ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: 15 ಸಾವಿರ ಮಕ್ಕಳಿಗೆ ಶಿಕ್ಷಣ

ಪಾವಗಡ ರಾಮಕೃಷ್ಣ ಸೇವಾ ಆಶ್ರಮದಿಂದ ಯೋಜನೆ
Last Updated 19 ಮಾರ್ಚ್ 2021, 4:28 IST
ಅಕ್ಷರ ಗಾತ್ರ

ತುಮಕೂರು: ಪಾವಗಡ ರಾಮಕೃಷ್ಣ ಸೇವಾ ಆಶ್ರಮದಿಂದ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ನಾಲ್ಕು ತಾಲ್ಲೂಕುಗಳ 7ರಿಂದ 10ನೇ ತರಗತಿ ಮಕ್ಕಳಿಗಾಗಿ ದೂರ ತರಂಗ ಶಿಕ್ಷಣ ಹಾಗೂ ಕೌಶಲ ನೈಪುಣ್ಯ ಯೋಜನೆ ಆರಂಭಿಸಲಾಗಿದೆ ಎಂದು ಆಶ್ರಮದ ಮುಖ್ಯಸ್ಥ ಸ್ವಾಮಿ ಜಪಾನಂದ ಅವರು ಹೇಳಿದರು.

500 ಹಳ್ಳಿಗಳಲ್ಲಿ ಆರೋಗ್ಯ, ಅಕ್ಷರ, ಆಸರೆ, ಅಧ್ಯಾತ್ಮಕ್ಕೆ ಸಂಬಂಧಿಸಿದಂತೆ 27 ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಆನ್‌ಲೈನ್ ತರಗತಿಗಳಿಂದ ವಂಚಿತರಾಗಿರುವ ಗಡಿನಾಡಿನ ಮಕ್ಕಳನ್ನು ಗಮನದಲ್ಲಿ ಇಟ್ಟುಕೊಂಡು ದೂರ ತರಂಗ ಶಿಕ್ಷಣ ಯೋಜನೆ ರೂಪಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

ಸ್ವಾಮಿ ವಿವೇಕಾನಂದ ಗ್ರಾಮೀಣ ಆರೋಗ್ಯ ಕೇಂದ್ರ, ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ನೆರವು ನೀಡಿವೆ. 40 ಕುಗ್ರಾಮಗಳು ಮತ್ತು ಗಡಿ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ದೃಶ್ಯ, ಡಿಜಿಟಲ್ ಟಚ್‍ಬೋರ್ಡ್ ಮೂಲಕ ಎಲ್ಲಾ ವಿಷಯಗಳ ಬೋಧನೆ ಮಾಡಲಾಗುತ್ತದೆ. ಸುಮಾರು 15 ಸಾವಿರ ಮಕ್ಕಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಇನ್ಫೋಸಿಸ್ ಕಂಪನಿ ಸಹಯೋಗದಲ್ಲಿ ಎಲ್ಲವೂ ನಡೆಯುತ್ತಿದ್ದು, ನಿರ್ವಹಣೆಯನ್ನು ಸಂಸ್ಥೆಯ ಸಮರ್ಪಣಾ ಸೇವಾ ಸಂಸ್ಥೆ ಮಾಡಲಿದೆ ಎಂದು ವಿವರಿಸಿದರು.

ಪ್ರಸ್ತುತ ರಾಮಕೃಷ್ಣ ಆಶ್ರಮದ ವತಿಯಿಂದ ಕ್ಷಯ, ಕುಷ್ಠ, ಎಚ್‌ಐವಿ ಪೀಡಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಸಾವಿರಾರು ರೋಗಿಗಳನ್ನು ಗುಣಪಡಿಸಲಾಗಿದೆ. ಈವರೆಗೆ ಒಳರೋಗಿಗಳಾಗಿ 1.39 ಲಕ್ಷ ಜನರು ಚಿಕಿತ್ಸೆ ಪಡೆದಿದ್ದಾರೆ. ಶಾರದಾದೇವಿ ಕಣ್ಣಿನ ಆಸ್ಪತ್ರೆಯಿಂದ 13 ಸಾವಿರ ಚಿಕ್ಕ ಮಕ್ಕಳಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಮಿಂಟೋ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಸುಸಜ್ಜಿತ ಕಣ್ಣಿನ ಆಸ್ಪತ್ರೆ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.

ಪಾವಗಡ ತಾಲ್ಲೂಕಿನ ಕುಡಿಯುವ ನೀರಿನ ಬವಣೆ ನೀಗಿಸಲು 11 ಶುದ್ಧ ಕುಡಿಯುವ ನೀರಿನ ಘಟಕಗಳನ್ನುಆಶ್ರಮದ ವತಿಯಿಂದ ಸ್ಥಾಪಿಸಲಾಗಿದೆ ಎಂದರು.

ರಾಮಕೃಷ್ಣ ಸೇವಾಶ್ರಮ ಕೈಗೊಂಡಿರುವ 27 ಸೇವಾ ಯೋಜನೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ ಪತ್ರ ಬರೆದಿದ್ದಾರೆ. ಇದರಿಂದ ನಮ್ಮ ಸೇವಾ ಕಾರ್ಯಗಳಿಗೆ ಆನೆ ಬಲ ಬಂದಂತಾಗಿದೆ. ಮತ್ತಷ್ಟು ಸೇವಾ ಕಾರ್ಯಕ್ರಮಗಳನ್ನು ವಿಸ್ತರಿಸಿಕೊಳ್ಳಲು ಸ್ಫೂರ್ತಿ ನೀಡಿದೆ ಎಂದರು.

ರಾಮಕೃಷ್ಣ ಸೇವಾಶ್ರಮದ ವ್ಯವಸ್ಥಾಪಕ ನಾಗರಾಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT