ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆರೆಯ ಕೂಗು: ಕಲುಷಿತ ಕೆರೆಗೆ ಹೇಮಾವತಿ ನೀರು!

₹11 ಕೋಟಿ ವೆಚ್ಚದಲ್ಲಿ ಕಾಮಗಾರಿ; ಸ್ವಚ್ಛತೆ ಕಾಣದ ಮರಳೂರು ಕೆರೆ
Published 8 ಜೂನ್ 2024, 7:44 IST
Last Updated 8 ಜೂನ್ 2024, 7:44 IST
ಅಕ್ಷರ ಗಾತ್ರ

ತುಮಕೂರು: ನಗರ ಹೊರವಲಯದ ಮರಳೂರು ಕೆರೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸದೆ, ತ್ಯಾಜ್ಯ ಮುಕ್ತ ಮಾಡದೆ ಹೇಮಾವತಿ ನೀರು ಹರಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಇದಕ್ಕಾಗಿ ₹11 ಕೋಟಿ ಖರ್ಚು ಮಾಡುತ್ತಿದ್ದಾರೆ.

ಗಂಗಸಂದ್ರ ಕೆರೆಯಿಂದ ಹೇಮಾವತಿ ನೀರು ಹರಿಸಲು ಯೋಜನೆ ರೂಪಿಸಲಾಗಿದೆ. ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯಿಂದ 2020ರಿಂದ ಕಾಮಗಾರಿ ನಡೆಯುತ್ತಿದೆ. ಗಂಗಸಂದ್ರ ಮಾರ್ಗವಾಗಿ ಪೈಪ್‌ಲೈನ್‌ ಅಳವಡಿಕೆ ಕಾರ್ಯ ಇದೀಗ ಮುಕ್ತಾಯವಾಗಿದೆ.

ಕಲುಷಿತಗೊಂಡಿರುವ ಕೆರೆಗೆ ಶುದ್ಧ ಕುಡಿಯುವ ನೀರು ಹರಿಸುವುದಕ್ಕೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ‘ಕೆರೆಗೆ ನೀರು ತುಂಬಿಸುವ ಕೆಲಸ ಅವೈಜ್ಞಾನಿಕವಾಗಿದೆ. ಮೊದಲು ಚರಂಡಿ ನೀರು, ಕೊಳಚೆ ಹರಿಯುವುದು ತಪ್ಪಿಸಿ ನಂತರ ಶುದ್ಧ ನೀರು ಬಿಡಬೇಕು. ಆದರೆ ಕೊಳಚೆ ನೀರಿಗೆ ಹೇಮಾವತಿ ನೀರು ತುಂಬಿಸುವ ‘ಸಾಹಸ– ಸಾಧನೆ’ ನಡೆದಿದೆ. ಈಗ ನೀರು ಹರಿಸಿದರೆ ಕೆರೆ ಮತ್ತಷ್ಟು ಹಾಳಾಗುತ್ತದೆ’ ಎಂಬುವುದು ಇಲ್ಲಿನ ನಿವಾಸಿಗಳ ಆತಂಕ.

ಪ್ರತಿ ಬೇಸಿಗೆ ಸಮಯದಲ್ಲಿ ನಗರದ ಜನರು ಕುಡಿಯುವ ನೀರಿಗಾಗಿ ಪರದಾಡುತ್ತಾರೆ. ನಗರ ಬುಗುಡನಹಳ್ಳಿ ಕೆರೆ ಅವಲಂಬಿಸಿದೆ. ಇಲ್ಲಿ ನೀರು ಖಾಲಿಯಾದರೆ ಕೊಳವೆ ಬಾವಿ ಮೊರೆ ಹೋಗಬೇಕಿದೆ. ನಗರದ ಅಮಾನಿಕೆರೆ ನೀರು ಕಲುಷಿತಗೊಂಡು ಬಳಕೆಗೆ ಬಾರದಂತಾಗಿದೆ. ಮರಳೂರು ಕೆರೆಗೆ ಹೇಮಾವತಿ ನೀರು ತುಂಬಿಸಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆಯನ್ನು ಮಹಾನಗರ ಪಾಲಿಕೆ ಅಧಿಕಾರಿಗಳು, ಶಾಸಕರು ರೂಪಿಸಿದ್ದಾರೆ.

‘ಕಲುಷಿತ ನೀರನ್ನು ಹೊರ ಹಾಕದೆ ಅದೇಗೆ ಕುಡಿಯುವ ನೀರು ಹರಿಸುತ್ತಾರೆ. ನೀರು ತುಂಬಿಸಿ ಕುಡಿಯಲು ಪೂರೈಸಿದರೆ ಜನರ ಆರೋಗ್ಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಜನ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಕೆಲಸ ಮಾಡಬೇಕು’ ಎಂದು ಮರಳೂರಿನ ರಾಮಚಂದ್ರಯ್ಯ ಒತ್ತಾಯಿಸಿದರು.

‘ಈಗಾಗಲೇ ಮರಳೂರು ಕೆರೆ ಕೊಳಚೆ ನೀರು ತುಂಬಿಕೊಂಡು ಗಬ್ಬು ವಾಸನೆ ಬೀರುತ್ತಿದೆ. ಅಧಿಕಾರಿಗಳು ಮೊದಲು ಇಲ್ಲಿ ಸ್ವಚ್ಛತಾ ಕಾರ್ಯ ಮಾಡುವುದು ಬಿಟ್ಟು, ಕಾಮಗಾರಿ ಹೆಸರಿನಲ್ಲಿ ಹಣ ಲೂಟಿ ಹೊಡೆಯುವ ಕೆಲಸಕ್ಕೆ ಮುಂದಾಗಿದ್ದಾರೆ. ಕಲುಷಿತ ನೀರು ಹೊರ ಹೋಗಲು ವ್ಯವಸ್ಥೆ ಮಾಡದೆ, ಶುದ್ಧ ನೀರನ್ನು ಕೊಳಚೆ ನೀರಿನ ಜತೆ ಸೇರಿಸುತ್ತಿದ್ದಾರೆ’ ಎಂದು ಮರಳೂರಿನ ರೆಹಮಾನ್‌ ಅಸಮಾಧಾನ ವ್ಯಕ್ತಪಡಿಸಿದರು.

ಕೆರೆ 100 ಹೆಕ್ಟೇರ್‌ ವಿಸ್ತೀರ್ಣವಿದ್ದು, 30 ಎಂಸಿಎಫ್‌ಟಿ ನೀರಿನ ಸಂಗ್ರಹದ ಸಾಮರ್ಥ್ಯ ಹೊಂದಿದೆ. ಕೆರೆಯ ಸುತ್ತಮುತ್ತ ಒತ್ತುವರಿಯೂ ನಡೆಯುತ್ತಿದ್ದು, ಸರ್ವೆ ಮಾಡಿಸಿ ಭದ್ರಪಡಿಸಿಲ್ಲ.

‘ಅಧಿಕಾರಿಗಳು ಫೋಟೊ ತೆಗೆಸಿಕೊಂಡು ಸರ್ಕಾರಕ್ಕೆ ದಾಖಲೆ ಸಲ್ಲಿಸಲು ಒಂದೆರಡು ಬಾರಿ ಕೆರೆ ಏರಿ ಸ್ವಚ್ಛಗೊಳಿಸಿದರು. ನಂತರ ಇದರ ಬಗ್ಗೆ ತಲೆ ಕೆಡೆಸಿಕೊಳ್ಳುತ್ತಿಲ್ಲ. ಪ್ಲಾಸ್ಟಿಕ್‌, ಅಂಗಡಿಗಳ ತ್ಯಾಜ್ಯದಿಂದ ಕೆರೆ ನೀರು ಕಲುಷಿತಗೊಂಡಿದ್ದರೂ ಇದುವರೆಗೆ ಯಾವುದೇ ಕ್ರಮಕೈಗೊಂಡಿಲ್ಲ’ ಎಂದು ಮರಳೂರಿನ ಜನ ದೂರಿದರು.

ಮರಳೂರು ಕೆರೆ ಪ್ಲಾಸ್ಟಿಕ್‌ ತ್ಯಾಜ್ಯದಿಂದ ತುಂಬಿಕೊಂಡಿದೆ
ಮರಳೂರು ಕೆರೆ ಪ್ಲಾಸ್ಟಿಕ್‌ ತ್ಯಾಜ್ಯದಿಂದ ತುಂಬಿಕೊಂಡಿದೆ

ಅಧಿಕಾರಿಗಳ ಮಧ್ಯೆ ಸಮನ್ವಯದ ಕೊರತೆ

ಕೆರೆಯು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರಲಿದ್ದು ಇಲ್ಲಿ ಕಸ ಎಸೆಯುವುದನ್ನು ತಡೆಯತ್ತಿಲ್ಲ. ಪಾಲಿಕೆಯ ಅಧಿಕಾರಿಗಳು ‘ಇಲ್ಲಿ ಕಸ ಹಾಕಬೇಡಿ’ ಎಂದು ನಾಮಫಲಕ ಹಾಕಿ ಸುಮ್ಮನಿದ್ದಾರೆ. ನಾಮಫಲಕ ಅಳವಡಿಸಿರುವ ಜಾಗದಲ್ಲಿಯೇ ಕಸದ ರಾಶಿ ಬಿದ್ದಿದ್ದರೂ ತೆರವುಗೊಳಿಸಿಲ್ಲ. ಕಸ ಎಸೆಯುವವರಿಗೆ ದಂಡ ವಿಧಿಸುತ್ತಿಲ್ಲ.

‘ಕೆರೆ ನೀರಾವರಿ ಇಲಾಖೆಗೆ ಸೇರುತ್ತದೆ’ ಎಂದು ಪಾಲಿಕೆ ಅಧಿಕಾರಿಗಳು ತಾತ್ಸಾರ ತೋರುತ್ತಾರೆ. ‘ಕಸ ಹಾಕುವುದನ್ನು ತಡೆಯುವುದು ಪಾಲಿಕೆಯ ಕೆಲಸ’ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ಸುಮ್ಮನಾಗುತ್ತಾರೆ. ಈ ಇಬ್ಬರ ಸಮನ್ವಯದ ಕೊರತೆಯಿಂದ ಕೆರೆ ಹಾಳಾಗುತ್ತಿದೆ ಎಂದು ಮರಳೂರಿನ ಶಂಕರಪ್ಪ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT