ಬುಧವಾರ, ಡಿಸೆಂಬರ್ 2, 2020
26 °C

PV Web Exclusive: ಇನ್ನೂ ಕಾಂಗ್ರೆಸ್‌ನಲ್ಲಿ ಕಾಣಲಿಲ್ಲ ಆತ್ಮಾವಲೋಕನ

ಕೆ.ಜೆ.ಮರಿಯಪ್ಪ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಶಿರಾ ವಿಧಾನಸಭೆ ಉಪಚುನಾವಣೆ ಫಲಿತಾಂಶ ಪ್ರಕಟಗೊಂಡು ಹತ್ತು ದಿನಗಳು ಕಳೆದಿದ್ದರೂ ಕಾಂಗ್ರೆಸ್‌ನಲ್ಲಿ ಇನ್ನೂ ಸೋಲಿನ ಆತ್ಮಾವಲೋಕನ ನಡೆದಿಲ್ಲ.

ವಿಜಯ ಸಾಧಿಸಿದಾಗ ತಮ್ಮಿಂದಲೇ ಗೆಲುವು ಎಂದು ಹಲವರು ಬೀಗುತ್ತಾರೆ. ಆದರೆ ಸೋಲಿನ ಹೊಣೆ ಹೊರಲು ಯಾರೂ ಮುಂದೆ ಬರುವುದಿಲ್ಲ. ಸೋಲು ಒಂದು ರೀತಿ ಅನಾಥ. ಈ ಚುನಾವಣೆಯ ಫಲಿತಾಂಶದ ನಂತರ ಕಾಂಗ್ರೆಸ್‌ನಲ್ಲಿ ಅಂತಹುದೇ ವಾತಾವರಣ ಕಂಡುಬಂದಿದೆ. ಸಾಮಾನ್ಯವಾಗಿ ಸೋಲು ಕಂಡ ನಂತರ ಅದಕ್ಕೆ ಕಾರಣಗಳನ್ನು ಪಟ್ಟಿಮಾಡಿ, ಆಗಿರುವ ಲೋಪದೋಷಗಳನ್ನು ಸರಿಪಡಿಸಿಕೊಳ್ಳುವುದು, ಮುಂದೆ ತಪ್ಪುಗಳಾಗದಂತೆ ಎಚ್ಚರ ವಹಿಸುವುದು, ಪಕ್ಷ ಸಂಘಟನೆಗೆ ಒತ್ತು, ಮುಂದಿನ ಚುನಾವಣೆ ವೇಳೆಗೆ ಏನೆಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂಬ ಬಗ್ಗೆ ಚರ್ಚಿಸಲಾಗುತ್ತದೆ. ಆದರೆ ಈವರೆಗೂ ಜಿಲ್ಲೆಯ ಮುಖಂಡರು ಅಂತಹ ಪ್ರಯತ್ನವನ್ನೇ ಮಾಡಿಲ್ಲ.

ನ. 2ರಂದು ಮತದಾನ ಮುಗಿಯುತ್ತಿದ್ದಂತೆ ಅಭ್ಯರ್ಥಿಯಾಗಿದ್ದ ಟಿ.ಬಿ.ಜಯಚಂದ್ರ ಕೊರೊನಾ ಸೋಂಕಿನಿಂದಾಗಿ ಆಸ್ಪತ್ರೆ ಸೇರಿದರು. ನ. 10ರಂದು ಮತಗಳ ಎಣಿಕೆ ಸಮಯದಲ್ಲೂ ಇರಲಿಲ್ಲ. ಇತ್ತೀಚೆಗಷ್ಟೇ ಆಸ್ಪತ್ರೆಯಿಂದ ಬಂದಿದ್ದು, ಶಿರಾ ಬಳಿಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಫಲಿತಾಂಶ ಪ್ರಕಟವಾದ ನಂತರ ಪಕ್ಷದ ಇತರ ನಾಯಕರೂ ಮತದಾರರಿಗೆ ಕೃತಜ್ಞತೆ ಹೇಳುವ ಸೌಜನ್ಯ ತೋರಿಸಲಿಲ್ಲ. ಪಕ್ಷದ ಹಿನ್ನಡೆಯಿಂದ ಕಂಗೆಟ್ಟಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ಕನಿಷ್ಠ ಪಕ್ಷ ಆತ್ಮಸ್ಥೈರ್ಯ ತುಂಬಿ, ಮತ್ತಷ್ಟು ಕುಗ್ಗದಂತೆ ನೋಡಿಕೊಳ್ಳಲಿಲ್ಲ. ಯಾವ ನಾಯಕರೂ ಶಿರಾದತ್ತ ಹೋಗಿ ಬರಲಿಲ್ಲ. ಸೋಲನ್ನು ಅಷ್ಟೇ ಬೇಗನೆ ಮರೆತುಬಿಟ್ಟರು.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಜಿಲ್ಲೆಯ ಹಿರಿಯ ನಾಯಕರಾದ ಡಾ.ಜಿ.ಪರಮೇಶ್ವರ, ಕೆ.ಎನ್.ರಾಜಣ್ಣ, ಷಫಿ ಅಹಮದ್, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರು, ಇತರ ನಾಯಕರು ಚುನಾವಣೆ ಸಂದರ್ಭದಲ್ಲಿ ದುಡಿದ ಕಾರ್ಯಕರ್ತರ ಶ್ರಮವನ್ನು ನೆನಪು ಮಾಡಿಕೊಳ್ಳುವ ಪ್ರಯತ್ನ ಮಾಡಬೇಕಿತ್ತು. ಜಯಚಂದ್ರ ಅವರು ಆಸ್ಪತ್ರೆಯಿಂದ ಬಂದ ನಂತರವೂ ಯಾರೊಬ್ಬರೂ ಪ್ರಯತ್ನಿಸಲಿಲ್ಲ. ಹಿರೀಕರು ಒಂದೆಡೆ ಕುಳಿತು ಚರ್ಚಿಸುವ ಉದಾರತೆಯನ್ನೇ ತೋರಿಲ್ಲ.

ರವಾನೆಯಾಗದ ಸಂದೇಶ: ಚುನಾವಣೆಗೆ ಮುನ್ನ ಜಯಚಂದ್ರ, ಪರಮೇಶ್ವರ, ರಾಜಣ್ಣ ಅವರು ಒಂದೊಂದು ದಿಕ್ಕಿನಲ್ಲಿ ಇದ್ದರು. ಪರಸ್ಪರ ದೂಷಣೆ, ಒಬ್ಬರ ಮುಖವನ್ನು ಮತ್ತೊಬ್ಬರು ನೋಡದಂತಹ ಸ್ಥಿತಿಯಲ್ಲಿದ್ದರು. ರಾಜ್ಯ ನಾಯಕರು ಎಲ್ಲರನ್ನೂ ಒಗ್ಗೂಡಿಸಿ ಒಮ್ಮತದಿಂದ ಚುನಾವಣೆ ನಡೆಸುವಂತೆ ಸೂಚನೆ ನೀಡಿದ್ದರು. ಅದರಂತೆ ಹಿಂದಿನ ಎಲ್ಲಾ ಕಹಿ ಘಟನೆಗಳನ್ನು ಮರೆತು ಒಟ್ಟಾಗಿ ಚುನಾವಣೆ ಎದುರಿಸಿದರು. ಒಗ್ಗಟ್ಟಿನ ಸಂದೇಶ ರವಾನಿಸಿದರು. ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಆದರೂ ಮತದಾರರ ಮನಮುಟ್ಟಲು ಸಾಧ್ಯವಾಗಿಲ್ಲ.

2018ರ ವಿಧಾನಸಭೆ ಚುನಾವಣೆಯಲ್ಲಿ ಜಯಚಂದ್ರ ಅವರು 63,973 ಮತಗಳನ್ನು ಗಳಿಸಿದ್ದರೆ, ಈ ಬಾರಿ 63,150 ಮತಗಳು ಬಂದಿವೆ. ಕಳೆದ ಬಾರಿಗಿಂತ ಕೇವಲ 823 ಮತಗಳು ಕಡಿಮೆಯಾಗಿವೆ. ಹಿಂದೆ ಜಯಚಂದ್ರ ಅವರೊಬ್ಬರೇ ಏಕಾಂಗಿಯಾಗಿ ಚುನಾವಣೆ ಎದುರಿಸಿದ್ದರು. ಪರಮೇಶ್ವರ್, ರಾಜಣ್ಣ ಪ್ರಚಾರಕ್ಕೆ ಹೋಗಿರಲಿಲ್ಲ. ಯಾವ ನಾಯಕರ ಸಹಾಯವೂ ಇಲ್ಲದೆ ದೊಡ್ಡ ಸಂಖ್ಯೆಯ ಮತಗಳನ್ನು ಪಡೆದುಕೊಂಡಿದ್ದರು. ಆದರೆ ಈಗ ಎಲ್ಲರೂ ಒಟ್ಟಾಗಿ ಪ್ರಚಾರಮಾಡಿ, ‘ಒಗ್ಗೂಡಿದ್ದೇವೆ’ ಎಂಬ ಸಂದೇಶ ರವಾನಿಸಿದರೂ ಮತಗಳಾಗಿ ಪರಿವರ್ತನೆ ಆಗಲಿಲ್ಲ. ಸಾಕಷ್ಟು ಶ್ರಮ ಹಾಕಿದರೂ ಮತ ಗಳಿಕೆ ಪ್ರಮಾಣ ಯಾವ ಕಾರಣಕ್ಕೆ ಏರಿಕೆಯಾಗಲಿಲ್ಲ ಎಂಬ ಚಿಂತೆ ಕಾರ್ಯಕರ್ತರನ್ನು ಕಾಡುತ್ತಿದೆ.

ತಕ್ಷಣಕ್ಕೆ ಗ್ರಾಮ ಪಂಚಾಯಿತಿ ಚುನಾವಣೆ ಎದುರಿಸಬೇಕಿದೆ. ಅದು ಮುಗಿಯುವಷ್ಟರಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ಬರಲಿದೆ. ನಂತರ ವಿಧಾನಸಭೆ ಚುನಾವಣೆಗೆ ಸಜ್ಜಾಗಬೇಕಿದೆ. ಆದರೆ ಜಿಲ್ಲೆಯ ನಾಯಕರು ಪಕ್ಷ ಸಂಘಟಿಸುವ ಕೆಲಸ ಮಾಡದಿದ್ದರೆ, ಕಾರ್ಯಕರ್ತರಿಗೆ ಧೈರ್ಯ ತುಂಬದಿದ್ದರೆ ಮುಂಬರುವ ಸಾಲುಸಾಲು ಚುನಾವಣೆಗಳನ್ನು ಎದುರಿಸುವುದಾರೂ ಹೇಗೆ ಎಂದು ಪಕ್ಷದ ನಾಯಕರೊಬ್ಬರ ಪ್ರಶ್ನೆ. ಈ ಪ್ರಶ್ನೆಗೆ ನಾಯಕರು ಉತ್ತರಿಸುವರೇ ಕಾಯ್ದು ನೋಡಬೇಕು.

ಇದನ್ನು ಓದಿ: ಸಂಪಾದಕರ ಮಾತು | ಪ್ರಜಾವಾಣಿ ಆಂಡ್ರಾಯ್ಡ್ ಮತ್ತು ಐಒಎಸ್ ಆ್ಯಪ್ ಲೋಕಾರ್ಪಣೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು