ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳೆಗೆ ₹ 2.36 ಲಕ್ಷ ವಂಚನೆ

Published 10 ಜನವರಿ 2024, 8:02 IST
Last Updated 10 ಜನವರಿ 2024, 8:02 IST
ಅಕ್ಷರ ಗಾತ್ರ

ತುಮಕೂರು: ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ನಗರದ ಮಹಿಳೆಯೊಬ್ಬರು ಪಾರ್ಟ್‌ ಟೈಮ್‌ ಕೆಲಸದ ಆಸೆಗೆ ಬಿದ್ದು ₹2.36 ಲಕ್ಷ ಕಳೆದುಕೊಂಡಿದ್ದಾರೆ.

ನಗರದ ಕ್ಯಾತ್ಸಂದ್ರದ ನಿವಾಸಿಯಾದ ಮಹಿಳೆ ಕಳೆದ ಕೆಲವು ದಿನಗಳಿಂದ ‘ವರ್ಕ್‌ ಫ್ರಮ್‌ ಹೋಮ್‌’ನಲ್ಲಿ ಕೆಲಸ ಮಾಡುತ್ತಿದ್ದರು. ಡಿ. 12ರಂದು ಟೆಲಿಗ್ರಾಂ ಮೂಲಕ ರಜಿತಾ ಸತೀಶ್‌ ಎಂಬ ಹೆಸರಿನಿಂದ ಪರಿಚಯಿಸಿಕೊಂಡ ಸೈಬರ್‌ ವಂಚಕರು, ಪಾರ್ಟ್‌ ಟೈಮ್‌ ಕೆಲಸ ಕೊಡಿಸುವುದಾಗಿ ನಂಬಿಸಿದ್ದಾರೆ. ನಂತರ ಲಿಂಕ್‌ ಕಳುಹಿಸಿ ಕಂಪನಿಗೆ ಸಂಬಂಧಿಸಿದಂತೆ ರೇಟಿಂಗ್‌ ನೀಡುವಂತೆ ತಿಳಿಸಿದ್ದಾರೆ. ಅದರಂತೆ ರೇಟಿಂಗ್‌ ನೀಡಿದ್ದಕ್ಕೆ ಡಿ. 18ರಂದು ಮಹಿಳೆಯ ಖಾತೆಗೆ ₹889 ವರ್ಗಾವಣೆ ಮಾಡಿದ್ದಾರೆ.

ಕೆಲಸ ಮುಂದುವರಿಸಲು ₹10 ಸಾವಿರ ಹೂಡಿಕೆ ಮಾಡುವಂತೆ ಹೇಳಿದ್ದಾರೆ. ಹಣ ವರ್ಗಾವಣೆ ಮಾಡಿದ ನಂತರ ₹17,200 ಮಹಿಳೆಯ ಖಾತೆಗೆ ವಾಪಸ್‌ ಹಾಕಿದ್ದಾರೆ. ಮತ್ತೊಮ್ಮೆ ₹10 ಸಾವಿರ ಪಡೆದು, ₹20 ಸಾವಿರ ವಾಪಸ್‌ ನೀಡಿದ್ದರು.

ಹೆಚ್ಚಿನ ಹಣ ಹೂಡಿಕೆ ಮಾಡಿದರೆ ಮತ್ತಷ್ಟು ಲಾಭ ಗಳಿಸಬಹುದು ಎಂದು ತಿಳಿಸಿದ್ದಾರೆ. ಇದನ್ನು ನಂಬಿದ ಮಹಿಳೆ ಹಂತ ಹಂತವಾಗಿ ₹2,52,603 ಹಣವನ್ನು ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ. ಇದರಲ್ಲಿ ಅವರಿಗೆ ₹17,971 ಮಾತ್ರ ವಾಪಸ್‌ ನೀಡಲಾಗಿದೆ. ಡಿ. 21ರಂದು ಮತ್ತೆ ₹4.81 ಲಕ್ಷ ಹೂಡಿಕೆ ಮಾಡುವಂತೆ ಸೈಬರ್‌ ಕಳ್ಳರು ಒತ್ತಾಯಿಸಿದ್ದಾರೆ. ಇದರಿಂದ ಅನುಮಾನ ಬಂದು ಹಣ ವರ್ಗಾವಣೆ ಮಾಡಿಲ್ಲ. ಸೈಬರ್‌ ಕಳ್ಳರನ್ನು ಪತ್ತೆ ಹಚ್ಚಿ ಹಣ ವಾಪಸ್‌ ಕೊಡಿಸುವಂತೆ ಮಹಿಳೆಯು ಕ್ಯಾತ್ಸಂದ್ರ ಠಾಣೆಗೆ ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT