ತುಮಕೂರು: ‘ಕೂಲಿಗೆ ಹೋದರೆ ದುಡ್ಡು... ಇಲ್ಲಂದ್ರೆ ಇಲ್ಲ, ಇನ್ನು ಆಪರೇಷನ್ ಎಲ್ಲಿಂದ ಮಾಡಿಸೋಣ...’ ಹೀಗೆ ಪ್ರತಿಕ್ರಿಯಿಸಿದ್ದು ತಾಲ್ಲೂಕಿನ ಹೆಗ್ಗೆರೆ ಹೋಬಳಿ ಕುಂಕುಮನಹಳ್ಳಿ ಗ್ರಾಮದ ಲಕ್ಷ್ಮಮ್ಮ.
ನಗರದಲ್ಲಿ ಮಂಗಳವಾರ ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ‘ಆರೋಗ್ಯ ಅಭಿಯಾನ’ದ ಅಂಗವಾಗಿ ಹಮ್ಮಿಕೊಂಡಿದ್ದ ಕಣ್ಣಿನ ಪೊರೆ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ‘ಒಂದು ವರ್ಷದಿಂದ ಕಣ್ಣು ಸರಿಯಾಗಿ ಕಾಣುತ್ತಿಲ್ಲ. ಡಾಕ್ಟರು ನಮ್ಮೂರಿಗೆ ಬಂದು ಪರೀಕ್ಷೆ ನಡೆಸಿ ಚಿಕಿತ್ಸೆಗಾಗಿ ಕರೆದುಕೊಂಡು ಬಂದಿದ್ದಾರೆ’ ಎಂದು ಮುಗ್ಧವಾಗಿ ನುಡಿದರು.
‘ಸರ್ಕಾರದಿಂದ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಇದರಿಂದ ನಮ್ಮಂತಹ ಅನೇಕರಿಗೆ ಅನುಕೂಲವಾಗುತ್ತದೆ. ಇದನ್ನು ಹೀಗೆ ಮುಂದುವರಿಸಬೇಕು’ ಎಂದು ತಾಲ್ಲೂಕಿನ ಕೋಡಿಮುದ್ದನಹಳ್ಳಿ ನಂಜಮ್ಮ ಮನವಿ ಮಾಡಿದರು.
‘ಈಚೆಗೆ ಕಣ್ಣಿನ ಸಮಸ್ಯೆ ತುಂಬಾ ಆಗಿದೆ. ಈಗಾಗಲೇ ಎರಡು ಕಡೆ ಪರೀಕ್ಷೆ ಮಾಡಿಸಿದ್ದರೂ ಸರಿಯಾಗಲಿಲ್ಲ. ಈಗ ವೈದ್ಯರೇ ಕರೆದುಕೊಂಡು ಬಂದು ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡುತ್ತೇವೆ ಎನ್ನುತ್ತಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಮನೆ, ತೋಟದ ಕೆಲಸ ಸಲೀಸಾಗಿ ಮಾಡಬಹುದು’ ಎಂದು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ದೊಡ್ಡಬಿದರೆಯ ಶಿವಣ್ಣ ನಗುತ್ತಲೇ ಮಾತನಾಡಿದರು.
ಜಿಲ್ಲೆಯ ಎಲ್ಲ ತಾಲ್ಲೂಕುಗಳ ನೂರಾರು ಜನರು ಶಿಬಿರದಲ್ಲಿ ಪಾಲ್ಗೊಂಡಿದ್ದರು. ರೋಗಿಗಳನ್ನು ಕರೆತರಲು ಪ್ರತ್ಯೇಕ ಬಸ್ ವ್ಯವಸ್ಥೆ ಮಾಡಲಾಗಿತ್ತು. ಶಿಬಿರದಲ್ಲಿ ಮಧುಮೇಹ, ರಕ್ತದೊತ್ತಡ ಸೇರಿದಂತೆ ಇತರೆ ಪರೀಕ್ಷೆಗಳನ್ನು ನಡೆಸಲಾಯಿತು. ಮುಂದಿನ ಮೂರು ದಿನಗಳ ಕಾಲ ಬೆಂಗಳೂರು, ತುಮಕೂರಿನ ವಿವಿಧ 12 ಆಸ್ಪತ್ರೆಗಳಲ್ಲಿ 760 ಮಂದಿಗೆ ಶಸ್ತ್ರಚಿಕಿತ್ಸೆ ನೆರವೇರಲಿದೆ.
ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ‘ಆರೋಗ್ಯ ಅಭಿಯಾನದಡಿ ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲೆಯ 17 ಲಕ್ಷ ಮಂದಿಯ ಆರೋಗ್ಯ ತಪಾಸಣೆ ಗುರಿ ನಿಗದಿ ಪಡಿಸಿದ್ದು, ಇದುವರೆಗೆ 5.22 ಲಕ್ಷ ಮಂದಿಯ ಆರೋಗ್ಯ ಪರೀಕ್ಷಿಸಲಾಗಿದೆ. ಇದರಲ್ಲಿ 35,700 ಜನರಿಗೆ ವಿವಿಧ ಕಾಯಿಲೆಗಳು ಇರುವುದು ಪತ್ತೆಯಾಗಿದೆ. ಈ ಪೈಕಿ ಈ ವರ್ಷ 10 ಸಾವಿರ ರೋಗಿಗಳಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸುವ ಗುರಿ ಹೊಂದಾಗಿದೆ’ ಎಂದು ಮಾಹಿತಿ ನೀಡಿದರು.
‘12 ಸಾವಿರ ಜನರಲ್ಲಿ ಮಧುಮೇಹ, 13 ಸಾವಿರ ಮಂದಿಯಲ್ಲಿ ರಕ್ತದೊತ್ತಡ, 330 ಜನ ಮೂರು ರೀತಿಯ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ದಂತ ಸಮಸ್ಯೆ ಇರುವ 1 ಸಾವಿರ ಜನ ಪತ್ತೆಯಾಗಿದ್ದು, ಮುಂದಿನ ದಿನದಲ್ಲಿ ದಂತ ಜೋಡಣೆ ಶಿಬಿರ ಏರ್ಪಡಿಸಲಾಗುವುದು. 900 ಜನರಲ್ಲಿ ಕ್ಷಯ, ಕುಷ್ಠರೋಗ ಇರುವುದು ದೃಢಪಟ್ಟಿದ್ದು, ಎಲ್ಲರಿಗೂ ಅಗತ್ಯ ಚಿಕಿತ್ಸೆ, ನೆರವು ನೀಡಲಾಗುವುದು’ ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಮಹಾನಗರ ಪಾಲಿಕೆ ಆಯುಕ್ತರಾದ ಬಿ.ವಿ.ಅಶ್ವಿಜ, ಡಿಎಚ್ಒ ಡಿ.ಎನ್.ಮಂಜುನಾಥ್, ಹೆಚ್ಚುವರಿ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ ಇತರರು ಭಾಗವಹಿಸಿದ್ದರು.
ಕಿವಿ ಕೇಳಿಸದ ಮಾತನಾಡಲಾಗದ ಮಕ್ಕಳಿಗೆ ಒಂದು ಶಸ್ತ್ರಚಿಕಿತ್ಸೆ ಮಾಡಲು ₹8 ಲಕ್ಷದಿಂದ ₹10 ಲಕ್ಷ ವೆಚ್ಚವಾಗುತ್ತದೆ. ಎಲ್ಲ ವೆಚ್ಚವನ್ನು ಸರ್ಕಾರದಿಂದಲೇ ಭರಿಸಿ ಜಿಲ್ಲೆಯ 31 ಮಕ್ಕಳಿಗೆ ₹3 ಕೋಟಿ ವೆಚ್ಚದಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಜಿ.ಪಂ ಸಿಇಒ ಜಿ.ಪ್ರಭು ತಿಳಿಸಿದರು. 2 ಲಕ್ಷ ಮಕ್ಕಳನ್ನು ಸಮಗ್ರ ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಇದರಲ್ಲಿ 300 ಜನ ಮಕ್ಕಳಿಗೆ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇದೆ. ಕಣ್ಣಿನ ಸಮಸ್ಯೆ ಇರುವ ದೃಷ್ಟಿ ದೋಷ ಇರುವ 5 ಸಾವಿರ ಮಕ್ಕಳಿಗೆ ಕನ್ನಡಕ ವಿತರಿಸಲಾಗುತ್ತಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.