ಮಂಗಳವಾರ, ಜುಲೈ 14, 2020
28 °C
ಶುಚಿತ್ವ, ತ್ಯಾಜ್ಯ ನಿರ್ವಹಣೆ, ಸೋಂಕು ನಿಯಂತ್ರಣ, ಗುಣಮಟ್ಟದ ಚಿಕಿತ್ಸೆಗಾಗಿ ಕಾಯಕಲ್ಪ ಪ್ರಶಸ್ತಿ

ಕೊರಟಗೆರೆ: ಈ ಆಸ್ಪತ್ರೆಗಿಲ್ಲ ಸಮಸ್ಯೆಯ ಸೋಂಕು

ಎ.ಆರ್.ಚಿದಂಬರ Updated:

ಅಕ್ಷರ ಗಾತ್ರ : | |

Prajavani

ಕೊರಟಗೆರೆ: ದಶಕಗಳ ಹಿಂದೆ ಸಾಧಾರಣ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿ ಆರಂಭವಾದ ಇಲ್ಲಿನ ಸಾರ್ವಜನಿಕ ಆಸ್ಪತ್ರೆ ರೋಗಿಗಳಿಗೆ ಉತ್ತಮವಾಗಿ ಸ್ಪಂದಿಸುವ ಮೂಲಕ ಈಚೆಗಷ್ಟೆ ಕಾಯಕಲ್ಪ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಆ. 11, 1975ರಲ್ಲಿ ಕೇವಲ 22 ಗುಂಟೆ ಜಾಗದಲ್ಲಿ ಸಾಮಾನ್ಯ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿ ಅಂದಿನ ಆರೋಗ್ಯ ಸಚಿವ ಎಚ್.ಸಿದ್ದವೀರಪ್ಪ ಅವರಿಂದ ಉದ್ಘಾಟನೆಯಾಯಿತು. ಆನಂತರ ಫೆ. 22, 1994ರಲ್ಲಿ ವೀರಪ್ಪ ಮೊಯಿಲಿ ನೇತೃತ್ವದ ಸರ್ಕಾರದ ಅವಧಿಯಲ್ಲಿ 100 ಹಾಸಿಗೆಯ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಲಾಯಿತು.

ಶುಚಿತ್ವ, ತ್ಯಾಜ್ಯ ನಿರ್ವಹಣೆ, ಸೋಕು ನಿಯಂತ್ರಣ, ಗುಣಮಟ್ಟದ ಚಿಕಿತ್ಸೆಗಾಗಿ 2018–19ನೇ ಸಾಲಿನಲ್ಲಿ ‘ಕಾಯಕಲ್ಪ’ ಪ್ರಶಸ್ತಿಯನ್ನು ಪಡೆದುಕೊಂಡಿದೆ. 13 ತಜ್ಞ ವೈದ್ಯರು, 21 ಶುಶ್ರೂಷಕಿಯರು, 23 ಜನ ಹೊರಗುತ್ತಿಗೆ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ.

2 ತುರ್ತು ವಾಹನಗಳು ಇವೆ. 3 ಸುಸಜ್ಜಿತ ಸಾಮಾನ್ಯ ವಾರ್ಡ್, ಶಸ್ತ್ರಚಿಕಿತ್ಸೆ ನಂತರದ ವಾರ್ಡ್, ಅಪಘಾತ ಚಿಕಿತ್ಸಾ ವಾರ್ಡ್, ಅಪೌಷ್ಟಿಕ ಮಕ್ಕಳ ಚಿಕಿತ್ಸಾ ವಾರ್ಡ್ ಸೇರಿದಂತೆ ಐಸಿಯು ವಾರ್ಡ್ ಕೂಡ ಆಸ್ಪತ್ರೆಯಲ್ಲಿದೆ. ಈಚೆಗಷ್ಟೆ ಫಿಸಿಯೊ ಥೆರಪಿ ಉಪಕರಣಗಳು ಕೂಡ ಬಂದಿದ್ದು, ಸದ್ಯ ಕೊವಿಡ್–19 ಇರುವ ಕಾರಣ ಅವುಗಳನ್ನು ಅಳವಡಿಸಿ ಸಾರ್ವಜನಿಕ ಸೇವೆಗೆ ನೀಡಲಾಗುತ್ತಿಲ್ಲ ಎಂದು ಇಲ್ಲಿನ ವೈದ್ಯರು ಮಾಹಿತಿ ನೀಡಿದರು.

ಉತ್ತಮ ಹೆರಿಗೆ ಸೌಲಭ್ಯ ಹಾಗೂ ವೈದ್ಯರಿರುವ ಕಾರಣಕ್ಕೆ ಪಾವಗಡ, ಮಧುಗಿರಿ ತಾಲ್ಲೂಕಿನ ಜನರು ಬರುತ್ತಾರೆ. ಆಸ್ಪತ್ರೆ ಒಳಭಾಗದಲ್ಲಿಯೇ ಶುದ್ಧ ಕುಡಿಯುವ ನೀರಿನ ಘಟಕ, ಅದರ ಪಕ್ಕದಲ್ಲೇ ಬಿಸಿನೀರು ಸೌಲಭ್ಯ ಒದಗಿಸಲಾಗಿದೆ. ಸದ್ಯಕ್ಕೆ ಕಟ್ಟಡದ ಕೊರತೆಯಿಂದಾಗಿ 100 ಹಾಸಿಗೆ ಇರಬೇಕಾದ ಆಸ್ಪತ್ರೆಯನ್ನು 70 ಹಾಸಿಗೆಗೆ ಸೀಮಿತಗೊಳಿಸಲಾಗಿದೆ.

ಬಹುಮುಖ್ಯವಾಗಿ ವಾಹನಗಳ ನಿಲುಗಡೆ ಸಮಸ್ಯೆ ಕಾಡುತ್ತಿದೆ. ಸಣ್ಣಪುಟ್ಟ ಚಿಕಿತ್ಸೆಗೂ ತುಮಕೂರು, ಬೆಂಗಳೂರು ಅಥವಾ ಖಾಸಗಿ ಆಸ್ಪತ್ರೆಗಳಿಗೆ ಹೋಗಾಬೇಕಾಗಿತ್ತು. ಆದರೆ, ಈಗ ಆಸ್ಪತ್ರೆಯಲ್ಲೇ ಎಲ್ಲ ರೀತಿಯ ಸೌಲಭ್ಯ ಸಿಗುತ್ತಿದೆ ಎಂದು ಸಾರ್ವಜನಿಕರು ಅಭಿಪ್ರಾಯವಾಗಿದೆ.

ಆಸ್ಪತ್ರೆಯನ್ನು ಇನ್ನಷ್ಟು ವಿಶಾಲ ಹಾಗೂ ಉನ್ನತ ದರ್ಜೆಗೇರಿಸುವ ನಿಟ್ಟಿನಲ್ಲಿ ಶಾಸಕ ಡಾ.ಜಿ.ಪರಮೇಶ್ವರ ಅವರು ಉಪಮುಖ್ಯಮಂತ್ರಿ ಆಗಿದ್ದಾಗ ತಾಲ್ಲೂಕಿನ ಕಾಮೇನಹಳ್ಳಿ ಸರ್ವೆ ನಂಬರ್ 41ರಲ್ಲಿ ಸುಮಾರು 5 ಎಕರೆ ಜಮೀಜು ಮುಂಜೂರು ಮಾಡಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಕೂಡ ಮೀಸಲಿರಿಸಲಾಗಿತ್ತು. ಆದರೆ, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಅನುದಾನ ಹಿಂಪಡೆದಿದೆ.

ಕೊರೊನಾ ಹರಡುವ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಸಕಲ ಸಿದ್ದತೆಗಳನ್ನೂ ಮಾಡಿಕೊಳ್ಳಲಾಗಿದೆ. ಕ್ವಾರಂಟೈನ್ ವಾರ್ಡ್, ಫ್ಲೂ ಕ್ಲಿನಿಕ್ ಹಾಗೂ ಸೋಕಿತರು ಕಂಡು ಬಂದರೆ ಮುಂಜಾಗೃತಾ ಕ್ರಮವಾಗಿ ತಾಲ್ಲೂಕಿನ ರೆಡ್ಡಿಕಟ್ಟೆ ಬಾರೆಯಲ್ಲಿನ ವಸತಿ ಶಾಲೆಯನ್ನು ತುರ್ತು ಚಿಕಿತ್ಸಾ ಕೊಠಡಿಯನ್ನಾಗಿ ಮಾರ್ಪಾಡು ಮಾಡಲಾಗಿದೆ.

***

ಕಟ್ಟಡದ ಕೊರತೆ

ತಾಲ್ಲೂಕು ಮಟ್ಟದಲ್ಲಿ ಸದ್ಯಕ್ಕೆ ಎಲ್ಲ ರೀತಿಯ ಚಿಕಿತ್ಸಾ ಸೌಲಭ್ಯ ಒದಗಿಸುತ್ತಿದ್ದು, ಕಟ್ಟಡದ ಕೊರತೆ ಇದೆ. ಆಸ್ಪತ್ರೆ ಇನ್ನಷ್ಟು ವಿಶಾಲವಾಗಿದ್ದರೆ ಮನ್ನಷ್ಟು ಆರೋಗ್ಯ ಸೇವೆ ಸಾರ್ವಜನಿಕರಿಗೆ ಒದಗಿಸಬಹುದು.

ಡಾ.ಎನ್.ಎ.ಪ್ರಕಾಶ್, ಆಡಳಿತ ವೈದ್ಯಾಧಿಕಾರಿ,
ಸಾರ್ವಜನಿಕ ಆಸ್ಪತ್ರೆ

***

ಸ್ಕ್ಯಾನಿಂಗ್ ತರಬೇತಿ ಬೇಕು

ಇಲ್ಲಿನ ಆರೋಗ್ಯ ಸೇವೆ ಉತ್ತಮವಾಗಿರುವ ಕಾರಣ ಹೆರಿಗಾಗಿ ಹೆಚ್ಚು ಮಹಿಳೆಯರು ಬರುತ್ತಾರೆ. ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಷಿನ್ ಬಂದು 2 ವರ್ಷ ಕಳೆದಿದೆ. ಇಲ್ಲಿರುವ ವೈದ್ಯರಿಗೆ ಈ ಬಗ್ಗೆ ತರಬೇತಿ ಕೊಟ್ಟರೆ ನಾವೇ ಇನ್ನಷ್ಟು ಆರೋಗ್ಯ ಸೇವೆ ಒದಗಿಸಲು ಅನುಕೂಲವಾಗುತ್ತದೆ.

ಡಾ.ಎಂ.ಎಲ್.ನಾಗಭೂಷಣ್, ಪ್ರಸೂತಿ ತಜ್ಞ

***

ಉತ್ತಮ ಆಸ್ಪತ್ರೆ; ಜನರ ಪುಣ್ಯ

ತಾಲ್ಲೂಕು ಕೇಂದ್ರದಲ್ಲೇ ಎಲ್ಲ ರೀತಿಯ ಚಿಕಿತ್ಸೆ ಸಿಗುತ್ತಿರುವುದು ಜನರ ಪುಣ್ಯ. ಶೌಚಾಲಯ ಸೇರಿದಂತೆ ಇಡೀ ಆಸ್ಪತ್ರೆ ಸ್ವಚ್ಛವಾಗಿದೆ. ಯಾವುದೇ ಖಾಸಗಿ ಆಸ್ಪತ್ರೆಗಿಂತ ಕಡಿಮೆ ಇಲ್ಲದಂತೆ ನಿರ್ವಹಣೆ ಮಾಡಲಾಗಿದೆ.

ನರೇಂದ್ರ ಕುಮಾರ್, ವೀರೋಬನಹಳ್ಳಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು