ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೊಪ್ಪು ದುಬಾರಿ; ಪಪ್ಪಾಯಗೆ ದಾಖಲೆ ಬೆಲೆ

ತರಕಾರಿ ದರ ಇಳಿಕೆ, ಬೇಳೆ ಏರಿಕೆ; ಕೋಳಿ ಅಗ್ಗ, ಮೀನು ಹೆಚ್ಚಳ
Published : 1 ಸೆಪ್ಟೆಂಬರ್ 2024, 2:45 IST
Last Updated : 1 ಸೆಪ್ಟೆಂಬರ್ 2024, 2:45 IST
ಫಾಲೋ ಮಾಡಿ
Comments

ತುಮಕೂರು: ತರಕಾರಿ ದರ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದ್ದರೆ, ಕೊತ್ತಂಬರಿ ಸೇರಿದಂತೆ ಸೊಪ್ಪು ಗಗನಮುಖಿಯಾಗಿದೆ. ಬೇಳೆ ಏರಿಕೆಯತ್ತ ಮುಖ ಮಾಡಿದ್ದರೆ, ಕೋಳಿ ಮಾಂಸ ಅಲ್ಪ ಅಗ್ಗವಾಗಿದೆ. ಮೀನು ಮತ್ತಷ್ಟು ದುಬಾರಿಯಾಗಿದೆ.

ಈರುಳ್ಳಿ ಏರಿಕೆ: ಈರುಳ್ಳಿ ಧಾರಣೆ ವಾರದಿಂದ ವಾರಕ್ಕೆ ಹೆಚ್ಚುತ್ತಲೇ ಸಾಗಿದ್ದು, ಈ ವಾರವೂ ಅದೇ ದಾರಿಯಲ್ಲಿ ಸಾಗಿದೆ. ತೊಂಡೆಕಾಯಿ ಅಲ್ಪ ಏರಿಕೆಯಾಗಿದ್ದರೆ, ಬೆಂಡೆಕಾಯಿ, ಬದನೆಕಾಯಿ, ಹಾಗಲಕಾಯಿ ದರ ಕಡಿಮೆಯಾಗಿದೆ. ಹಸಿರು ಮೆಣಸಿನಕಾಯಿ, ಕ್ಯಾಪ್ಸಿಕಂ ಮತ್ತಷ್ಟು ಅಗ್ಗವಾಗಿದೆ. ಟೊಮೆಟೊ ಸೇರಿದಂತೆ ಉಳಿದ ತರಕಾರಿಗಳ ದರ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಈವರೆಗೆ ಸ್ಥಿರವಾಗಿದ್ದ ಶುಂಠಿ ಅಲ್ಪ ಪ್ರಮಾಣದಲ್ಲಿ ಇಳಿದಿದ್ದು, ನಿಂಬೆಹಣ್ಣು ತುಸು ಹೆಚ್ಚಳವಾಗಿದೆ.

ಸೊಪ್ಪು ದುಬಾರಿ: ಸೊಪ್ಪಿನ ಬೆಲೆ ಏರಿಕೆ ಮುಂದುವರಿಸಿದ್ದು, ಈ ವಾರ ಬಹುತೇಕ ದುಪ್ಪಟ್ಟಾಗಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹100–120, ಸಬ್ಬಕ್ಕಿ ಕೆ.ಜಿ ₹60–70, ಮೆಂತ್ಯ ಸೊಪ್ಪು ಕೆ.ಜಿ ₹70–80, ಪಾಲಕ್ ಸೊಪ್ಪು (ಕಟ್ಟು) ₹80ಕ್ಕೆ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಕೆಲವು ಕಡೆಗಳಲ್ಲಿ ಮಳೆ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಸೊಪ್ಪಿನ ಬೆಳೆ ಹಾಳಾಗಿದ್ದು, ಮಾರುಕಟ್ಟೆಯಲ್ಲಿ ಅವಕ ಕಡಿಮೆಯಾಗಿರುವುದು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.

ಪಪ್ಪಾಯಗೆ ಶುಕ್ರದೆಸೆ: ಕಳೆದ ಕೆಲವು ತಿಂಗಳಿಂದ ದುಬಾರಿಯಾಗಿದ್ದ ಪಪ್ಪಾಯ, ಈಗ ಮತ್ತಷ್ಟು ಹೆಚ್ಚಳವಾಗಿದೆ. ಕೆ.ಜಿ 45 ದಾಟಿದ್ದು, ದಾಖಲೆ ಬೆಲೆ ಎಂದು ಹೇಳಲಾಗುತ್ತಿದೆ. ದ್ರಾಕ್ಷಿ ಒಮ್ಮೆಲೆ ಕೆ.ಜಿಗೆ ₹50 ಜಿಗಿತ ಕಂಡಿದ್ದು, ಪೈನಾಪಲ್, ಸಪೋಟ ಏರಿಕೆ ದಾಖಲಿಸಿದೆ. ದಾಳಿಂಬೆ ಅಲ್ಪ ಇಳಿಕೆಯಾಗಿದೆ. ಬಾಳೆ ಹಣ್ಣಿನ ದರ ಸದ್ಯಕ್ಕೆ ಕಡಿಮೆಯಾಗುವಂತೆ ಕಾಣುತ್ತಿಲ್ಲ.

ಅಡುಗೆ ಎಣ್ಣೆ: ಅಡುಗೆ ಎಣ್ಣೆ ದರ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಗೋಲ್ಡ್‌ವಿನ್ನರ್ ಕೆ.ಜಿ ₹110–112, ಪಾಮಾಯಿಲ್ ಕೆ.ಜಿ ₹90–92, ಕಡಲೆಕಾಯಿ ಎಣ್ಣೆ ಕೆ.ಜಿ ₹155–160ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಬೆಳೆ ಹೆಚ್ಚಳ: ತೊಗರಿ ಬೇಳೆ ಮತ್ತೆ ಕೆ.ಜಿಗೆ ₹10 ದುಬಾರಿಯಾಗಿದ್ದು, ಉದ್ದಿನ ಬೇಳೆ, ಹುರಿಗಡಲೆ ಸಹ ಏರಿಕೆಯಾಗಿದೆ. ಅವರೆಕಾಳು, ಹೆಸರುಕಾಳು ದರ ತುಸು ತಗ್ಗಿದೆ. ದುಬಾರಿಯಾಗಿರುವ ಬಟಾಣಿ ಯಥಾಸ್ಥಿತಿ ಕಾಯ್ದುಕೊಂಡಿದೆ.

ಮಸಾಲೆ ಪದಾರ್ಥ: ಜೀರಿಗೆ, ಚೆಕ್ಕೆ ತಲಾ ಕೆ.ಜಿಗೆ ₹10, ಏಲಕ್ಕಿ ಕೆ.ಜಿಗೆ 200 ಇಳಿಕೆ ದಾಖಲಿಸಿದೆ. ಬೆಲ್ಲ ಅಲ್ಪ ಅಗ್ಗವಾಗಿದ್ದರೆ, ಲವಂಗ, ಗೋಡಂಬಿ ಕೊಂಚ ದುಬಾರಿಯಾಗಿದೆ.

ಧನ್ಯ ಕೆ.ಜಿ ₹110–160, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹240–260, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹180–190, ಹುಣಸೆಹಣ್ಣು ₹150–160, ಬೆಲ್ಲ ಕೆ.ಜಿ ₹50–55, ಕಾಳುಮೆಣಸು ಕೆ.ಜಿ ₹700–750, ಜೀರಿಗೆ ಕೆ.ಜಿ ₹300–320, ಚಕ್ಕೆ ಕೆ.ಜಿ ₹250–260, ಲವಂಗ ಕೆ.ಜಿ ₹850–950, ಗುಣಮಟ್ಟದ ಗಸಗಸೆ ಕೆ.ಜಿ ₹1,200–1,250, ಏಲಕ್ಕಿ ಕೆ.ಜಿ ₹2,600–2,800, ಬಾದಾಮಿ ಕೆ.ಜಿ ₹600–650, ಗೋಡಂಬಿ ಕೆ.ಜಿ ₹850–900, ಒಣದ್ರಾಕ್ಷಿ ಕೆ.ಜಿ ₹190–200ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಕೋಳಿ ಇಳಿಕೆ: ಈ ವಾರವೂ ಕೋಳಿ ಮಾಂಸದ ಬೆಲೆ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹100, ರೆಡಿ ಚಿಕನ್ ಕೆ.ಜಿ ₹160, ಸ್ಕಿನ್‌ಲೆಸ್ ಕೆ.ಜಿ ₹180 ಇಳಿದಿದ್ದರೆ, ಮೊಟ್ಟೆಕೋಳಿ (ಫಾರಂ) ಕೆ.ಜಿ ₹120ಕ್ಕೆ ಏರಿಕೆಯಾಗಿದೆ.

ಮೀನು ಏರಿಕೆ: ಇಳಿಕೆ ಕಂಡಿದ್ದ ಮೀನಿನ ಧಾರಣೆ ಮತ್ತೆ ಏರಿಕೆಯಾಗಿದೆ. ಅಂಜಲ್ ಮೀನು ಹೊರತುಪಡಿಸಿದರೆ ಇತರೆ ಮೀನು ದುಬಾರಿಯಾಗಿದೆ. ಬಂಗುಡೆ ಕೆ.ಜಿ ₹380, ಬೊಳಿಂಜರ್ ಕೆ.ಜಿ ₹250, ಅಂಜಲ್ ಕೆ.ಜಿ ₹780, ಬಿಳಿಮಾಂಜಿ ಕೆ.ಜಿ ₹1,110, ಕಪ್ಪುಮಾಂಜಿ ಕೆ.ಜಿ ₹780, ಇಂಡಿಯನ್ ಸಾಲ್ಮನ್ ಕೆ.ಜಿ ₹910, ಸೀಗಡಿ ಕೆ.ಜಿ ₹460–700, ಏಡಿ ಕೆ.ಜಿ 480ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT