ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಯಿಬಾಬಾ ಮಂದಿರದಲ್ಲಿ ಗುರುಪೂರ್ಣಿಮೆ ವೈಭವ

ಬೆಳಿಗ್ಗೆಯಿಂದಲೇ ಭಕ್ತರಿಗೆ ದರ್ಶನಕ್ಕೆ ಅವಕಾಶ, ಸಾವಿರಾರು ಭಕ್ತರಿಗೆ ಪ್ರಸಾದ ವ್ಯವಸ್ಥೆ , ವಾಹನ ನಿಲುಗಡೆಗೂ ಸ್ಥಳ
Last Updated 15 ಜುಲೈ 2019, 19:45 IST
ಅಕ್ಷರ ಗಾತ್ರ

ತುಮಕೂರು: ನಗರದ ಬೆಳಗುಂಬ ರಸ್ತೆಯ ಹತ್ತಿರದ ಶಿರಡಿ ಸಾಯಿಬಾಬಾ ನಗರದ ಸಾಯಿಬಾಬಾ ಮಂದಿರ ಟ್ರಸ್ಟ್‌ನ ಸಾಯಿ ಬಾಬಾ ಮಂದಿರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಗುರುಪೂರ್ಣಿಮೆಯನ್ನು ವೈಭವದಿಂದ ಆಚರಣೆ ಮಾಡಲಾಗುತ್ತಿದೆ.

ಗುರುಪೂರ್ಣಿಮೆಗೂ ಮುನ್ನ ಮೂರು ದಿನ ಮುಂಚಿತವಾಗಿಯೇ ಸಿದ್ಧತೆ ಮಾಡಿದ್ದು, ಮಂದಿರವು ವಿವಿಧ ಪುಷ್ಪ, ವಿದ್ಯುತ್‌ ದೀಪಗಳಿಂದ ಕಂಗೊಳಿಸುತ್ತಿದೆ. ಮಂಗಳವಾರ (ಜುಲೈ 16) ನಡೆಯುವ ಗುರುಪೂರ್ಣಿಮೆ ಆಚರಣೆ ಪ್ರಯುಕ್ತ ವಿವಿಧ ಪೂಜೆ. ಅಭಿಷೇಕ, ಭಜನೆ, ಪ್ರಸಾದ ಸೇರಿದಂತೆ ಸಕಲ ವ್ಯವಸ್ಥೆ ಮಾಡಲಾಗಿದೆ.

ಶಿರಡಿ ಸಾಯಿಬಾಬಾ ಮಂದಿರ ಟ್ರಸ್ಟ್ ನಿರ್ಮಿಸಿದ ಸಾಯಿಬಾಬಾಬಾ ಮಂದಿರ ಭಕ್ತರ ಆರಾಧನೆಯ ಕೇಂದ್ರವಾಗಿದೆ. ಪ್ರತಿ ಗುರುವಾರ, ಗುರುಪೂರ್ಣಿಮೆ, ಹಬ್ಬದ ದಿನಗಳಲ್ಲಿ ಸಾವಿರಾರು ಭಕ್ತರು ಈ ಮಂದಿರಕ್ಕೆ ಬಂದು ಶಿರಡಿ ಸಾಯಿಬಾಬಾ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿ ಕೃತಾರ್ಥ ಭಾವನೆ ಹೊಂದುತ್ತಾರೆ. ಮಂದಿರಕ್ಕೆ ಬರುವ ಭಕ್ತರಿಗೆ ಸಕಲ ಅನುಕೂಲತೆ ಕಲ್ಪಿಸಿದೆ.

ಕಳೆದ ಮೇ 16ರಂದು 8ನೇ ವಾರ್ಷಿಕೋತ್ಸವ ಆಚರಣೆಯು ಮಂದಿರದಲ್ಲಿ ಅದ್ಧೂರಿಯಾಗಿ ನಡೆಯಿತು.

ಮಂದಿರದ ವಿಶೇಷತೆಗಳು: ಪ್ರತಿ ಗುರುವಾರ ಬಾಬಾ ಮಂದಿರದಲ್ಲಿಸಾವಿರಾರು ಭಕ್ತರು ದರ್ಶನಕ್ಕೆ ಧಾವಿಸುತ್ತಾರೆ. ಮಧ್ಯಾಹ್ನ ಊಟ, ಸಂಜೆ ಪ್ರಸಾದ ವ್ಯವಸ್ಥೆ ಇರುತ್ತದೆ.

ಅಲ್ಲದೇ, ಸಂಜೆ ‘ಜ್ಞಾನ ಬುತ್ತಿ’ ಕಾರ್ಯಕ್ರಮದಡಿ ಚಿಂತಕರು ಆಧಾತ್ಮ, ಆರೋಗ್ಯ, ಧಾರ್ಮಿಕತೆ, ಧ್ಯಾನ, ನೈತಿಕತೆ ಮುಂತಾದ ವಿಷಯಗಳ ಬಗ್ಗೆ ಒಂದು ಗಂಟೆ ಉಪನ್ಯಾಸ ನೀಡುತ್ತಾರೆ. ಗುರುವಾರ ಪಲ್ಲಕ್ಕಿ ಉತ್ಸವ ನಡೆಯಲಿದ್ದು, ಭಕ್ತರು ಇದರಲ್ಲಿ ಪಾಲ್ಗೊಂಡು ಬಾಬಾ ಧ್ಯಾನದಲ್ಲಿ ಮುಳುಗುತ್ತಾರೆ.

ಆಷಾಢ ಮಾಸದಲ್ಲಿ ನಡೆಯುವ ಗುರುಪೂರ್ಣಿಮೆ ದಿನ ಅಂಗವಿಕಲರು ಮತ್ತು ಅನಾಥರಿಗೆ ಹೊದಿಕೆ ವಿತರಣೆ, ಆರೋಗ್ಯ ತಪಾಸಣೆಯನ್ನು ಟ್ರಸ್ಟ್ ಮಾಡಿಸುತ್ತದೆ. ಅಲ್ಲದೇ, ಉಚಿತ ನೇತ್ರ ತಪಾಸಣೆಯನ್ನು ಪ್ರತಿ ವರ್ಷ ನಡೆಸಿಕೊಂಡು ಬಂದಿದ್ದು, ಈ ವರ್ಷವೂ ಭಾನುವಾರ( ಜು.14) 100ಕ್ಕೂ ಹೆಚ್ಚು ಜನರಿಗೆ ನೇತ್ರ ತಪಾಸಣೆ ಮಾಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT