ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗಸ್ಟ್‌ 5ರಂದು ಶಿರಾ ನಗರಸಭೆ ಅಧ್ಯಕ್ಷರ ಚುನಾವಣೆ

Published 4 ಆಗಸ್ಟ್ 2023, 15:46 IST
Last Updated 4 ಆಗಸ್ಟ್ 2023, 15:46 IST
ಅಕ್ಷರ ಗಾತ್ರ

ಶಿರಾ: ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಆಗಸ್ಟ್‌ 5ರಂದು ಚುನಾವಣೆ ನಡೆಯಲಿದೆ.

ನಗರಸಭೆ ಅಧ್ಯಕ್ಷರಾಗಿದ್ದ ಅಂಜಿನಪ್ಪ ಅವರ ರಾಜೀನಾಮೆಯಿಂದ ತೆರವಾಗಿರುವ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದೆ.

ನಗರಸಭೆಯಲ್ಲಿ ಯಾವುದೇ ಪಕ್ಷಕ್ಕೆ ಸ್ವಷ್ಟ ಬಹುಮತವಿಲ್ಲದ ಕಾರಣ ಜೆಡಿಎಸ್, ಬಿಜೆಪಿ, ಪಕ್ಷೇತರರ ಬೆಂಬಲದೊಂದಿಗೆ ಜೆಡಿಎಸ್‌ನ ಅಂಜಿನಪ್ಪ ಅಧ್ಯಕ್ಷರಾಗಿ ಹಾಗೂ ಬಿಜೆಪಿಯ ಅಂಬುಜಾಕ್ಷಿ ನಟರಾಜು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಕಾಂಗ್ರೆಸ್ ಪ್ರಾರಂಭದಿಂದಲೂ ನಗರಸಭೆಯ ಗದ್ದುಗೆ ಹಿಡಿಯಲು ತೀವ್ರ ಕಸರತ್ತು ನಡೆಸುತ್ತಿತ್ತು. ಶಾಸಕರಾಗಿ ಟಿ.ಬಿ.ಜಯಚಂದ್ರ ಆಯ್ಕೆಯಾದ ನಂತರ ಕಾಂಗ್ರೆಸ್ ಹೆಚ್ಚು ಸಕ್ರಿಯವಾಯಿತು. ಬಿಜೆಪಿ ಮೂವರು ಹಾಗೂ ಪಕ್ಷೇತರ ಸದಸ್ಯರು ಕಾಂಗ್ರೆಸ್ ಸಂಪರ್ಕಕ್ಕೆ ಬಂದ ಹಿನ್ನಲೆಯಲ್ಲಿ ಅಂಜಿನಪ್ಪ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ‌ ನೀಡಿದರು.

ಅವಿಶ್ವಾಸ ಮಂಡನೆ: ಅಧ್ಯಕ್ಷರಾಗಿದ್ದ ಅಂಜಿನಪ್ಪ ರಾಜೀನಾಮೆ‌ ನೀಡಿದರೆ, ಉಪಾಧ್ಯಕ್ಷರಾಗಿದ್ದ ಅಂಬುಜಾಕ್ಷಿ ನಟರಾಜ್ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗಿದೆ. ಆಗಸ್ಟ್‌ 7ರಂದು ಅವಿಶ್ವಾಸ ನಿರ್ಣಯ ಸಭೆ ನಡೆಯಲಿದೆ.

ಅಧ್ಯಕ್ಷ ಸ್ಥಾನಕ್ಕೆ ಲಕ್ಷ್ಮಿಕಾಂತ್ ಹಾಗೂ ಪಿ.ಪೂಜಾ ಆಕಾಂಕ್ಷಿಯಾಗಿದ್ದಾರೆ. ಶಾಸಕ ಟಿ.ಬಿ.ಜಯಚಂದ್ರ ಅವರ ಒಲವು ಯಾರತ್ತ ಇದೆ ಎನ್ನುವುದು ಸ್ಪಷ್ಟವಾಗಿಲ್ಲ. ಇಬ್ಬರೂ ತೀವ್ರ ಲಾಬಿ ನಡೆಸುತ್ತಿದ್ದಾರೆ. ಇದುವರೆಗೂ ಅಧ್ಯಕ್ಷರಾಗಿದ್ದ ಅಂಜಿನಪ್ಪ ಬೋವಿ ಸಮಾಜಕ್ಕೆ‌ ಸೇರಿದ್ದು ಮತ್ತೆ ಅದೇ ಸಮುದಾಯಕ್ಕೆ ಅವಕಾಶ ನೀಡುವ ಬದಲು ಮಾದಿಗ ಸಮುದಾಯದ ಲಕ್ಷ್ಮಿಕಾಂತ್ ಅವರಿಗೆ ಅವಕಾಶ ನೀಡುವಂತೆ ಕೆಲವರು ಶಾಸಕರಿಗೆ ಮನವಿ ಮಾಡಿದರೆ, ಮತ್ತೆ ಕೆಲವರು ಬೋವಿ ಸಮಾಜದ ಪಿ.ಪೂಜಾ ಅವರಿಗೆ ಅವಕಾಶ ನೀಡುವಂತೆ ಮನವಿ ಮಾಡುತ್ತಿದ್ದಾರೆ.

ದೆಹಲಿಗೆ ಹೋಗಿದ್ದ ಶಾಸಕ ಟಿ.ಬಿ‌.ಜಯಚಂದ್ರ ಶುಕ್ರವಾರ ಕ್ಷೇತ್ರಕ್ಕೆ ಬಂದಿದ್ದು ನಗರಸಭೆ ಸದಸ್ಯರು ಹಾಗೂ ಪಕ್ಷದ ಮುಖಂಡರ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಅಧ್ಯಕ್ಷರ ಆಯ್ಕೆಯ ಸಂಪೂರ್ಣ ಜವಾಬ್ದಾರಿಯನ್ನು ನಗರಸಭೆ ಸದಸ್ಯರು ಶಾಸಕರಿಗೆ ಬಿಟ್ಟಿದ್ದು ಅವರು ಸೂಚಿಸುವವರು ಅಧ್ಯಕ್ಷರಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT