ಶುಕ್ರವಾರ, ಜುಲೈ 30, 2021
21 °C
ಜಿಲ್ಲಾ ಆಸ್ಪತ್ರೆಯಲ್ಲಿ ಶ್ವಾಸಕೋಶ ತಜ್ಞರಾದ ಯಶವಂತ್ ಅಭಿಪ್ರಾಯ

ಕೊರೊನಾ ವಾರಿಯರ್ಸ್ | ಚಿಕಿತ್ಸೆ ಕರ್ತವ್ಯ; ಸವಾಲು ಅನಿವಾರ್ಯ

ಅಭಿಲಾಷ ಬಿ.ಸಿ. Updated:

ಅಕ್ಷರ ಗಾತ್ರ : | |

Prajavani

ತುಮಕೂರು: ‘ವೈದ್ಯಕೀಯ ಸಿಬ್ಬಂದಿಗೂ ಕೊರೊನಾ ಸೋಂಕು ತಗುಲುತ್ತಿದೆ. ಹಾಗೆಂದು ನಾವೇ ಧೃತಿಗೆಟ್ಟರೆ ರೋಗಿಗಳ ಸ್ಥಿತಿ ಇನ್ನಷ್ಟು ಗಂಭೀರವಾಗುತ್ತದೆ. ಚಿಕಿತ್ಸೆ ನೀಡುವುದು ನಮ್ಮ ಕರ್ತವ್ಯ, ಅದರಿಂದ ವಿಮುಖರಾಗುವ ಪ್ರಶ್ನೆಯೇ ಬರುವುದಿಲ್ಲ’.

–ಜಿಲ್ಲಾ ಆಸ್ಪತ್ರೆಯ ಕೋವಿಡ್‌–19 ಐಸಿಯುನಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ವಾಸಕೋಶ ತಜ್ಞರಾದ ಟಿ.ಎಲ್.ಯಶವಂತ್ ಅವರ ಮಾತಿದು.

ಕೊರೊನಾ ಬಗ್ಗೆ ಪ್ರಾರಂಭದಲ್ಲಿ ನಮಗೂ ಭಯವಿತ್ತು. ಆದರೆ ಈಗ ಆತಂಕಪಡುವ ಅಗತ್ಯವಿಲ್ಲ ಎನ್ನುವುದು ಅರಿವಾಗಿದೆ. ಸದ್ಯಕ್ಕೆ ಐಸಿಯುನಲ್ಲಿರುವ ರೋಗಿಗಳ ಕಡೆಯವರಿಗೆ ಆಪ್ತ ಸಮಾಲೋಚನೆ ಮಾಡುವುದು, ಅವರ ಪ್ರಶ್ನೆಗಳಿಗೆ ಉತ್ತರಿಸುವುದೇ ಸವಾಲಾಗಿದೆ ಎನ್ನುತ್ತಾರೆ.

ಇತರ ಐಸಿಯುಗಳಿಗಿಂತ ಕೋವಿಡ್ ವಾರ್ಡ್‌ಗಳು ಹೆಚ್ಚು ಸೂಕ್ಷ್ಮ. ಏಕೆಂದರೆ ಇಲ್ಲಿ ಚಿಕಿತ್ಸೆ ನೀಡುವ ವೈದ್ಯರು, ಸಿಬ್ಬಂದಿಯೂ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ನಿತ್ಯ ಪಿಪಿಇ ಕಿಟ್‌ ಧರಿಸುವುದು, ತೆಗೆಯುವುದನ್ನು ಇತರ ಸಿಬ್ಬಂದಿಗೆ ತಿಳಿಸಬೇಕು. ಸ್ವತಃ ನಾವು ಕೂಡ ಅದನ್ನು ಅನುಸರಿಸಬೇಕು ಎಂದು ಹೇಳಿದರು.

‘ಬೆಂಗಳೂರಿನ ಸಂಪರ್ಕದಿಂದಾಗಿ ತಂದೆ, ಮಗ– ಇಬ್ಬರಿಗೂ ಸೋಂಕು ತಗುಲಿತ್ತು. ಆಸ್ಪತ್ರೆಗೆ ಬರುವಾಗ ಆರೋಗ್ಯ ತೀರಾ ಗಂಭೀರವಾಗಿತ್ತು. ಮುತುವರ್ಜಿ ವಹಿಸಿ ಕೆಲ ಇಂಜೆಕ್ಷನ್‌ಗಳನ್ನು ನೀಡಿದೆವು. ಆದರೂ ಮೂರು– ನಾಲ್ಕು ದಿನ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು. ನಂತರ ಕೆಲ ದಿನಗಳಲ್ಲಿ ವೆಂಟಿಲೇಟರ್‌ಗೂ ಹೋಗದೆ ಸಂಪೂರ್ಣ ಚೇತರಿಸಿಕೊಂಡರು. ಇದು ನನಗೆ ಆತ್ಮಸ್ಥೈರ್ಯ ತುಂಬಿತು. ರೋಗವನ್ನು ಎದುರಿಸುವ ಶಕ್ತಿ ನೀಡಿತು ಎಂದು ಡಾ.ಯಶವಂತ್ ಅನುಭವ ಹಂಚಿಕೊಂಡರು.

ನಾಲ್ಕು ತಿಂಗಳಿನಿಂದ ರಜೆ ಇಲ್ಲ: ಕೊರೊನಾ ಸೋಂಕು ಆರಂಭವಾದ ನಂತರ ರಜೆ ತೆಗೆದುಕೊಳ್ಳದೆ ಕಾರ್ಯನಿರ್ವಹಿಸುತ್ತಿದ್ದೇವೆ. ಇತ್ತೀಚೆಗೆ ಸಾವಿನ ಪ್ರಮಾಣ ಹೆಚ್ಚಾಗಿರುವುದರಿಂದ ಕೆಲಸದ ಅವಧಿಯೂ ಹೆಚ್ಚಿದೆ. 10ರಿಂದ 11 ಗಂಟೆ ಐಸಿಯುನಲ್ಲಿ ಕೆಲಸ ಮಾಡಬೇಕಾಗುತ್ತದೆ. ಕೆಲವೊಮ್ಮೆ ನಾಲ್ಕೈದು ದಿನ ಮನೆಗೆ ತೆರಳದೆ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ. ಇದಕ್ಕೆ ಕುಟುಂಬದ ಸಹಕಾರವೂ ಇದೆ. ಮನೆಯಲ್ಲಿ ತಂದೆ, ತಾಯಿ, ಮಕ್ಕಳಿದ್ದಾರೆ. ಕುಟುಂಬದವರಿಂದ ಆದಷ್ಟು ಅಂತರ ಕಾಪಾಡಿಕೊಳ್ಳುತ್ತೇವೆ ಎನ್ನುತ್ತಾರೆ.

ರೋಗಿ ಸಂಬಂಧಿಗಳೂ ದೂರ

ಕೋವಿಡ್‌ ಸೋಂಕು ಗಂಭೀರವಾಗಿರುವ ರೋಗಿಗಳಿಂದ ಅವರ ಕುಟುಂಬ ಸದಸ್ಯರೇ ದೂರವಾಗುತ್ತಿರುವುದನ್ನು ಗಮನಿಸಿದರೆ ಕೊರೊನಾ ಸಂಬಂಧಗಳನ್ನು ದೂರವಾಗಿಸುತ್ತಿದೆ ಎನ್ನುವ ಅನುಮಾನ ಕಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಡಾ.ಯಶವಂತ್.

ಜಿಲ್ಲಾ ಆಸ್ಪತ್ರೆಯಲ್ಲಿರುವ ಕೋವಿಡ್‌ ರೋಗಿಯೊಬ್ಬರಿಗೆ ಕಿಡ್ನಿ ಸಮಸ್ಯೆಯಿದ್ದು, ಅವರಿಗೆ ಡಯಾಲಿಸಿಸ್‌ ಅಗತ್ಯವಿದೆ. ಅವರನ್ನು ವಿಕ್ಟೊರಿಯಾ ಆಸ್ಪತ್ರೆಗೆ ಕರೆದೊಯ್ಯುವಂತೆ ಕುಟುಂಬ ಸದಸ್ಯರಿಗೆ ತಿಳಿಸಿದರೂ, ಅವರು ಸ್ಪಂದಿಸುತ್ತಿಲ್ಲ. ಸೋಂಕು ಬಂದಿರುವುದರಿಂದ ಅವರ ಕುಟುಂಬಕ್ಕೆ ಬೇಡವಾಗಿದ್ದಾರೆ. ಹಾಗಾಗಿ ನಾವೇ ಸಾಧ್ಯವಾದಷ್ಟು ಮುತುವರ್ಜಿಯಿಂದ ಚಿಕಿತ್ಸೆ ನೀಡುತ್ತಿದ್ದೇವೆ. ಈ ರೋಗಿಗಳಿಗೆ ದೈರ್ಯ ಹಾಗೂ ಕುಟುಂಬದ ಸಹಕಾರ ತೀರಾ ಅಗತ್ಯ. ಇದರಿಂದ ದೂರವಾದ ರೋಗಿಗಳನ್ನು ನೋಡಿದಾಗ ಬೇಸರವಾಗುತ್ತದೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು