ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರಿಗೆ ಸಿಗದ ಶೈಕ್ಷಣಿಕ ಸಹಾಯಧನ

ಕಟ್ಟಡ ಕಾರ್ಮಿಕರ ಕುಟುಂಬಗಳ ವಿದ್ಯಾರ್ಥಿಗಳಿಗೆ ದೊರೆಯದ ಹಣ
Last Updated 11 ಜೂನ್ 2020, 4:12 IST
ಅಕ್ಷರ ಗಾತ್ರ

ತುಮಕೂರು: ಅಂದಿನ ದುಡಿಮೆಯನ್ನೇ ನಂಬಿ ಬದುಕು ಸಾಗಿಸುವ ಕಟ್ಟಡ ಕಾರ್ಮಿಕರ ಕುಟುಂಬಗಳಿಗೆ ರಾಜ್ಯ ಸರ್ಕಾರವು ಶೈಕ್ಷಣಿಕ ಸಹಾಯಧನ ಬಿಡುಗಡೆ ಮಾಡಿಲ್ಲ. ತಮ್ಮ ದಿನದ ದುಡಿಮೆಯ ಹಣವನ್ನು ಉಳಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಈ ಕುಟುಂಬಗಳು ವಿನಿಯೋಗಿಸುವಂತಾಗಿದೆ.

ಜಿಲ್ಲೆಯಲ್ಲಿ 2016-17ನೇ ಸಾಲಿನಲ್ಲಿಯೇ ಶೈಕ್ಷಣಿಕ ಸಹಾಯಧನಕ್ಕೆ ಅರ್ಜಿ ಹಾಕಿದ್ದ ಕೆಲವು ಕಾರ್ಮಿಕ ಕುಟುಂಬಗಳಿಗೆ ಇನ್ನೂ ಹಣ ಬಿಡುಗಡೆಯಾಗಿಲ್ಲ. 2017-18 ಮತ್ತು 2019-20ನೇ ಸಾಲಿನ ಸಹಾಯಧನವೂ ದೊರೆತಿಲ್ಲ. ಜಿಲ್ಲೆಯಲ್ಲಿ ನೋಂದಾಯಿತ 55 ಸಾವಿರ ಕಾರ್ಮಿಕರು ಇದ್ದಾರೆ.

ಲಾಕ್‌ಡೌನ್‌ನಿಂದಾಗಿ ಈಗಾಗಲೇ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಣ್ಣ ಪ್ರಮಾಣದ ಹಣ ಸಹ ಕೆಲವು ಕುಟುಂಬಗಳ ಬದುಕಿಗೆ ಪ್ರಮುಖವಾಗುತ್ತದೆ. ಲಾಕ್‌ಡೌನ್ ಕಟ್ಟಡ ನಿರ್ಮಾಣ ಕೆಲಸಗಾರರ ಮೇಲೆ ಗಂಭೀರ ಪರಿಣಾಮವನ್ನೇ ಬೀರಿತ್ತು. ಕಾಮಗಾರಿಗಳು ಸ್ಥಗಿತವಾದ ಪರಿಣಾಮ ಈ ಕೆಲಸ ನಂಬಿ ಜೀವನ ನಡೆಸುತ್ತಿದ್ದ ಕಾರ್ಮಿಕರ ಬದುಕು ಆರ್ಥಿಕವಾಗಿ ತೊಂದರೆಗೆ ಸಿಲುಕಿದೆ.

1ರಿಂದ 3ನೇ ತರಗತಿ ವ್ಯಾಸಂಗ ಮಾಡುವ ಶ್ರಮಿಕರ ಮಕ್ಕಳಿಗೆ ₹ 2 ಸಾವಿರ, 4ರಿಂದ 6ನೇ ತರಗತಿಗೆ ₹ 3 ಸಾವಿರ, 7ರಿಂದ 8ನೇ ತರಗತಿಗೆ ₹ 4 ಸಾವಿರ, 9 ಮತ್ತು 10ನೇ ತರಗತಿಗೆ ₹ 6 ಸಾವಿರ, ದ್ವಿತೀಯ ಪಿಯುಸಿ ಉತ್ತೀರ್ಣರಾದರೆ ₹ 8 ಸಾವಿರ, ಐಟಿಐ, ಡಿಪ್ಲೊಮಾ ವ್ಯಾಸಂಗ ಮಾಡುವವರಿಗೆ ₹ 7 ಸಾವಿರ, ಪದವಿ ಉತ್ತೀರ್ಣರಾದರೆ ₹ 10 ಸಾವಿರ– ಹೀಗೆ ವಾರ್ಷಿಕ ಸಹಾಯಧನವನ್ನು ಕಾರ್ಮಿಕ ಇಲಾಖೆ ನೀಡುತ್ತದೆ.

ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುವವರಿಗೆ ₹ 20 ಸಾವಿರ, ಎಂಜಿನಿಯರಿಂಗ್‌ಗೆ ದಾಖಲಾಗುವ ವೇಳೆ ₹ 25 ಸಾವಿರ, ತೇರ್ಗಡೆಯಾದರೆ ₹ 20 ಸಾವಿರ, ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ₹ 30 ಸಾವಿರ, ತೇರ್ಗಡೆಗೆ ₹ 25 ಸಾವಿರವನ್ನು ವಾರ್ಷಿಕವಾಗಿ ನೀಡಲಾಗುತ್ತದೆ.

ಆದರೆ ಜಿಲ್ಲೆಯಲ್ಲಿ 2017-18 ಮತ್ತು 2019-20ನೇ ಸಾಲಿನಲ್ಲಿ ಇನ್ನೂ ಸಹಾಯಧನ ಬಿಡುಗಡೆಯಾಗಿಲ್ಲ. ಈ ಸಂಬಂಧ ಜಿಲ್ಲಾಡಳಿತಕ್ಕೆ ಕಾರ್ಮಿಕ ಮುಖಂಡರು ಮನವಿ ಸಹ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ.

ತಾಂತ್ರಿಕ ತೊಂದರೆ: ಕಾರ್ಮಿಕ ಕಲ್ಯಾಣ ಮಂಡಳಿಯು ಹಣ ಬಿಡುಗಡೆ ಮಾಡದಿರುವುದು ಒಂದು ಕಾರಣವಾದರೆ ತಾಂತ್ರಿಕ ಸಮಸ್ಯೆಯೂ ಸಹಾಯಧನ ದೊರೆಯದಂತೆ ಮಾಡಿದೆ. ಕೆಲವು ಕಾರ್ಮಿಕರು ಸೂಕ್ತ ದಾಖಲೆಗಳನ್ನು ಸಲ್ಲಿಸದ ಕಾರಣ ಹಾಗೂ ಆಧಾರ್ ಕಾರ್ಡ್‌ನಲ್ಲಿರುವ ಹೆಸರು ಮತ್ತು ಕಾರ್ಮಿಕ ಇಲಾಖೆಯಲ್ಲಿ ನೋಂದಣಿಯಾಗಿರುವ ಹೆಸರಿನಲ್ಲಿರುವ ಅಕ್ಷರಗಳ ವ್ಯತ್ಯಾಸದಿಂದಲೂ ಸಹಾಯಧನ ಬಿಡುಗಡೆಯಾಗಿಲ್ಲ ಎಂದು ಹೇಳಲಾಗುತ್ತಿದೆ.

‘2019ರ ಜೂನ್ 1ರಿಂದ ಈ ಸಹಾಯಧನದ ಅರ್ಜಿಗಳನ್ನು ಸಕಾಲ ಯೋಜನೆ ವ್ಯಾಪ್ತಿಗೆ ಒಳಪಡಿಸಿತು. ಅದಕ್ಕೂ ಮುನ್ನ ಕೈ ಬರಹದಲ್ಲಿ ಅರ್ಜಿಗಳನ್ನು ಸಲ್ಲಿಸಲಾಗಿದೆ. ಆ ಅರ್ಜಿಗಳಲ್ಲಿಯೇ ಬಹುತೇಕ ಇನ್ನೂ ವಿಲೇವಾರಿ ಆಗಿಲ್ಲ’ ಎಂದು ಎಐಟಿಯುಸಿ ಮುಖಂಡ ಗಿರೀಶ್ ತಿಳಿಸಿದರು.

‘ಕಾರ್ಮಿಕರ ಪರ ಕೆಲಸ ಮಾಡುತ್ತಿರುವ ಹಲವು ಸಂಘಟನೆಗಳು ಇವೆ. ಸಭೆಗಳ ಮೂಲಕ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ಇಂತಹ ಸೌಲಭ್ಯಗಳು ದೊರೆಯುತ್ತವೆ ಎಂದು ತಿಳಿಹೇಳಿ ಕಾರ್ಮಿಕ ಇಲಾಖೆ, ಮಂಡಳಿಗೆ‌ ಅರ್ಜಿ ಹಾಕಿಸುತ್ತೇವೆ. ಹೀಗೆ ವರ್ಷಗಟ್ಟಲೆ ಅರ್ಜಿಗಳು ವಿಲೇವಾರಿ ಆಗದೆ ಸೌಲಭ್ಯಗಳು ತಲುಪದಿದ್ದಾಗ ನಾವು ಹೇಳುತ್ತಿರುವುದು ಸುಳ್ಳು ಎನ್ನುವ ಮನೋಭಾವ ಕಾರ್ಮಿಕರಿಗೂ ಬರುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಅಧಿಕಾರಿಗಳನ್ನು ಕೇಳಿದರೆ ಕೆಲವು ಅರ್ಜಿಗಳು ಮಾತ್ರ ಬಾಕಿ ಇವೆ ಎನ್ನುತ್ತಾರೆ. ಕೆಲವು ಅಷ್ಟೇ ಅಲ್ಲ, ಬಹಳಷ್ಟು ಕಾರ್ಮಿಕರಿಗೆ ಸೌಲಭ್ಯಗಳು ತಲುಪಿಲ್ಲ’ ಎಂದರು.

ತಾಂತ್ರಿಕ ಸಮಸ್ಯೆ ಪರಿಹರಿಸಬಹುದು:

ಕೆಲವು ಕಾರ್ಮಿಕರು ಸಹಾಯಧನ ಪಡೆಯಲು ತಾಂತ್ರಿಕ ಸಮಸ್ಯೆ ಎದುರಾಗಿದೆ. ಕೆಲವು ಹೆಸರುಗಳಲ್ಲಿ ವ್ಯತ್ಯಾಸಗಳಾಗಿವೆ. ಆದರೆ ಆಧಾರ್, ಪಡಿತರ, ಬ್ಯಾಂಕ್ ಅಕೌಂಟ್ ಹೀಗೆ ಯಾವುದಾದರೂ ಒಂದು ಕಡೆ ತುಲನೆ ಮಾಡಿ ಆ ತಾಂತ್ರಿಕ ಸಮಸ್ಯೆ ಸರಿಪಡಿಸಬಹುದು. ಆದರೆ ಅಧಿಕಾರಿಗಳು ಈ ಕೆಲಸ ಮಾಡುತ್ತಿಲ್ಲ ಎಂದುಎಐಟಿಯುಸಿ ಮುಖಂಡ ಗಿರೀಶ್ ದೂರಿದರು.

ಬೇರೆ ಬೇರೆ ಸಂಘಟನೆಗಳು ಕಾರ್ಮಿಕರಿಂದ ಅರ್ಜಿಯನ್ನು ಹಾಕಿಸಿವೆ. ಈ ಮೂರು ವರ್ಷಗಳಲ್ಲಿ ಅಂದಾಜು 700 ಅರ್ಜಿಗಳು ಬಾಕಿ ಇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT