ತುಮಕೂರು: ಜಲ ಜೀವನ್ ಮಿಷನ್ (ಜೆಜೆಎಂ) ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.
ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ (ದಿಶಾ) ಸಭೆಯಲ್ಲಿ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತನಿಖೆಗೆ ಆದೇಶಿಸಿದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹಾಗೂ ಜಲಶಕ್ತಿ ಇಲಾಖೆಯ ಇಬ್ಬರು ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ. 15 ದಿನಗಳಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಸಚಿವರು ಸೂಚಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಮನೆಗೆ ನಲ್ಲಿ ಮೂಲಕ ನೀರು ಒದಗಿಸುವ ಜೆಜೆಎಂ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನದಲ್ಲಿ ಕಳಪೆ ಕಾಮಗಾರಿ, ಅವ್ಯವಹಾರ ನಡೆದಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದಿವೆ. ಈಗ ರಚಿಸಿರುವ ತಂಡ ಪ್ರತಿ ತಾಲ್ಲೂಕಿಗೆ ಭೇಟಿನೀಡಿ ಕಾಮಗಾರಿ ಪರಿಶೀಲನೆ ನಡೆಸಬೇಕು. ಯೋಜನೆಯಲ್ಲಿ ಏನೆಲ್ಲ ನಡೆದಿದೆ ಎಂಬ ಬಗ್ಗೆ ಅಧ್ಯಯನ ನಡೆಸಿ ಸಮಗ್ರ ವರದಿ ಸಲ್ಲಿಸುವಂತೆ ನಿರ್ದೇಶಿಸಿದರು.
ಇದಕ್ಕೂ ಮುನ್ನ ಶಾಸಕ ಬಿ.ಸುರೇಶ್‌ಗೌಡ ವಿಷಯ ಪ್ರಸ್ತಾಪಿಸಿ, ತನಿಖೆಗೆ ಪಟ್ಟು ಹಿಡಿದರು. ಜೆಜೆಎಂ ಯೋಜನೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಪತ್ರಿಕೆಯಲ್ಲಿ ಸರಣಿ ವರದಿಗಳು ಬಂದಿವೆ. ಕಳಪೆ ಕಾಮಗಾರಿ ಮಾಡಲಾಗಿದೆ. ಕೆಲವು ಕಡೆಗಳಲ್ಲಿ ಕೆಲಸ ಮಾಡದೆ ಬಿಲ್ ಪಾವತಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಧ್ವನಿಗೂಡಿಸಿದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ‘ಜೆಜೆಎಂಗೆ ಹಣ ಬಂದಿದ್ದರೂ ಸರಿಯಾಗಿ ಬಳಕೆಯಾಗುತ್ತಿಲ್ಲ. ಅಕ್ರಮದ ಆರೋಪಗಳು ಕೇಳಿ ಬಂದಿವೆ. ಶಿರಾ ತಾಲ್ಲೂಕಿನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪೂರ್ಣಗೊಂಡಿದ್ದರೂ ಒಂದೂ ಕೆಲಸ ಮಾಡುತ್ತಿಲ್ಲ’ ಎಂದು ಹೇಳಿದರು. ಸುರೇಶ್‌ಗೌಡ ಸಹ ಗ್ರಾಮಾಂತರ ಕ್ಷೇತ್ರದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸ್ಥಿತಿಗತಿ ಬಿಚ್ಚಿಟ್ಟರು.
‘ಜೆಜೆಎಂ ಅಕ್ರಮದ ಬಗ್ಗೆ ರಾಜ್ಯದ ಒಂದು ತಂಡ ಈಗಾಗಲೇ ತನಿಖೆ ನಡೆಸಿ ವರದಿ ಕೊಟ್ಟಿದೆ. ಈ ವರದಿ ಹೊರ ಬಂದರೆ ಸಾಕಷ್ಟು ಅಧಿಕಾರಿಗಳು ಕೆಲಸ ಕಳೆದುಕೊಳ್ಳುತ್ತಾರೆ. ಹಾಗಾಗಿ ಈ ವರದಿ ಹೊರಗೆ ಬರದಂತೆ ನೋಡಿಕೊಳ್ಳುತ್ತಿದ್ದಾರೆ’ ಎಂದು ಜಯಚಂದ್ರ ಹೇಳಿದರು.
ಶಾಸಕರ ಮಾತಿಗೆ ಸ್ಪಂದಿಸಿದ ಸೋಮಣ್ಣ ಅವರು ಜೆಜೆಎಂ ಜತೆಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನೂ ತನಿಖೆ ವ್ಯಾಪ್ತಿಗೆ ಸೇರಿಸಿದರು.
ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಇತರೆ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಸೋಮಣ್ಣ, ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸರಿಪಡಿಸಿಕೊಂಡು, ಜನರಿಗೆ ತೊಂದರೆಯಾಗದಂತೆ ಕೆಲಸ ನಿರ್ವಹಿಸುವಂತೆ ನಿರ್ದೇಶಿಸಿದರು.
ಬೆಳೆ ವಿಮೆ: ಬೆಳೆ ವಿಮೆ ಮಾಡಿಸಲು ಕನಿಷ್ಠ 15 ದಿನಗಳ ಕಾಲಾವಕಾಶ ನೀಡಬೇಕು. ಕನಿಷ್ಠ ಬೆಂಬಲ ಬೆಲೆಯನ್ನು ವೈಜ್ಞಾನಿಕವಾಗಿ ಪರಿಷ್ಕರಿಸಿ, ಹೆಚ್ಚಳ ಮಾಡಬೇಕು ಎಂದು ಟಿ.ಬಿ.ಜಯಚಂದ್ರ ಸಲಹೆ ಮಾಡಿದರು.
ಸಂಸದ ಡಾ.ಸಿ.ಎನ್.ಮಂಜುನಾಥ್, ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ ಸಿಇಒ ಜಿ.ಪ್ರಭು, ಎಸ್ಪಿ ಕೆ.ವಿ.ಅಶೋಕ್ ಉಪಸ್ಥಿತರಿದ್ದರು.
ಮೀನುಗಾರಿಕೆ ಕೆರೆ ಗುತ್ತಿಗೆ ರದ್ದು
ತುಮಕೂರು: ಈಗಾಗಲೇ ಮೀನುಗಾರಿಕೆಗೆ ನೀಡಿರುವ ಗುತ್ತಿಗೆಯನ್ನು ರದ್ದುಪಡಿಸಿ ಅದರ ಹೊಣೆಯನ್ನು ಗ್ರಾಮ ಪಂಚಾಯಿತಿಗೆ ವಹಿಸುವಂತೆ ಕೇಂದ್ರ ಸಚಿವ ವಿ.ಸೋಮಣ್ಣ ಸೂಚಿಸಿದರು. ಮೀನು ಉತ್ಪಾದಕರ ಸಂಘಗಳನ್ನು ರಚಿಸಿಕೊಂಡು ಮಾಫಿಯಾ ಮಾಡಿಕೊಂಡು ಕೆರೆಗಳನ್ನು ಅತ್ಯಂತ ಕಡಿಮೆ ಮೊತ್ತಕ್ಕೆ ಗುತ್ತಿಗೆ ಪಡೆದುಕೊಳ್ಳುತ್ತಿದ್ದಾರೆ.
ಸಂಘದ ಮೂಲಕ ಕಡಿಮೆ ಮೊತ್ತಕ್ಕೆ ಗುತ್ತಿಗೆ ಪಡೆದುಕೊಂಡು ನಂತರ ಬೇರೆಯವರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿಕೊಳ್ಳುವ ದಂಧೆ ನಡೆದಿದೆ. ಇಂತಹ ಗುತ್ತಿಗೆ ರದ್ದುಪಡಿಸಿ ಗ್ರಾ.ಪಂಗೆ ವಹಿಸಬೇಕು ಎಂದು ಹೇಳಿದರು. ಶಾಸಕರಾದ ಬಿ.ಸುರೇಶ್‌ಗೌಡ ಎಂ.ಟಿ.ಕೃಷ್ಣಪ್ಪ ಟಿ.ಬಿ.ಜಯಚಂದ್ರ ವಿಷಯ ಪ್ರಸ್ತಾಪಿಸಿದರು. ಕೋಟ್ಯಂತರ ರೂಪಾಯಿಗೆ ಗುತ್ತಿಗೆ ನೀಡಬೇಕಾದ ಕೆರೆಯನ್ನು ಕೆಲವೇ ಕೆಲವು ಲಕ್ಷಕ್ಕೆ ನೀಡಲಾಗಿದೆ ಎಂದು ಆಕ್ಷೇಪಿಸಿದರು.
ಅರಣ್ಯ ಇಲಾಖೆಗೆ ಬಿಸಿ
ಅರಣ್ಯ ಇಲಾಖೆಯ ಕಾರ್ಯವೈಖರಿಗೆ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿ ಸಭೆಯಲ್ಲಿ ಎಚ್ಚರಿಸಿದರೂ ಅರಣ್ಯ ಇಲಾಖೆ ಅಧಿಕಾರಿಗಳು ತಮ್ಮ ಕಾರ್ಯವೈಖರಿ ಬದಲಿಸಿಕೊಳ್ಳುತ್ತಿಲ್ಲ ಎಂದು ಕುಟುಕಿದರು. ಶಿರಾ ತಾಲ್ಲೂಕು ಮುದುಗೆರೆ ಕಾವಲ್ ಮೀಸಲು ಅರಣ್ಯ ನಿರ್ಲಕ್ಷ್ಯಿಸಿರುವುದಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮಾ ಅವರನ್ನು ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ತರಾಟೆಗೆ ತೆಗೆದುಕೊಂಡರು.
ಅರಣ್ಯ ಪ್ರದೇಶವನ್ನು ಅಭಿವೃದ್ಧಿಪಡಿಸಿಲ್ಲ. ಕಾರೆ ಗಿಡ ಮುಳ್ಳು ಗಿಡ ನೀಲಗಿರಿ ಹೊರತುಪಡಿಸಿದರೆ ಇತರೆ ಮರಗಳೇ ಕಾಣುತ್ತಿಲ್ಲ. ಬೇರೆ ಮರ ಬೆಳೆಸಿಲ್ಲ. ಅಧಿಕಾರಿಯಾಗಿ ಒಂದು ದಿನವೂ ಅಲ್ಲಿಗೆ ಭೇಟಿ ನೀಡಿಲ್ಲ. ಎಲ್ಲದಕ್ಕೂ ಒಂದು ಕಾರಣ ಹೇಳುತ್ತೀರಿ. ಕಚೇರಿಯಲ್ಲಿ ಕುಳಿತು ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಈ ಬಗ್ಗೆ ಕ್ರಮ ವಹಿಸುವಂತೆ ಸೋಮಣ್ಣ ನಿರ್ದೇಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.