ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗುಬ್ಬಿ | ಅದ್ದೂರಿ ಹೂವಿನ ವಾಹನ ಉತ್ಸವ

ಗೋಸಲ ಚನ್ನಬಸವೇಶ್ವರ, ಮಲ್ಲಿಕಾರ್ಜುನ, ಪಾರ್ವತಮ್ಮ ದೇವಿ ಉತ್ಸವ
Published 14 ಡಿಸೆಂಬರ್ 2023, 7:13 IST
Last Updated 14 ಡಿಸೆಂಬರ್ 2023, 7:13 IST
ಅಕ್ಷರ ಗಾತ್ರ

ಗುಬ್ಬಿ: ಪಟ್ಟಣದ ಗೋಸಲ ಚನ್ನಬಸವೇಶ್ವರ, ಮಲ್ಲಿಕಾರ್ಜುನ, ಪಾರ್ವತಮ್ಮ ದೇವಿಗೆ ಕಾರ್ತಿಕ ಮಾಸದ ಹೂವಿನ ವಾಹನ ಮಹೋತ್ಸವ ಮಂಗಳವಾರ ರಾತ್ರಿ ಪ್ರಾರಂಭವಾಗಿ ಬುಧವಾರ ಸಂಜೆವರೆಗೆ ಅದ್ದೂರಿಯಾಗಿ ನೆರವೇರಿತು.

ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ ನೆರವೇರಿಸಿ ಮೂರ್ತಿಗೆ ವಿಶೇಷವಾದ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ರಾತ್ರಿ ದೇವಾಲಯದ ಆವರಣದಲ್ಲಿ ದೀಪಾರಾಧನೆ ನಂತರ ಪುಷ್ಪಾಲಂಕೃತವಾಗಿದ್ದ ಎರಡು ರಥಗಳಲ್ಲಿ ಚನ್ನಬಸವೇಶ್ವರ, ಮಲ್ಲಿಕಾರ್ಜುನ ಹಾಗೂ ಪಾರ್ವತಮ್ಮ ಅವರ ಮೂರ್ತಿಗಳನ್ನು ಕೂರಿಸಿ ಪಟ್ಟಣದ ರಾಜಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ದೇವಾಲಯದ ಮುಂಭಾಗದಿಂದ ಉತ್ಸವ ಸಾಗುವ ಹಾದಿಯ ಉದ್ದಕ್ಕೂ ಭಕ್ತರಿಗೆ ಬಾಳೆ ಕಂದು ನೆಟ್ಟು ವಿವಿಧ ಪುಷ್ಪಗಳಿಂದ ಅಲಂಕರಿಸಿ, ಬಣ್ಣ ಬಣ್ಣದ ರಂಗೋಲಿ ಹಾಕಲಾಗಿತ್ತು. ಉತ್ಸವವು ಮುಂದೆ ಸಾಗಿದಂತೆ ಭಕ್ತರು ಪೂಜೆ ಸಲ್ಲಿಸಿ ಬಾಳೆಯ ಕಂದು ಕಡಿದು ಹರಕೆ ತೀರಿಸಿದರು. ಮೆರವಣಿಗೆಯು ಬುಧವಾರ ಬೆಳಿಗ್ಗೆ ಚಿಕ್ಕಗುಬ್ಬಿಯಪ್ಪ ದೇವಸ್ಥಾನದ ಬಳಿ ಮುಕ್ತಾಯಗೊಂಡಿತು. ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ, ಭಕ್ತರಿಗೆ ಪೂಜೆ ಸಲ್ಲಿಸಲು ಅನುಕೂಲವಾಗುವ ದೇವರ ಮೂರ್ತಿ ಗದ್ದುಗೆ ಮಾಡಲಾಯಿತು. 

ಹೂವಿನ ವಾಹನದ ಅಂಗವಾಗಿ ಮಂಗಳವಾರ ಪಟ್ಟಣ ಹಾಗೂ ಸುತ್ತಮುತ್ತಲಿನ ಮಾಂಸದ ಅಂಗಡಿಗಳಲ್ಲಿ ನಾಟಿ ಮೇಕೆ ಮಾಂಸದ ಮಾರಾಟ ಜೋರಾಗಿ ನಡೆಯಿತು. ನಾಟಿಮಾಂಸ ಖರೀದಿಗೆ ಬೆಂಗಳೂರು ಹಾಗೂ ಶಿವಮೊಗ್ಗದಿಂದಲೂ ಜನರು ಬಂದಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್, ತಹಶೀಲ್ದಾರ್ ಮೋಹನ್ ಕುಮಾರ್, ಗುಬ್ಬಿ ತಹಶೀಲ್ದಾರ್ ಬಿ.ಆರತಿ, 18 ಕೋಮಿನ ಮುಖಂಡರು ಹಾಗೂ ಭಕ್ತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT