ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | ಹೇಮಾವತಿ ಲಿಂಕ್ ಕೆನಾಲ್: ಶಾಸಕರ ನಡುವೆ ವಾಗ್ವಾದ

ಈ ವಾರದಲ್ಲಿ ತಾಂತ್ರಿಕ ಸಮಿತಿ ಜತೆಗೆ ಚರ್ಚೆಗೆ ನಿರ್ಧಾರ
Published : 13 ಆಗಸ್ಟ್ 2024, 3:21 IST
Last Updated : 13 ಆಗಸ್ಟ್ 2024, 3:21 IST
ಫಾಲೋ ಮಾಡಿ
Comments

ತುಮಕೂರು: ಕುಣಿಗಲ್ ವರೆಗೆ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ನಿರ್ಮಾಣ ವಿಚಾರ ಶಾಸಕರ ನಡುವಿನ ಜಟಾಪಟಿಗೆ ಕಾರಣವಾಯಿತು.

ನಗರದ ಜಿ.ಪಂನಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಶಾಸಕರಾದ ಬಿ.ಸುರೇಶ್‌ಗೌಡ, ಜಿ.ಬಿ.ಜ್ಯೋತಿಗಣೇಶ್, ಎಂ.ಟಿ.ಕೃಷ್ಣಪ್ಪ ಹಾಗೂ ಕುಣಿಗಲ್ ಶಾಸಕ ಡಾ.ಎಚ್.ಡಿ.ರಂಗನಾಥ್ ನಡುವೆ ದೊಡ್ಡ ಮಟ್ಟದ ವಾಗ್ವಾದವೇ ನಡೆಯಿತು. ಶಾಸಕರ ನಡುವೆ ನಡೆಯುತ್ತಿದ್ದ ಗದ್ದಲವನ್ನು ಸಚಿವರಾದ ಜಿ.ಪರಮೇಶ್ವರ, ಕೆ.ಎನ್.ರಾಜಣ್ಣ ಹಾಗೂ ಟಿ.ಬಿ.ಜಯಚಂದ್ರ ಮೂಖ ಪ್ರೇಕ್ಷಕರಾಗಿ ನೋಡಿದರು.

ವಿಷಯ ಪ್ರಸ್ತಾಪಿಸಿದ ಬಿಜೆಪಿ, ಜೆಡಿಎಸ್ ಶಾಸಕರು ‘ಕುಣಿಗಲ್‌ಗೆ ನೀರು ತೆಗೆದುಕೊಂಡು ಹೋಗಲು ಅಭ್ಯಂತರವಿಲ್ಲ. ಆದರೆ ಪೈಪ್‌ಲೈನ್ ಮೂಲಕ ತೆಗೆದುಕೊಂಡು ಹೋಗಲು ಅವಕಾಶ ನೀಡುವುದಿಲ್ಲ. ಮಾಗಡಿ ಭಾಗಕ್ಕೆ ನೀರು ಕೊಡಲು ಸಾಧ್ಯವಿಲ್ಲ’ ಎಂದು ಪಟ್ಟು ಹಿಡಿದರು. ಈಗಾಗಲೇ ಪ್ರತಿಭಟನೆಗಳು ನಡೆದಿವೆ. ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರ ಶವದ ಮೇಲೆ ಯೋಜನೆ ಜಾರಿ ಮಾಡಬೇಕು ಎಂದು ಎಚ್ಚರಿಸಿದರು.

ಒಂದು ಹಂತದಲ್ಲಿ ರಂಗನಾಥ್ ವಾಗ್ವಾದಕ್ಕೆ ಇಳಿದರು. ‘ಮಾಗಡಿಗೆ ನೀರು ಕೇಳುತ್ತಿಲ್ಲ. ಕುಣಿಗಲ್ ತಾಲ್ಲೂಕಿಗೆ ಮಾತ್ರ ತೆಗೆದುಕೊಂಡು ಹೋಗುತ್ತೇವೆ. ನಮಗೆ ಹಂಚಿಕೆಯಾಗಿರುವ ನೀರಿಗಿಂತ ಒಂದು ತೊಟ್ಟು ಹೆಚ್ಚಿಗೆ ಕೊಡುವುದು ಬೇಡ. ನಮ್ಮ ಪಾಲಿನ ನೀರು ನಮಗೆ ಕೊಡಿ’ ಎಂದು ಒತ್ತಾಯಿಸಿದರು.

ವಾಗ್ವಾದ ತಾರಕಕ್ಕೆ ಏರಿದಾಗ, ‘ನಮ್ಮ ಸರ್ಕಾರ ಇದೆ. ಪೈಪ್ ಲೈನ್ ನಿರ್ಮಿಸಿ ನೀರು ತೆಗೆದುಕೊಂಡು ಹೋಗುತ್ತೇವೆ. ಅದು ಹೇಗೆ ತಡೆಯುತ್ತೀರಿ ತಡೆಯಿರಿ ನೋಡೋಣ’ ಎಂದು ಸವಾಲು ಹಾಕಿದರು. ಈ ಹಂತದಲ್ಲಿ ಶಾಸಕರ ನಡುವೆ ಕಾವೇರಿದ ಚರ್ಚೆ ನಡೆಯಿತು.

ಸಚಿವ ಕೆ.ಎನ್.ರಾಜಣ್ಣ, ‘ಜಿಲ್ಲೆಗೆ ಹೇಮಾವತಿ ನೀರು ಹಂಚಿಕೆಯಾದ ಸಮಯದಲ್ಲಿ ಮಾಗಡಿ ತಾಲ್ಲೂಕಿಗೆ ನೀರು ಹಂಚಿಕೆ ಮಾಡಿರಲಿಲ್ಲ. ನಂತರ ಮಾಡಲಾಗಿದೆ’ ಎಂದರು.

ಎಲ್ಲವನ್ನೂ ಸೌಮ್ಯವಾಗಿ ಕೇಳಿಕೊಂಡ ಸಚಿವ ಜಿ.ಪರಮೇಶ್ವರ, ‘ಈ ಬಗ್ಗೆ ಪರಿಶೀಲಿಸಲು ತಾಂತ್ರಿಕ ಸಮಿತಿ ರಚಿಸಲಾಗಿದೆ. ಈ ವಾರದ ಅಂತ್ಯದಲ್ಲಿ ಸಮಿತಿ ಮುಂದೆ ಎಲ್ಲಾ ಶಾಸಕರ ಜತೆ ಚರ್ಚಿಸಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT