ದಾಂಪತ್ಯಕ್ಕೆ ಬೆಸುಗೆ ಹಾಕಿದ ಮತದಾನ, ಮುನಿಸು ಮರೆತು ಮತಗಟ್ಟೆಯಲ್ಲಿ ಒಂದಾದ ದಂಪತಿ!

ತುಮಕೂರು: ಭಾನುವಾರ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯ ಎರಡನೇ ಹಂತದ ಮತದಾನವು ದೂರವಾಗಿದ್ದ ಸತಿ–ಪತಿಯನ್ನು ಒಗ್ಗೂಡಿಸಿದ ಅಪರೂಪದ ಪ್ರಸಂಗಕ್ಕೆ ಸಾಕ್ಷಿಯಾಯಿತು.
ಶಿರಾ ತಾಲ್ಲೂಕು ಮದಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಗೆರೆಯ ಗೋವಿಂದಪ್ಪ ಮತ್ತು ಸೀಗಲಹಳ್ಳಿಯ ಗುರುಶಾಂತಮ್ಮ ವಿವಾಹ ಐದು ವರ್ಷಗಳ ಹಿಂದೆ ನಡೆದಿತ್ತು. ಆರೇಳು ತಿಂಗಳ ಹಿಂದೆ ದಾಂಪತ್ಯದಲ್ಲಿ ಬಿರುಕು ಮೂಡಿದ ಪರಿಣಾಮ ಗುರುಶಾಂತಮ್ಮ ತವರು ಮನೆ ಸೇರಿದ್ದರು.
ಮತ ನೀಡುವಂತೆ ಅಭ್ಯರ್ಥಿಯೊಬ್ಬರು ಗುರುಶಾಂತಮ್ಮ ಅವರನ್ನು ಕೋರಿದ್ದರು. ಅದಕ್ಕಾಗಿ ಭಾನುವಾರ ಮತ ಚಲಾಯಿಸಲು ಹುಳಿಗೆರೆಗೆ ಗುರುಶಾಂತಮ್ಮ ಬಂದಿದ್ದರು. ಇದೇ ವೇಳೆ ಗೋವಿಂದಪ್ಪ ಸಹ ಮತಗಟ್ಟೆಗೆ ಬಂದಿದ್ದಾರೆ. ಆಗ ಮತಗಟ್ಟೆಯಲ್ಲಿ ಇಬ್ಬರೂ ಮುಖಾಮುಖಿಯಾಗಿದ್ದಾರೆ. ಮುನಿಸು ಮರೆತ ದಂಪತಿ ಮತ್ತೆ ಒಂದಾಗುವ ಮನಸ್ಸು ಮಾಡಿದರು. ಮತದಾನ ಮಾಡಿದ ಗುರುಶಾಂತಮ್ಮ ಪತಿ ಜತೆಗೂಡಿ ನೇರವಾಗಿ ಮನೆ ಸೇರಿದರು.
‘ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿ ಚಂದ್ರಶೇಖರ್ ಅವರು ನಮ್ಮನ್ನು ಒಂದು ಮಾಡಲು ಮೂರು ಸಲ ಪ್ರಯತ್ನಿಸಿದ್ದರು. ಆದರೂ ಸಾಧ್ಯವಾಗಿರಲಿಲ್ಲ. ಪಂಚಾಯಿತಿ ಚುನಾವಣೆಯಲ್ಲಿ ಮತ ನೀಡಲು ನನ್ನ ಪತ್ನಿ ಬಂದಾಗ ನಾನೂ ಅಲ್ಲೇ ಇದ್ದೆ. ಪತ್ನಿಯ ಮುಖ ನೋಡಿದ ತಕ್ಷಣ ಮನಸ್ಸು ಬದಲಾಯಿತು. ಇಬ್ಬರಿಗೂ ತಪ್ಪುಗಳು ಅರಿವಾದವು. ಒಂದಾದೆವು. ನನಗೆ ಹೆಚ್ಚಿನ ಖುಷಿ ಆಗಿದೆ. ಇನ್ನು ಮುಂದೆ ಸಂಸಾರದಲ್ಲಿ ಸಾಮರಸ್ಯದಿಂದ ಬದುಕುತ್ತೇವೆ’ ಎಂದು ಗೋವಿಂದಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.