ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗುಟುಕು ನೀರಿಗೂ ಹಾಹಾಕಾರ

ಬಿಸಿಲ ಝಳ: ದಿನವಿಡೀ ಮನೆ ಬಿಟ್ಟು ‌ಹೊರಬರದ ಜನ– ತಂಪು ಪಾನೀಯಗಳ ಮೊರೆ
ನಾಗರಾಜಪ್ಪ
Published 30 ಮಾರ್ಚ್ 2024, 8:44 IST
Last Updated 30 ಮಾರ್ಚ್ 2024, 8:44 IST
ಅಕ್ಷರ ಗಾತ್ರ

ವೈ.ಎನ್.ಹೊಸಕೋಟೆ: ದಿನೇ ದಿನೇ ಹೆಚ್ಚುತ್ತಿರುವ ಬಿಸಿಲಿನ ಝಳಕ್ಕೆ ಈ ಭಾಗದ ಜನ ಮತ್ತು ಜಾನುವಾರುಗಳು ತತ್ತರಿಸುತ್ತಿವೆ. ನೀರು, ಮೇವಿಗೆ ತತ್ವಾರ ಎದುರಾಗಿದೆ.

ಮಧ್ಯಾಹ್ನದ ವೇಳೆ ರಸ್ತೆಗಳು ಭಣಗುಡುತ್ತವೆ. ಕೃಷಿ ಚಟುವಟಿಕೆ ಮತ್ತು ವ್ಯಾಪಾರ ವಹಿವಾಟು ಬಿಸಿಲಿನಲ್ಲಿ ಸ್ಥಗಿತಗೊಂಡಂತಿವೆ. ಎಳನೀರು, ತಂಪು ಪಾನೀಯಗಳ ವ್ಯಾಪಾರ ಚುರುಕುಗೊಂಡಿದೆ.

ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಕುಸಿದಿದೆ. ವಿದ್ಯುತ್ ಕಣ್ಣಮುಚ್ಚಾಲೆ ಆಡುತ್ತಿದ್ದು, ಕೆಲವು ಗ್ರಾಮಗಳ ನಳಗಳಲ್ಲಿ ವಾರಕ್ಕೊಮ್ಮೆ ನೀರು ಬರುತ್ತಿದ್ದರೆ, ಹೋಬಳಿ ಕೇಂದ್ರದಲ್ಲಿ ತಿಂಗಳಿಗೊಮ್ಮೆ ನೀರು ದೊರೆಯುವ ಸ್ಥಿತಿ ಇದೆ.

ಕೆರೆಕುಂಟೆಗಳು ನೀರಿಲ್ಲದೆ ಬಿರುಕು ಬಿಡುತ್ತಿವೆ. ಎಲ್ಲೂ ತೆರೆದ ಬಾವಿಗಳಿಲ್ಲ. ಬೆಟ್ಟದಲ್ಲಿನ ದೊಣೆಗಳು ಒಣಗಿವೆ. ಪಶು, ಪಕ್ಷಿ, ಪ್ರಾಣಿಗಳಿಗೂ ಕುಡಿಯಲು ಗುಟುಕು ನೀರು ಸಿಗುತ್ತಿಲ್ಲ. ವನ್ಯ ಮೃಗಗಳು ನೀರು ಅರಸಿ ಗ್ರಾಮಗಳಿಗೆ ಲಗ್ಗೆ ಇಡುತ್ತಿವೆ. 

ಕೆಲವು ಗ್ರಾಮಗಳಲ್ಲಿ ಸರ್ಕಾರ ನೀರಿನ ತೊಟ್ಟಿ ನಿರ್ಮಿಸಿದ್ದು, ಅದರಲ್ಲಿ ನೀರಿದ್ದರೆ ಜಾನುವಾರುಗಳು ಕುಡಿಯುತ್ತವೆ. ಇಲ್ಲದಿದ್ದರೆ ಮನೆಯ ಬಳಿಯೇ ನೀರಿ ಕುಡಿಸಬೇಕಾದ ಸ್ಥಿತಿ ಇದೆ.

ಮಳೆ ಇಲ್ಲದೆ ಹುಲ್ಲು ಮೊಳಕೆಯೊಡೆದಿಲ್ಲ. ಬೆಟ್ಟಗುಡ್ಡಗಳಲಿದ್ದ ಹುಲ್ಲು ಒಣಗಿದ್ದು, ಕಿಡಿಗೇಡಿಗಳ ಬೆಂಕಿಗೆ ಆಹುತಿಯಾಗುತ್ತಿದೆ. ಎಲ್ಲೂ ಜಾನುವಾರುಗಳಿಗೆ ಮೇವು ದೊರೆಯುತ್ತಿಲ್ಲ. ನಿತ್ಯ ದನಕರುಗಳು ಬಯಲಲ್ಲಿ ಓಡಾಡಿಕೊಂಡು ಬರುತ್ತಿವೆ. ಮೇವನ್ನು ದುಬಾರಿ ಬೆಲೆಗೆ ಖರೀದಿಸಿ ಸಂಜೆ, ಮುಂಜಾನೆ ಹಾಕುತ್ತಿದ್ದಾರೆ ರೈತರು.

ಒಂದೆರಡು ವರ್ಷಗಳಿಂದ ಸುರಿದಿದ್ದ ಮಳೆಯಿಂದ ಕನಸು ಹೊತ್ತ ರೈತರು ಎಲ್ಲೆಡೆ ಅಡಿಕೆ ಸಸಿ ನಾಟಿ ಮಾಡಿದ್ದಾರೆ. ಅದರೆ ಈ ವರ್ಷ ಇದುವರೆಗೂ ಬಾರದ ಮಳೆಯಿಂದ ಜಲಮೂಲಗಳಲ್ಲಿ ನೀರಿನ ಸಂಗ್ರಹವಿಲ್ಲದೆ ಕೊಳವೆ ಬಾವಿಗಳು ಬತ್ತುತ್ತಿವೆ. ಮೊಳಕೆಯಲ್ಲೇ ಅಡಿಕೆ ಗಿಡಗಳು ಒಣಗುವ ಆತಂಕ ಎದುರಾಗಿದೆ.

ಈ ಭಾಗದ ರೈತರ ಮತ್ತು ಜಾನುವಾರುಗಳ ಜೀವ ಉಳಿಯಬೇಕಾದರೆ ಉತ್ತಮ ಮಳೆ ಬರಬೇಕು. ಇಲ್ಲವೆ ಕೆರೆಕುಂಟೆಗಳಿಗೆ ನೀರು ತುಂಬಿಸಬೇಕು. ಎತ್ತಿನಹೊಳೆ, ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳ್ಳಲು ವರ್ಷಗಳೇ ಉರುಳಬೇಕಿದೆ. ಬರಗಾಲದ ಛಾಯೆ ದೂರವಾಗಿ, ಅಂತರ್ಜಲದ ಮಟ್ಟ ಹೆಚ್ಚಾಗಿ ಜನ ಮತ್ತು ರೈತರ ಜೀವನ ಪ್ರಗತಿ ಕಾಣಲು ಈ ಪ್ರದೇಶಕ್ಕೆ ನೀರುಣಿಸುವ ಯೋಜನೆಗಳು ಜೀವಾಮೃತವಾಗಬೇಕಿದೆ. ಕೆರೆಕುಂಟೆಗಳಿಗೆ ಬರುವ ಈ ನೀರಿಗಾಗಿ ಚಾತಕ ಪಕ್ಷಿಗಳಂತೆ ಕಾದು ಕುಳಿತಿದ್ದೇವೆ ಎನ್ನುತ್ತಾರೆ ಜನತೆ.

ಮೇಗಳಪಾಳ್ಯ ಗ್ರಾಮದ ಹೊರವಲಯದಲ್ಲಿರುವ ನೀರಿನ ತೊಟ್ಟಿಯಲ್ಲಿ ರೈತರು ಎಮ್ಮೆಗಳಿಗೆ ನೀರುಣಿಸಿದರು
ಮೇಗಳಪಾಳ್ಯ ಗ್ರಾಮದ ಹೊರವಲಯದಲ್ಲಿರುವ ನೀರಿನ ತೊಟ್ಟಿಯಲ್ಲಿ ರೈತರು ಎಮ್ಮೆಗಳಿಗೆ ನೀರುಣಿಸಿದರು
ದನಕರುಗಳಿಗೆ ರೈತರು ಜೋಳದ ಹುಲ್ಲು ಖರೀದಿಸಿದರು
ದನಕರುಗಳಿಗೆ ರೈತರು ಜೋಳದ ಹುಲ್ಲು ಖರೀದಿಸಿದರು

ಕೊಳವೆ ಬಾವಿ ನೀರಿಗೆ ತುಂತುರು ನೀರಾವರಿ ಪದ್ಧತಿ ಅಳವಡಿಸಿಕೊಂಡು ಬೆಳೆ ಬೆಳೆಯುತ್ತಿದ್ದೇನೆ. ನಿತ್ಯ ರಾತ್ರಿ ಕರಡಿಗಳು ತುಂತುರು ನೀರಾವರಿ ಮುಖ್ಯ ಪೈ‍ಪ್‌ ಒಡೆದು ಅದರಲ್ಲಿನ ನೀರು ಕುಡಿದು ಹೋಗುತ್ತಿವೆ. ಹಾಗಾಗಿ ನಿತ್ಯ ನೀರಿನ ಪೈಪ್‌ ಬದಲಾಯಿಸಬೇಕು.

-ಹನುಮಂತರಾಯ ವೈ.ಎನ್.ಹೊಸಕೋಟೆ

ಹಲವು ದಶಕಗಳಿಂದ ಕುರಿ ಸಾಕುತ್ತಿದ್ದೇವೆ. ಬರದಿಂದಾಗಿ ಈ ವರ್ಷ ಕುರಿಗಳಿಗೆ ನೀರು ಮೇವು ಸಿಗುತ್ತಿಲ್ಲ. ಟ್ಯಾಂಕರ್‌ ಮೂಲಕ ತೊಟ್ಟಿಗಳಿಗೆ ನೀರು ಹಾಕಿಸಿಕೊಳ್ಳುತ್ತಿದ್ದೇವೆ. ಈ ಭಾಗದಲ್ಲಿನ ರೈತರು ಶೇಂಗಾ ಜೋಳ ಕಡಿಮೆ ಬೆಳೆಯುತ್ತಿದ್ದು ಹಣ ಕೊಟ್ಟರೂ ಮೇವು ಸಿಗುತ್ತಿಲ್ಲ. ದುಪ್ಪಟ್ಟು ಹಣ ನೀಡಿ ಆಂಧ್ರದ ಕಡೆಗೆ ಹೋಗಿ ಮೇವು ಖರೀದಿಸಬೇಕಿದೆ.

-ಕನ್ನೇಪಲ್ಲಿ ಪಾಲಯ್ಯ ಕುರಿಗಾಹಿ ದಳವಾಯಿಹಳ್ಳಿ

ಬರದ ಛಾಯೆಯಿಂದಾಗಿ ದನಕರುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಉಳಿದವುಗಳನ್ನು ರಕ್ಷಿಸಿಕೊಳ್ಳಲು ಸರ್ಕಾರ ತುರ್ತಾಗಿ ಮೇವು ಬ್ಯಾಂಕ್‌ಗಳನ್ನು ಸ್ಥಾಪಿಸಬೇಕು.

- ಪಾತಣ್ಣ ಮೇಗಳಪಾಳ್ಯ

ಕೆರೆಗಳಿಗೆ ನೀರು ಹರಿಸಿ ವೈ.ಎನ್.ಹೊಸಕೋಟೆ ಹೋಬಳಿಯಲ್ಲಿ ರಂಗಸಮುದ್ರ ಜೋಡಿ ಅಚ್ಚಮ್ಮನಹಳ್ಳಿ ಪೋತಗಾನಹಳ್ಳಿ ಜಾಲೋಡು ನಾಗಲಾಪುರ ಪೊನ್ನಸಮುದ್ರ ಗ್ರಾಮಗಳಲ್ಲಿ ದೊಡ್ಡಕೆರೆಗಳಿದ್ದು ನೀರಿಲ್ಲದೆ ಭಣಗುಡುತ್ತಿವೆ. ಈ ಎಲ್ಲ ಕೆರೆಗಳಿಗೆ ಮತ್ತು ಇವುಗಳ ಜಲಾನಯನ ಪ್ರದೇಶದಲ್ಲಿ ಬರುವ ಎಲ್ಲ ಕುಂಟೆಗಳಿಗೆ ಎತ್ತಿನಹೊಳೆ ನೀರು ತುಂಬಿಸಿದರೆ ಅಂತರ್ಜಲದ ಮಟ್ಟ ಹೆಚ್ಚಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT