಈ ಬಾರಿ ತುಮಕೂರು ಲೋಕಸಭೆ ಕ್ಷೇತ್ರದಿಂದ ಟಿಕೆಟ್ ನೀಡುವಂತೆ ಕಾಂಗ್ರೆಸ್‌ ಮುಖಂಡರು ಹಾಗೂ ಹಾಲಪ್ಪ ಬೆಂಬಲಿಗರು ಒತ್ತಾಯಿಸಿದರು.

ನಗರದಲ್ಲಿ ಬುಧವಾರ ಸಭೆ ನಡೆಸಿದ ಪ್ರಮುಖರು, ‘ಪಕ್ಷಕ್ಕಾಗಿ ದುಡಿದವರಿಗೆ ಟಿಕೆಟ್ ನೀಡಬೇಕು. ಪಕ್ಷ ಬಿಟ್ಟು ಹೊರಗೆ ಹೋಗಿ, ಮತ್ತೆ ಪಕ್ಷಕ್ಕೆ ಬಂದವರು, ಅವಕಾಶವಾದಿಗಳಿಗೆ ಟಿಕೆಟ್ ನೀಡಬಾರದು. ನಿಷ್ಠಾವಂತರನ್ನು ಕಡೆಗಣಿಸಬಾರದು’ ಎಂದು ಪಕ್ಷದ ಹೈಕಮಾಂಡ್‌ಗೆ ಮನವಿ ಮಾಡಿದರು.

ಹಾಲಪ್ಪ ಅವರು ಕಳೆದ ಐದು ವರ್ಷಗಳಿಂದ ಜಿಲ್ಲೆಯಲ್ಲಿ ನಿರಂತರವಾಗಿ ಪ್ರವಾಸ ಮಾಡಿ, ಪಕ್ಷ ಸಂಘಟಿಸುತ್ತಿದ್ದಾರೆ. ರೈತರೊಂದಿಗೆ ನಾವು, ಕೌಶಲ ತರಬೇತಿ, ಯುವ ಸೌರಭ ಇನ್ನಿತರ ಕಾರ್ಯಕ್ರಮಗಳ ಮೂಲಕ ರೈತರು, ವಿವಿಧ ವರ್ಗಗಳ ಜನರು, ಯುವಕರ ಜತೆ ಸಂವಾದ ನಡೆಸಿ, ಮಾರ್ಗದರ್ಶನ ಮಾಡಿದ್ದಾರೆ. ಇಂತಹವರಿಗೆ ಟಿಕೆಟ್ ನೀಡಬೇಕು ಎಂದು ಕೇಳಿಕೊಂಡರು.

ಮಾಜಿ ಶಾಸಕ ಗಂಗಹನುಮಯ್ಯ, ‘ಹಾಲಪ್ಪ ಪ್ರತಿಷ್ಠಾನದ ಮೂಲಕ ರೈತರು, ಜನರ ನಡುವಿನ ಕೊಂಡಿಯಾಗಿ ಕೆಲಸ ಮಾಡಿದ್ದಾರೆ. ರೈತರೊಂದಿಗೆ ನಾವು ಕಾರ್ಯಕ್ರಮದಲ್ಲಿ ರೈತರು ಇರುವಲ್ಲಿಗೆ ಅಧಿಕಾರಿಗಳನ್ನು ಕರೆಸಿ ನೆರವಾಗಿದ್ದಾರೆ. ಇಂತಹವರು ಜನಪ್ರತಿನಿಧಿಯಾದರೆ ಹೆಚ್ಚಿನ ಅನುಕೂಲವಾಗಲಿದೆ’ ಎಂದರು.

ಮುಖಂಡ ರೇವಣ್ಣ ಸಿದ್ದಯ್ಯ, ‘ಜ. 19ರಂದು ಜಿಲ್ಲೆಗೆ ಜಿಲ್ಲಾ ಉಸ್ತುವಾರಿಯಾದ ಮಯೂರ ಜಯಕುಮಾರ್ ಬರುತ್ತಿದ್ದು, ಮುರಳೀಧರ ಹಾಲಪ್ಪ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಲಾಗುವುದು’ ಎಂದು ಹೇಳಿದರು.

ಮುರುಳೀಧರ ಹಾಲಪ್ಪ, ‘ಲೋಕಸಭಾ ಕ್ಷೇತ್ರದ ಸಮೀಕ್ಷಾ ವರದಿಗಳ ಪ್ರಕಾರ ಯಾರು ಮುಂಚೂಣಿಯಲ್ಲಿದ್ದಾರೆ ಅವರಿಗೆ ಟಿಕೆಟ್ ನೀಡಬೇಕು’ ಎಂದು ಒತ್ತಾಯಿಸಿದರು.

ಮಾಜಿ ಶಾಸಕರಾದ ಎಚ್.ನಿಂಗಪ್ಪ, ಲಕ್ಕಪ್ಪ, ಮುಖಂಡರಾದ ಷಣ್ಮುಖಪ್ಪ, ಬೆಟ್ಟಸ್ವಾಮಿ, ಸಿದ್ದಲಿಂಗೇಗೌಡ, ಶಿವಾಜಿ, ನಾಗಮಣಿ, ವಿಜಯಲಕ್ಷ್ಮಿ, ಭಾಗ್ಯಮ್ಮ, ಲೋಕೇಶ್, ಗಿರೀಶ್, ಶಂಕರಾನಂದ, ಕೃಷ್ಣೇಗೌಡ, ಕಿರಣ್, ರಾಜಪ್ಪ, ಜಯಮ್ಮ, ರಾಧಾ ರಾಘವೇಂದ್ರ, ಲೋಕೇಶ್, ಸ್ವರ್ಣಕುಮಾರ್, ತೇಸಿವೆಂಕಟೇಶ್, ಕಡಬ ಶಿವಕುಮಾರ್, ಗೋವಿಂದೇಗೌಡ, ಸಂಜೀವ್, ದೇವರಾಜು, ಲಕ್ಷ್ಮಮ್ಮ, ಸೌಭಾಗ್ಯ, ಕಮಲಮ್ಮ, ಟಿ.ಕೆ.ಆನಂದ್, ಮಂಜನಾಥ್, ವಸುಂಧರ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT