ವೈ.ಎನ್.ಹೊಸಕೋಟೆ: ಅಲೆಮಾರಿ ಜೀವನ ತೊರೆದು ಸ್ಥಿರ ಜೀವನಕ್ಕೆ ತೆರಳಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌದರಿ ಹೇಳಿದರು.
ಗ್ರಾಮದ ಹೊರವಲಯದಲ್ಲಿ ವಾಸಿಸುತ್ತಿರುವ ಅಲೆಮಾರಿ ಸಮುದಾಯ ಸುಡುಗಾಡು ಸಿದ್ದ ಜನಾಂಗದ ಕಾಲೊನಿಗೆ ಮಂಗಳವಾರ ಭೇಟಿ ನೀಡಿ ಸಮುದಾಯದ ಮಾಹಿತಿ ಪಡೆದು ಮಾತನಾಡಿದರು.
ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಬಿಕ್ಷಾಟನೆ ಇನ್ನಿತರೆ ಚಟುವಟಿಕೆಗಳನ್ನು ಈ ತಲೆಮಾರಿಗೆ ನಿಲ್ಲಿಸಿ ಸ್ವಾಭಿಮಾನದಿಂದ ಬದುಕಲು ಕಲಿಯಬೇಕು. ಅಲೆಮಾರಿ ನಿಗಮದಿಂದ ಹಲವು ಸೌಲಭ್ಯಗಳು ದೊರೆಯುತ್ತಿದ್ದು, ಅವುಗಳ ಪಡೆದುಕೊಂಡು ವ್ಯಾಪಾರ ಕುಶಲ ವೃತ್ತಿಗಳನ್ನು ಬೆಳೆಸಿಕೊಂಡು ಆರ್ಥಿಕ ಪ್ರಗತಿ ಹೊಂದಬೇಕು ಎಂದರು.
ಸುಡುಗಾಡು ಸಿದ್ದ ಸಮುದಾಯವರು ಅಧ್ಯಕ್ಷರಿಗೆ ಆರತಿ ಬೆಳಗಿ, ಪುಷ್ಪವೆರಚಿ ಸಾಂಪ್ರದಾಯಿಕ ಸ್ವಾಗತ ಕೋರಿದರು. ಜೊತೆಗೆ ತಮ್ಮ ಕುಲವಿದ್ಯೆಯ ಜಾದೂವನ್ನು ಪ್ರದರ್ಶಿಸಿ ರಂಜಿಸಿದರು.
ಮೂಲ ಸೌಕರ್ಯಗಳೊಂದಿಗೆ ಕೌಶಲ ತರಬೇತಿ, ಆರ್ಥಿಕ ಸಬಲೀಕರಣ ಸವಲತ್ತು, ವಸತಿ ವ್ಯವಸ್ಥೆ ಒದಗಿಸಿಕೊಡುವಂತೆ ಸಲ್ಲಿಸಿದ ಮನವಿಗೆ ಉತ್ತರಿಸಿದ ಅಧ್ಯಕ್ಷರು ಶೌಚಾಲಯ ಮತ್ತು ನೀರಿನ ಸಮಸ್ಯೆಯನ್ನು ಶೀಘ್ರ ಪರಿಹರಿಸುವಂತೆ ತಹಶೀಲ್ದಾರ್, ಪಿಡಿಒ ಅವರಿಗೆ ಸೂಚಿಸಿದರು.
ದೊಡ್ಡಹಳ್ಳಿಯ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗೆ ಬೇಟಿ ನೀಡಿದ ಅವರು, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಸಮಸ್ಯೆಗಳನ್ನು ಆಲಿಸಿ ಶಾಲೆಯಲ್ಲಿ ಕೊರತೆ ಇರುವ ಶಿಕ್ಷಕರ ನೇಮಕ, ಕಂಪ್ಯೂಟರ್ ಕಲಿಕೆ, ಆಟೋಟ ಸಮಯ ಮೀಸಲು ಹಾಗೂ ಪ್ರೋತ್ಸಾಹ ನೀಡುವಂತೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ ಅವರಿಗೆ ತಿಳಿಸಿದರು.