ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ಹೂ ಪ್ರಪಂಚದಲ್ಲಿ ಮಿಂದೆದ್ದ ಜನರು

ತೋಟಗಾರಿಕೆ ಕಚೇರಿ ಆವರಣದಲ್ಲಿ ಫಲಪುಷ್ಪ ಪ್ರದರ್ಶನ, ನೋಡುಗರ ಕಣ್ಮನ ಸೆಳೆಯುತ್ತಿರುವ ವಿವಿಧ ಬಗೆಯ ಹೂ, ಹಣ್ಣುಗಳು
Last Updated 31 ಜನವರಿ 2020, 14:55 IST
ಅಕ್ಷರ ಗಾತ್ರ

ತುಮಕೂರು: ಎತ್ತಾ ಕಣ್ಣಾಯಿಸಿದರೂ ಕಣ್ಮನ ಸೆಳೆಯ ಬಣ್ಣ ಬಣ್ಣದ ಹೂಗಳ ರಾಶಿ, ತರಕಾರಿಗಳಿಂದ ಅಲಂಕೃತವಾಗಿ ಜೀವತಳೆದಂತೆ ಕಾಣುವ ಪ್ರಾಣಿ, ಪಕ್ಷಿಗಳು, ಲಕ್ಷಾಂತರ ಹೂಗಳಿಂದ ನಿರ್ಮಾಣಗೊಂಡ ಡಿಸ್ನಿ ಮನೆ, ಮರಳಿನಲ್ಲಿ ಅರಳಿದ ಸ್ವಾಮಿ ವಿವೇಕಾನಂದರ ಶಿಲ್ಪಾಕೃತಿ, ವಿವಿಧ ಜಾತಿಯ ಹಣ್ಣು, ತರಕಾರಿ, ಸಸ್ಯಗಳು.....

ಅಬ್ಬಾ! ಒಂದಾ ಎರಡಾ? ಇಂತಹ ನಯನ ಮನೋಹರವಾದ ದೃಶ್ಯಗಳನ್ನು ಕಣ್ತುಂಬಿಕೊಳ್ಳಬೇಕಾದರೆ ನೀವು ನಗರದ ಎಸ್‌.ಎಸ್‌.ಪುರಂನ ತೋಟಗಾರಿಕೆ ಇಲಾಖೆಯ ಆವರಣಕ್ಕೆ ಹೆಜ್ಜೆಯಿಡಲೇಬೇಕು. ತೋಟಗಾರಿಕೆ ಇಲಾಖೆಯು ಜಿಲ್ಲಾ ಪಂಚಾಯಿತಿ, ಜಿಲ್ಲಾ ತೋಟಗಾರಿಕೆ ಸಂಘ ಹಾಗೂ ಕೃಷಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿರುವ ಮೂರು ದಿನಗಳ ಫಲಪುಷ್ಪ ಪ್ರದರ್ಶನ ಶುಕ್ರವಾರ ಆರಂಭವಾಗಿದ್ದು, ನೋಡುಗರನ್ನು ಹೊಸ ಲೋಕಕ್ಕೆ ಕೊಂಡೊಯುತ್ತಿದೆ.

ಈ ಬಾರಿ ಫಲಪುಷ್ಪ ಪ್ರದರ್ಶನದಲ್ಲಿ ಡಿಸ್ನಿ ಮನೆ ಎಲ್ಲರ ಕೇಂದ್ರಬಿಂದುವಾಗಿದೆ. ಸುಮಾರು 2 ಲಕ್ಷ ಹೂಗಳಿಂದ ನಿರ್ಮಿಸಿರುವ ಈ ಮನೆ ನೋಡುವುದೇ ಒಂದು ರೀತಿಯ ಸೊಗಸು. ಇನ್ನೂ ಮಕ್ಕಳನ್ನು ಆಕರ್ಷಿಸುವ ಸಲುವಾಗಿ 1 ಲಕ್ಷ ಬಗೆ ಬಗೆಯ ಹೂಗಳಿಂದ ನಿರ್ಮಿಸಿರುವ ಮಿಕ್ಕಿಮೌಸ್, ಡೊನಾಲ್ಡ್‌ಡಕ್, ಜಿರಾಫೆ, ಆನೆ, ನವಿಲು, ಬಾತುಕೋಳಿ, ಮೋಟುಪತ್ಲು, ಚೋಟಾಭೀಮ್ ಚಿಕ್ಕವರನ್ನು ಮಾತ್ರವಲ್ಲದೇ ಎಲ್ಲಾ ವರ್ಗದ ಜನರನ್ನೂ ಆಕರ್ಷಿಸುತ್ತಿವೆ.

ವಿವಿಧ ಹಣ್ಣು, ತರಕಾರಿ ಕೆತ್ತನೆಗಳು ಸಹ ನೋಡುಗರಿಗೆ ಇಷ್ಟವಾಗುತ್ತಿವೆ. ಜತೆಗೆ ವೈವಿಧ್ಯಮಯ ತೋಟಗಾರಿಕೆ ಉತ್ಪನ್ನಗಳನ್ನು ಬೆಳೆಗಳು ಗಮನ ಸೆಳೆಯುತ್ತಿವೆ. ಪಾಲಿಹೌಸ್, ಕೃಷಿ ಅರಣ್ಯ, ತೋಟಗಾರಿಕೆ, ರೇಷ್ಮೆ ಕೃಷಿ, ಪಶುಸಂಗೋಪನೆ, ಸಂರಕ್ಷಿತ ಬೇಸಾಯ, ಕಾಂಪೋಸ್ ತಯಾರಿ, ಮಳೆನೀರು ಕೊಯ್ಲು, ಸಮಗ್ರ ಬೇಸಾಯ ಪದ್ದತಿ, ಜಲಾನಯನ ಪದ್ದತಿ, ಆದಾಯ ದ್ವಿಗುಣದ ಬಗ್ಗೆ ರೈತರಿಗೆ ಉಪಯುಕ್ತ ಮಾಹಿತಿ ಇಲ್ಲಿ ಸಿಗುತ್ತಿದೆ. ತೋಟಗಾರಿಕೆ ವಿಶ್ವವಿದ್ಯಾನಿಲಯಗಳ ವಿಜ್ಞಾನಿಗಳು ರೈತರಿಗೆ ಉಪಯುಕ್ತ ಮಾಹಿತಿ, ತರಬೇತಿ ನೀಡುತ್ತಿದ್ದಾರೆ.

ಇನ್ನೂ ಪ್ರದರ್ಶನದಲ್ಲಿ 120 ವಿವಿಧ ಬಗೆಯ ಮಳಿಗೆಗಳನ್ನು ತೆರೆಯಲಾಗಿದೆ. ಫಲಪುಷ್ಪ ಪ್ರದರ್ಶನ ವೀಕ್ಷಿಸಿ ದಣಿಯುವವರಿಗೆ ತಂಪು ಪಾನೀಯಗಳು, ತಿಂಡಿ, ತಿನಿಸುಗಳು ಇಲ್ಲಿ ಲಭ್ಯವಿದೆ. ಲಾಲ್‌ಬಾಗ್‌ ಹಾಗೂ ಮೈಸೂರಿನಲ್ಲಿ ಗಮನ ಸೆಳೆಯುವ ಆಕೃತಿಗಳನ್ನು ರಚಿಸುವ ಸನಿಲೂ ಪ್ಲವರ್ಸ್ ಸಂಸ್ಥೆಯ 50 ಜನರ ತಂಡ ವಿವಿಧ ಬಗೆಯ ಆಕೃತಿಗಳನ್ನು ರಚಿಸಿದ್ದಾರೆ.

ಉದ್ಘಾಟನೆ: ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಶುಭಾ ಕಲ್ಯಾಣ್, ಶಾಸಕ ಜ್ಯೋತಿಗಣೇಶ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾರವಿಕುಮಾರ್, ತೋಟಗಾರಿಕೆ ಇಲಾಖೆಯ ಉಪನಿರ್ದೆಶಕ ಬಿ.ರಘು, ರಾಜ್ಯ ವಲಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೆಶಕಿ ರೂಪಾ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT