ಶಿರಾ: ನಗರಸಭೆ ಎರಡನೇ ಅವಧಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗಿದೆ. ಇದುವರೆಗೂ ಚುನಾವಣೆ ದಿನಾಂಕ ಪ್ರಕಟವಾಗಿಲ್ಲದಿರುವುದು ಅನುಮಾನಕ್ಕೆ ಕಾರಣವಾಗುತ್ತಿದೆ.
ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಹಾಲಿ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅಧಿಕಾರವಧಿ ಸೆ.8ಕ್ಕೆ ಮುಕ್ತಾಯವಾಗಲಿದ್ದು ಚುನಾವಣೆ ನಡೆಯದ ಕಾರಣ ಆಡಳಿತಾಧಿಕಾರಿ ನೇಮಕವಾಗುವ ಸಾಧ್ಯತೆ ಇದೆ.
ಜಿಲ್ಲೆಯ ಬಹುತೇಕ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆ ಮುಗಿಯುತ್ತಿದ್ದರೂ ಶಿರಾ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ಘಳಿಗೆ ಕೂಡಿ ಬಂದಿಲ್ಲ.
ಅಧ್ಯಕ್ಷ ಸ್ಥಾನದ ಮೀಸಲಾತಿ ಬದಲಾವಣೆಗೆ ಯತ್ನ ನಡೆಸಿ ಕೆಲವು ಸದಸ್ಯರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು ಅಧಿಕಾರಿಗಳ ನಡೆ ಅವರಿಗೆ ಅನುಕೂಲವಾಗುತ್ತಿದೆ. ನಗರಸಭೆಯಲ್ಲಿ ಯಾವುದೇ ಪಕ್ಷಕ್ಕೆ ಸ್ವಷ್ಟ ಬಹುಮತವಿಲ್ಲ. ನಗರಸಭೆ 31 ಸ್ಥಾನಗಳಲ್ಲಿ ಕಾಂಗ್ರೆಸ್ 13, ಜೆಡಿಎಸ್ 6, ಬಿಜೆಪಿ 4 ಹಾಗೂ 8 ಮಂದಿ ಪಕ್ಷೇತರರು ಇದ್ದಾರೆ.
ಬಹುಮತವಿಲ್ಲದಿದ್ದರೂ ಕಾಂಗ್ರೆಸ್ ಪಕ್ಷೇತರರ ಬೆಂಬಲದೊಂದಿಗೆ ಗದ್ದುಗೆ ಹಿಡಿದಿದೆ. ಈಗ ಅಧ್ಯಕ್ಷರ ಚುನಾವಣೆಗೆ ಕಾಂಗ್ರೆಸ್ ಪಕ್ಷಕ್ಕೆ ಸವಾಲಾಗಿದೆ. ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವುದು ಶಾಸಕ ಟಿ.ಬಿ.ಜಯಚಂದ್ರ ಅವರಿಗೆ ತಲೆನೋವು ತಂದಿದೆ.
ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ 31 ಮಂದಿ ಸದಸ್ಯರಿಗೂ ಸಹ ಅಧ್ಯಕ್ಷರಾಗುವ ಅವಕಾಶ ಇದೆ. ನಗರಸಭೆ 31ಸದಸ್ಯರಲ್ಲಿ 14 ಮಂದಿ ಮುಸ್ಲಿಂ ಸಮುದಾಯದವರು ಸದಸ್ಯರಾಗಿದ್ದು ಅದರಲ್ಲಿ 8 ಮಂದಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿರುವುದು ವಿಶೇಷವಾಗಿದೆ. ಮುಸ್ಲಿಂ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ ನೀಡುವಂತೆ ಪ್ರಬಲ ಲಾಬಿ ನಡೆಯುತ್ತಿದೆ. ಇದರಿಂದಾಗಿ ಶಾಸಕರಿಗೆ ಈ ಚುನಾವಣೆ ತಲೆನೋವು ತಂದಿದ್ದು ಯಾರ ಪರ ನಿಲ್ಲುತ್ತಾರೆ ಎನ್ನುವಂತಾಗಿದೆ.
ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆ ಗಮನಿಸಿದರೆ ಜೆಡಿಎಸ್, ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದರೂ ಅಶ್ಚರ್ಯಪಡುವಂತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.