ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಿಗೇನಹಳ್ಳಿ: ಜಯಮಂಗಲಿ ಮರಳಿಗೆ ಕನ್ನ

ಬರಿದಾಗಿದೆ ನದಿ ಒಡಲು: ಗಣಿಗಾರಿಕೆ ತಡೆಗೆ ಸಾರ್ವಜನಿಕರ ಮನವಿ
Published 25 ಮಾರ್ಚ್ 2024, 8:27 IST
Last Updated 25 ಮಾರ್ಚ್ 2024, 8:27 IST
ಅಕ್ಷರ ಗಾತ್ರ

ಕೊಡಿಗೇನಹಳ್ಳಿ: ಬಿರು ಬಿಸಿಲಿಗೆ ನದಿ ಒಡಲು ಬರಿದಾಗುತ್ತಿದ್ದು ಜನರು ನೀರಿಗಾಗಿ ಪರದಾಡುತ್ತಿದ್ದರೆ, ಇದನ್ನೇ ಬಂಡವಾಳವಾಗಿಸಿಕೊಂಡ ಕೆಲವರು ಜಯಮಂಗಲಿ ಹಾಗೂ ಕುಮಧ್ವತಿ ನದಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿದ್ದಾರೆ.

ಮಳೆಯಾಶ್ರಿತ ಪ್ರದೇಶವಾಗಿರುವ ಹೋಬಳಿ ವ್ಯಾಪ್ತಿಯಲ್ಲಿ ಮಳೆ ಬಂದರೆ ಮಾತ್ರ ವ್ಯವಸಾಯ ಹಾಗೂ ಜನ-ಜಾನುವಾರುಗಳ ಕುಡಿಯುವ ನೀರಿಗೆ ಅನುಕೂಲ. ಇಲ್ಲವಾದರೆ ಕೃಷಿ ಜೊತೆಗೆ ಕುಡಿಯುವ ನೀರಿಗೂ ಪಡಿಪಾಟಲು ತಪ್ಪಿದ್ದಲ್ಲ. ಇಲ್ಲಿ ಒಂದು ವರ್ಷ ಮಳೆಯಾದರೆ ಇನ್ನು ನಾಲ್ಕೈದು ವರ್ಷ ಬರಗಾಲ ಆವರಿಸುವುದು ಸಾಮಾನ್ಯವಾಗಿ ಬಿಟ್ಟಿದೆ. ಇಂತಹ ಸ್ಥಿತಿಯಲ್ಲಿ ಜಲ ಮೂಲಗಳಿಂದ ಮರಳು ತಗೆಯುತ್ತಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಹಿಂದೆಯೂ ಮರಳು ಸಾಗಾಟದಿಂದಾಗಿ ನದಿ ಪ್ರದೇಶದಲ್ಲಿ ಸೀಮೆಜಾಲಿ ಆವರಿಸಿಕೊಂಡಿತ್ತು. 2022ರಲ್ಲಿ ಉತ್ತಮವಾಗಿ ಮಳೆಯಾಗಿದ್ದರಿಂದ ಬತ್ತಿದ್ದ ಕೆರೆ, ಕುಂಟೆಗಳ ಜೊತೆಗೆ ನದಿಗಳು ತುಂಬಿ ಹರಿದಿತ್ತು.

2023ರಲ್ಲಿ ಮಳೆ ಬಾರದ ಕಾರಣ ಕೆರೆ-ಕುಂಟೆಗಳಲ್ಲಿ ಶೇಖರಣೆಯಾಗಿದ್ದ ನೀರು ಖಾಲಿಯಾಗಿ, ಅಂತರ್ಜಲವೂ ಕುಸಿದಿದೆ. ಇದರ ನಡುವೆ ಮನೆ ನಿರ್ಮಿಸುವ ನೆಪದಲ್ಲಿ ಕೆಲವರು ಟ್ರ್ಯಾಕ್ಟರ್‌ಗಳಲ್ಲಿ ಮರಳು ದಂಧೆ ನಡೆಸುತ್ತಿದ್ದಾರೆ ಇದನ್ನು ಪ್ರಶ್ನಿಸಿದರೂ ಪ್ರಯೋಜವಾಗುತ್ತಿಲ್ಲ ಎನ್ನುತ್ತಾರೆ ಸಾರ್ವಜನಿಕರು.

ಪೊಲೀಸರು ಹಲವು ಟ್ರ್ಯಾಕ್ಟರ್‌ಗಳನ್ನು ಹಿಡಿದು ದಂಡ ಹಾಕಿದರೂ, ಮತ್ತೆ ಕೆಲ ದಿನಗಳಲ್ಲಿಯೇ ಮರಳು ಸಾಗಣೆ ಎಗ್ಗಿಲ್ಲದೆ ನಡೆಯುತ್ತದೆ. ಗಣಿ ಮತ್ತು ಭೂವಿಜ್ಞಾನ ಹಾಗೂ ಕಂದಾಯಾಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಸೇತುವೆಗೆ ಧಕ್ಕೆ

ಕೊಡಿಗೇನಹಳ್ಳಿ ಸಮೀಪ ಜಯಮಂಗಲಿ ನದಿಗೆ ಸೇತುವೆ ನಿರ್ಮಿಸಲಾಗಿದೆ. ಇದರಿಂದಾಗಿ ಈ ಭಾಗದ 25ಕ್ಕಿಂತ ಹೆಚ್ಚು ಗ್ರಾಮಗಳ ಜನರು ನಿರ್ಭಯವಾಗಿ ಸಂಚರಿಸಲು ಅನುಕೂಲವಾಗಿದೆ. 2022ರಲ್ಲಿ ಜಯಮಂಗಲಿ ನದಿ ಅಪಾಯಮಟ್ಟ ಮೀರಿ ಹರಿದಾಗಲೂ ಜನರು ಸೇತುವೆ ಮೇಲೆ ಯಾವುದೇ ಭಯವಿಲ್ಲದೆ ಸಂಚರಿಸಿದ್ದರು. ಆದರೆ ಈಗ ಮರಳು ಗಣಿಗಾರಿಕೆಯಿಂದಾಗಿ ಸೇತುವೆಗೆ ಧಕ್ಕೆಯಾಗುವ ಆತಂಕ ಎದುರಾಗಿದೆ.

-ರಾಜಗೋಪಾಲರೆಡ್ಡಿ, ಆರ್‌ಟಿಐ ಕಾರ್ಯಕರ್ತ

ನೀರಿಗಾಗಿ ಗುಳೆ ಆತಂಕ

ಸರ್ಕಾರ ನದಿ ಹಾಗೂ ಕೆರೆ-ಕುಂಟೆಗಳಲ್ಲಿ ಯಾವುದೇ ಕೆಲಸ ಕಾರ್ಯಗಳಿಗೆ ಮರಳು ತೆಗೆಯದಂತೆ ಕಟ್ಟುನಿಟ್ಟಾಗಿ ಆದೇಶ ಜಾರಿ ಮಾಡಿದರೆ  ಅನುಕೂಲ. ಇಲ್ಲದಿದ್ದರೆ ಭವಿಷ್ಯದಲ್ಲಿ ಕುಡಿಯುವ ನೀರಿಗೆ ತೊಂದರೆ ಎದುರಾಗಿ ಜನರು ಗುಳೆ ಹೋಗಬೇಕಾದ ದಿನಗಳು ದೂರವಿಲ್ಲ.

ಲಕ್ಷ್ಮಮ್ಮ, ಕೊಡಿಗೇನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT