ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | ಜಿಲ್ಲೆಯ ಹಸಿರು ಹೊದಿಕೆ ಹೆಚ್ಚಳ

ಶೇ 12.49ರಷ್ಟು ಅರಣ್ಯ ಪ್ರದೇಶ, ಜನರಲ್ಲಿ ಹೆಚ್ಚಿದ ಪರಿಸರ ಕಾಳಜಿ
ಮೈಲಾರಿ ಲಿಂಗಪ್ಪ
Published 6 ಜೂನ್ 2024, 5:11 IST
Last Updated 6 ಜೂನ್ 2024, 5:11 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯ ಅರಣ್ಯ ಪ್ರದೇಶ ಪ್ರತಿ ವರ್ಷ ಹೆಚ್ಚಾಗುತ್ತಿದ್ದು, ಪ್ರಸ್ತುತ ಶೇ 12.49ರಷ್ಟು ಅರಣ್ಯ ಭೂಮಿ ಇದೆ. 1,13,954 ಹೆಕ್ಟೇರ್‌ ಪ್ರದೇಶದಲ್ಲಿ ಗಿಡ–ಮರಗಳು ಹರಡಿಕೊಂಡಿವೆ.

ಭಾರತೀಯ ಅರಣ್ಯ ಸರ್ವೇಕ್ಷಣೆ ಸಂಸ್ಥೆ (ಎಫ್‌ಎಸ್‌ಐ) ಪ್ರತಿ ಎರಡು ವರ್ಷಕ್ಕೊಮ್ಮೆ ಬಿಡುಗಡೆ ಮಾಡುವ ವರದಿ ಪ್ರಕಾರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಹೆಚ್ಚಳವಾಗಿದೆ. ಈ ವರದಿ ಅನ್ವಯ 2019ರಲ್ಲಿ 1,284 ಚದರ ಕಿಲೋ ಮೀಟರ್ ಇದ್ದ ಅರಣ್ಯ ಭೂಮಿ 2021ರ ವೇಳೆಗೆ 39 ಚ.ಕಿ.ಮೀ ಜಾಸ್ತಿಯಾಗಿ 1,323 ಚ.ಕಿ.ಮೀಗೆ ವಿಸ್ತರಿಸಿದೆ. ಸರ್ಕಾರಿ ದಾಖಲೆಗಳ ಪ್ರಕಾರ ಅರಣ್ಯ ವಿಸ್ತರಿಸುತ್ತಿದೆ. ಆದರೆ ಅದು ಜನರ ಕಣ್ಣಿಗೆ ಕಾಣುತ್ತಿಲ್ಲ. ದಾಖಲೆಗಳಲ್ಲಿ ಮರ, ಗಿಡ ನೆಟ್ಟಿರಬಹುದು ಎಂಬ ಆರೋಪವೂ ಕೇಳಿ ಬಂದಿದೆ.

2015–16ರಿಂದ 2023–24ನೇ ಸಾಲಿನ ವರೆಗೆ ಅರಣ್ಯ ಇಲಾಖೆಯಿಂದ ಜಿಲ್ಲೆಯಾದ್ಯಂತ 66,20,299 ಸಸಿಗಳನ್ನು ನೆಡಲಾಗಿದೆ. 17,099 ಅರಣ್ಯ ಬ್ಲಾಕ್‌ಗಳಲ್ಲಿ ಹೊಸದಾಗಿ ಸಸಿ ಹಾಕಲಾಗಿದೆ. 3,207 ಕಿ.ಮೀ ಉದ್ದದಷ್ಟು ರಸ್ತೆಯ ಪಕ್ಕದಲ್ಲಿ ಗಿಡ ನೆಟ್ಟು ಪೋಷಿಸಲಾಗುತ್ತಿದೆ. ಈ ಎಲ್ಲ ಕಾರ್ಯಗಳಿಂದ ಜಿಲ್ಲೆಯ ಹಸಿರೀಕರಣ ಜಾಸ್ತಿಯಾಗಿದೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ಇದ್ದ ಉಪಅರಣ್ಯ ಸಂರಕ್ಷಣಾಧಿಕಾರಿಗಳು (ಡಿಎಫ್‌ಒ) ಅರಣ್ಯ ಸಂರಕ್ಷಣೆ, ವಿಸ್ತರಣೆ, ಪರಿಸರ ಕಾಪಾಡಲು ಕಾಳಜಿ ವಹಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅಂತಹ ಪ್ರಯತ್ನ ಕಾಣುತ್ತಿಲ್ಲ. ಡಿಎಫ್‌ಒಗಳು ಅರಣ್ಯ ಮರೆತಿದ್ದಾರೆ ಎಂಬ ಆರೋಪಗಳು ಸಾಮಾನ್ಯವಾಗಿವೆ.

ಜಿಲ್ಲೆಯಲ್ಲಿ ಹುಲ್ಲುಗಾವಲು, ಕುರುಚಲು ಕಾಡು, ಒಣ ಎಲೆ ಉದುರುವ, ತೇವ ಭರಿತ ಎಲೆ ಉದುರುವ ಕಾಡು ಹೆಚ್ಚಾಗಿ ಕಂಡು ಬರುತ್ತದೆ. ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣ ಅರಣ್ಯ ಪ್ರದೇಶವು 19 ಸಾವಿರ ಹೆಕ್ಟೇರ್‌ ಪ್ರದೇಶ ಹೊಂದಿದ್ದು, ಜಿಲ್ಲೆಯ ಅತಿ ದೊಡ್ಡ ಅರಣ್ಯ ಪ್ರದೇಶವಾಗಿದೆ. ದೇವರಾಯನದುರ್ಗ, ಕುಣಿಗಲ್‌ನ ಉಜ್ಜನಿ, ನಿಡಗಲ್‌ ಬೆಟ್ಟ, ಮಧುಗಿರಿಯ ತಿಮ್ಲಾಪುರ ಅರಣ್ಯ ಪ್ರದೇಶ, ಜಯಮಂಗಲಿ ಕೃಷ್ಣಮೃಗ ವನ್ಯಧಾಮ ಪ್ರಮುಖ ಅರಣ್ಯ ಪ್ರದೇಶಗಳು.

ದೇವರಾಯನದುರ್ಗ, ನಾಗವಲ್ಲಿ ವ್ಯಾಪ್ತಿಯಲ್ಲಿ ಅತಿ ವಿರಳ ಎನಿಸುವ ಕಾಡುಪಾಪಗಳು ಆಗಾಗ ಕಾಣಿಸಿಕೊಳ್ಳುತ್ತಿವೆ. ಬುಕ್ಕಾಪಟ್ಟಣ ಚಿಂಕಾರ ವನ್ಯಜೀವಿ ಧಾಮದಲ್ಲಿ ಅಳಿವಿನ ಅಂಚಿನಲ್ಲಿರುವ ಚಿಂಕಾರ (ಹುಲ್ಲೇಕರ) ಪ್ರಾಣಿ ರಕ್ಷಣೆಗೆ ಅರಣ್ಯ ಇಲಾಖೆ ಮುಂದಾಗಿದೆ. 2019ರ ಸಮಯದಲ್ಲಿ ಸುಮಾರು 100 ಚಿಂಕಾರಗಳು ಇರಬಹುದು ಎಂದು ಅಂದಾಜಿಸಲಾಗಿತ್ತು. ಈಗ ಆ ಸಂಖ್ಯೆ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಳವಾಗಿವೆ ಎಂಬುವುದು ಅರಣ್ಯ ಇಲಾಖೆಯ ಅಧಿಕಾರಿಗಳ ವಿವರಣೆ.

‘ಅರಣ್ಯ ಪ್ರದೇಶದಲ್ಲಿ ಗಿಡ–ಮರ, ಹುಲ್ಲುಗಾವಲು, ಗಿಡಮೂಲಿಕೆ, ಔಷಧ ಗುಣ ಹೊಂದಿರುವ ಬಳ್ಳಿ ಪ್ರಮಾಣ ಪ್ರತಿ ವರ್ಷ ಕಡಿಮೆಯಾಗುತ್ತಿದೆ. ಕಾಡು ನಾಶವಾಗಿರುವ ಕಡೆ ಅರಣ್ಯ ಇಲಾಖೆಯ ಅಧಿಕಾರಿಗಳು ಗಿಡ ನೆಟ್ಟು ಹಸಿರೀಕರಣ ಮಾಡಿದ್ದಾರೆ. ಆದರೆ ಕಾಡಿಗೆ ಬೆಂಕಿ ಹಚ್ಚುವುದನ್ನು ತಡೆಯುವ ಕೆಲಸವಾಗುತ್ತಿಲ್ಲ. ಬೆಂಕಿ ಹಚ್ಚುವುದರಿಂದ ನೂರಾರು ವರ್ಷದ ಹಳೆಯ ಮರಗಳಿಗೆ ಹಾನಿಯಾಗುತ್ತಿದೆ’ ಎಂದು ಪರಿಸರವಾದಿ ಬಿ.ವಿ.ಗುಂಡಪ್ಪ ವಿವರಿಸಿದರು.

‘ಹಸಿರೀಕರಣ ಹೆಚ್ಚಳಕ್ಕಾಗಿ ಉಪಯೋಗವಿಲ್ಲದ ನೀಲಗಿರಿ, ಅಕೇಶಿಯಾ ಗಿಡಗಳನ್ನು ಹೆಚ್ಚಾಗಿ ಬೆಳೆಸಿದ್ದಾರೆ. ಬಹುಬೇಗ ಗಿಡ ಬೆಳೆಯಬೇಕು ಎಂಬ ಉದ್ದೇಶದಿಂದ ಒಂದೇ ಪ್ರಭೇದದ ಗಿಡಗಳನ್ನು ನೆಡಲಾಗಿದೆ. ಇದರಿಂದ ಯಾವುದೇ ಪ್ರಯೋಜನವಿಲ್ಲ’ ಎಂಬುವುದು ಜಿಲ್ಲೆಯ ಪರಿಸರವಾದಿಗಳ ಆಕ್ಷೇಪ.

ಜಿಲ್ಲೆಯ ಅರಣ್ಯ ಪ್ರದೇಶ

ಅರಣ್ಯ ಪ್ರದೇಶ;ವಿಸ್ತೀರ್ಣ(ಹೆಕ್ಟೇರ್‌)

ಬುಕ್ಕಾಪಟ್ಟಣ;19,340

ಚಿಕ್ಕನಾಯಕನಹಳ್ಳಿ;13,719

ಗುಬ್ಬಿ;15,825

ಕೊರಟಗೆರೆ;7,516

ಕುಣಿಗಲ್‌;13,529

ಮಧುಗಿರಿ;15,011

ಪಾವಗಡ;10,308

ಶಿರಾ;5,477

ತಿಪಟೂರು;4,994

ತುಮಕೂರು;8,230

ಒಟ್ಟು;1,13,954

ಭಾರತೀಯ ಅರಣ್ಯ ಸರ್ವೇಕ್ಷಣೆ ಸಂಸ್ಥೆಯ ವರದಿ

ವರ್ಷ;ವಿಸ್ತೀರ್ಣ (ಚ.ಕಿ.ಮೀ);ಶೇ

2015;909;8.58

2017;976;9.21

2019;1,284;12.12

2021;1,323;12.49

ದೇವರಾಯನದುರ್ಗ ಮುಖ್ಯರಸ್ತೆ ಬದಿಯಲ್ಲಿ ಮದ್ಯದ ಬಾಟಲಿ ಕಾಂಡೋಮ್ ಪೊಟ್ಟಣ
ದೇವರಾಯನದುರ್ಗ ಮುಖ್ಯರಸ್ತೆ ಬದಿಯಲ್ಲಿ ಮದ್ಯದ ಬಾಟಲಿ ಕಾಂಡೋಮ್ ಪೊಟ್ಟಣ

670 ಹೆಕ್ಟೇರ್‌ಗೆ ಹಾನಿ

ಬೇಸಿಗೆ ಸಮಯದಲ್ಲಿ ಅರಣ್ಯ ಪ್ರದೇಶಕ್ಕೆ ಬೆಂಕಿ ಹಚ್ಚುವುದು ನಿಲ್ಲುತ್ತಿಲ್ಲ. ಪ್ರತಿ ವರ್ಷ ನೂರಾರು ಹೆಕ್ಟೇರ್‌ ಪ್ರದೇಶಕ್ಕೆ ಹಾನಿಯಾಗುತ್ತಿದೆ. ಹಲವಾರು ಪ್ರಾಣಿ ಪಕ್ಷಿಗಳು ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗುತ್ತಿವೆ. 2023–24ರಲ್ಲಿ 1647 ಬೆಂಕಿ ಹಚ್ಚಿದ ಪ್ರಕರಣಗಳು ವರದಿಯಾಗಿದ್ದು 670 ಹೆಕ್ಟೇರ್‌ ಅರಣ್ಯ ಪ್ರದೇಶಕ್ಕೆ ಹಾನಿಯಾಗಿದೆ. ‘ಈ ವರ್ಷ ಉಷ್ಣಾಂಶ ಬಿಸಿಲು ಜಾಸ್ತಿಯಾಗಿದ್ದರಿಂದ ಎಲ್ಲ ಕಾಡುಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಬಾರಿ ಹಾನಿಯಾದಷ್ಟು ಹಿಂದಿನ ಯಾವ ವರ್ಷವೂ ಆಗಿರಲಿಲ್ಲ. ಬೆಂಕಿ ಕಾಣಿಸಿಕೊಂಡ ತಕ್ಷಣಕ್ಕೆ ನಿಯಂತ್ರಿಸಲು ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆ ಇದೆ. ಬೆಂಕಿ ನಂದಿಸುವ ಕೆಲಸವೂ ಪರಿಣಾಮಕಾರಿಯಾಗಿ ಆಗುತ್ತಿಲ್ಲ. ಜಿಲ್ಲಾ ಆಡಳಿತವು ಅರಣ್ಯ ಪ್ರದೇಶದ ಅಕ್ಕಪಕ್ಕದ ಜನರಲ್ಲಿ ಅರಿವು ಮೂಡಿಸು ಕೆಲಸ ನಿರಂತರವಾಗಿ ಮಾಡುತ್ತಿಲ್ಲ’ ಎಂದು ಪರಿಸರವಾದಿ ಗುಂಡಪ್ಪ ಬೇಸರ ವ್ಯಕ್ತಪಡಿಸಿದರು.

ಅರಣ್ಯ ಪ್ರದೇಶ: ಅಕ್ರಮದ ತಾಣ ಜಿಲ್ಲೆಯ ಅರಣ್ಯ ಪ್ರದೇಶಗಳು ಅಕ್ರಮ ಅನೈತಿಕ ಚಟುವಟಿಕೆಗಳ ತಾಣಗಳಾಗಿ ಬದಲಾಗಿವೆ. ದೇವರಾಯನದುರ್ಗ ಚಿನಗ ಬೆಟ್ಟ ಸೇರಿದಂತೆ ವಿವಿಧ ಕಡೆಗಳಲ್ಲಿ ಯಾವುದೇ ಕಾವಲುಗಾರರು ಇಲ್ಲ. ಮೋಜು–ಮಸ್ತಿ ಮಾಡಲು ಬರುವವರು ಹೆಚ್ಚಿದ್ದಾರೆ. ದೇವರಾಯನದುರ್ಗದ ರಸ್ತೆಯ ಬದಿಯಲ್ಲಿ ಮದ್ಯದ ಬಾಟಲಿ ಪ್ಲಾಸ್ಟಿಕ್‌ ಬಾಟಲಿ ರಾರಾಜಿಸುತ್ತಿವೆ. ರಸ್ತೆಯುದ್ದಕ್ಕೂ ಕಾಂಡೋಮ್‌ ಪ್ಯಾಕೇಟ್‌ ಎಸೆಯಲಾಗಿದ್ದು ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಯುವ ಸಮುದಾಯ ಪ್ರೀತಿ ಪ್ರೇಮದ ಹೆಸರಿನಲ್ಲಿ ಅರಣ್ಯ ಪ್ರದೇಶದಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿರುವುದು ಕಂಡು ಬಂದರೂ ಅರಣ್ಯ ಇಲಾಖೆ ನಿಯಂತ್ರಿಸುವ ಯಾವುದೇ ಕ್ರಮ ಕೈಗೊಂಡಿಲ್ಲ. ‘ಅರಣ್ಯ ಇಲಾಖೆಯ ಅಧಿಕಾರಿಗಳು ಕೇವಲ ಕಚೇರಿಗೆ ಸೀಮಿತವಾಗಿದ್ದಾರೆ. ಅಕ್ರಮ ಚಟುವಟಿಕೆಗಳ ತಡೆಗೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ’ ಎಂಬುವುದು ಜಿಲ್ಲೆಯ ಪರಿಸರ ಪ್ರೇಮಿಗಳ ಆರೋಪ.

ಬೆಂಕಿಯ ಕಾಟ ತಪ್ಪಿಸಿ

ಪ್ರತಿ ವರ್ಷ ಸಂಭವಿಸುವ ಬೆಂಕಿ ಅವಘಡಗಳನ್ನು ತಪ್ಪಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಇದರ ಜತೆಗೆ ಒತ್ತುವರಿಯಾಗಿರುವ ಅರಣ್ಯ ಪ್ರದೇಶದ ತೆರವಿಗೂ ಕ್ರಮಕೈಗೊಳ್ಳಬೇಕು. ಕೇವಲ ಒಂದು ಜಾತಿಗೆ ಸೇರಿದ ಗಿಡ–ಮರ ಬೆಳೆಸದೆ ಆಯಾ ಸ್ಥಳೀಯ ಗಿಡಗಳನ್ನು ನೆಟ್ಟು ಪೋಷಿಸಬೇಕು. ನೀಲಗಿರಿ ಗಿಡ ಬೆಳೆಸಬಾರದು.

-ಸಿ.ಯತಿರಾಜು ಪರಿಸರವಾದಿ

ಆಂದೋಲನ ಮಾಡಲಿ

ಪ್ರತಿ ವರ್ಷ ಡಿಸೆಂಬರ್‌ನಿಂದ ಮಾರ್ಚ್‌ ವರೆಗೆ ಪರಿಸರ ಉಳಿವಿಗೆ ಒಂದು ಆಂದೋಲನ ಮಾಡಬೇಕು. ಅರಣ್ಯ ಪ್ರದೇಶದಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಬೇಕು. ಬೆಂಕಿ ಹಚ್ಚುವವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು. ಅವರಿಗೆ ಅರಣ್ಯ ಪ್ರದೇಶಕ್ಕೆ ನಿರ್ಬಂಧ ವಿಧಿಸಬೇಕು. ಆಗ ಮಾತ್ರ ಅರಣ್ಯ ಉಳಿವು ಸಾಧ್ಯವಾಗಲಿದೆ.

-ಬಿ.ವಿ.ಗುಂಡಪ್ಪ ಪರಿಸರವಾದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT