ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆಯಲ್ಲಿ 4.30ರವರೆಗೆ ವೈದ್ಯರ ಹಾಜರಿ ಕಡ್ಡಾಯ

ಸರ್ಕಾರಿ ಆಸ್ಪತ್ರೆಯಲ್ಲಿ ಹಣ ಕೇಳಿದರೆ ಗಮನಕ್ಕೆ ತನ್ನಿ; ಪ್ರಜಾವಾಣಿ ‘ಫೋನ್‌ ಇನ್‌’ನಲ್ಲಿ ಡಿಎಚ್‌ಒ ಡಾ.ಬಿ.ಆರ್.ಚಂದ್ರಿಕಾ
Last Updated 21 ಡಿಸೆಂಬರ್ 2019, 10:28 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲಾ ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲಿನ ಸಮಸ್ಯೆಗಳನ್ನು ಆಲಿಸಲು ಮತ್ತು ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆಯಲು ‘ಪ್ರಜಾವಾಣಿ’ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ‘ಫೋನ್ ಇನ್‌’ ಕಾರ್ಯಕ್ರಮದಲ್ಲಿ ನಾಗರಿಕರಿಂದ ಅಪಾರವಾದ ದೂರುಗಳ ಕರೆಯೇ ಬಂದಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (ಡಿಎಚ್‌ಒ) ಡಾ.ಬಿ.ಆರ್.ಚಂದ್ರಿಕಾ ಅವರು ಜನರ ದೂರು ಹಾಗೂ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿದರು. ಸಾರ್ವಜನಿಕರ ಪ್ರತಿಯೊಂದು ಸಮಸ್ಯೆಯನ್ನು ತಾವೇ ಖುದ್ದು ನೋಟ್‌ ಪುಸ್ತಕದಲ್ಲಿ ದಾಖಲಿಸಿಕೊಂಡು, ಸಮಸ್ಯೆಗಳಿಗೆ ಶೀಘ್ರವೇ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲ ಸೌಲಭ್ಯ ಕೊರತೆ, ಸಿಬ್ಬಂದಿ, ವೈದ್ಯರ ನಿರ್ಲಕ್ಷ್ಯ, ಅನುಪಸ್ಥಿತಿ, ಸಾಂಕ್ರಾಮಿಕ ರೋಗ, ಲಸಿಕೆ, ಔಷಧ ವಿತರಣೆ, ಗರ್ಭಿಣಿಯರು, ವೃದ್ಧರು, ರೋಗಿಗಳು ಎದುರಿಸುತ್ತಿರುವ ತೊಂದರೆ ಹೀಗೆ ಹತ್ತು ಹಲವು ಸಮಸ್ಯೆಗಳ ಕುರಿತು ನಾಗರಿಕರು ದೂರು ಹೇಳಿದರು. ಡಿಎಚ್‌ಒ ಇಲಾಖೆಯ ಸೌಲಭ್ಯಗಳ ಬಗ್ಗೆಯೂ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟರು. ಇಲಾಖೆಯ ಇತರ ಅಧಿಕಾರಿಗಳು ಡಿಎಚ್‌ಒ ಅವರಿಗೆ ಸಾಥ್ ನೀಡಿದರು.

‘ಫೋನ್ ಇನ್’ ಕಾರ್ಯಕ್ರಮದಲ್ಲಿ ಹಲವು ಮಂದಿ ಸಮಸ್ಯೆ ಮತ್ತು ದೂರುಗಳನ್ನು ಸಲ್ಲಿಸಿದ್ದು, ಅದರಲ್ಲಿ ಆಯ್ದ ಪ್ರಶ್ನೆ ಮತ್ತು ಉತ್ತರಗಳನ್ನು ಇಲ್ಲಿ ಪ್ರಕಟಿಸಲಾಗಿದೆ.

* ನಂಜುಂಡಯ್ಯ, ಕುಣಿಗಲ್.

ಪ್ರಶ್ನೆ: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದೆ. ಇರುವ ವೈದ್ಯರು ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಇದರಿಂದ ರೋಗಿಗಳು ವೈದ್ಯರಿಗಾಗಿ ಗಂಟೆಗಟ್ಟಲೇ ಕಾಯಬೇಕಾದ ಸ್ಥಿತಿ ಇದೆ.

ಉತ್ತರ: ವೈದ್ಯರು ಮತ್ತು ಸಿಬ್ಬಂದಿ ಬೆಳಿಗ್ಗೆ 9 ರಿಂದ ಸಂಜೆ 4.30ರವರೆಗೆ ಕಡ್ಡಾಯವಾಗಿ ಆಸ್ಪತ್ರೆಯಲ್ಲಿ ಇರಬೇಕು. ಈ ಸಮಯದಲ್ಲಿ ಆಸ್ಪತ್ರೆಯಲ್ಲಿ ಇಲ್ಲದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇದೀಗ ಸರ್ಕಾರವೇ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ತರುತ್ತಿದೆ. ವೈದ್ಯರು ಮತ್ತು ಸಿಬ್ಬಂದಿ ಬೆಳಿಗ್ಗೆ ಹಾಜರಾಗುವ ಮತ್ತು ನಿರ್ಗಮಿಸುವ ಸಮಯ ದಾಖಲಾಗಲಿದೆ. ಹಾಗಾಗಿ ಈ ಸಮಸ್ಯೆ ಶೀಘ್ರ ಬಗೆಹರಿಯಲಿದೆ.

* ಭೀಮಣ್ಣ, ತಾವರಕೆರೆ, ಶಿರಾ ತಾಲ್ಲೂಕು.

ತಾವರಕೆರೆಯ ಆರೋಗ್ಯ ಕೇಂದ್ರದಲ್ಲಿ 24/7 ಅಂತ ಬೋರ್ಡ್‌ ಇದೆ. ಆದರೆ ವೈದ್ಯರೂ ಮಾತ್ರ ಇರುವುದಿಲ್ಲ.

–ಈ ಕೇಂದ್ರದಲ್ಲಿ ಕೇವಲ ಒಬ್ಬ ವೈದ್ಯರು ಮಾತ್ರ ಕೆಲಸ ಮಾಡುತ್ತಿದ್ದಾರೆ. ಸಂಜೆ 4.30ರ ನಂತರ ಕೇಂದ್ರ ಕಚೇರಿಯಲ್ಲಿ ಇರುತ್ತಾರೆ. ಇವರನ್ನು ದಿನದ 24 ಗಂಟೆಯೂ ಕೆಲಸ ಮಾಡಿ ಎಂದು ಹೇಳುವುದು ಮಾನವ ಹಕ್ಕು ಉಲ್ಲಂಘನೆ ಆಗುತ್ತದೆ. ಹಾಗಾಗಿ ಸ್ಟಾಪ್ ನರ್ಸ್‌ಗಳು ಪಾಳಿಯಂತೆ 24/7 ಇರಲಿದ್ದಾರೆ. ಅಲ್ಲದೆ, ಗರ್ಭಿಣಿಯರಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕಾಗಿ ಸ್ಟಾಫ್ ನರ್ಸ್‌ಗಳಿಗೆ ತರಬೇತಿ ನೀಡಿದ್ದೇವೆ.

* ವಿನೋದ್, ಕುಣಿಗಲ್.

ಕುಣಿಗಲ್‌ನಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ. ಈವರೆಗೆ ಇಲಾಖೆಯಿಂದ ಎಷ್ಟು ಜನರನ್ನು ಗುರುತಿಸಿ ಕ್ರಮ ವಹಿಸಿದ್ದೀರಿ?.

–ಈಗಾಗಲೇ ಕುಣಿಗಲ್‌ನಲ್ಲಿ 11 ಮಂದಿ ನಕಲಿ ವೈದ್ಯರನ್ನು ಗುರುತಿಸಲಾಗಿದೆ. 5 ಕ್ಲಿನಿಕ್‌ ಮುಚ್ಚಿಸಿದ್ದೇವೆ. ಉಳಿದ ಕ್ಲಿನಿಕ್‌ಗಳನ್ನು ಶೀಘ್ರವೇ ಮುಚ್ಚಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ. ನಕಲಿ ವೈದ್ಯರು ಮತ್ತು ಕ್ಲಿನಿಕ್‌ಗಳನ್ನು ಗುರುತಿಸುವಂತೆ ಎಲ್ಲ ತಾಲ್ಲೂಕು ಅಧಿಕಾರಿಗಳಿಗೂ ಸೂಚನೆ ನೀಡಿದ್ದೇನೆ.

* ಕೃಷ್ಣಶೆಟ್ಟಿ, ಹಾಗಲವಾಡಿ.

ಇಲ್ಲಿನ ಹೊಸಕೆರೆಯಲ್ಲಿರುವ ಆರೋಗ್ಯ ಕೇಂದ್ರದಲ್ಲಿ 24/7 ಕಾರ್ಯ ನಿರ್ವಹಿಸಲು ಕ್ರಮ ವಹಿಸಿರಿ.

–ಈಗಾಗಲೇ ಹೊಸಕೆರೆ ಆರೋಗ್ಯ ಕೇಂದ್ರವನ್ನು 24/7 ಆಸ್ಪತ್ರೆಗೆ ಪ್ರಸ್ತಾವ ಕಳಿಸಿದ್ದೇವೆ. ಯೋಜನಾ ಶಾಖೆಯಲ್ಲಿ ಇದೆ. ಆದಷ್ಟು ಬೇಗ ಇದು ಸಾಧ್ಯವಾಗಲಿದೆ.

* ಶ್ರೀನಿವಾಸ, ಡಿ.ಹೊಸಹಳ್ಳಿ.

ಇಲ್ಲಿನ ಆರೋಗ್ಯ ಉಪಕೇಂದ್ರದಲ್ಲಿ ಸ್ಟಾಪ್‌ ನರ್ಸ್‌ ನಿರ್ಗಮಿಸಿದ ನಂತರ ಕೇಂದ್ರ ಮುಚ್ಚಿದೆ. ಇದೀಗ ಕೇಂದ್ರದ ಆವರಣದಲ್ಲಿ ಗಿಡಗಂಟಿ ಬೆಳೆದು ಜೂಜು, ಮದ್ಯಪಾನ ಮಾಡುವವರಿಗೆ ಉಪಯೋಗ ಆಗುತ್ತಿದೆ.

– ಇಲ್ಲಿ ಸೇವೆ ಸಲ್ಲಿಸುತ್ತಿದ್ದ ಎ.ಎನ್‌.ಎಂ ರಜೆಯಲ್ಲಿ ಇದ್ದಾರೆ. ಅವರು ಶೀಘ್ರವೇ ಬರಲಿದ್ದಾರೆ. ಕೇಂದ್ರದ ಆವರಣ ಶುಚಿಗೊಳಿಸಲಾಗುವುದು. ಇನ್ನೊಂದು ವಾರದಲ್ಲಿ ಇಲ್ಲಿನ ಸಮಸ್ಯೆ ಬಗೆಹರಿಸಲಾಗುವುದು. ತಾಲ್ಲೂಕು ಆರೋಗ್ಯಾಧಿಕಾರಿಗೆ ಇಲ್ಲಿಗೆ ಭೇಟಿ ನೀಡಲು ಸೂಚಿಸಲಾಗುವುದು.

* ಮೋಹನ್‌ ಕುಮಾರ್, ಗೋವಿಂದಪುರ, ಗುಬ್ಬಿ ತಾಲ್ಲೂಕು.

ಗೌರಿಪುರ ಗ್ರಾಮದಲ್ಲಿ ಆರೋಗ್ಯ ಉಪಕೇಂದ್ರ ತೆರೆಯಿರಿ. ಇದರಿಂದ ಸಾಕಷ್ಟು ಜನರಿಗೆ ಅನುಕೂಲ ಆಗಲಿದೆ.

–ಇಲ್ಲಿ ಉಪಕೇಂದ್ರ ತೆರೆಯುವ ಬಗ್ಗೆ ಸಾಕಷ್ಟು ಬೇಡಿಕೆ ಇದೆ. ಈ ಬಗ್ಗೆ ಚರ್ಚಿಸಿ ಕ್ರಮ ವಹಿಸುತ್ತೇನೆ.

*ರುದ್ರಾಚಾರಿ, ಶಾಗದಡು, ಶಿರಾ ತಾಲ್ಲೂಕು.

ಶಿರಾ ತಾಲ್ಲೂಕು ಬುಕ್ಕಾಪಟ್ಟಣ ಹೋಬಳಿ ಶಾಗದಡು ಗ್ರಾಮದಲ್ಲಿ ಆರೋಗ್ಯ ಕೇಂದ್ರ ತೆರೆಯುವ ಕಾರ್ಯ ಈವರೆಗೂ ಆಗಿಲ್ಲ.

–ಶಾಗದಡುವಿನಲ್ಲಿ ಆರೋಗ್ಯ ಕೇಂದ್ರ ತೆರೆಯುವ ಬಗ್ಗೆ ಎನ್‌.ಎಚ್‌.ಎಂ ನಿಂದ ಅನುಮತಿ ಸಿಕ್ಕಿದೆ. ಶೀಘ್ರವೇ ಕೇಂದ್ರ ತೆರೆಯುವ ಬಗ್ಗೆ ಕ್ರಮ ವಹಿಸಲಾಗುವುದು.

* ರಾಜು, ಸಂತೆ ಮಾವತ್ತೂರು, ಕುಣಿಗಲ್.

ಇಲ್ಲಿನ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ರೋಗಿಗಳು ಪರದಾಡುವಂತಾಗಿದೆ.

–ವೈದ್ಯರು ತರಬೇತಿ ನಿಮಿತ್ತ ಬೇರೆಡೆಗೆ ಹೋಗಿದ್ದಾರೆ. ಶೀಘ್ರವೇ ತರಬೇತಿ ಮುಗಿಸಿ ಬರಲಿದ್ದಾರೆ. ಬಂದ ತಕ್ಷಣ ಬೆಳಿಗ್ಗೆ 9 ರಿಂದ 4.30ರವರೆಗೆ ಕಡ್ಡಾಯವಾಗಿ ಆಸ್ಪತ್ರೆಯಲ್ಲಿ ಇರಲು ಸೂಚಿಸಲಾಗುವುದು.

* ಪದ್ಮರಾಜ್, ತೋವಿನಕೆರೆ.

ತೋವಿನಕೆರೆಯಲ್ಲಿ 24/7 ಆರೋಗ್ಯ ಕೇಂದ್ರ ಇದೆ. 3 ವರ್ಷದ ಹಿಂದೆ ದಾಖಲಾಗುತ್ತಿದ್ದ ಎಲ್ಲ ಗರ್ಭಿಣಿಯರಿಗೂ ಹೆರಿಗೆ ಮಾಡಿಸಲಾಗುತ್ತಿತ್ತು. ಆದರೆ ಈಗ ಈ ಸ್ಥಿತಿ ಇಲ್ಲ. ಇಲ್ಲಿನ ಸ್ಟಾಪ್‌ ನರ್ಸ್‌ಗಳು ಸರಿಯಾಗಿ ಸ್ಪಂದಿಸುತ್ತಿಲ್ಲ.

–ಈಗಾಗಲೇ ನಾನು 2–3 ಬಾರಿ ತೋವಿನಕೆರೆಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ನೀವು ಹೇಳಿದ ಸಮಸ್ಯೆ ಬಗ್ಗೆ ಅಲ್ಲಿನವರು ಗಮನಕ್ಕೆ ತಂದಿರಲಿಲ್ಲ. ಈ ಬಗ್ಗೆ ಕ್ರಮ ವಹಿಸುತ್ತೇನೆ.

* ವೀರಣ್ಣ, ಶಿರಾ ತಾಲ್ಲೂಕು.

ಶಿರಾ ತಾಲ್ಲೂಕು ಮೆಳೆಕೋಟೆ ಸಮೀಪದ ಪಟ್ಟನಾಯಕನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಇದೆ. ಒಂದು ಗ್ಲುಕೋಸ್‌ ಬಾಟಲ್‌ಗೆ ₹ 300 ಪಡೆಯುತ್ತಾರೆ.

–ಅಲ್ಲಿಗೆ ಶೀಘ್ರವೇ ಭೇಟಿ ನೀಡಿ ಪರಿಶೀಲಿಸುತ್ತೇನೆ. ತಪ್ಪು ಕಂಡು ಬಂದರೆ, ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸುತ್ತೇನೆ.

*ಗಂಗಾಧರ, ಕೊಡಿಗೇನಹಳ್ಳಿ.

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾಯಂ ವೈದ್ಯರಿಲ್ಲ. ಈ ಭಾಗದಲ್ಲಿ ಅಧಿಕ ಜನಸಂಖ್ಯೆ ಇದ್ದು, ಈ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಬೇಕು.

–ಕೊಡಿಗೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಲು ಪ್ರಸ್ತಾವ ಕಳುಹಿಸಲಾಗಿದೆ. ಸಂಬಂಧಿಸಿದ ಮೇಲಾಧಿಕಾರಿಗಳ ಗಮನಕ್ಕೂ ತಂದಿದ್ದೇವೆ. ಅಲ್ಲದೆ, ಕೊಡಿಗೇನಹಳ್ಳಿಗೆ ವೈದ್ಯರು ಬರಲು ಹಿಂದೇಟು ಹಾಕುತ್ತಿದ್ದಾರೆ. ಹೊಸ ನೇಮಕಾತಿಗೆ ಪ್ರಕಟಣೆ ನೀಡಲಾಗಿದ್ದು, ಶೀಘ್ರವೇ ವೈದ್ಯರನ್ನು ನೇಮಿಸಲಾಗುವುದು.

* ಕೆಂಪರಾಜು, ಪಟ್ಟನಾಯಕನಹಳ್ಳಿ, ಶಿರಾ ತಾಲ್ಲೂಕು.

ಪಟ್ಟನಾಯಕನಹಳ್ಳಿ ಮುಖ್ಯರಸ್ತೆಯಲ್ಲಿರುವ ಕೋಳಿ ಅಂಗಡಿಗಳ ಗಲೀಜನ್ನು ರಸ್ತೆ, ಚರಂಡಿಗೆ ಚೆಲ್ಲುತ್ತಿದ್ದಾರೆ. ಇದರಿಂದ ಸಾಕಷ್ಟು ಸಮಸ್ಯೆ ಆಗುತ್ತಿದೆ.

–ಈ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪಶುಪಾಲನಾ ಇಲಾಖೆಯ ಗಮನಕ್ಕೆ ತಂದು ಶುಚಿತ್ವಕ್ಕೆ ಕ್ರಮ ವಹಿಸುತ್ತೇನೆ.

* ಅನಂತರಾಮ, ಶಿರಾ.

ಶಿರಾ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮೆಷಿನ್ ಇದ್ದರೂ ಸ್ಕ್ಯಾನಿಂಗ್ ಮಾಡುತ್ತಿಲ್ಲ.

–ಈ ಬಗ್ಗೆ ಕ್ರಮ ವಹಿಸಲಿದ್ದು, ರೇಡಿಯಾಲಜಿಸ್ಟ್‌ ಹಾಗೂ ಸಂಬಂಧಿಸಿದ ಸಿಬ್ಬಂದಿಗೆ ಸ್ಕ್ಯಾನಿಂಗ್‌ ಮಾಡುವಂತೆ ಸೂಚಿಸುವೆ.

* ದಯಾನಂದ, ಚಿರತೆಹಳ್ಳಿ.

ಇಲ್ಲಿನ ಚಿಕ್ಕಬಾಣಗೆರೆ ಉಪಕೇಂದ್ರದಲ್ಲಿ ಎ.ಎನ್‌.ಎಂ, ವೈದ್ಯರಿಲ್ಲದೆ ಸಮಸ್ಯೆ ಆಗುತ್ತಿದೆ.

–ಇಲ್ಲಿ ಎ.ಎನ್‌.ಎಂ ಹುದ್ದೆ ಖಾಲಿ ಇದೆ. ನೇಮಕಾತಿ ಪ್ರಕ್ರಿಯೆ ಆದ ತಕ್ಷಣವೇ ನಿಯೋಜಿಸಲಾಗುವುದು. ಅಲ್ಲಿಯವರೆಗೆ ಇತರೆ ಸಿಬ್ಬಂದಿ ನಿಯೋಜಿಸಿದ್ದೇವೆ.

* ಕೃಷ್ಣ, ಕೊಡಿಗೇನಹಳ್ಳಿ.

ಕೊಡಿಗೇನಹಳ್ಳಿಯಲ್ಲಿ ಎಂಬಿಬಿಎಸ್‌ ವೈದ್ಯರಲ್ಲದವರು ಕ್ಲಿನಿಕ್‌ ತೆಗೆದು, ಹಳ್ಳಿ ಜನರನ್ನು ವಂಚಿಸುತ್ತಿದ್ದಾರೆ.

–ಈ ಹಿಂದೆ ಇಂತಹ ಕ್ಲಿನಿಕ್‌ಗಳನ್ನು ಮುಚ್ಚಿಸಲು ಬಂದಾಗ ಸ್ಥಳೀಯರೇ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಸ್ಥಳೀಯರು ಈ ಬಗ್ಗೆ ಜಾಗೃತಿ ವಹಿಸಬೇಕು. ಎಂಬಿಬಿಎಸ್‌ ವೈದ್ಯರಲ್ಲದವರಿಂದ ಚಿಕಿತ್ಸೆ ಪಡೆಯಬಾರದು. ಈ ಬಗ್ಗೆ ಆಶಾ ಕಾರ್ಯಕರ್ತೆಯರಿಂದ ಜಾಗೃತಿ ಮೂಡಿಸಲಾಗುವುದು.

* ಮಧು, ಪಟ್ಟನಾಯಕನಹಳ್ಳಿ.

ಇಲ್ಲಿನ ತಾಯಿ–ಮಕ್ಕಳ ಆಸ್ಪತ್ರೆ ಇಂದಿಗೂ ಉದ್ಘಾಟನೆ ಆಗಿಲ್ಲ. ಪ್ರಸೂತಿ ತಜ್ಞರ ಕೊರತೆ ಇದೆ.

–ತಾಯಿ ಮಕ್ಕಳ ಆಸ್ಪತ್ರೆಯು ಒಂದು ತಿಂಗಳ ಹಿಂದೆಯೇ ಉದ್ಘಾಟನೆ ಆಗಬೇಕಿತ್ತು. ಆದರೆ, ಆರೋಗ್ಯ ಮಂತ್ರಿಗಳು ಚುನಾವಣೆ ಇದ್ದ ಕಾರಣಕ್ಕಾಗಿ ಉದ್ಘಾಟಿಸಿಲ್ಲ. ಅಲ್ಲದೆ, ಕೆಲವೊಂದು ಮೂಲ ಸೌಕರ್ಯಗಳ ವ್ಯವಸ್ಥೆ ಮಾಡಬೇಕಿದೆ. ವ್ಯವಸ್ಥೆಯಾದ ತಕ್ಷಣ ಉದ್ಘಾಟನೆ ಆಗಲಿದೆ.

* ಲತೀಫ್, ಪಟ್ಟನಾಯಕನಹಳ್ಳಿ.

ನಮ್ಮೂರಿಗೆ ‌ಆಂಬುಲೆನ್ಸ್‌ ಕೊಡಿ.

–ಆಂಬುಲೆನ್ಸ್‌ಗೆ ಟೆಂಡರ್‌ ಕರೆಯಲಾಗಿದೆ. 20 ದಿನದಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಆಂಬುಲೆನ್ಸ್‌ ನೀಡುವ ವ್ಯವಸ್ಥೆ ಮಾಡಲಾಗುವುದು.

* ಕುಮಾರ್, ಗುಬ್ಬಿ.

ಗುಬ್ಬಿಯಲ್ಲಿ ಸೊಳ್ಳೆಗಳ ಕಾಟ ವಿಪರೀತವಾಗಿದೆ.

–ಸೊಳ್ಳೆಗಳನ್ನು ನಿಯಂತ್ರಿಸುವುದಕ್ಕೆ ಆರೋಗ್ಯ ಇಲಾಖೆ ಸಾಕಷ್ಟು ಕ್ರಮ ವಹಿಸುತ್ತಿದೆ. ಇದಕ್ಕೆ ಸಾರ್ವಜನಿಕರು ಕೈ ಜೋಡಿಸಬೇಕು. ಸೊಳ್ಳೆಗಳು ಉತ್ಪಾದನೆ ಆಗದಂತೆ ಎಚ್ಚರಿಕೆ ವಹಿಸಬೇಕು.

ಪ್ರಶ್ನೆ ಕೇಳಿದವರು: ಮಹೇಶ್ ಹುಳಿಯಾರು, ಪ್ರಕಾಶ್, ಕುಣಿಗಲ್ ತಾಲ್ಲೂಕು, ಆನಂದಕುಮಾರ್ ಮತ್ತಿಘಟ್ಟ, ಸೋಮಶೇಖರ್, ಪಾಲಾಕ್ಷಪ್ಪ ತುಮಕೂರು.

***

ಡಿಎಚ್‌ಒ ಬಂದು ಫೀಸ್ ಕೊಡ್ತಾರೆ...

ತುಮಕೂರು ಶಾಂತಿನಗರದ ಲೋಕೇಶ್‌ ನಾಯ್ಕ ಎಂಬುವವರು ಕರೆ ಮಾಡಿ, ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ರೂಂ ನಂಬರ್ 13ರಲ್ಲಿ ವೈದ್ಯರೊಬ್ಬರು ಹಣ ಕೇಳಿದ್ದಾರೆ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಯೂ ‘ಹಣ ಕೇಳಿದರೆ ಹಣ ಪಡೆದಿರುವ ಬಗ್ಗೆ ಅವರಿಂದ ರಶೀದಿ ಪಡೆಯಿರಿ. ಇಲ್ಲವೇ ಡಿಎಚ್‌ಒ ಮೇಡಂ ಬಂದು ಹಣ ನೀಡಲಿದ್ದಾರೆ ಎಂದು ಹೇಳಿ. ಇನ್ನುಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಯಾರಾದರೂ ಹಣ ಕೇಳಿದರೆ ನನ್ನ ಗಮನಕ್ಕೆ ತನ್ನಿ. ಕ್ರಮ ಕೈಗೊಳ್ಳುತ್ತೇನೆ’ ಎಂದರು.

ಪ್ರಜಾವಾಣಿ ತಂಡ: ಡಿ.ಎಂ.ಕುರ್ಕೆ ಪ್ರಶಾಂತ್, ಸುಮಾ ಬಿ., ಪೀರ್‌ಪಾಷ, ಅನಿಲ್ ಕುಮಾರ್ ಜಿ., ಸೋಮಶೇಖರ್ ಎಸ್., ಅಭಿಲಾಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT