ತುಮಕೂರು: ತುಮಕೂರು ನಗರ ಕ್ಷೇತ್ರದ ಜತೆಗೆ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಹಾಗೂ ವಿವಿಧ ಸಂದರ್ಭಗಳಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳು ಇದ್ದವು. ಕೋರ, ಗೂಳೂರು ಕ್ಷೇತ್ರಗಳಾಗಿದ್ದವು ಎಂಬುದೇ ಹಲವರಿಗೆ ನೆನಪಿಲ್ಲ.
ತಾಲ್ಲೂಕಿನಲ್ಲಿ ಕೋರ, ಹೆಬ್ಬೂರು, ಗೂಳೂರು, ಬೆಳ್ಳಾವಿ ಕ್ಷೇತ್ರಗಳು ಇದ್ದವು. ಕಾಲಕ್ಕೆ ತಕ್ಕಂತೆ ಹಾಗೂ ಕ್ಷೇತ್ರಗಳ ಪುನರ್ ವಿಂಗಡಣೆ ನಡೆದ ಸಂದರ್ಭಗಳಲ್ಲಿ ಕ್ಷೇತ್ರಗಳನ್ನು ಬದಲಿಸುತ್ತಾ ಬರಲಾಗಿದೆ. 1952ರಲ್ಲಿ ಇದ್ದ ಕೋರ ಕ್ಷೇತ್ರವನ್ನು ಕೈಬಿಟ್ಟು, 1957ರಲ್ಲಿ ಹೆಬ್ಬೂರು ಕ್ಷೇತ್ರವನ್ನು ಅಸ್ತಿತ್ವಕ್ಕೆ ತರಲಾಯಿತು. 1967ರ ಹೊತ್ತಿಗೆ ಹೆಬ್ಬೂರು ಬದಲಿಗೆ ಗೂಳೂರು ಕ್ಷೇತ್ರ (ಪರಿಶಿಷ್ಟ ಜಾತಿ ಮೀಸಲು) ಅಸ್ತಿತ್ವ ಪಡೆದುಕೊಂಡಿತು. 1978ರ ವೇಳೆಗೆ ಗೂಳೂರು ಕ್ಷೇತ್ರವನ್ನೂ ಕೈಬಿಟ್ಟು, ಬೆಳ್ಳಾವಿ ಕ್ಷೇತ್ರ ಅಸ್ತಿತ್ವಕ್ಕೆ ಬಂತು.
2008ರಲ್ಲಿ ನಡೆದ ಕ್ಷೇತ್ರಗಳ ಪುನರ್ ವಿಂಗಡಣೆ ಸಮಯದಲ್ಲಿ ಬೆಳ್ಳಾವಿ ತನ್ನ ಅಸ್ತಿತ್ವ ಕಳೆದುಕೊಂಡಿತ್ತು. ಬೆಳ್ಳಾವಿ ಬದಲಿಗೆ ತುಮಕೂರು ಗ್ರಾಮಾಂತರ ಕ್ಷೇತ್ರವನ್ನು ಸೃಷ್ಟಿಸಲಾಯಿತು. ಕಳೆದ 15 ವರ್ಷಗಳಿಂದ ಈಚೆಗೆ ಗ್ರಾಮಾಂತರ ಕ್ಷೇತ್ರ ಉಳಿದುಕೊಂಡು ಬಂದಿದೆ.
ತುಮಕೂರು ನಗರ ವಿಧಾನಸಭಾ ಕ್ಷೇತ್ರ ಮೊದಲಿನಿಂದಲೂ ಕಾಂಗ್ರೆಸ್ ಭದ್ರ ಕೋಟೆಯಾಗಿತ್ತು. ಮೊದಲ ಚುನಾವಣೆಯಿಂದ ಈವರೆಗೆ ಆರು ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ. ಪಿಎಸ್‌ಪಿ ಹಾಗೂ ಜೆಎನ್‌ಪಿ ಅಭ್ಯರ್ಥಿಗಳು ತಲಾ ಎರಡು ಸಲ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಹಿಡಿತದಲ್ಲಿ ಇದ್ದ ಕ್ಷೇತ್ರವನ್ನು ಮೊದಲ ಬಾರಿಗೆ 1994ರಲ್ಲಿ ಬಿಜೆಪಿ ತನ್ನ ವಶಕ್ಕೆ ತೆಗೆದುಕೊಂಡಿತು. ಆಗ ಸೊಗಡು ಶಿವಣ್ಣ ಶಾಸಕರಾಗಿ ಆಯ್ಕೆ ಆಗಿದ್ದರು. ನಂತರ ಅವರು ಸತತವಾಗಿ ನಾಲ್ಕು ಬಾರಿ (2008ರ ವರೆಗೆ) ಗೆಲುವು ಸಾಧಿಸಿದ್ದರು. ಎರಡು ದಶಕಗಳ ನಂತರ 2013ರಲ್ಲಿ ಕ್ಷೇತ್ರವನ್ನು ಕಾಂಗ್ರೆಸ್ ತನ್ನ ವಶಕ್ಕೆ ತೆಗೆದುಕೊಂಡಿತು. ರಫಿಕ್ ಅಹಮ್ಮದ್ ಶಾಸಕರಾಗಿ ಆಯ್ಕೆಯಾದರು. ಮತ್ತೆ ಕ್ಷೇತ್ರವನ್ನು ಕಾಂಗ್ರೆಸ್‌ನಿಂದ ಬಿಜೆಪಿ ತನ್ನ ವಶಕ್ಕೆ ತೆಗೆದುಕೊಂಡಿತು. 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಜಿ.ಬಿ.ಜ್ಯೋತಿಗಣೇಶ್ ಶಾಸಕರಾಗಿ ಚುನಾಯಿತರಾದರು.
**
ಚುನಾವಣೆ ನಡೆದ ಇತಿಹಾಸ
1952ರಲ್ಲಿ ತುಮಕೂರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಂ.ವಿ.ರಾಮರಾವ್, ಕೋರ ಕ್ಷೇತ್ರದಿಂದ ಕಾಂಗ್ರೆಸ್‌ನ ಬಿ.ಸಿ.ನಂಜುಂಡಯ್ಯ ವಿಧಾನಸಭೆ ಪ್ರವೇಶಿಸಿದ್ದರು. 1957ರಲ್ಲಿ ತುಮಕೂರು ಕ್ಷೇತ್ರದಿಂದ ಪಿಎಸ್‌ಪಿಯ ಜಿ.ಎನ್.ಪುಟ್ಟಣ್ಣ ಆಯ್ಕೆಯಾಗಿದ್ದರು. ಹೊಸದಾಗಿ ಸೃಷ್ಟಿಯಾದ ಹೆಬ್ಬೂರು ಕ್ಷೇತ್ರದಿಂದ ಕಾಂಗ್ರೆಸ್‌ನ ಕೆ.ಎಲ್.ನರಸಿಂಹಯ್ಯ ಜಯಗಳಿಸಿದ್ದರು.
1962ರಲ್ಲಿ ತುಮಕೂರು ನಗರ ಕ್ಷೇತ್ರದಿಂದ ಕಾಂಗ್ರೆಸ್‌ನ ಜಿ.ಸಿ.ಭಗೀರಥಮ್ಮ ಗೆಲುವು ಸಾಧಿಸಿದರು. ಜಿಲ್ಲೆಯ ಮೊದಲ ಮಹಿಳಾ ಶಾಸಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಹೆಬ್ಬೂರು ಕ್ಷೇತ್ರದಿಂದ ಪಿಎಸ್‌ಪಿ ಅಭ್ಯರ್ಥಿ ಕೆ.ಲಕ್ಕಪ್ಪ ಆಯ್ಕೆ ಆಗಿದ್ದರು. ತುಮಕೂರಿನಿಂದ 1967ರಲ್ಲಿ ಪಿಎಸ್‌ಪಿಯ ಬಿ.ಪಿ.ಗಂಗಾಧರ್, ಹೊಸದಾಗಿ ಅಸ್ತಿತ್ವಕ್ಕೆ ಬಂದ ಗೂಳೂರು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಪಿಎಸ್‌ಪಿಯ ಜಿ.ಬೋವಿ ಶಾಸಕರಾಗಿದ್ದರು. 1972ರಲ್ಲಿ ತುಮಕೂರಿನಿಂದ ಕಾಂಗ್ರೆಸ್‌ನ ಕೆ.ಅಬ್ದುಲ್ ಸುಭಾಸ್ ಆಯ್ಕೆ ಆಗುವ ಮೂಲಕ ಅಲ್ಪಸಂಖ್ಯಾತರೊಬ್ಬರಿಗೆ ಅವಕಾಶ ಸಿಕ್ಕಿತು. ಗೂಳೂರು ಕ್ಷೇತ್ರದಿಂದ ಕಾಂಗ್ರೆಸ್‌ನ ದೊಡ್ಡತಿಮ್ಮಯ್ಯ ಆಯ್ಕೆಯಾಗಿದ್ದರು.
1978ರಲ್ಲಿ ತುಮಕೂರಿನಿಂದ ಕಾಂಗ್ರೆಸ್‌ನ ನಜೀರ್ ಅಹ್ಮದ್ ಗೆಲ್ಲುವ ಮೂಲಕ ಎರಡನೇ ಬಾರಿಗೆ ಅಲ್ಪಸಂಖ್ಯಾತರ ಪ್ರಾಬಲ್ಯ ಮುಂದುವರಿಯಿತು. ಹೊಸದಾಗಿ ಅಸ್ತಿತ್ವಕ್ಕೆ ಬಂದ ಬೆಳ್ಳಾವಿ ಕ್ಷೇತ್ರದಿಂದ ಐಎನ್‌ಪಿಯ ಜಿ.ಎಸ್.ಶಿವನಂಜಪ್ಪ ಗೆದಿದ್ದರು. 1983ರಲ್ಲಿ ತುಮಕೂರಿನಿಂದ ಜೆಎನ್‌ಪಿಯಿಂದ ಲಕ್ಷ್ಮಿನರಸಿಂಹಯ್ಯ, ಬೆಳ್ಳಾವಿಯಿಂದ ಕಾಂಗ್ರೆಸ್‌ನ ಟಿ.ಎಚ್.ಎಚ್.ಹನುಮಂತರಾಯಪ್ಪ ಶಾಸಕರಾಗಿದ್ದರು. 1985ರಲ್ಲಿ ತುಮಕೂರಿನಿಂದ ಲಕ್ಷ್ಮಿನರಸಿಂಹಯ್ಯ ಮರು ಆಯ್ಕೆಯಾದರೆ, ಬೆಳ್ಳಾವಿಯಿಂದ ಜೆಎನ್‌ಪಿಯ ಸಿ.ಎನ್.ಭಾಸ್ಕರಪ್ಪ ಗೆಲುವು ಸಾಧಿಸಿದ್ದರು. 1989ರಲ್ಲಿ ನಗರದಲ್ಲಿ ಕಾಂಗ್ರೆಸ್‌ನ ಎಸ್.ಷಫಿ ಅಹ್ಮದ್, ಬೆಳ್ಳಾವಿಯಿಂದ ಕಾಂಗ್ರೆಸ್‌ನ ಆರ್.ನಾರಾಯಣ ಜಯ ಗಳಿಸಿದ್ದರು.
1994ರಲ್ಲಿ ತುಮಕೂರು ನಗರ ಕ್ಷೇತ್ರ ಬಿಜೆಪಿ ವಶವಾಯಿತು. ಸೊಗಡು ಶಿವಣ್ಣ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ನಂತರ ಸತತವಾಗಿ ನಾಲ್ಕು ಬಾರಿ (1994, 1999, 2004, 2008) ಆಯ್ಕೆಯಾಗುತ್ತಾ ಬಂದಿದ್ದರು. 1989, 1994, 1999ರಲ್ಲಿ ಬೆಳ್ಳಾವಿಯಿಂದ ಕಾಂಗ್ರೆಸ್‌ನ ಆರ್.ನಾರಾಯಣ ಸತತವಾಗಿ ಗೆಲುವು ಸಾಧಿಸಿದ್ದರು. 2004ರಲ್ಲಿ ಬೆಳ್ಳಾವಿಯಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ.ಎನ್.ರಾಜಣ್ಣ ಮೊದಲ ಬಾರಿಗೆ ಶಾಸಕರಾದರು.
ಕ್ಷೇತ್ರ ಪುನರ್ ವಿಂಗಡಣೆಯಿಂದಾಗಿ 2008ರ ವೇಳೆಗೆ ಬೆಳ್ಳಾವಿ ಕ್ಷೇತ್ರ ಮರೆಯಾಗಿ ಗ್ರಾಮಾಂತರ ಕ್ಷೇತ್ರ ಅಸ್ತಿತ್ವಕ್ಕೆ ಬಂತು. ಈ ಕ್ಷೇತ್ರದ ಮೊದಲ ಚುನಾವಣೆಯಲ್ಲಿ ಬಿಜೆಪಿಯ ಬಿ.ಸುರೇಶ್‌ಗೌಡ ಆಯ್ಕೆ ಆಗುವ ಮೂಲಕ ವಿಧಾನಸಭೆ ಪ್ರವೇಶಿಸಿದ್ದರು. 2013ರಲ್ಲಿ ತುಮಕೂರು ಕ್ಷೇತ್ರದಿಂದ ಕಾಂಗ್ರೆಸ್‌ನ ರಫಿಕ್ ಅಹ್ಮದ್ ಆಯ್ಕೆಯಾದರೆ, ಗ್ರಾಮಾಂತರ ಕ್ಷೇತ್ರದಿಂದ ಬಿ.ಸುರೇಶ್‌ಗೌಡ ಪುನರ್ ಆಯ್ಕೆಯಾದರು. 2018ರಲ್ಲಿ ನಗರ ಕ್ಷೇತ್ರ ಮತ್ತೆ ಬಿಜೆಪಿ ವಶವಾಗಿದ್ದು, ಜಿ.ಬಿ.ಜ್ಯೋತಿಗಣೇಶ್ ಶಾಸಕರಾಗಿದ್ದಾರೆ. ಗ್ರಾಮಾಂತರದಲ್ಲಿ ಜೆಡಿಎಸ್‌ನ ಡಿ.ಸಿ.ಗೌರಿಶಂಕರ್ ಆಯ್ಕೆ ಆಗಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.