ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಾವಗಡ: ಹೆಚ್ಚುತ್ತಿರುವ ತಾಪಮಾನ-ಕ್ಷೀಣಿಸುತ್ತಿರುವ ಅಂತರ್ಜಲ

ಜಯಸಿಂಹ ಕೆ.ಆರ್.
Published 9 ಮೇ 2024, 8:41 IST
Last Updated 9 ಮೇ 2024, 8:41 IST
ಅಕ್ಷರ ಗಾತ್ರ

ಪಾವಗಡ: ತಾಲ್ಲೂಕಿನಾದ್ಯಂತ ಒಂದೆಡೆ ತಾಪಮಾನ ಹೆಚ್ಚುತ್ತಿದ್ದರೆ, ಮತ್ತೊಂದೆಡೆ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಇದರಿಂದಾಗಿ ತೋಟಗಳು ಒಣಗುತ್ತಿವೆ. ಮಾವು, ತೆಂಗು, ಅಡಿಕೆ, ಸೀಬೆ, ಮೂಸಂಬಿ, ದಾಳಿಂಬೆ ಸೇರಿದಂತೆ ವಿವಿಧ ಬೆಳೆಗಳನ್ನು ಕಾಪಾಡಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ.

ಕಳೆದ ವರ್ಷ ಅತ್ಯಲ್ಪ ಮಳೆಯಾಗಿದೆ. ಅತಿವೃಷ್ಟಿಯಾಗಿದ್ದಾಗ ಅನುಭವಿ ರೈತರು ಇನ್ನು 3 ರಿಂದ 4 ವರ್ಷಗಳ ಕಾಲ ಅಂತರ್ಜಲ ಉತ್ತಮವಾಗಿರುತ್ತದೆ ಎಂದು ವಿಶ್ಲೇಷಿಸಿದ್ದರು. ಕೆರೆ ತುಂಬಿ ಕೋಡಿ ಹರಿದ ಒಂದು ವರ್ಷದಲ್ಲಿಯೇ ಅಂತರ್ಜಲ ಮಟ್ಟ ಕುಸಿದಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.

2022ರಲ್ಲಿ ಉತ್ತಮ ಮಳೆ ಬಿದ್ದು ಕೆರೆಗಳು ತುಂಬಿದ ಕೂಡಲೆ ರೈತರಲ್ಲಿ ಇನ್ನೂ ಕೆಲ ವರ್ಷಗಳ ಕಾಲ ಕೊಳವೆ ಬಾವಿಗಳಲ್ಲಿ ನೀರು ಬತ್ತುವುದಿಲ್ಲ ಎಂಬ ಆತ್ಮ ವಿಶ್ವಾಸ ಮೂಡಿತು. ನೀರಾವರಿ ಮಾತ್ರವಲ್ಲದೆ ಮಳೆಯಾಶ್ರಿತ ಶೇಂಗಾ ಬೆಳೆಯುತ್ತಿದ್ದ ಪ್ರದೇಶ, ಬೀಳು ಬಿದ್ದಿದ್ದ ಜಮೀನುಗಳಲ್ಲಿಯೂ ಕೊಳವೆ ಬಾವಿ ಕೊರೆಸಿ ಅಡಿಕೆ ನಾಟಿ ಮಾಡಲಾಯಿತು. ಅಡಿಕೆ, ಬಾಳೆ ಸಸಿಗಳನ್ನು ನೆಟ್ಟು ಜಮೀನುಗಳನ್ನು ತೋಟಗಳನ್ನಾಗಿ ಪರಿವರ್ತಿಸಲು ಆರಂಭಿಸಲಾಯಿತು.

ಏಕಾ ಏಕಿ ಒಂದು ವರ್ಷದಲ್ಲಿ ಕೊಳವೆ ಬಾವಿಗಳು ಬತ್ತುತ್ತಿರುವ ಹಿನ್ನೆಲೆ ಲಕ್ಷಾಂತರ ರೂ ಬಂಡವಾಳ ಹಾಕಿ ಹೊಸದಾಗಿ ತೋಟ ಕಟ್ಟಿರುವ ರೈತರು ಆತಂಕಕ್ಕೀಡಾಗಿದ್ದಾರೆ.

ತಾಲ್ಲೂಕಿನ ನಿಡಗಲ್ ಹೋಬಳಿ, ವೈಎನ್ ಹೊಸಕೋಟೆ ಹೋಬಳಿಯಲ್ಲಿ ಹೆಚ್ಚಿನ ಅಡಿಕೆ ತೋಟಗಳಿವೆ. ಕಸಬಾ ಹೋಬಳಿ, ನಾಗಲಮಡಿಕೆ ಹೋಬಳಿಯಲ್ಲಿ ಕಡಿಮೆ ಪ್ರದೇಶದಲ್ಲಿ ಅಡಿಕೆ ತೋಟಗಳಿವೆ. ಅಡಿಕೆ ತೋಟಗಳಿರುವ ಪ್ರದೇಶದಲ್ಲಿ ಹೆಚ್ಚಿನ ಕೊಳವೆ ಬಾವಿ ಕೊರೆಸಲಾಗುತ್ತಿದೆ. ನಾಗಲಮಡಿಕೆ ಹೋಬಳಿಯಲ್ಲಿ ಮೂಸಂಬಿ, ಸೀಬೆ, ಮಾವು ಬೆಳೆಗಳನ್ನು ಬೆಳೆಯಲಾಗುತ್ತಿದೆ.

ತೋಟಗಳನ್ನು ಉಳಿಸಿಕೊಳ್ಳಲು ಅನಿವಾರ್ಯವಾಗಿ ಕೊಳವೆ ಬಾವಿ ಕೊರೆಸಬೇಕಿದೆ. ಕೊಳವೆ ಬಾವಿ ಕೊರೆಸಿದರೂ ನೀರು ಸಿಗುತ್ತದೆ ಎಂಬ ಖಾತರಿ ಇಲ್ಲ. ನೀರು ಸಿಕ್ಕರೂ ಯಾವಾಗ ಮತ್ತೆ ಕೊಳವೆ ಬಾವಿ ಬತ್ತುತ್ತದೆಯೊ ಎಂಬ ಆತಂಕ ತಾಲ್ಲೂಕಿನ ರೈತರನ್ನು ಕಾಡುತ್ತಿದೆ. 800 ರಿಂದ 1,000 ಅಡಿ ಕೊರೆಸಿದರೂ ನೀರು ಸಿಗದೆ ಒಂದರ ಹಿಂದೆ ಮತ್ತೊಂದು ಸರಣಿ ಕೊಳವೆ ಬಾವಿಗಳನ್ನು ಕೊರೆಸಿ ಸಾಲದ ಹೊರೆ ಹೆಚ್ಚಿಸಿಕೊಂಡಿರುವ ಸಾಕಷ್ಟು ನಿದರ್ಶನಗಳಿವೆ.

ಕೊಳವೆ ಬಾವಿ ಕೊರೆಸುವುದು ದುಬಾರಿ: ಈ ಹಿಂದೆ ಒಂದು ಅಡಿಗೆ ₹92 ರಿಂದ ₹95 ಇದ್ದ ದರ ಏಕಾಏಕಿ ₹110-115ಕ್ಕೆ ಏರಿಕೆ ಮಾಡಲಾಗಿದೆ. 300 ರಿಂದ 500 ಅಡಿಗೆ ಮತ್ತೆ ₹10 ಹೆಚ್ಚಿಸಲಾಗುತ್ತದೆ. ನಂತರ ಪ್ರತಿ 100 ಅಡಿಗೆ ₹15 ರಿಂದ ₹25 ಹೆಚ್ಚಿಸಲಾಗುತ್ತದೆ. 1,000 ಅಡಿ ಒಂದು ಕೊಳವೆ ಬಾವಿ ಕೊರೆಸಲು ₹1.40 ಲಕ್ಷ ಖರ್ಚಾಗುತ್ತದೆ.

ಬೆಲೆ ಏರಿಕೆ, ರೈತರ ಅಸಮಾಧಾನ: ಕಳೆದ ವರ್ಷವೂ ಡೀಸೆಲ್ ಬೆಲೆ ಈಗಿರುವಷ್ಟೆ ಇತ್ತು. ಡೀಸೆಲ್ ಬೆಲೆಯಲ್ಲಿ ಗಣನೀಯ ಏರಿಕೆಯಾಗದಿದ್ದರೂ ಬೋರ್‌ವೆಲ್ ಲಾರಿ ಮಾಲೀಕರು ಸಭೆ ಸೇರಿ ಬೆಲೆ ಏರಿಸಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ರೈತರ ಸಹಾಯಕ್ಕೆ ಬಾರದಿರುವುದು ಬೇಸರದ ಸಂಗತಿ ಎಂದು ರೈತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಪಾಯಿಂಟ್ ಮಾಡುವವರಿಗೆ ಬೇಡಿಕೆ: ಕೊಳವೆ ಬಾವಿ ಕೊರೆಸಲು ಸೂಕ್ತ ಪಾಯಿಂಟ್ ಹುಡುಕಿಕೊಡುವವರಿಗೆ ತಾಲ್ಲೂಕಿನಾದ್ಯಂತ ಬೇಡಿಕೆ ಹೆಚ್ಚಿದೆ. ತೆಂಗಿನಕಾಯಿ, ಕಟ್ಟಿಗೆ, ತಾಮ್ರದ ಕಡ್ಡಿಗಳು, ಇಟ್ಟಿಗೆ, ಕಲ್ಲು ಇತ್ಯಾದಿ ಬಳಸಿ ನೀರು ಸಿಗುವ ಸ್ಥಳ ನಿಗದಿಪಡಿಸಲಾಗುತ್ತದೆ. ಇತ್ತೀಚೆಗೆ ವಿವಿಧ ತಂತ್ರಜ್ಞಾನ, ದಿಶಂಕ್ ತಂತ್ರಾಂಶ ಬಳಸಿ ಪಾಯಿಂಟ್ ನಿಗದಿಪಡಿಸಲಾಗುತ್ತಿದೆ. ಸ್ಥಳೀಯರ ಜತೆಗೆ ಬೆಂಗಳೂರು, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ವಿವಿಧೆಡೆಯಿಂದ ಪಾಯಿಂಟ್ ಮಾಡಿಸಲು ಕರೆತರಲಾಗುತ್ತಿದೆ.

ಈ ಹಿಂದೆ ಸಾವಿರ ಅಡಿ ಕೊಳವೆ ಬಾವಿ ಕೊರೆಸಲು ₹80 ರಿಂದ ₹1 ಲಕ್ಷ ಆಗುತ್ತಿತ್ತು. ಇದೀಗ ₹1.40 ಲಕ್ಷದಿಂದ ₹1.50 ಲಕ್ಷ ಆಗುತ್ತದೆ. ಬೆಳೆ ಉಳಿಸಿಕೊಳ್ಳಲು ಚಿನ್ನಾಭರಣ ಅಡಇಟ್ಟು ಬೋರ್‌ವೆಲ್ ಕೊರೆಸುವ ಸ್ಥಿತಿ ಇದೆ ಎನ್ನುತ್ತಾರೆ ಕಸಬಾ ಹೋಬಳಿ ರೈತ ಹನುಮಂತರಾಯಪ್ಪ.

ಪಾವಗಡ ತಾಲ್ಲೂಕು ರಾಜವಂತಿ ಬಳಿ ನೀರಿಲ್ಲದೆ ಅಡಿಕೆ ಬೆಳೆ ಒಣಗಿರುವುದು
ಪಾವಗಡ ತಾಲ್ಲೂಕು ರಾಜವಂತಿ ಬಳಿ ನೀರಿಲ್ಲದೆ ಅಡಿಕೆ ಬೆಳೆ ಒಣಗಿರುವುದು
ಕೊಳವೆಬಾವಿ ಕೊರೆಯುವವರು ದರ ಏರಿಕೆ ಮಾಡಿದ್ದರೂ ಅಧಿಕಾರಿಗಳು ಜನಪ್ರತಿನಿಧಿಗಳು ಚಕಾರವೆತ್ತುತ್ತಿಲ್ಲ. ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದರೂ ಇಂತಹ ವಿಚಾರದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ
ಅನಿಲ್ ರೈತ ಪಾವಗಡ
ದಶಕಗಳಿಂದ ಕಾಪಾಡಿಕೊಂಡು ಬಂದಿರುವ ತೋಟ ಒಣಗುತ್ತಿರುವುದನ್ನು ನೋಡಲಾಗುತ್ತಿಲ್ಲ. ಈಗಾಗಲೆ ಬ್ಯಾಂಕ್ ಸಾಲ ಪಡೆದಿರುವುದರಿಂದ ಮತ್ತೆ ಸಾಲ ಕೊಡುವುದಿಲ್ಲ. ಕೈ ಸಾಲ ಪಡೆದು ಕೊಳವೆ ಬಾವಿ ಕೊರೆಸಬೇಕಿದೆ
ರವಿಪ್ರಸಾದ್ ರೈತ ಪಳವಳ್ಳಿ
ಕೊಳವೆ ಬಾವಿ ಕೊರೆಸಲು ಲಕ್ಷಾಂತರ ರೂಪಾಯಿ ಖರ್ಚಾಗುತ್ತಿದೆ. ರೈತರಿಗೆ ಹೊರೆಯಾಗಿ ಪರಿಣಮಿಸಿದೆ. ಬೆಲೆ ಇಳಿಕೆ ಮಾಡಿದಲ್ಲಿ ರೈತರಿಗೆ ಅನುಕೂಲವಾಗಲಿದೆ
ಶಿವರಾಮ್ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT