ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ಹೈಟೆಕ್‌ ಕ್ರೀಡಾಂಗಣ; ಅಕ್ರಮ ಚಟುವಟಿಕೆಗಳ ತಾಣ

Published 18 ಡಿಸೆಂಬರ್ 2023, 5:27 IST
Last Updated 18 ಡಿಸೆಂಬರ್ 2023, 5:27 IST
ಅಕ್ಷರ ಗಾತ್ರ

ತುಮಕೂರು: ನಗರದ ಜೂನಿಯರ್‌ ಕಾಲೇಜು ಮೈದಾನದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ₹3.93 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿರುವ ಕ್ರೀಡಾಂಗಣ ಅಕ್ರಮ ಚಟುವಟಿಕೆಗಳ ತಾಣವಾಗಿ ಬದಲಾಗಿದೆ.

ಅಭಿವೃದ್ಧಿ ಕಾಮಗಾರಿ ಮುಗಿದು ವರ್ಷ ಕಳೆದರೂ ಇದುವರೆಗೆ ಯಾರಿಗೂ ಹಸ್ತಾಂತರವಾಗಿಲ್ಲ. ಇದರಿಂದ ಕ್ರೀಡಾಂಗಣದ ನಿರ್ವಹಣೆಗೆ ಯಾರೂ ಮುಂದೆ ಬರುತ್ತಿಲ್ಲ. ಇಲ್ಲಿ ಯಾವುದೇ ಕಾವಲುಗಾರರನ್ನು ನೇಮಿಸಿಲ್ಲ. ಕ್ರೀಡೆಗಳಿಗಾಗಿ ಮೀಸಲಿಟ್ಟಿದ್ದ ಜಾಗ ಕುಡುಕರ ಅಡ್ಡೆಯಾಗಿದೆ. ಪ್ರೇಕ್ಷಕರ ಗ್ಯಾಲರಿಯಲ್ಲಿ ಮದ್ಯದ ಬಾಟಲಿಗಳು, ಪ್ಲಾಸ್ಟಿಕ್‌, ಗುಟ್ಕಾ, ಸಿಗರೇಟ್‌ ಪ್ಯಾಕೇಟ್‌ಗಳು ರಾರಾಜಿಸುತ್ತಿವೆ.

ಕ್ರೀಡಾಂಗಣದಲ್ಲಿ ಆರು ಕೊಠಡಿಗಳನ್ನು ನಿರ್ಮಿಸಲಾಗಿದೆ. ಇವುಗಳನ್ನು ಬಳಕೆಗೆ ನೀಡದ ಕಾರಣ ದೂಳು ಹಿಡಿಯುತ್ತಿವೆ. ಈಗಾಗಲೇ ಕೊಠಡಿಗಳ ಕಿಟಕಿಗಳು ಮುರಿದಿವೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕ್ರೀಡಾಂಗಣ ಅಭಿವೃದ್ಧಿ ಪಡಿಸಿದರೂ ಸೂಕ್ತ ನಿರ್ವಹಣೆ ಇಲ್ಲದೆ ಹಾಳಾಗುತ್ತಿದೆ. ಪ್ರೇಕ್ಷಕರು ಕೂತು ಪಂದ್ಯಗಳನ್ನು ವೀಕ್ಷಿಸುವ ಜಾಗದಲ್ಲಿ ಬರಿ ದೂಳು ಹರಡಿ ಕೊಂಡಿದೆ. ಇತ್ತ ಗಮನ ಹರಿಸಬೇಕಾದ ಅಧಿಕಾರಿಗಳು ಮಾತ್ರ ಕಚೇರಿಯಿಂದ ಹೊರ ಬರುತ್ತಿಲ್ಲ.

ಕೊಕ್ಕೊ, ಕಬಡ್ಡಿ, ಬ್ಯಾಡ್ಮಿಂಟನ್‌ ಮತ್ತು ವಾಲಿಬಾಲ್‌ ಪಂದ್ಯಗಳಿಗೆ ಮೈದಾನ ಸಿದ್ಧಪಡಿಸಲಾಗಿದೆ. ಯಾವುದಾದರೂ ಕ್ರೀಡಾಕೂಟಗಳು ನಡೆದಾಗ ಮಾತ್ರ ಇತ್ತ ಸುಳಿಯುವ ಅಧಿಕಾರಿಗಳು ನಂತರ ಇಲ್ಲಿನ ಪರಿಸ್ಥಿತಿಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಸಮಸ್ಯೆಯ ಕುರಿತು ಗಮನ ಹರಿಸಿ ಕ್ರೀಡಾಪಟುಗಳ ಅಭ್ಯಾಸಕ್ಕೆ ಅನುವು ಮಾಡಿಕೊಡಬೇಕಾದ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಅಧಿಕಾರಿಗಳು ನಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ.

ಕ್ರೀಡಾ ಸಂಕೀರ್ಣದ ಭಾಗವಾಗಿ ಜೂನಿಯರ್‌ ಕಾಲೇಜು ಮೈದಾನದಲ್ಲಿ ಶೌಚಾಲಯಗಳನ್ನು ನಿರ್ಮಿಸಿದ್ದು, ಸೂಕ್ತ ನಿರ್ವಹಣೆ ಇಲ್ಲದೆ ಗಬ್ಬು ನಾರುತ್ತಿವೆ. ಕನಿಷ್ಠ ನೀರಿನ ಪೂರೈಕೆಯೂ ಇಲ್ಲದಾಗಿದೆ. ಯಾವುದೇ ಪೂರ್ವ ತಯಾರಿ ಇಲ್ಲದೆ ತರಾತುರಿಯಲ್ಲಿ ಕ್ರೀಡಾಂಗಣ ಉದ್ಘಾಟಿಸಲಾಗಿತ್ತು. ನಂತರ ಇಲ್ಲಿನ ಸಮಸ್ಯೆಗಳಿಗೆ ಯಾರೊಬ್ಬರೂ ಕಿವಿಗೊಡುವ ಕೆಲಸ ಮಾಡಿಲ್ಲ. ಹಸ್ತಾಂತರ ಪ್ರಕ್ರಿಯೆ ನಡೆಯುತ್ತಿದೆ ಎಂದು ಸ್ಮಾರ್ಟ್‌ ಸಿಟಿಯ ಅಧಿಕಾರಿಗಳು ಒಂದು ವರ್ಷದಿಂದ ಹೇಳುತ್ತಾ ಬರುತ್ತಿದ್ದಾರೆ. ಆದರೆ ಇದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

‘ಕ್ರೀಡಾ ಸಂಕೀರ್ಣದಲ್ಲಿ ಕನಿಷ್ಠ ಸೌಲಭ್ಯಗಳಿಲ್ಲ. ಇಲ್ಲಿಗೆ ಅಭ್ಯಾಸಕ್ಕೆ ಬರುವವರಿಗೆ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ. ಕ್ರೀಡಾಂಗಣ ಇದ್ದೂ ಇಲ್ಲದಂತಾಗಿದೆ’ ಎಂದು ಕ್ರೀಡಾಪಟುವೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಕ್ರೀಡಾಂಗಣವನ್ನು ಜೂನಿಯರ್‌ ಕಾಲೇಜು ವ್ಯಾಪ್ತಿಗೆ ಹಸ್ತಾಂತರಿಸಲಾಗುವುದು. ಸ್ವಚ್ಛತೆಯ ಬಗ್ಗೆ ಗಮನ ಹರಿಸಲಾಗುವುದು.
ಬಿ.ವಿ.ಅಶ್ವಿಜ , ವ್ಯವಸ್ಥಾಪಕ ನಿರ್ದೇಶಕಿ, ಸ್ಮಾರ್ಟ್‌ ಸಿಟಿ
ಕ್ರೀಡಾಂಗಣದ ಬಳಿ ಮದ್ಯದ ಬಾಟಲಿ
ಕ್ರೀಡಾಂಗಣದ ಬಳಿ ಮದ್ಯದ ಬಾಟಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT