ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮುಲ್‌: ಹಾಲು ಉತ್ಪಾದಕರಿಗೆ ಹಣ ನೀಡಲು ಸಂಕಷ್ಟ

Last Updated 21 ಮೇ 2021, 19:30 IST
ಅಕ್ಷರ ಗಾತ್ರ

ತುಮಕೂರು: ಕೋವಿಡ್–19 ಕರ್ಫ್ಯೂ, ಲಾಕ್‌ಡೌನ್ ಜಾರಿಯಾದ ನಂತರ ಹಾಲು ಮಾರಾಟ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ಹಾಲು ಸಂಗ್ರಹ ಹೆಚ್ಚಾಗಿರುವುದು ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ತುಮುಲ್‌) ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

ಒಂದು ಕಡೆ ಹಾಲು ಮಾರಾಟವಾಗುತ್ತಿಲ್ಲ, ಮತ್ತೊಂದೆಡೆ ಶೇಖರಣೆ ಪ್ರಮಾಣ ಹೆಚ್ಚುತ್ತಲೇ ಸಾಗಿದೆ. ಉಳಿದ ಹಾಲನ್ನು ಪೌಡರ್, ಬೆಣ್ಣೆ ತಯಾರಿಸಲು ಬಳಕೆ ಮಾಡಲಾಗುತ್ತಿದೆ. ಇದರಿಂದಾಗಿ ಡೇರಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಹಾಲು ಉತ್ಪಾದಕರಿಗೆ ಬಟವಾಡೆ ಮಾಡಲು ಸಾಲ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಕಳೆದ ಲಾಕ್‌ಡೌನ್ ನಂತರ ನಗರ ಪ್ರದೇಶಗಳಿಂದ ಹಳ್ಳಿಗೆ ಬಂದವರು ಕೃಷಿ ಜತೆಗೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದು, ಇದು ಸಹಜವಾಗಿ ಹಾಲು ಉತ್ಪಾದನೆಯನ್ನು ಹೆಚ್ಚಿಸಿದೆ. ರೈತರು ತಂದ ಎಲ್ಲಾ ಹಾಲನ್ನು ಸಂಗ್ರಹಿಸಲಾಗುತ್ತಿದೆ. ಸರಾಸರಿ 7 ಲಕ್ಷದಿಂದ 7.50 ಲಕ್ಷ ಲೀಟರ್ ಸಂಗ್ರಹವಾಗುತ್ತಿದ್ದು, ಪ್ರಸ್ತುತ ಈ ಪ್ರಮಾಣ 8.47 ಲಕ್ಷ ಲೀಟರ್‌ಗಳಿಗೆ ಏರಿಕೆಯಾಗಿದೆ. ಸುಮಾರು 1 ಲಕ್ಷ ಲೀಟರ್‌ಗಳಷ್ಟು ಹೆಚ್ಚಿಗೆ ಹಾಲು ಬರುತ್ತಿದ್ದು, ಹೊರೆಯನ್ನು ಹೆಚ್ಚಿಸಿದೆ.

ಕೊವಿಡ್ ಮೊದಲ ಅಲೆಯ ಸಮಯದಲ್ಲೂ ಇಂತಹುದೇ ಸಂಕಷ್ಟಕ್ಕೆ ತುಮುಲ್ ಸಿಲುಕಿತ್ತು. ಆಗ ₹97 ಕೋಟಿ ಸಾಲಮಾಡಿ ರೈತರಿಗೆ ಬಟವಾಡೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಹಾಲು ಖರೀದಿ ದರವನ್ನು ಕಡಿಮೆ ಮಾಡಲಾಗಿತ್ತು. ನಂತರ ಚೇತರಿಸಿಕೊಂಡಿದ್ದು, ಖರೀದಿ ದರವನ್ನು ಹೆಚ್ಚಿಸಲಾಗಿತ್ತು. ಜತೆಗೆ ಪೂರ್ಣ ಪ್ರಮಾಣದಲ್ಲಿ ಸಾಲವನ್ನೂ ತೀರಿಸಲಾಗಿತ್ತು. ಈಗ ಮತ್ತದೆ ಸಾಲದ ಸುಳಿಗೆ ಸಿಲುಕುವ ಆತಂಕಕ್ಕೆ ಒಳಗಾಗಿದೆ. ಲಾಕ್‌ಡೌನ್ ಶೀಘ್ರ ತೆರವಾಗಿ ಜನಜೀವನ ಹಿಂದಿನ ಸ್ಥಿತಿಗೆ ಮರಳಿದರೆ ಹಾಲು ಹಾಗೂ ಹಾಲಿನ ಉತ್ಪನ್ನಗಳ ಮಾರಾಟ ಸಹಜವಾಗಿ ಏರಿಕೆಯಾಗಲಿದೆ. ಮತ್ತಷ್ಟು ದಿನಗಳ ಕಾಲ ಲಾಕ್‌ಡೌನ್ ಮುಂದುವರಿದರೆ ಹಿಂದಿನ ವರ್ಷದಂತೆ ಹಾಲು ಖರೀದಿ ದರ ಇಳಿಕೆಯಾಗಬಹುದು.

ಮಾರಾಟ ವಿವರ:

ಬೆಂಗಳೂರಿನಲ್ಲಿ ಪ್ರತಿ ದಿನ 1.55 ಲಕ್ಷ ಲೀಟರ್ ಮಾರಾಟವಾಗಿದ್ದು, ಈಗ 1.35 ಲಕ್ಷ ಲೀಟರ್‌ಗೆ ಇಳಿದಿದೆ. ತುಮಕೂರು ನಗರದಲ್ಲಿ 1.10 ಲಕ್ಷ ಲೀಟರ್‌ನಿಂದ 95 ಸಾವಿರ ಲೀಟರ್‌ಗೆ ಕುಸಿದಿದೆ. ಪ್ರಮುಖವಾಗಿ ಮಾರುಕಟ್ಟೆ ಕಲ್ಪಿಸಿಕೊಟ್ಟಿದ್ದ ಮುಂಬೈ ಮಹಾನಗರದಲ್ಲಿ ಮಾರಾಟ ಪ್ರಮಾಣ 1.25 ಲಕ್ಷ ಲೀಟರ್‌ನಿಂದ 75 ಲಕ್ಷ ಲೀಟರ್‌ಗೆ ಇಳಿಕೆಯಾಗಿದೆ. ಮೊಸರು 70 ಸಾವಿರ ಲೀಟರ್‌ನಿಂದ 45 ಸಾವಿರ ಲೀಟರ್‌ಗೆ ಕುಸಿತ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT