ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರುವೇಕೆರೆ: ಹೆಚ್ಚುತ್ತಲೇ ಇದೆ ಬೆಂಕಿ ಅವಘಡ

ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ನಷ್ಟ: ಅರಣ್ಯ ಪ್ರದೇಶ ನಾಶ
Published 4 ಜೂನ್ 2023, 23:34 IST
Last Updated 4 ಜೂನ್ 2023, 23:34 IST
ಅಕ್ಷರ ಗಾತ್ರ

ಪಾಂಡುರಂಗಯ್ಯ ಎ.ಹೊಸಹಳ‍್ಳಿ

ತುರುವೇಕೆರೆ: ತಾಲ್ಲೂಕಿನ ಹಲವೆಡೆ ಬೆಂಕಿ ದುರಂತದ ಪ್ರಕರಣಗಳು ಹೆಚ್ಚಾಗಿ ಅರಣ್ಯ ಪ್ರದೇಶ ಹಾಗೂ ರೈತರ ಆಸ್ತಿ ನಾಶವಾಗುತ್ತಿದೆ.

ಜನವರಿಯಿಂದ ಜೂನ್‌ವರೆಗೆ ಬೆಂಕಿಯ ಅನಾಹುತಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಭವಿಸುತ್ತವೆ. ನಗರ, ಪಟ್ಟಣಕ್ಕಿಂತ ಗ್ರಾಮೀಣ ಪ್ರದೇಶಗಳಲ್ಲಿ ಬೆಂಕಿಯ ಆಕಸ್ಮಿಕಗಳ ಪ್ರಮಾಣ ಹೆಚ್ಚು.

ಬೇಸಿಗೆ ಸಮಯದಲ್ಲಿ ತೋಟಸಾಲು, ಬಣವೆ ಹುಲ್ಲು, ಬೇಲಿ, ಕೊಪ್ಪಲು, ಬಿದಿರಿನ ಮೆಳೆ, ಸೀಗೆಮೆಳೆ, ಗುಡಿಸಲು, ಮನೆ ಮುಂಭಾಗದ ಶೆಡ್, ತೆಂಗಿನ ಕಾಯಿ ಗೋದಾಮು, ರಾಗಿ ತೆನೆ ಬಣವೆ, ಕೊಟ್ಟಿಗೆ ಹೀಗೆ ಹಲವು ರೀತಿಯ ಬೆಂಕಿ ಅವಘಡ ಸಂಭವಿಸಿವೆ.

ಕೆಲವು ವೇಳೆ ಸಿಡಿಲು ಬಡಿತ ಮತ್ತು ವಿದ್ಯುತ್ ಶಾರ್ಟ್‌ ಸರ್ಕೀಟ್‌ನಿಂದಾಗಿ ತೆಂಗು, ಅಡಿಕೆ ಜೊತೆಗೆ ಇನ್ನಿತರೆ ಮರಗಳಿಗೂ ಬೆಂಕಿ ಹತ್ತಿ ಉರಿದ ಉದಾಹರಣೆಗಳಿವೆ.

ಮನೆಗಳಲ್ಲಿ ಸೀಮೆ ಎಣ್ಣೆ ಸ್ಟೌವ್, ವಿದ್ಯುತ್ ಒಲೆ, ಅಡುಗೆ ಅನಿಲ ಸೋರಿಕೆ, ಮಳಿಗೆಗಳಲ್ಲಿ ಬಳಸಿದ ಜನರೇಟರ್ ಯಂತ್ರವನ್ನು ಕೂಲ್ ಮಾಡದೇ ಹಾಗೆಯೇ ಇಡುವುದು. ದೀಪಗಳನ್ನು ಆರಿಸದೆ ಹಾಗೆಯೇ ಅಂಗಡಿ ಮುಚ್ಚುವುದು ಹಾಗೂ ಯಂತ್ರಗಳ ಎಂಜಿನ್ ಸರಿಯಾಗಿ ಆಫ್ ಮಾಡದೆಯೂ ಬೆಂಕಿ ಹತ್ತಿಕೊಂಡ ನಿದರ್ಶನಗಳಿವೆ ಎನ್ನುತ್ತಾರೆ ಠಾಣಾಧಿಕಾರಿಗಳು.

ಸೇದಿ ಬಿಸಾಡಿದ ಬೀಡಿ ತುಂಡು ಹಾಗೂ ಅಸಂಪ್ರದಾಯಿಕ ನಂಬಿಕೆಗಳಿಂದಲೂ ಅರಣ್ಯ ಪ್ರದೇಶಕ್ಕೆ ಬೆಂಕಿ ಹಚ್ಚಲಾಗುತ್ತಿದೆ ಎನ್ನುವುದು ಅರಣ್ಯ ಸಿಬ್ಬಂದಿ ದೂರು.

‘ತಾಲ್ಲೂಕಿನಾದ್ಯಂತ ಅಗ್ನಿ ಶಮನ ಪ್ರಾತ್ಯಕ್ಷಿಕೆ ಸಹಿತ ಉಚಿತ ಉಪನ್ಯಾಸ ಮತ್ತು ಪ್ರದರ್ಶನವನ್ನು ನೀಡುತ್ತಾ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ’ ಎನ್ನುತ್ತಾರೆ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಎಸ್‍.ಎನ್.ಸತ್ಯಪ್ಪ ನಾಗನೂರಿ.

ಎಷ್ಟಿವೆ ಅವಘಡ: ತಾಲ್ಲೂಕಿನಲ್ಲಿ 2015ರಲ್ಲಿ 77, 2016ರಲ್ಲಿ 145, 2017ರಲ್ಲಿ 134, 2018ರಲ್ಲಿ 128, 2019ರಲ್ಲಿ 112 ಬೆಂಕಿ ದುರಂತ ಪ್ರಕರಣಗಳು ದಾಖಲಾಗಿವೆ. 2020-21ರಲ್ಲಿ ಬಣವೆಗೆ ಬೆಂಕಿ 38 ಪ್ರಕರಣ, ಅರಣ್ಯ 19, ವಾಹನ 4, ಮನೆ–ಗುಡಿಸಲು 11, ಮರಗಳು, 61 ಉಳಿದ ಅವಘಡಗಳು ದಾಖಲಾಗಿವೆ. 2022ರಲ್ಲಿ ಬಣವೆ 15, ಮನೆ ಗುಡಿಸಲು 8, ಅರಣ್ಯ 2, ವಾಹನ 2, ಕೈಗಾರಿಕೆ 3, ವಾಣಿಜ್ಯ, ಒಂದು ಬೆಂಕಿ ಅವಘಡ ಸಂಭವಿಸಿದೆ.

ನಷ್ಟವೆಷ್ಟು: ತಾಲ್ಲೂಕಿನಲ್ಲಿ ಅಗ್ನಿ ಅವಘಡಗಳಿಂದಾಗಿ 2015ರಲ್ಲಿ ₹42.37 ಲಕ್ಷ , 2016ರಲ್ಲಿ ₹81.57 ಲಕ್ಷ, 2017ರಲ್ಲಿ ₹96.72 ಲಕ್ಷ, 2018ರಲ್ಲಿ ₹2.27ಕೋಟಿ, 2019ರಲ್ಲಿ ₹1.23 ಕೋಟಿ, 2020ರಲ್ಲಿ ₹84.89 ಲಕ್ಷ ಹಾಗೂ 2021ರಲ್ಲಿ ₹62.30 ಲಕ್ಷ ಹಾಗೂ 2022ರಲ್ಲಿ ₹55.50 ಲಕ್ಷ ನಷ್ಟ ಉಂಟಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ತುರುವೇಕೆರೆ ತಾಲ್ಲೂಕಿನ ಕಣತೂರು ಮೇನಹಳ್ಳಿಯ ಮನೆವೊಂದಕ್ಕೆ ಬೆಂಕಿ ಬಿದ್ದು ತೆಂಗಿನ ಕಾಯಿ ಸುಟ್ಟಿರುವುದು
ತುರುವೇಕೆರೆ ತಾಲ್ಲೂಕಿನ ಕಣತೂರು ಮೇನಹಳ್ಳಿಯ ಮನೆವೊಂದಕ್ಕೆ ಬೆಂಕಿ ಬಿದ್ದು ತೆಂಗಿನ ಕಾಯಿ ಸುಟ್ಟಿರುವುದು
ಅಸ್ಲಾಂಪಾಷಾ
ಅಸ್ಲಾಂಪಾಷಾ
ಜಯರಾಮಯ್ಯ
ಜಯರಾಮಯ್ಯ
- ಶಾಸಕ ಎಂ.ಟಿ.ಕೃಷ್ಣಪ್ಪ
- ಶಾಸಕ ಎಂ.ಟಿ.ಕೃಷ್ಣಪ್ಪ

ಬೆಂಕಿ ಅವಘಡ ಸಂಭವಿಸಿದ ತಾಲ್ಲೂಕಿನ ರೈತರ ಆಸ್ತಿಪಾಸ್ತಿಗಳಿಗೆ ಕೆಲ ವರ್ಷಗಳಿಂದ ಪರಿಹಾರದ ಹಣ ಬಂದಿಲ್ಲ. ಈ ಬಗ್ಗೆ ಸರ್ಕಾರದ ಗಮನ ಸೆಳೆದು ಪರಿಹಾರದ ಹಣ ಕೊಡಿಸಲು ಯತ್ನಿಸಲಾಗುವುದು ಎಂ.ಟಿ.ಕೃಷ್ಣಪ್ಪ ಶಾಸಕ ತಾಲ್ಲೂಕಿನ ಬೆಟ್ಟ ಅರಣ್ಯ ಪ್ರದೇಶ ಹಾಗೂ ರೈತರ ಆಸ್ತಿ ಪಾಸ್ತಿಗಳಿಗೆ ಬೆಂಕಿ ಬೀಳುವ ಪ್ರಮಾಣ ತಪ್ಪಿಸಲು ಅಧಿಕಾರಿಗಳು ಜನಜಾಗೃತಿ ಮೂಡಿಸಬೇಕು. ಜಯರಾಮಯ್ಯ ಬಿ. ರೈತ ಹುಲ್ಲೇಕೆರೆ ಮೂರ್ನಾಲ್ಕು ವರ್ಷದಿಂದ ಬೆಂಕಿ ದುರಂತಕ್ಕೀಡಾದ ತಾಲ್ಲೂಕಿನ ರೈತರಿಗೆ ಈವರೆಗೆ ಪರಿಹಾರದ ಹಣ ಬರದೆ ತಾಲ್ಲೂಕು ಕಚೇರಿಗೆ ಎಡತಾಕುವಂತಾಗಿದೆ. ಅಧಿಕಾರಿಗಳು ನಷ್ಟಕ್ಕೀಡಾದ ರೈತರಿಗೆ ಹಣ ಕೊಡಿಸಬೇಕು. ಅಸ್ಲಾಂಪಾಷಾ ತಾಲ್ಲೂಕು ರೈತ ಸಂಘದ ಗೌರವಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT