ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಬ್ಬಿ: ಹದ ಮಳೆಗೆ ಹೊನ್ನಾರು ಹೂಡಿದ ರೈತರು

Published 13 ಮೇ 2024, 5:01 IST
Last Updated 13 ಮೇ 2024, 5:01 IST
ಅಕ್ಷರ ಗಾತ್ರ

ಗುಬ್ಬಿ: ತಾಲ್ಲೂಕಿನಲ್ಲಿ ಕಳೆದ ಶುಕ್ರವಾರ ಸುರಿದ ಪೂರ್ವ ಮುಂಗಾರು ಮಳೆಗೆ ಕೃಷಿ ಚಟುವಟಿಕೆಗಳು ಗರಿಗೆದರಿವೆ.

ತೀವ್ರ ಬರ ಎದುರಿಸುತ್ತಿದ್ದ ತಾಲ್ಲೂಕಿನ ರೈತರಿಗೆ ಭರಣಿ ಮಳೆ ನಿಟ್ಟುಸಿರು ನೀಡಿದೆ. ‘ಭರಣಿ ಬಂದರೆ ಧರಣಿ ಹಸಿರು’ ಎಂಬ ಮಾತಿನಂತೆ ಮಳೆ ಬಂದ ತಕ್ಷಣ ಗ್ರಾಮೀಣ ಭಾಗದ ರೈತರು ಪೂರ್ವ ಮುಂಗಾರು ಬೆಳೆಗಳಾದ ಹೆಸರು, ಉದ್ದು, ಎಳ್ಳು, ಅಲಸಂದೆ, ಹರಳು, ತೊಗರಿ ಬಿತ್ತನೆಗೆ ಅಣಿಯಾಗುತ್ತಿದ್ದಾರೆ.

ಯುಗಾದಿ ನಂತರ ಬೀಳುವ ಮೊದಲ ಮಳೆಯಲ್ಲಿ ಹೊನ್ನಾರು ಹೂಡಿ ಕೃಷಿ ಚಟುವಟಿಕೆಗೆ ಚಾಲನೆ ನೀಡುವ ರೂಢಿ ಇದೆ. ಹದವಾದ ಮಳೆ ಬಿದ್ದ ನಂತರ

ನಿಟ್ಟೂರು ಸಮೀಪದ ಎನ್‌ ಪುರ ಗ್ರಾಮದಲ್ಲಿ ಭಾನುವಾರ ದೇವಾಲಯದ ಬಳಿ ದೇಸಿ ಎತ್ತು, ನೇಗಿಲು ಹಾಗೂ ನೊಗವನ್ನು ಪೂಜೆಮಾಡಿ ಗ್ರಾಮದ ಮುಖಂಡರ ಸಮ್ಮುಖದಲ್ಲಿ ಗ್ರಾಮದ ಸುತ್ತ ಹೊರವಲಯದಲ್ಲಿ ನೇಗಿಲು ಗೆರೆ ಹೊಡೆಯುವ ಮೂಲಕ ಕೃಷಿ ಚಟುವಟಿಕೆಗೆ ಚಾಲನೆ ನೀಡಲಾಯಿತು.

ಈ ಹಿಂದೆ ಹೊನ್ನಾರು ಹೂಡುವ ದಿನದಂದು ಎತ್ತು, ನೇಗಿಲು, ನೊಗಗಳನ್ನು ತೊಳೆದು ದೇವಾಲಯದ ಬಳಿ ಬಂದು ಪೂಜೆ ಸಲ್ಲಿಸಿ ನಂತರ ಗ್ರಾಮದ ಸುತ್ತ ನೇಗಿಲ ಗೆರೆ ಹೊಡೆದುಕೊಂಡು ಬರುವ ಸಂಪ್ರದಾಯ ರೂಢಿಯಲ್ಲಿತ್ತು. ಹಲವೆಡೆ ಮಂಗಳವಾದ್ಯಗಳ ಸಮೇತ ಹೊನ್ನಾರು ಹೂಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿತ್ತು. 

ಇತ್ತೀಚಿನ ದಿನಗಳಲ್ಲಿ ಉಳುಮೆ ಮಾಡಲು ದೇಸಿ ಎತ್ತುಗಳೆ ಇಲ್ಲವಾಗುತ್ತಿದ್ದು, ಅವುಗಳ ಬದಲಾಗಿ ಟ್ರ್ಯಾಕ್ಟರ್‌ಗಳನ್ನು ಪೂಜಿಸಿ ಹೊನ್ನಾರು ಹೂಡುವುದನ್ನು ರೂಢಿಸಿಕೊಂಡಿದ್ದಾರೆ.

ಗ್ರಾಮದಲ್ಲಿ ತಲೆತಲಾಂತರಗಳಿಂದ ರೂಡಿಸಿಕೊಂಡು ಬಂದಿರುವ ಹೊನ್ನಾರು ಪದ್ಧತಿಯನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಸಂಪ್ರದಾಯದಂತೆ ಎತ್ತುಗಳೊಂದಿಗೆ ನೇಗಿಲು, ನೊಗ ಪೂಜಿಸಿ ಹೊನ್ನಾರು ಹೂಡಲಾಗಿದೆ ಎನ್ನುತ್ತಾರೆ ಪ್ರಭುಶಂಕರ್.

‘ಹೊನ್ನಾರು ಪರಿಕಲ್ಪನೆ ಇಲ್ಲದ ನಾವು ಟ್ರ್ಯಾಕ್ಟರ್‌ನಿಂದಲೇ ಉಳಿಮೆ ಮಾಡುವುದಕ್ಕೆ ಹೊಂದಿಕೊಂಡಿದ್ದೇವೆ. ಆದರೆ ಪೂರ್ವಜರು ಉತ್ತಮ ಉದ್ದೇಶದಿಂದಲೇ ಹೊನ್ನಾರು ಪರಿಕಲ್ಪನೆಯನ್ನು ಪರಿಚಯಿಸಿದ್ದಾರೆ. ಹಿರಿಯರ ಸಂಪ್ರದಾಯ ಹಾಗೂ ನಂಬಿಕೆಯನ್ನು ಉಳಿಸಿಕೊಳ್ಳುವತ್ತ  ಗಮನಹರಿಸಬೇಕಾದ ಅಗತ್ಯವಿದೆ. ಇದರಿಂದ ಕೃಷಿ ಸಂಸ್ಕೃತಿಗೆ ಉತ್ತಮ ಆಯಾಮ ಒದಗಿಸಲು ಸಾಧ್ಯ’ ಎನ್ನುತ್ತಾರೆ ಯುವ ರೈತ ಅಶೋಕ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT