ಬುಧವಾರ, ಜನವರಿ 29, 2020
24 °C
ತುಮಕೂರು ಗ್ರಾಮಾಂತರ ಜೆಡಿಎಸ್ ಕಾರ್ಯಕರ್ತರ ಆರೋಪ; ಅಧಿಕಾರಿಗಳ ವಿರುದ್ಧ ಆಕ್ರೋಶ

ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ವಿಫಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಅರಣ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ಜನರು ಚಿರತೆ ದಾಳಿಗೆ ಬಲಿಯಾಗುತ್ತಿದ್ದಾರೆ ಎಂದು ಆರೋಪಿಸಿ ಶಾಸಕ ಗೌರಿಶಂಕರ್ ನೇತೃತ್ವದಲ್ಲಿ ಜೆಡಿಎಸ್‌ನ  ಕಾರ್ಯಕರ್ತರು ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.

ತುಮಕೂರು ಗ್ರಾಮಾಂತರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಚಿರತೆ ಹಾವಳಿ ಮಿತಿ ಮೀರಿದೆ. ಆದರೂ ಅರಣ್ಯಾಧಿಕಾರಿಗಳು ಚಿರತೆ ಸೆರೆ ಹಿಡಿಯಲು ಯಾವುದೇ ಕ್ರಮವಹಿಸಿಲ್ಲ ಎಂದು ಪ್ರತಿಭಟನಾಕಾರರು ಅರಣ್ಯಾಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಗೌರಿಶಂಕರ್, ‘ಕಳೆದ ವರ್ಷ ಅಕ್ಟೋಬರ್‌ನಲ್ಲಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬನ್ನಿಕುಪ್ಪೆಯಲ್ಲಿ ಚಿರತೆ ವೃದ್ಧೆಯ ಮೇಲೆ ದಾಳಿ ಮಾಡಿ ಸಾಯಿಸಿತ್ತು. ಆಗಲೇ ಅರಣ್ಯಾಧಿಕಾರಿಗಳಿಗೆ ಚಿರತೆ ಹಿಡಿಯಲು ಕ್ರಮವಹಿಸುವಂತೆ ಮನವಿ ಮಾಡಿದ್ದರೂ ನಿರ್ಲಕ್ಷ್ಯವಹಿಸಿದ್ದರಿಂದ ಇಲ್ಲಿಯವರೆಗೆ ಮೂವರು ಸಾವನ್ನಪ್ಪುವಂತೆ ಆಗಿದೆ’ ಎಂದು ಆರೋಪಿಸಿದರು.

ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ ಚಿರತೆ ಹಾವಳಿಯಿಂದ ಮಕ್ಕಳು ಶಾಲೆಗಳಿಗೆ ಹೋಗಲು, ಗ್ರಾಮಸ್ಥರು ತೋಟಗಳಿಗೆ ಹೋಗಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ. ಅರಣ್ಯಾಧಿಕಾರಿಗಳು ಜನರ ನೆಮ್ಮದಿ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್‍ರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಚಿರತೆ ಸೆರೆಹಿಡಿಯಲು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ತಾಲ್ಲೂಕಿನಲ್ಲಿ 15ಕ್ಕೂ ಹೆಚ್ಚು ಚಿರತೆಗಳು ಓಡಾಡುತ್ತಿದ್ದು, ಅವುಗಳನ್ನು ಹಿಡಿಯಲು ಇಲಾಖೆಯಲ್ಲಿ ಬೋನುಗಳಿಲ್ಲ. ಅರಣ್ಯಾಧಿಕಾರಿಗಳು ಚಿರತೆಗಳ ಸಮಸ್ಯೆ ಇಲ್ಲದ ಸ್ಥಳಗಳಿಂದ ಬೋನುಗಳನ್ನು ತರಿಸಿ, ಚಿರತೆಗಳನ್ನು ಹಿಡಿಯಲು ಕ್ರಮವಹಿಸಬೇಕು. 15 ದಿನಗಳ ಒಳಗೆ ಚಿರತೆ ಹಾವಳಿ ನಿಯಂತ್ರಿಸದೇ ಇದ್ದರೆ ಜನರೇ ಅಧಿಕಾರಿಗಳ ವಿರುದ್ಧ ಕಾನೂನು ಕೈಗೆತ್ತಿಕೊಳ್ಳಲಿದ್ದಾರೆ ಎಂದು ಎಚ್ಚರಿಸಿದರು.

ಡಿಎಫ್‌ಒ ಗಿರೀಶ್ ಮಾತನಾಡಿ, ‘ಚಿರತೆ ದಾಳಿಯ ಬಗ್ಗೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಪಡೆದು ಕಾರ್ಯಾಚರಣೆ ನಡೆಸಲಾಗುವುದು. ಈಗಾಗಲೇ ಚಿರತೆ ದಾಳಿಯಾದ ಕಡೆ ಕ್ಯಾಮೆರಾ ಟ್ರ್ಯಾಪ್ ಅಳವಡಿಸಲಾಗಿದ್ದು, ಜನರು ಓಡಾಡಬೇಕಾದರೆ ಎಚ್ಚರಿಕೆ ವಹಿಸಬೇಕು’ ಎಂದರು.

ಉಪವಿಭಾಗಾಧಿಕಾರಿ ಶಿವಕುಮಾರ್ ಪ್ರತಿಭಟನಕಾರರಿಂದ ಮನವಿ ಪತ್ರ ಸ್ವೀಕರಿಸಿದರು. ಈ ವೇಳೆ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಹಾಲನೂರು ಅನಂತಕುಮಾರ್, ಯುವಘಟಕದ ಅಧ್ಯಕ್ಷ ಹಿರೇಹಳ್ಳಿ ಮಹೇಶ್, ಗೂಳೂರು ಹೋಬಳಿ ಜೆಡಿಎಸ್ ಅಧ್ಯಕ್ಷ ಪಾಲನೇತ್ರಯ್ಯ, ಪ್ರಮುಖರಾದ ಕೆಂಪ ಹನುಮಣ್ಣ, ಕೋಡಿಮುದ್ದನಹಳ್ಳಿ ಪ್ರಕಾಶ್, ಎಂ.ಆರ್.ಮಂಜುನಾಥ್, ಸಿರಿವರ ಬೋರೇಗೌಡ, ಮಸ್ಕಲ್ ಅಶ್ವತ್ಥನಾರಾಯಣ, ಕಾಮೇಗೌಡ, ಗೌರಮ್ಮ, ಶಾಂತಾ ಸುರೇಶ್, ಎಂ.ಎನ್.ಗೌಡ, ನಾಗರತ್ನಮ್ಮ, ಸತ್ಯವತಿ ಸುರೇಶ್, ಪುಷ್ಪಾ ಕರೇರಂಗಯ್ಯ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು