ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದಲೂರು ಕೆರೆಗೆ ಹೇಮಾವತಿ ನೀರು

0.9 ಟಿಎಂಸಿ ನೀರು ಹರಿಸಲು ಕ್ರಮ :ಸಚಿವ ಜೆ.ಸಿ.ಮಾಧುಸ್ವಾಮಿ ಭರವಸೆ
Last Updated 12 ಅಕ್ಟೋಬರ್ 2021, 1:52 IST
ಅಕ್ಷರ ಗಾತ್ರ

ಶಿರಾ: ತಾಲ್ಲೂಕಿನ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ತಾಲ್ಲೂಕಿನ ಬರಗೂರು ರಂಗಾಪುರ ಗ್ರಾಮದಲ್ಲಿ ಸೋಮವಾರ ಗಡಿನಾಡು ತೋಟಗಾರಿಕೆ ರೈತ ಉತ್ಪಾದಕರ ಕಂಪನಿಯಿಂದ ಹಮ್ಮಿಕೊಂಡಿದ್ದ ಸೋಲಾರ್ ಶೀಥಲೀಕರಣ ಘಟಕದ ಉದ್ಘಾಟನೆ, ಕಟ್ಟಡದ ಶಂಕುಸ್ಥಾಪನೆ ಹಾಗೂ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿದರು.

ಶಿರಾ ತಾಲ್ಲೂಕಿಗೆ 0.9 ಟಿಎಂಸಿ ಹೇಮಾವತಿ ನೀರು ನಿಗದಿಯಾಗಿದೆ. ಉತ್ತಮವಾಗಿ ಮಳೆಯಾಗುತ್ತಿರುವುದರಿಂದ ಶಿರಾ ಹಾಗೂ ಕಳ್ಳಂಬೆಳ್ಳ ಕೆರೆಗೆ ನೀರು ತುಂಬುವ ಹಂತಕ್ಕೆ ಬಂದಿದೆ. ನಿಗದಿಯಾಗಿರುವ ನೀರಿನಲ್ಲಿ ಹೆಚ್ಚುವರಿ ಇರುವ ನೀರನ್ನು ಮದಲೂರು ಕೆರೆಗೆ ಹರಿಸಲಾಗುವುದು ಎಂದರು.

ಮದಲೂರು ಕೆರೆಗೆ ನೀರು ಹರಿಸುವುದು ಬೇಡ ಎಂದು ಮನವಿ ಮಾಡಿದವರೇ ಇಂದು ನೀರು ಹರಿಸುವಂತೆ ಹೇಳುತ್ತಿದ್ದಾರೆ. ಈ ಬಗ್ಗೆ ಸಮಯ ಬಂದಾಗ ಮಾತನಾಡುತ್ತೇನೆ ಎಂದರು.

‘ಶಿರಾಕ್ಕೆ 0.9 ಟಿಎಂಸಿ ನೀರು ನಿಗದಿಯಾಗಿದೆ. ಹಿಂದೆ ಸಚಿವರಾಗಿದ್ದವರು ಶಿರಾ, ಕಳ್ಳಂಬೆಳ್ಳ ಕೆರೆಯ ಜೊತೆಗೆ 12 ಚೆಕ್ ಡ್ಯಾಂ ಮತ್ತು ಬ್ಯಾರೇಜ್ ನಿರ್ಮಾಣ ಮಾಡಿದರು. ಯಲಿಯೂರು ಮತ್ತು ತಾವರೆಕೆರೆಗೆ ಕುಡಿಯುವ ನೀರಿನ ಯೋಜನೆ ರೂಪಿಸಿದ್ದರು. ನಂತರ ಮದಲೂರು ಹಾಗೂ
ಮಾರ್ಗ ಮಧ್ಯದ 11 ಕೆರೆಗಳಿಗೆ ನೀರು ಹರಿಸುವ ಯೋಜನೆ ರೂಪಿಸಿದರು. ಕುಡಿಯುವ ನೀರಿಗಾದರೆ ಎಲ್ಲಿಗೆ ಬೇಕಾದರೂ ನೀರು ತೆಗೆದುಕೊಂಡು ಹೋಗಬಹುದು. ಆದರೆ ಮದಲೂರಿನಲ್ಲಿ ಯಾವುದೇ ಕುಡಿಯುವ ನೀರಿನ ಯೋಜನೆ ರೂಪಿಸದೆ ನೀರು ಹರಿಸುವಂತೆ ಹೇಳುವ ಮೂಲಕ ನನ್ನನ್ನು ಜಿಲ್ಲೆಯಲ್ಲಿ ವಿಲನ್ ಮಾಡಲು ಹೊರಟಿದ್ದಾರೆ’ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರ ಹೆಸರು ಹೇಳದೆ ತರಾಟೆಗೆ ತೆಗೆದುಕೊಂಡರು.

‘ಮದಲೂರು ಕೆರೆಗೆ ನಾನು ಯಾರಿಗೂ ಹೆದರಿ ನೀರು ಹರಿಸುತ್ತಿಲ್ಲ. ನಾನು ಸಹ ರೈತ. ಕೃಷಿ ನಂಬಿ ಜೀವನ ಸಾಗಿಸುತ್ತಿರುವ ನನಗೆ ರೈತರ ಕಷ್ಟ ಗೊತ್ತು. ಮದಲೂರು ವಿಚಾರವಾಗಿ ಬಹಿರಂಗ ಚರ್ಚೆಗೆ ಸಹ ನಾನು ಸಿದ್ದವಾಗಿದ್ದೇನೆ’
ಎಂದರು.

‘ಭದ್ರ ಮೇಲ್ದಂಡೆ ಯೋಜನೆಯಲ್ಲಿ ಶಿರಾ ತಾಲ್ಲೂಕಿಗೆ ಅನ್ಯಾಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೀವು ನನ್ನ ಜೊತೆ ನಿಂತರೆ ಹೋರಾಟ ನಡೆಸಿ ಅನ್ಯಾಯ ಸರಿಪಡಿಸಲಾಗುವುದು. ಅದ್ದರಿಂದ ಕಾಮಗಾರಿಗೆ ಶಂಕುಸ್ಥಾಪನೆ ನಡೆಸದಂತೆ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಅವರಿಗೆ ಹೇಳಲಾಗಿದೆ’
ಎಂದರು.

ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ, ವಿಧಾನ ಪರಿಷತ್‌ ಸದಸ್ಯ ಚಿದಾನಂದ ಎಂ.ಗೌಡ, ನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ಕೆ.ಮಂಜುನಾಥ್, ತಹಶೀಲ್ದಾರ್ ಎಂ.ಮಮತಾ, ಚಂದ್ರಶೇಖರ್ ಗೌಡ, ಯಲಪೇನಹಳ್ಳಿ ಕೃಷ್ಣೇಗೌಡ, ಗ್ರಾ.ಪಂ ಅಧ್ಯಕ್ಷ ಜಯರಾಮಯ್ಯ, ಬೋರೇಗೌಡ, ಈರಣ್ಣ, ಕಾಂತರಾಜು, ಎಸ್.ಎಲ್ ಗೌಡ, ಕೃಷ್ಣೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT