ಮಂಗಳವಾರ, ಮೇ 24, 2022
30 °C
ರೈತನನ್ನು ‘ಚಾಣಕ್ಯ’ ಎಂದ ಸಚಿವ ಗಿರಿರಾಜ್‌ ಸಿಂಗ್‌; ಬಹು ಬೆಳೆ ಪದ್ಧತಿಗೆ ಒತ್ತು ನೀಡಲು ಸಲಹೆ

ತುಮಕೂರು | ‘ಸಮಗ್ರ ಕೃಷಿಯಿಂದ ಆದಾಯ ಗಳಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ತಾಲ್ಲೂಕಿನ ಮಷಣಾಪುರ ಗ್ರಾಮದ ಪ್ರಗತಿ ಪರ ರೈತರಾದ ಎಂ.ಎಸ್‌. ಮೃತ್ಯುಂಜಯ, ಚೆನ್ನಕೇಶವಸ್ವಾಮಿ ಅವರ ಸಮಗ್ರ ಕೃಷಿ ಪದ್ಧತಿಗೆ ಮನಸೋತ ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಗಿರಿರಾಜ್‌ಸಿಂಗ್ ಅವರು ರೈತನನ್ನು ‘ಚಾಣಕ್ಯ’ ಎಂದು ಕರೆದರು. ಅವರ ಜಮೀನಿನಲ್ಲಿ ಬೆಳೆದೆ ವಿವಿಧ ಬಗೆಯ ಹಣ್ಣುಗಳ ರುಚಿಯನ್ನು ಸವಿದರು.

ಸಚಿವ ಗಿರಿರಾಜ್‌ ಸಿಂಗ್ ಸೋಮವಾರ ರೈತರ ಜಮೀನಿಗೆ ಭೇಟಿ ನೀಡಿ, ವಿವಿಧ ಬೆಳೆಗಳನ್ನು ವೀಕ್ಷಿಸಿದರು.

10 ವರ್ಷಗಳಿಂದ ತಮ್ಮ 8 ಎಕರೆ ಜಮೀನಿನಲ್ಲಿ ಸಾವಯವ ಪದ್ಧತಿಯಲ್ಲಿ ತೆಂಗಿನ ಜತೆ ಅಡಿಕೆ, ಮೆಣಸು, ಅರಿಸಿನ, ಸೇಬು, ಅಂಜೂರ, ಡ್ರ್ಯಾಗನ್ ಫ್ರೂಟ್ ಸೇರಿದಂತೆ ವಿವಿಧ ಪ್ರಭೇದದ ಒಟ್ಟು 250 ಬಗೆಯ ದೇಸಿ ಮತ್ತು ವಿದೇಶಿ ಹಣ್ಣುಗಳನ್ನು ಬೆಳೆದಿದ್ದಾರೆ. ವರ್ಷಕ್ಕೆ ₹20 ಲಕ್ಷ ಆದಾಯ ಗಳಿಸುತ್ತಿದ್ದಾರೆ. ರೈತರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇತರೆ ರೈತರು ಮೃತ್ಯುಂಜಯ ಅವರನ್ನು ಮಾದರಿಯಾಗಿ ತೆಗೆದು ಕೊಂಡು ಸಮಗ್ರ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಬೇಕು. ಪ್ರಾರಂಭದಲ್ಲಿ ಒಂದು ಗ್ರಾಮ ಪಂಚಾಯಿತಿಯ ಎಲ್ಲಾ ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವಂತೆ ಮಾಹಿತಿ ನೀಡಬೇಕು ಎಂದು ಸಲಹೆ ಮಾಡಿದರು.

ನಂತರ ಗುಬ್ಬಿ ತಾಲ್ಲೂಕಿನ ಸಾತೇನ ಹಳ್ಳಿ ಜಲಾನಯನ ಯೋಜನಾ ಪ್ರದೇಶದ ರೈತರೊಂದಿಗೆ ಸಂವಾದ ನಡೆಸಿದರು.

ಶ್ರೀಗಂಧ ಬೆಳೆಯಲು ರೈತರು ಯೋಚಿಸಬೇಕು. ಸಸಿ ನೆಟ್ಟ ಮೂರು ವರ್ಷಕ್ಕೆ ಶ್ರೀಗಂಧ ಬೀಜದಿಂದ ಎಣ್ಣೆ ತೆಗೆದು ಮಾರಾಟ ಮಾಡಬಹುದು. ಇದು ರೈತರಿಗೆ ಆದಾಯ ತಂದು ಕೊಡುತ್ತದೆ. ಶ್ರೀಗಂಧದ ಮಧ್ಯೆ ನುಗ್ಗೆ, ಅರಿಸಿನ, ಮೆಣಸು ಬೆಳೆದು ಬಹು ಬೆಳೆ ಪದ್ಧತಿ ಅಳವಡಿಸಿಕೊಂಡರೆ ಉತ್ತಮ ಲಾಭ ಗಳಿಸಬಹುದು ಎಂದರು.

ರೈತ ಕೆ. ತಿಮ್ಮಪ್ಪ, ‘ಶ್ರೀಗಂಧ ಬೆಳೆಯಿಂದ ಆದಾಯ ಬರಲು ಇಪ್ಪತ್ತು ವರ್ಷ ಕಾಯಬೇಕು. ಅಷ್ಟು ತಾಳ್ಮೆ ರೈತರಿಗೆ ಇಲ್ಲ. ಇತ್ತೀಚೆಗೆ ಶ್ರೀಗಂಧಕ್ಕೆ ಕಳ್ಳರ ಕಾಟ ಜಾಸ್ತಿಯಾಗಿದೆ. ನಾಲ್ಕೈದು ವರ್ಷ ಕಷ್ಟಪಟ್ಟು ಬೆಳೆಸಿದ ಗಿಡಗಳನ್ನು ಬುಡ ಸಮೇತ ಕತ್ತರಿಸಿಕೊಂಡು ಹೋಗುತ್ತಾರೆ. ಸರ್ಕಾರದಿಂದ ಇದಕ್ಕೆ ರಕ್ಷಣೆ ನೀಡಬೇಕು. ಡ್ರ್ಯಾಗನ್ ಫ್ರೂಟ್ ಬೆಳೆದರೂ ಕಡಿಮೆ ಅವಧಿಯಲ್ಲಿ ಹೆಚ್ಚಿನ ಆದಾಯಗಳಿಸಬಹುದು’ ಎಂದರು.

ಸಂಸದ ಜಿ.ಎಸ್. ಬಸವರಾಜು, ಕೇಂದ್ರ ಭೂ ಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಅಜಯ್ ತಿರ್ಕೆ, ಜಂಟಿ ಕಾರ್ಯದರ್ಶಿ ಉಮಾಕಾಂತ್, ಅಧಿಕಾರಿಗಳಾದ ವೆಂಕಟೇಶ್, ಉಮಾ ಮಹದೇವನ್, ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ, ಜಿ.ಪಂ ಸಿಇಒ ಕೆ. ವಿದ್ಯಾಕುಮಾರಿ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜಸುಲೋಚನಾ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಬಿ. ರಘು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು